
ವೃದ್ಧೆಯ ಪ್ರೀತಿಗೆ ಕರಗಿ ತಾವು ಧರಿಸಿದ್ದ ದುಬಾರಿ ಸನ್‌ಗ್ಲಾಸ್ ನೀಡಿದ ಸಿಎಂ ವಿಜಯ್
ಚೆನ್ನೈ: ಮೆಟ್ಟೂರು ಜಲಾಶಯಕ್ಕೆ ಭೇಟಿ ನೀಡಿ ವಾಪಸ್ಸಾಗುತ್ತಿದ್ದ ವೇಳೆ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಸೇಲಂ ವಿಮಾನ ನಿಲ್ದಾಣದ ಬಳಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಜನರನ್ನು ಮಾತನಾಡಿಸಿದ್ದಾರೆ.
ಇದೇ ವೇಳೆ ವೃದ್ಧೆಯೊಬ್ಬರಿಗೆ ತಾವು ಧರಿಸಿದ್ದ ದುಬಾರಿ ಕ್ರಿಸ್ಟಿಯನ್ ಡಿಯರ್ ಸನ್‌ಗ್ಲಾಸ್ ನೀಡಿದ್ದಾರೆ. ಈ ತಂಪು ಕನ್ನಡಕದ ಬೆಲೆ ₹40 ಸಾವಿರಕ್ಕೂ ಅಧಿಕವಾಗಿದೆ.
ರಸ್ತೆಯಲ್ಲಿ ಸಾಗುತ್ತಿದ್ದಾಗ, ಜಮೀನಿನಲ್ಲಿ ಕೆಲಸ ಮಾಡುತ್ತಿದ್ದವರನ್ನು ಕಂಡು ಕಾರು ನಿಲ್ಲಿಸಿದ ವಿಜಯ್, ಭದ್ರತಾ ಸಿಬ್ಬಂದಿಯನ್ನೂ ಬರದಂತೆ ತಡೆದು, ಜನರೊಂದಿಗೆ ಆತ್ಮೀಯವಾಗಿ ಸಂಭಾಷಣೆ ನಡೆಸಿದ್ದಾರೆ. ಚೆಲ್ಲಮ್ ಎನ್ನುವ ವೃದ್ಧೆಯೊಬ್ಬರು ವಿಜಯ್ ಅವರ ಕೈ ಹಿಡಿದು ಹೆಜ್ಜೆ ಹಾಕಿದ್ದಾರೆ. ಅವರ ಹೆಸರು ಮತ್ತು ಯೋಗಕ್ಷೇಮವನ್ನು ವಿಚಾರಿಸಿದ ವಿಜಯ್, ತೋಟವನ್ನು ಸುತ್ತಿದ್ದಾರೆ. ಸ್ಥಳೀಯ ರೈತ ಪಳನಿಸ್ವಾಮಿ ಅವರಿಗೆ ಸೇರಿದ ಮನೆ ಮತ್ತು ದನದ ಕೊಟ್ಟಿಗೆಯನ್ನು ವೀಕ್ಷಿಸಲು ತೆರಳುವ ಮುನ್ನ, ವಿಜಯ್ ತಮ್ಮ ಸನ್-ಗ್ಲಾಸ್ (ಕನ್ನಡಕ) ಅನ್ನು ಚೆಲ್ಲಮ್‌ಗೆ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಚೆಲ್ಲಮ್, ‘ಊಟ ಆಯ್ತಾ ಎಂದು ವಿಜಯ್ ನನ್ನನ್ನು ಕೇಳಿದರು. ನಾನು ಇಲ್ಲ ಎಂದೆ. ನಿಮ್ಮನ್ನು ನೋಡುವ ಸಲುವಾಗಿಯೇ ಕಾಯುತ್ತಾ ನಿಂತಿದ್ದೆ ಎಂದೆ. ಅವರು ಬಂದು ನನ್ನ ಪಕ್ಕದಲ್ಲಿ ನಿಂತಾಗ ನನಗೆ ಆಶ್ಚರ್ಯವಾಯಿತು. ಅವರನ್ನು ನೋಡಿ ನನಗೆ ಎಷ್ಟು ಸಂತೋಷವಾಯಿತೆಂದು ನಾನು ಅವರಿಗೆ ಹೇಳಿದೆ; ಮರುಕ್ಷಣವೇ ಅವರು ನನಗೆ ಅವರು ಧರಿಸಿದ್ದ ತಂಪು ಕನ್ನಡಕವನ್ನು ಉಡುಗೊರೆಯಾಗಿ ನೀಡಿದರು’ ಎಂದು ಹೇಳಿದ್ದಾರೆ.
ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಹರಿದಾಡುತ್ತಿದೆ. ಮುಖ್ಯಮಂತ್ರಿ ವಿಜಯ್ ಅವರು ಜನರೊಂದಿಗೆ ಬೆರೆಯುವ ರೀತಿ ಕಂಡ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಿನ್ನೆ (ಸೆ.1) ಮೆಟ್ಟೂರು ಸ್ಟ್ಯಾನ್ಲಿ ಜಲಾಶಯದ ಗೇಟ್ ತೆರೆಯುವ ಮೂಲಕ ಜೋಸೆಫ್ ವಿಜಯ್ ಅವರು ಕಾವೇರಿ ಜಲಾನಯನ ಪ್ರದೇಶಗಳಿಗೆ ನೀರು ಬಿಡುಗಡೆ ಮಾಡಿದ್ದಾರೆ. ಸಂಪುಟ ಸಹೋದ್ಯೋಗಿಗಳ ಸಮ್ಮುಖದಲ್ಲಿ ಅಣೆಕಟ್ಟಿನ ಗೇಟ್‌ಗಳನ್ನು ತೆರೆದ ವಿಜಯ್, ಜಲಾಶಯದಿಂದ ರಭಸವಾಗಿ ಹರಿಯುತ್ತಿದ್ದ ನೀರಿಗೆ ಬಾಗಿನ ಅರ್ಪಿಸಿದ್ದಾರೆ.