
ಶ್ರವಣಬೆಳಗೊಳ: ಬರಗಾಲದ ನಡುವೆಯೂ ಸಮೃದ್ಧ ರೇಷ್ಮೆ ಬೆಳೆದ ರೈತ ದಂಪತಿ
ಶ್ರವಣಬೆಳಗೊಳ: ಕೇವಲ 2 ಎಕರೆ ಜಮೀನಿನಲ್ಲಿ ಹುಲುಸಾದ ಹಿಪ್ಪು ನೇರಳೆ ಬೆಳೆದು ಆರ್ಥಿಕವಾಗಿ ಪ್ರಾಬಲ್ಯ ಸಾಧಿಸಬಹುದು ಎಂಬುದಕ್ಕೆ ಆಲದಹಳ್ಳಿಯ ರೇಷ್ಮೆ ಬೆಳೆಗಾರ ಎಂ. ರಘು- ಧನಲಕ್ಷ್ಮಿ ದಂಪತಿ ಸಾಕ್ಷಿಯಾಗಿದ್ದಾರೆ.
10 ವರ್ಷಗಳಿಂದ ನಿರಂತರವಾಗಿ ಎಂ. ರಘು ಅವರು ತಮ್ಮ ಬಾಳ ಸಂಗಾತಿ ಧನಲಕ್ಷ್ಮಿ ಜೊತೆಗೂಡಿ ರೇಷ್ಮೆ ಕೃಷಿ ಮಾಡುತ್ತಿದ್ದು, ತಾಲ್ಲೂಕಿನ ಮಾದರಿ ಕೃಷಿಕ ದಂಪತಿಗಳಾಗಿ ಹೊರಹೊಮ್ಮಿದ್ದಾರೆ. ಈ ವರ್ಷ ಹದ ಮಳೆ ಇಲ್ಲದೇ, ಯಾವುದೇ ರೀತಿಯ ಬೆಳೆಗಳನ್ನು ಬೆಳೆಯಲು ಆಗುವುದಿಲ್ಲವೆಂದು ಸಾಕಷ್ಟು ರೈತರು ಕೈಚೆಲ್ಲಿ ಕುಳಿತಿದ್ದಾರೆ. ಇದರ ಮಧ್ಯೆ ಎದೆಗುಂದದೇ ಅಲ್ಪ ಪ್ರಮಾಣದ ನೀರಿನಲ್ಲಿ ತಮ್ಮ ಸಂಕಲ್ಪದ ಗುರಿ ಸಾಧನೆಗಾಗಿ ಹುಲುಸಾದ ರೇಷ್ಮೆ ಕೃಷಿ ಮಾಡುವುದು ಹೇಗೆ ಎಂಬುದನ್ನು ತೋರಿಸಿದ್ದಾರೆ ಈ ರೈತ ದಂಪತಿ.
2 ಎಕರೆ ಜಮೀನಿನಲ್ಲಿ ಹಿಪ್ಪು ನೇರಳೆ ಗಿಡಗಳನ್ನು 8 x 3 ಅಂತರದ ಸಾಲುಗಳಲ್ಲಿ ನಾಟಿ ಮಾಡಿದ್ದು, ತಿಂಗಳಲ್ಲಿ 4 ಬಾರಿ ನೀರು ಹಾಯಿಸುತ್ತಾರೆ. ಗಿಡಗಳು ಬೆಳೆದಂತೆ ಕವಲೊಡೆಯುತ್ತಾ ಹೋಗುವುದರಿಂದ ಸೂರ್ಯನ ಕಿರಣಗಳು ಭೂಮಿಗೆ ತಾಗದೇ ತೇವಾಂಶ ಹಾಗೆಯೇ ಇರುತ್ತದೆ. ಈ ಬೆಳೆಗೆ ಕೊಟ್ಟಿಗೆ ಗೊಬ್ಬರವನ್ನೇ ಇವರು ಹೆಚ್ಚಿಗೆ ಬಳಸುತ್ತಾರೆ. ಆದರೆ ಕೆಲವು ರೈತರು ಕೊಟ್ಟಿಗೆ ಗೊಬ್ಬರದ ಜೊತೆಗೆ ಅಲ್ಪ ಸ್ವಲ್ಪ ರಾಸಾಯನಿಕ ಗೊಬ್ಬರ ಬಳಸುತ್ತಾರೆ. ಹೀಗೆ ಬೆಳೆದ ಹಿಪ್ಪು ನೇರಳೆ ಸೊಪ್ಪು ರೇಷ್ಮೆ ಹುಳುವಿನ ಆಹಾರವಾಗುತ್ತದೆ.
ಮೈಸೂರು ವಿಭಾಗದ ರೇಷ್ಮೆ ಹುಳು ಬೀಜ ಉತ್ಪಾದನಾ ಕೇಂದ್ರದಿಂದ ಸಿದ್ಧಪಡಿಸಿದ್ದ ರೋಗ ಮುಕ್ತ ರೇಷ್ಮೆ ಹುಳುಗಳನ್ನು ಬೆಳೆಗಾರರಿಗೆ ಒದಗಿಸಲಾಗುತ್ತಿದ್ದು, ರೇಷ್ಮೆ ಸಾಕಾಣಿಕೆ ಚಾಕಿಯ ಬಗ್ಗೆ ರೈತರಿಗೆ ಸಂಪೂರ್ಣ ಮಾಹಿತಿ ಒದಗಿಸುತ್ತಾರೆ ಎನ್ನುತ್ತಾರೆ ರೈತ ಎಂ.ರಘು.
150 ಮೊಟ್ಟೆಗೆ ₹2ಸಾವಿರ ದರ ಇದೆ. ಒಂದು ಮೊಟ್ಟೆಯಲ್ಲಿ ಸುಮಾರು 450ರಿಂದ 500 ಮರಿಗಳು ಉತ್ಪಾದನೆ ಆಗುತ್ತವೆ. ಮೊಟ್ಟೆಗಳನ್ನು ಮರಿಗಳಾಗಿ ಮಾಡಲು ಪ್ರತ್ಯೇಕವಾದ 10 x 15 ಅಡಿ ಅಳತೆಯ ಸ್ವಂತ ನಿರ್ವಹಣೆಯ ಚಾಕಿ ಕೇಂದ್ರವೂ ಇದೆ. 150 ಮೊಟ್ಟೆ ಮರಿಗಳಲ್ಲಿ 110 ಕೆ.ಜಿ.ಯಿಂದ 130 ಕೆ.ಜಿ. ತನಕ ರೇಷ್ಮೆಗೂಡು ಉತ್ಪಾದನೆ ಆಗುತ್ತದೆ. ಒಂದು ಕೆ.ಜಿ. ರೇಷ್ಮೆಗೂಡಿಗೆ ಮಾರುಕಟ್ಟೆಯಲ್ಲಿ ಸರಾಸರಿ ದರವು ₹850ಕ್ಕೂ ಅಧಿಕ ಸಿಗುತ್ತದೆ. ಒಟ್ಟಾರೆ 1 ಎಕರೆಗೆ 1 ವರ್ಷದಲ್ಲಿ ಸರಾಸರಿ ₹5.50 ಲಕ್ಷಕ್ಕೂ ಹೆಚ್ಚಿನ ಲಾಭವಾಗಲಿದ್ದು, ಖರ್ಚು ಎಕರೆ ಒಂದಕ್ಕೆ ₹1.80 ಲಕ್ಷ ಬರಲಿದೆ ಎನ್ನುತ್ತಾರೆ ಈ ರೈತ.
ಕಬ್ಬು, ತರಕಾರಿ, ಹೂ, ಇನ್ನಿತರೆ ಆಹಾರ ಬೆಳೆ ಬೆಳೆದು ಕೈಸುಟ್ಟುಕೊಂಡಿರುವ ಇವರು, ಹೆಚ್ಚು ಲಾಭದಾಯಕ, ಕಡಿಮೆ ಖರ್ಚು, ಸುಲಭ ನಿರ್ವಹಣೆಯ ರೇಷ್ಮೆ ಕೃಷಿ ವಿಸ್ತರಿಸಲು 3 ಎಕರೆ ಜಮೀನನ್ನು ವರ್ಷಕ್ಕೆ ₹75 ಸಾವಿರ ಗುತ್ತಿಗೆ ಆಧಾರದಲ್ಲಿ ಪಡೆದಿದ್ದಾರೆ.
ರೇಷ್ಮೆ ಬೆಳೆಯುವ ಕ್ರಮಗಳು
ಹಿಪ್ಪು ನೇರಳೆ ಬೆಳೆಯಲು ಕೆಂಪು ಮಿಶ್ರಿತ 2 ಎಕರೆ ಜಮೀನು ಇದ್ದು, ಅದರಲ್ಲಿಯೇ 92x23ಅಡಿ ಅಳತೆಯಶೆಡ್ ನಿರ್ಮಾಣದ 2 ಪ್ರಾರಂಭಿಕ ಹಂತದ ಕಾರ್ಯಕ್ಷೇತ್ರಗಳಾಗಿವೆ.ಶೆಡ್ ಒಳ ಭಾಗದಲ್ಲಿ ರೇಷ್ಮೆ ಹುಳುಗಳು ಸೊಪ್ಪು ಮೇಯಲು ಮರದಿಂದ ತಯಾರಿಸಿದ 66 X 7 ಅಡಿ ಅಗಲದ 12 ಶೆಲ್ಫ್ ಹಾಕಬೇಕು. ಸೊಪ್ಪನ್ನು ಈ ಶೆಲ್ಫ್‌ಗಳಿಗೆ ಸ್ವಲ್ಪ ಸುಣ್ಣದ ಪುಡಿ ಸಿಂಪಡಿಸಿ ನಿತ್ಯ 2 ಬಾರಿಯಂತೆ 25 ರಿಂದ 30 ದಿನಗಳ ವರೆಗೆ ನಿರಂತರವಾಗಿ ಹಾಕಬೇಕು.
ಎಂ.ರಘು ಇನ್ನೊಂದು ಹೆಜ್ಜೆ ಮುಂದೆ ಹೋಗಿದ್ದು, ನಿರ್ಮಿಸಿರುವ ಶೆಡ್‌ಗೆ ಸ್ಟೀಲ್ ಮೆಸ್‌ನಿಂದ ತಯಾರಿಸಿರುವ ಕಿಟಕಿಗಳನ್ನು ಅಳವಡಿಸಿ, ಮೇಲ್ಬಾಗದಲ್ಲಿ ವಿದ್ಯುತ್ ರಹಿತ ಫ್ಯಾನ್‌ಗಳನ್ನು ಅಳವಡಿಸಿದ್ದಾರೆ. ರೇಷ್ಮೆ ಕೃಷಿಯ ಬಗ್ಗೆ ಇವರಿಗೆ ಇರುವ ಮುತುವರ್ಜಿಯನ್ನು ರೇಷ್ಮೆ ವಿಜ್ಞಾನಿಗಳು ತಂತ್ರಜ್ಞರು ಮತ್ತು ಅಧಿಕಾರಿಗಳು ಪ್ರಶಂಸಿಸುತ್ತಾರೆ ಎನ್ನುತ್ತಾರೆ ರೈತ ಮಹಿಳೆ ಧನಲಕ್ಷ್ಮಿ.
30 ದಿನಗಳ ನಂತರ ಹುಳುಗಳು ಮಾಗಿ ಗಾತ್ರ ದೊಡ್ಡದಾಗುತ್ತವೆ. ಆಗ ಅದಕ್ಕೆ ಸಿದ್ಧಪಡಿಸಿ ಇಟ್ಟುಕೊಂಡಿರುವ ಚಂದ್ರಿಕೆ ಪ್ಲಾಸ್ಟಿಕ್ ಅನ್ನು ಮರಿಗಳ ಮೇಲೆ ಮುಚ್ಚಲಾಗುತ್ತದೆ. ಆಗ ಅವು ಗೂಡು ಕಟ್ಟಲು ಪ್ರಾರಂಭಿಸುತ್ತವೆ. ಹುಳುಗಳು ತಿರುಗಾಡದಂತೆ ಶೆಡ್‌ನ ಒಳಭಾಗದಲ್ಲಿರುವ ಬಾಗಿಲು ಮೆಸ್ ಕಿಟಕಿಗಳನ್ನು ಅಳವಡಿಸಿ, ಹೂಜಿ ನೊಣಗಳು, ಕೆಂಪು ಇರುವೆಗಳು ಬರದಂತೆ ಭದ್ರ ಪಡಿಸಿರಬೇಕು. ವಾರದ ನಂತರ ಹುಳುಗಳು ರೇಷ್ಮೆ ಗೂಡು ಕಟ್ಟುತ್ತವೆ.
ಪ್ರೋತ್ಸಾಹಧನ ಬಾಕಿ ನೀಡಿ
ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ 1,003 ಜನ ರೇಷ್ಮೆ ಬೆಳೆಗಾರರಿದ್ದು, 663 ಹೆಕ್ಟೇರ್ ಪ್ರದೇಶದಲ್ಲಿ ಅತಿ ಹೆಚ್ಚು ಹಿಪ್ಪು ನೇರಳೆ ಬೆಳೆಯುವ ಮೂಲಕ ಜಿಲ್ಲೆಗೆ ಅಗ್ರ ಸ್ಥಾನ ಗಳಿಸಿದ್ದಾರೆ. ರೇಷ್ಮೆ ಗೂಡು ಬೆಳೆಯಲು ಹಗಲಿರುಳು ಕಷ್ಟಪಟ್ಟು ದುಡಿಯುತ್ತಿರುವ ರೈತರಿಗೆ ರಾಜ್ಯ ಸರ್ಕಾರ ₹1.8 ಕೋಟಿ ಪ್ರೋತ್ಸಾಹ ಧನ ಬಾಕಿ ಉಳಿಸಿಕೊಂಡಿದ್ದು, ಕೂಡಲೇ ಬಿಡುಗಡೆ ಮಾಡಬೇಕು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಒತ್ತಾಯಿಸಿದ್ದಾರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260902-36-1084267524