ಆಳಂದ| ಧರಣಿ ಪರಿಣಾಮ: ಪೈಪ್‌ಲೈನ್‌ ಜೋಡಣೆ ತ್ವರಿತ

ಆಳಂದ| ಧರಣಿ ಪರಿಣಾಮ: ಪೈಪ್‌ಲೈನ್‌ ಜೋಡಣೆ ತ್ವರಿತ

ಆಳಂದ| ಧರಣಿ ಪರಿಣಾಮ: ಪೈಪ್‌ಲೈನ್‌ ಜೋಡಣೆ ತ್ವರಿತ

ಆಳಂದ: ತಾಲ್ಲೂಕಿನ ಅಮರ್ಜಾ ಅಣೆಕಟ್ಟೆಗೆ ಬೋರಿ ನದಿಯಿಂದ ನೀರು ತುಂಬಿಸುವ ಯೋಜನೆಯ ಪೈಪ್‌ಲೈನ್‌ ಕಡಿತಗೊಳಿಸಿದ ಕ್ರಮ ಖಂಡಿಸಿ ಕಾಂಗ್ರೆಸ್‌ ಮುಖಂಡರೂ ಆದ ಕಲಬುರಗಿ–ಬೀದರ್–ಯಾದಗಿರಿ ಸಹಕಾರಿ ಹಾಲು ಮಾರಾಟ ಒಕ್ಕೂಟದ ಅಧ್ಯಕ್ಷ ಆರ್‌.ಕೆ. ಪಾಟೀಲ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಮಣಿದಿದ್ದು, ಪೈಪ್‌ಲೈನ್‌ ಮರುಜೋಡಣೆ ಕಾಮಗಾರಿ ಚುರುಕುಗೊಂಡಿದೆ.

ಅರ್ಜುಣಗಿ–ಬಡದಾಳ ಗ್ರಾಮಗಳ ನಡುವಿನ ಸುಮಾರು 500 ಮೀಟರ್‌ ಉದ್ದದ ಕಡಿತಗೊಂಡ ಪೈಪ್‌ಲೈನ್‌ ಜೋಡಣೆ ಕಾರ್ಯ ನಡೆಯುತ್ತಿದೆ. ಈ ಹಿಂದೆ ಹೆದ್ದಾರಿ ನಿರ್ಮಾಣ ಕಾಮಗಾರಿ ಕೈಗೊಳ್ಳುವ ಸಂದರ್ಭದಲ್ಲಿ ಪೈಪ್‌ಲೈನ್‌ ಕಡಿತಗೊಳಿಸಿದ್ದ ಅಧಿಕಾರಿಗಳು ಮರುಜೋಡಣೆಗೆ ವಿಳಂಬ ಮಾಡಿದ್ದರು. ಪ್ರತಿಭಟನೆ ತೀವ್ರಗೊಂಡ ಬೆನ್ನಲ್ಲೇ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿ ಕಾಮಗಾರಿ ತ್ವರಿತಗೊಳಿಸಿದ್ದಾರೆ.

‘ಈಗಾಗಲೇ ಐದು ಪೈಪ್‌ಗಳ ಜೋಡಣೆ ಪೂರ್ಣಗೊಂಡಿದ್ದು, ಇನ್ನು ಎರಡು ದಿನಗಳಲ್ಲಿ ಉಳಿದ ಪೈಪ್‌ಗಳ ಜೋಡಣೆಯನ್ನೂ ಪೂರ್ಣಗೊಳಿಸುವ ವಿಶ್ವಾಸವಿದೆ’ ಎಂದು ಎನ್‌ಎಚ್‌ಎಐ ಯೋಜನಾ ನಿರ್ದೇಶಕ ನವೀನಕುಮಾರ್ ಪ್ರಜಾವಾಣಿ’ಗೆ ತಿಳಿಸಿದರು.

ಅಫಜಲಪುರ ತಾಲ್ಲೂಕಿನ 10 ಹಾಗೂ ಆಳಂದ ತಾಲ್ಲೂಕಿನ ಮೂರು ಕೆರೆಗಳು ಮತ್ತು ಅಮರ್ಜಾ ಅಣೆಕಟ್ಟೆಗೆ ಬೋರಿ ನದಿಯಿಂದ ನೀರು ಪೂರೈಸುವ ಉದ್ದೇಶದ ಯೋಜನೆಗೆ 2017ರಲ್ಲಿ ಶಾಸಕ ಬಿ.ಆರ್. ಪಾಟೀಲ ವಿಶೇಷ ಮುತುವರ್ಜಿ ವಹಿಸಿ ಮಂಜೂರು ಮಾಡಿಸಿದ್ದರು. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಾಮಗಾರಿ ನನೆಗುದಿಗೆ ಬಿದ್ದಿತ್ತು. ಇದೀಗ ₹450 ಕೋಟಿ ವೆಚ್ಚದ ಯೋಜನೆಗೆ ಮತ್ತೆ ಚಾಲನೆ ದೊರೆತಿದೆ.

ಕಳೆದ ಜನವರಿಯಲ್ಲಿ ಅರ್ಜುಣಗಿ ಗ್ರಾಮದ ಸಮೀಪ ಹೆದ್ದಾರಿ ನಿರ್ಮಾಣ ಕಾಮಗಾರಿ ಕೈಗೊಳ್ಳುವ ವೇಳೆ ನೀರಿನ ಸಂಪರ್ಕ ಕಲ್ಪಿಸುವ ಮುಖ್ಯ ಪೈಪ್‌ಲೈನ್‌ ಅನ್ನು ಏಕಾಏಕಿ ಕಡಿತಗೊಳಿಸಲಾಗಿತ್ತು. ಇದರಿಂದ ಸೆಪ್ಟೆಂಬರ್‌ ಒಳಗೆ ಬೋರಿ ನದಿಯಿಂದ ನೀರು ಹರಿಸುವ ಯೋಜನೆಗೆ ತೊಡಕಾಗಿತ್ತು.

ಪೈಪ್‌ಲೈನ್‌ ಮರುಜೋಡಣೆಗೆ ಶಾಸಕ ಬಿ.ಆರ್. ಪಾಟೀಲ ಮನವಿ ಮಾಡಿದರೂ ಎನ್‌ಎಚ್‌ಎಐ ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ಆರೋಪಿಸಿ ಆರ್‌.ಕೆ. ಪಾಟೀಲ ಅವರು ಆ.27ರಿಂದ ಪಾದಯಾತ್ರೆ ಮೂಲಕ ಧರಣಿ ಆರಂಭಿಸಿದ್ದಾರೆ. ಧರಣಿ ಬುಧವಾರ ಏಳನೇ ದಿನಕ್ಕೆ ಕಾಲಿಟ್ಟಿದೆ.

ಪಾದಯಾತ್ರೆಯ ಮೊದಲ ದಿನದಿಂದಲೇ ಪ್ರತಿಭಟನೆಗೆ ಆಳಂದ ಹಾಗೂ ಅಫಜಲಪುರ ತಾಲ್ಲೂಕಿನ ರೈತರು, ಮಹಿಳೆಯರು ಸೇರಿದಂತೆ ಪಕ್ಷಾತೀತವಾಗಿ ಸಾವಿರಾರು ಮಂದಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಎನ್‌ಎಚ್‌ಎಐ ಅಧಿಕಾರಿಗಳು ಪೈಪ್‌ಲೈನ್‌ ಮರುಜೋಡಣೆ ಕಾಮಗಾರಿ ಆರಂಭಿಸಿರುವುದು ಧರಣಿನಿರತರಲ್ಲಿ ಉತ್ಸಾಹ ಮೂಡಿಸಿದೆ.

ಧರಣಿಗೆ ಮಠಾಧೀಶರು, ಜನರ ಬೆಂಬಲ

ಶಾಸಕ ಬಿ.ಆರ್. ಪಾಟೀಲ, ಅಫಜಲಪುರ ಶಾಸಕ ಎಂ.ವೈ. ಪಾಟೀಲ ಸೇರಿದಂತೆ ಜಿಡಗಾ ಮಠದ ಮುರುಘರಾಜೇಂದ್ರ ಸ್ವಾಮೀಜಿ, ಮಾದನ ಹಿಪ್ಪರಗಿಯ ಅಭಿನವ ಶಿವಲಿಂಗ ಸ್ವಾಮೀಜಿ, ಕಡಗಂಚಿಯ ವೀರಭದ್ರ ಸ್ವಾಮೀಜಿ, ಬಳಿರಾಮ ಮಹಾರಾಜರು, ಆಳಂದದ ಮುಸ್ತಾಫಾ ಮೌಲಾನಾ ಸೇರಿದಂತೆ ವಿವಿಧ ಮಠಾಧೀಶರು ಧರಣಿಗೆ ಬೆಂಬಲ ನೀಡಿದ್ದಾರೆ.

ಆಳಂದ, ಯಳಸಂಗಿ, ಮಾದನ ಹಿಪ್ಪರಗಿ, ಬಡದಾಳ, ಕಡಗಂಚಿ, ಚಲಗೇರಾ, ನಿಂಬರ್ಗಾ, ಚಿನ್ಮಯಗಿರಿ ಹಾಗೂ ಆತನೂರು ಸೇರಿದಂತೆ ವಿವಿಧ ಗ್ರಾಮಗಳ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಧರಣಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ವಿವಿಧ ಗ್ರಾಮಗಳ ಮಹಿಳಾ ಸಂಘಗಳ ಸದಸ್ಯೆಯರು ಬುತ್ತಿರೊಟ್ಟಿ ಕಟ್ಟಿಕೊಂಡು ಬಂದು ಧರಣಿನಿರತರಿಗೆ ಊಟ, ಉಪಾಹಾರ ವ್ಯವಸ್ಥೆ ಮಾಡುತ್ತಿದ್ದಾರೆ.

ರಾತ್ರಿಯಿಡೀ ಭಜನೆ, ರೈತಗೀತೆ ಹಾಗೂ ಜನಪದ ಕಲಾತಂಡಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಧರಣಿಯ ಗಮನ ಸೆಳೆಯುತ್ತಿವೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260902-31-1230944762

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ