
ಮೈಲಾಪುರ ಬೆಟ್ಟಕ್ಕೆ ‘ರೋಪ್ ವೇ’ ಅಂತಿಮ: ಎನ್‌ಒಸಿ ಕೋರಿದ ಪ್ರವಾಸೋದ್ಯಮ ಇಲಾಖೆ
ಯಾದಗಿರಿ: ಧಾರ್ಮಿಕ ಕ್ಷೇತ್ರವಾದ ಮೈಲಾಪುರದ ಬೆಟ್ಟದ ಮೇಲಿನ ಮೈಲಾರಲಿಂಗೇಶ್ವರ ದೇವಸ್ಥಾನಕ್ಕೆ ‘ರೋಪ್ ವೇ’ ನಿರ್ಮಾಣದ ಮಾರ್ಗವನ್ನು ಅಂತಿಮಗೊಳಿಸಲಾಗಿದ್ದು, ಯೋಜನೆಗೆ ಅಗತ್ಯವಿರುವ ಭೂಮಿಗೆ ನಿರಾಕ್ಷೇಪಣಾ ಪತ್ರ(ಎನ್‌ಒಸಿ)ವನ್ನು ಪ್ರವಾಸೋದ್ಯಮ ಇಲಾಖೆ ಕೋರಿದೆ.
ಮೈಲಾಪುರ ಬೆಟ್ಟದಲ್ಲಿ ‘ರೋಪ್ ವೇ’ ನಿರ್ಮಾಣದ ಹೊಣೆಯನ್ನು ‘ರೈಟ್’ ಸಂಸ್ಥೆ ಹೊತ್ತುಕೊಂಡಿದೆ. ಸಂಸ್ಥೆಯ ತಜ್ಞರ ತಂಡವು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಮೈಲಾಪುರ ಗ್ರಾಮದ ಪ್ರವೇಶ ದ್ವಾರದಲ್ಲಿರುವ ಸರ್ಕಾರಿ ಶಾಲೆಯ ಪಕ್ಕದ ಜಾಗ ಹಾಗೂ ಬೆಟ್ಟದ ಮೇಲಿನ ತೆಂಗಿನಕಾಯಿ ಒಡೆಯುವ ಸ್ಥಳದ ನಡುವೆ ‘ರೋಪ್ ವೇ’ ನಿರ್ಮಾಣ ಮಾಡಲು ಗುರುತು ಹಾಕಿಕೊಳ್ಳಲಾಗಿದೆ.
ಮೈಲಾಪುರ ದೇವಸ್ಥಾನಕ್ಕೆ ಪ್ರತಿ ಭಾನುವಾರ, ಅಮಾವಾಸ್ಯೆ, ಹುಣ್ಣಿಮೆಗೆ ಸಾವಿರಾರು ಭಕ್ತರು ಬರುತ್ತಾರೆ. ಸಂಕ್ರಾಂತಿಯ ಜಾತ್ರೆಯ ವೇಳೆ ಮೂರು ರಾಜ್ಯಗಳ ನಾಲ್ಕೈದು ಲಕ್ಷ ಭಕ್ತರು ಬಂದು ಸೇರುತ್ತಾರೆ. ಹೀಗಾಗಿ, ಧಾರ್ಮಿಕ ಪ್ರವಾಸೋದ್ಯಮಕ್ಕೆ ಉತ್ತೇಜನ ಕೊಡುವ ನಿಟ್ಟಿನಲ್ಲಿ ಈ ‘ರೋಪ್ ವೇ’ ಅಳವಡಿಕೆ ಮಾಡಲಾಗುತ್ತಿದೆ.
ಬೆಟ್ಟದ ಮೇಲಿನ ಕಲ್ಲುಬಂಡೆಗಳ ನಡುವೆ ಗುಹಾಂತರ ದೇವಾಲಯವಿದೆ. ಈ ಪರಿಸರದಲ್ಲಿ ಹೊನ್ನಕೆರೆ, ಗದ್ದೆಗಳು, ಸುತ್ತಲೂ ಕಲ್ಲು ಬಂಡೆಗಳ ಬೆಟ್ಟಗಳಲ್ಲಿ ಹಸಿರಿನ ವಾತಾವರಣವಿದೆ. ‘ರೋಪ್ ವೇ’ ನಿರ್ಮಾಣವಾದರೆ ಇವುಗಳನ್ನೆಲ್ಲ ಭಕ್ತರು ಕಣ್ತುಂಬಿಕೊಳ್ಳಬಹುದು. ಸುತ್ತಲಿನ ಸೊಬಗು ಸವಿದು ದೇವರ ದರ್ಶನವೂ ಮಾಡಬಹುದು.
ರೈಟ್ ಸಂಸ್ಥೆಯ ತಂಡದವರು ಎರಡು ಬಾರಿ ಮೈಲಾಪುರಕ್ಕೆ ಭೇಟಿ ನೀಡಿದ್ದಾರೆ. ಒಮ್ಮೆ ಎರಡು ದಿನಗಳು ಉಳಿದುಕೊಂಡು, ಬೆಟ್ಟ ಪ್ರದೇಶ, ಬೆಟ್ಟದ ಸುತ್ತಲಿನ ಭೂರಚನೆ, ಮಣ್ಣಿನ ಸದೃಢತೆಯನ್ನು ಪರೀಕ್ಷೆ ಮಾಡಿದ್ದಾರೆ. ‘ರೋಪ್ ವೇ’ನ ಲೋವರ್ ಟರ್ಮಿನಲ್ ಪಾಯಿಂಟ್(ಎಲ್‌ಟಿಪಿ)ಗಾಗಿ ಸರ್ಕಾರ ಶಾಲೆಯ ಪಕ್ಕದ ಜಾಗ ಗುರುತಿಸಿದೆ. ಕಾಲಂ ಅಳವಡಿಕೆಗಾಗಿ ನೆಲದ ಸದೃಢತೆಯನ್ನು ರಂದ್ರಗಳನ್ನು ಕೊರೆದು ಪರಿಶೀಲನೆ ನಡೆಸಿದ್ದಾರೆ ಎಂದು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಪರ್ ಟರ್ಮಿನಲ್ ಪಾಯಿಂಟ್(ಯುಟಿಪಿ)ಗೆ ಬೆಟ್ಟದ ಮೇಲಿನ ತೆಂಗಿನ ಕಾಯಿ ಒಡೆಯುವ ಗರ್ಭಗುಡಿಯ ಹಿಂಬದಿಯ ಸ್ಥಳವನ್ನು ಗುರುತು ಮಾಡಿಕೊಂಡಿದ್ದಾರೆ. ಜತೆಗೆ ‘ರೋಪ್ ವೇ’ ಕಾರು ಚಲಿಸಲು ಅಗತ್ಯವಾದ ವಿದ್ಯುತ್ ಸಂಪರ್ಕಕ್ಕೆ ಸಮೀಪದಲ್ಲಿ ಇರುವ ಬಳಿಚಕ್ರದ ವಿದ್ಯುತ್ ಉಪಕೇಂದ್ರದ ಮಾಹಿತಿಯೂ ಪಡೆದಿದ್ದಾರೆ. ವಿದ್ಯುತ್ ಉಪಕೇಂದ್ರದ ಸಾಮರ್ಥ್ಯ, ಅಂತರವನ್ನು ಪರಿಶೀಲಿಸಿದ್ದಾರೆ.
‘6,932 ಚದರ ಮೀಟರ್ ಜಾಗ ಅವಶ್ಯ’
‘ರೋಪ್ ವೇನ ಎಲ್‌ಟಿಪಿ ನಿರ್ಮಾಣಕ್ಕೆ 630 ಚದರ ಮೀಟರ್, ಯುಟಿಪಿ ನಿರ್ಮಾಣಕ್ಕೆ 360 ಚದರ ಮೀಟರ್, 3 ಟವರ್‌ಗಳಿಗೆ 75 (ತಲಾ 25 ಚ.ಮೀ.) ಚದರ ಮೀಟರ್ ಹಾಗೂ ಎರಡು ಕಡೆಗಳಲ್ಲಿ ಕಾರಿಡಾರ್ ನಿರ್ಮಾಣಕ್ಕೆ 5,867 ಚದರ ಮೀಟರ್ ಸೇರಿ ಯೋಜನೆಗೆ ಒಟ್ಟು 6,932 ಚದರ ಮೀಟರ್ ಜಾಗದ ಅವಶ್ಯವಿದೆ’ ಎಂದು ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ರಾಮಚಂದ್ರ ಕಟ್ಟಿಮನಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಯೋಜನೆಗೆ ಗುರುತಿಸಲಾದ ಜಾಗವು ಗ್ರಾಮಠಾಣಾ ವ್ಯಾಪ್ತಿಯಲ್ಲಿದೆ. ಕೆಲವು ಚದರ ಮೀಟರ್ ಖಾಸಗಿ ಜಾಗವೂ ಇದೆ. ರೋಪ್ ವೇ ನಿರ್ಮಾಣಕ್ಕೆ ಗುರುತಿಸಲಾದ ಜಾಗಕ್ಕೆ ನಿರಾಕ್ಷೇಪಣಾ ಪತ್ರ ಕೊಡುವಂತೆ ತಹಶೀಲ್ದಾರ್‌ಗೆ ಪತ್ರ ಬರೆದು ಕೋರಲಾಗಿದೆ’ ಎಂದರು.
ಯಾದಗಿರಿ ಬೆಟ್ಟದ ರೋಪ್ ವೇಗೂ ಮಾರ್ಗ ಗುರುತು
ಬೆಟ್ಟದ ಮೇಲಿರುವ ಐತಿಹಾಸಿಕ ಯಾದಗಿರಿ ಕೋಟೆಗೂ ರೋಪ್ ವೇ ನಿರ್ಮಾಣದ ಮಾರ್ಗದ ಸ್ಥಳವನ್ನು ರೈಟ್ ಸಂಸ್ಥೆಯ ಗುರುತಿಸಿದೆ. ಆದರೆ, ಪುರಾತತ್ವ ಇಲಾಖೆಯಿಂದ ಅನುಮೋದನೆ ಪಡೆಯಬೇಕಿದೆ.
ಲುಂಬಿನ ಉದ್ಯಾನದ ಕೆರೆ ಅಂಚಿನ ಅಂಬೇಡ್ಕರ್ ನಗರ ಬದಿಯಲ್ಲಿನ ಜಾಗವನ್ನು ಎಲ್‌ಟಿಪಿಗೆ ಹಾಗೂ ಬೆಟ್ಟದ ಮೇಲಿನ ಹಿಂಬದಿಯನ್ನು ಯುಟಿಪಿ ನಿರ್ಮಾಣಕ್ಕೆ ಗುರುತಿಸಲಾಗಿದೆ. ಯಾದಗಿರಿ ಬೆಟ್ಟದಲ್ಲಿ ರೋಪ್ ವೇ ನಿರ್ಮಾಣಕ್ಕೆ ರೈಟ್ ಸಂಸ್ಥೆಯು ಎನ್‌ಒಸಿ ಪಡೆಯುವ ಬಗ್ಗೆ ಪ್ರವಾಸೋದ್ಯಮ ಇಲಾಖೆಯೊಂದಿಗೆ ಸಂವಾಹನ ನಡೆಸಿಲ್ಲ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260902-30-928958658