
ಸಾವರ್ಕರ್ ಮುಸ್ಲಿಮರ ತೀವ್ರ ದ್ವೇಷಿ ಎಂದು ರಾಹುಲ್ ಬಿಂಬಿಸಿದ್ದಾರೆ: ಸತ್ಯಕಿ
ಪುಣೆ: ವಿ.ಡಿ. ಸಾರ್ವಕರ್ ಅವರು ಮುಸ್ಲಿಮರ ತೀವ್ರ ದ್ವೇಷಿಯಾಗಿದ್ದರು ಎಂಬುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಂಬಿಸಿದ್ದಾರೆ ಎಂದು ಸಂಬಂಧಿ ಸತ್ಯಕಿ ಸಾವರ್ಕರ್ ಪುಣೆಯ ವಿಶೇಷ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಸಾವರ್ಕರ್ ಎಂದೂ ಮುಸಲ್ಮಾನರನ್ನು ದ್ವೇಷಿಸಲಿಲ್ಲ. ಅವರ ಬರಹಗಳು ಮುಸ್ಲಿಮರ ಪ್ರಗತಿಗೆ ದಾರಿ ತೋರಿಸಿದ್ದವು. ಆದರೆ, ರಾಹುಲ್ ಗಾಂಧಿ ಮಾತ್ರ ಸಾವರ್ಕರ್ ಅವರನ್ನು ಮುಸ್ಲಿಮರ ತೀವ್ರ ದ್ವೇಷಿ ಎಂದು ಬಿಂಬಿಸಿದ್ದಾರೆ ಎಂದು ಸಂಬಂಧಿ ಸತ್ಯಕಿ ಸಾವರ್ಕರ್ ಪಾದಿಸಿದ್ದಾರೆ.
2023ರಲ್ಲಿ ಲಂಡ್‌ನಲ್ಲಿ ರಾಹುಲ್ ಗಾಂಧಿ ನೀಡಿದ್ದಾರೆನ್ನಲಾದ ಹೇಳಿಕೆ ಸಂಬಂಧ ದಾಖಲಗಿರುವ ಮಾನನಷ್ಟ ಮೊಕದ್ದಮೆಯ ಪಾಟೀಸವಾಲಿನ ವೇಳೆ, ಸತ್ಯಕಿ ಸಾವರ್ಕರ್ ಅವರನ್ನು ಪ್ರಶ್ನಿಸಿದ ರಾಹುಲ್ ಪರ ವಕೀಲ ಮಿಲಿಂದ್ ಪವಾರ್, ಸಾವರ್ಕರ್ ಅವರ ಘನತೆ ಹಾಳು ಮಾಡುವಂತಹ ಯಾವ ಹೇಳಿಕೆಯನ್ನು ರಾಹುಲ್ ನೀಡಿದ್ದಾರೆ ಎಂಬುದನ್ನು ಸ್ಪಷ್ಟವಾಗಿ ಉಲ್ಲೇಖಿಸಿ ಎಂದು ಕೇಳಿದರು.
ಈ ಸಂದರ್ಭ ಪ್ರತಿಕ್ರಿಯಿಸಿದ ಸತ್ಯಕಿ, ‘ನಾನು ಮತ್ತು ನನ್ನ ಐದಾರು ಸ್ನೇಹಿತರು ಸೇರಿ ಒಬ್ಬ ಮುಸ್ಲಿಂ ಯುವಕನ ಮೇಲೆ ಹಲ್ಲೆ ನಡೆಸಿದೆವು. ಆ ಕೃತ್ಯದಿಂದ ಬಹಳ ಸಂತೋಷಪಟ್ಟೆವು’ ಎಂಬುದಾಗಿ ಸಾವರ್ಕರ್ ಅವರೇ ಪುಸ್ತಕವೊಂದರಲ್ಲಿ ಉಲ್ಲೇಖಿಸಿದ್ದಾರೆ ಎಂಬುದಾಗಿ ರಾಹುಲ್ ಹೇಳಿಕೆ ನೀಡಿದ್ದಾರೆ ಎಂದರು.
ಈ ಮೂಲಕ, ಸಾವರ್ಕರ್ ಅವರನ್ನು ಮುಸ್ಲಿಮರ ಬಗ್ಗೆ ತೀವ್ರ ದ್ವೇಷ ಹೊಂದಿರುವ ವ್ಯಕ್ತಿ ಮತ್ತು ಗುಂಪು ಹಲ್ಲೆಕೋರನ ರೀತಿ ಬಿಂಬಿಸಲಾಗಿದೆ ಎಂದು ವಾದಿಸಿದರು.
ಸಾವರ್ಕರ್ ಎಂದೂ ಮುಸ್ಲಿಮರನ್ನು ದ್ವೇಷಿಸಲಿಲ್ಲ. ಬದಲಾಗಿ, ತಮ್ಮ ಬರಹಗಳಲ್ಲಿ ಅವರ ಪ್ರಗತಿಗೆ ಮಾರ್ಗೋಪಾಯ ಸೂಚಿಸಿದ್ದರು ಎಂದು ಹೇಳಿದ್ದಾರೆ.
ವಿಶೇಷ ನ್ಯಾಯಾಲಯದಲ್ಲಿ ನಡೆದ ಪಾಟೀ ಸವಾಲಿನ ಸಂದರ್ಭ, ಸತ್ಯಕಿ ಅವರ ಅಜ್ಜ ಗೋಪಾಲ್ ಗೋಡ್ಸೆ ಅವರ 2004ರ ವಿಡಿಯೊ ಸಂದರ್ಶನ ಮತ್ತು ಅದರ ಲಿಖಿತ ಪ್ರತಿಯನ್ನೂ ರಾಹುಲ್ ಗಾಂಧಿ ಪರ ಹಾಜರಿದ್ದ ವಕೀಲ ಮಿಲಿಂದ್ ಪವಾರ್ ನ್ಯಾಯಾಲಯಕ್ಕೆ ಸಲ್ಲಿಸಿದರು. ಈ ಸಂದರ್ಶನದಲ್ಲಿ ಗೋಪಾಲ್ ಗೋಡ್ಸೆ ಅವರು, ತಮ್ಮ ಸಹೋದರ ನಾಥೂರಾಮ್ ಗೋಡ್ಸೆ ಆರ್‌ಎಸ್‌ಎಸ್ ಸದಸ್ಯರಾಗಿದ್ದರು ಎಂಬುದನ್ನು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ನಾಥೂರಾಮ್ ಗೋಡ್ಸೆ ಅವರ ಕಿರಿಯ ಸಹೋದರ ಗೋಪಾಲ್ ಗೋಡ್ಸೆ ಸಹ ಗಾಂಧೀಜಿ ಹತ್ಯೆ ಸಂಚಿನಲ್ಲಿ ಭಾಗಿಯಾಗಿದ್ದರು ಎಂಬ ಆರೋಪ ಇದೆ.