
ಕುಷ್ಟಗಿ: ಕಾನೂನಿಗೆ ವಿರುದ್ಧವಾಗಿ ವಸತಿ ಬಡಾವಣೆ; ಸರ್ಕಾರಿ ಜಾಗ ಪತ್ತೆಗೆ ಮೀನಮೇಷ
ಕುಷ್ಟಗಿ: ತಾಲ್ಲೂಕಿನ ರಾಯನಕೆರೆಗೆ ಸಂಬಂಧಿಸಿದ ಸಣ್ಣ ನೀರಾವರಿ ಇಲಾಖೆಗೆ ಸೇರಿದ ಕಾಲುವೆಯನ್ನೇ ಗುಳುಂ ಮಾಡಿದ ಭೂ ಮಾಲೀಕರು ಅದರ ಮೇಲೆಯೇ ಅಕ್ರಮವಾಗಿ ಮತ್ತು ಕಾನೂನಿಗೆ ವಿರುದ್ಧವಾಗಿ ವಸತಿ ಬಡಾವಣೆ ನಿರ್ಮಿಸಿದ್ದಾರೆ.
ಆದರೆ, ಲಪಟಾಯಿಸಿರುವ ಸರ್ಕಾರಿ ಜಾಗವನ್ನು ಪತ್ತೆ ಮಾಡಿ ವಶಕ್ಕೆ ಪಡೆಯುವಲ್ಲಿ ಸಣ್ಣ ನೀರಾವರಿ ಇಲಾಖೆ ಹಾಗೂ ಭೂ ಮಾಪನಾ ಇಲಾಖೆಗಳು ಮೀನಮೇಷ ಎಣಿಸುತ್ತಿದೆ. ಹೀಗಾಗಿ ಅಧಿಕಾರಿಗಳ ನಡೆ ಅನುಮಾನಕ್ಕೆ ಕಾರಣವಾಗಿದೆ.
ರಾಯನಕೆರೆ ಪುನಶ್ಚೇತನಗೊಂಡ ನಂತರ ನೀರಾವರಿ ಉದ್ದೇಶಕ್ಕೆಂದು ಸಣ್ಣ ನೀರಾವರಿ ಇಲಾಖೆ ಇಲ್ಲಿಯ ಉಪ ವಿಭಾಗ ಹೊಲಗಳಿಗೆ ನೀರು ಹರಿಸಲು ಕಾಲುವೆ ನಿರ್ಮಿಸುವುದಕ್ಕೆ ಪ್ರಸ್ತಾವ ಸಲ್ಲಿಸಿತ್ತು. ನಂತರ ಕಾಲುವೆ ಹಾದುಹೋಗುವ ಜಮೀನುಗಳಲ್ಲಿನ ಒಂದಷ್ಟು ಭಾಗವನ್ನು ಸರ್ಕಾರ ನಿಯಮಗಳ ಅನುಸಾರ ಸ್ವಾಧೀನಪಡಿಸಿಕೊಂಡು ಭೂ ಮಾಲೀಕರಿಗೆ ಪರಿಹಾರವನ್ನೂ ನೀಡಿತ್ತು. ಆದರೂ ಜಮೀನುಗಳ ಕೆಲ ಮಾಲೀಕರು ಕಾಲುವೆ ಮುಚ್ಚಿ ಹಾಕಿದ್ದಾರೆ. ಅಲ್ಲದೆ ಕಾಲುವೆ ಒಳಗೊಂಡ ಜಮೀನನ್ನೂ ಸೇರಿಸಿ ಭೂಪರಿವರ್ತನೆಗೊಳಿಸಿ ಅದರ ಮೇಲೆಯೇ ವಸತಿ ಬಡಾವಣೆ ನಿರ್ಮಿಸಿದ್ದಾರೆ.
ಇಷ್ಟು ಬೆಳವಣಿಗೆಗಳು ನಡೆದು ತನ್ನ ಆಸ್ತಿ ಮಂಗಮಾಯವಾದರೂ ಸಣ್ಣ ನೀರಾವರಿ ಇಲಾಖೆ ಕಣ್ಮುಚ್ಚಿ ಕುಳಿತಿತ್ತು. ಈ ವಿಷಯಕ್ಕೆ ಸಂಬಂಧಿಸಿದಂತೆ ಮೂರ್ನಾಲ್ಕು ವರ್ಷಗಳಿಂದಲೂ ಸಾರ್ವಜನಿಕರು ಸರ್ಕಾರಕ್ಕೆ ದೂರು ಸಲ್ಲಿಸುತ್ತ ಬಂದಿದ್ದರು. ಅಲ್ಲದೆ 2024ರಿಂದ ‘ಪ್ರಜಾವಾಣಿ’ ಸರಣಿ ವರದಿಗಳ ಮೂಲಕ ಬೆಳಕು ಚೆಲ್ಲಿತ್ತು. ನಂತರ ಕಾಲುವೆ ಪತ್ತೆಗೆ ನೀರಾವರಿ ಇಲಾಖೆ ಮುಂದಾದರೂ ಭೂ ಮಾಪನ ಇಲಾಖೆ ಮಾತ್ರ ಸಹಕಾರ ನೀಡದಿರುವುದು ಸ್ಪಷ್ಟವಾಗಿದೆ.
ಸರ್ವೆ ನಡೆಸಿ ಕಾಲುವೆ ಗಡಿ ಗುರುತಿಸುವಂತೆ ನೀರಾವರಿ ಇಲಾಖೆ ಹತ್ತಾರು ಬಾರಿ ಪತ್ರ ಬರೆದರೂ ಭೂ ಮಾಪನ ಇಲಾಖೆ ಅಧಿಕಾರಿಗಳು ಇಲ್ಲದ ದಾಖಲೆಗಳನ್ನು ಒದಗಿಸುವಂತೆ ಪದೇ ಪದೆ ಕೇಳುವ ಮೂಲಕ ಕಾಲಹರಣ ಮಾಡುತ್ತಿದ್ದಾರೆ. ಇನ್ನೊಂದೆಡೆ ಕಾಲುವೆಯ ಮೇಲೆಯೇ ವಸತಿ ನಿವೇಶನ ನಿರ್ಮಿಸಿ ಸರ್ಕಾರದ ಕಣ್ಣಿಗೆ ಮಣ್ಣೆರೆಚಿದವರು ಮಾತ್ರ ಯಾವ ಅಳುಕು – ಆತಂಕ ಇಲ್ಲದೆ ನಿವೇಶನ ಮಾರಾಟ ಮುಂದುವರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
‘ಕಣ್ಣು ನಕ್ಷೆಯಲ್ಲಿ ಗಡಿ ಗುರುತಿಸಲಾಗದು’
‘ವೈಯಕ್ತಿಕವಾಗಿ ಪಟ್ಟಾದಾರರು ಪೋಡಿ ಮಾಡಿಸಿಕೊಂಡರೆ ಸರ್ವೆ ನಡೆಸುವುದಕ್ಕೆ ಅನುಕೂಲವಾಗುತ್ತದೆ. ಮೂಲ ನಕ್ಷೆ, ದಾಖಲೆಗಳಿದ್ದರೆ ಪೋಡಿ ಆಗಿದ್ದರೆ ತಕ್ಷಣ ಸರ್ವೆ ನಡೆಸಬಹುದಿತ್ತು. ಆದರೆ, ಕೇವಲ ಕಣ್ಣು ನಕ್ಷೆಯ ಆಧಾರದ ಮೇಲೆ ಗಡಿ ಗುರುತಿಸಲು ಸಾಧ್ಯವಾಗುವುದಿಲ್ಲ’ ಎಂದು ಭೂ ಮಾಪನ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜ ಗಂಡಿ ತಿಳಿಸಿದರು.
‘ಭೂಮಾಪಕರು ಈ ಬಗ್ಗೆ ಪಟ್ಟಾದಾರರಿಗೆ ನೋಟಿಸ್ ನೀಡಿ ಪೋಡಿಗೆ ಕ್ರಮವಹಿಸಲಿದ್ದಾರೆ. ನೀರಾವರಿ ಇಲಾಖೆ ಬಳಿ ಅಂಥ ದಾಖಲೆಗಳಿಲ್ಲ. ಹಾಗಾಗಿ ಪೋಡಿ ಪ್ರಕ್ರಿಯೆ ನಂತರ ಸರ್ವೆ ಕೆಲಸ ನಡೆಯಲಿದೆ’ ಎಂದು ಹೇಳಿದರು.
‘ದಾಖಲೆ ಕೊಟ್ಟರೂ ಕಾಲಹರಣ’
‘ಪಹಣಿಗಳಲ್ಲಿ ನೀರಾವರಿ ಇಲಾಖೆ ಹೆಸರು ನಮೂದಾಗಿ 6 ತಿಂಗಳಾಗಿದೆ. ನಮ್ಮಲ್ಲಿ ಲಭ್ಯವಿದ್ದ ದಾಖಲೆಗಳನ್ನೆಲ್ಲವನ್ನೂ ನೀಡಿದ್ದೇವೆ, ಪೋಡಿಯೂ ಆಗಿದೆ. ಇತರೆ ದಾಖಲೆಗಳು ಭೂ ಮಾಪನ ಇಲಾಖೆ ಬಳಿಯೂ ಇರುತ್ತವೆ. ಹೀಗಿದ್ದರೂ ಪದೇ ಪದೆ ಇಲ್ಲದ ದಾಖಲೆ ಕೇಳುವುದು, ಪತ್ರ ಬರೆಯುವ ಮೂಲಕ ಭೂ ಮಾಪನ ಇಲಾಖೆ ಕಾಲಹರಣ ಮಾಡುತ್ತಿದೆ. ಈ ಬಗ್ಗೆ ಸಣ್ಣ ನೀರಾವರಿ ಇಲಾಖೆಯ ಮೇಲಧಿಕಾರಿಗಳಿಗೆ ಪತ್ರ ಬರೆದು ಮಾರ್ಗದರ್ಶನ ಕೋರುತ್ತೇವೆ’ ಎಂದು ಇಲಾಖೆಯ ಎಇಇ ದೇವೇಂದ್ರಪ್ಪ ಸ್ಪಷ್ಟಪಡಿಸಿದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260902-35-431316056