ಯಳಂದೂರು: ಬರದ ಬಿಸಿಗೆ ತತ್ತರಿಸಿದ ಕುರಿಗಾಹಿ ಬದುಕು; ಮೇವಿಗಾಗಿ ನಿತ್ಯವೂ ಅಲೆದಾಟ

ಯಳಂದೂರು: ಬರದ ಬಿಸಿಗೆ ತತ್ತರಿಸಿದ ಕುರಿಗಾಹಿ ಬದುಕು; ಮೇವಿಗಾಗಿ ನಿತ್ಯವೂ ಅಲೆದಾಟ

ಯಳಂದೂರು: ಬರದ ಬಿಸಿಗೆ ತತ್ತರಿಸಿದ ಕುರಿಗಾಹಿ ಬದುಕು; ಮೇವಿಗಾಗಿ ನಿತ್ಯವೂ ಅಲೆದಾಟ

ಯಳಂದೂರು: ತಾಲ್ಲೂಕಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬರದ ತೀವ್ರತೆ ಹೆಚ್ಚಾಗಿದ್ದು, ಕುರಿಗಾಹಿಗಳ ಬದುಕಿನ ಮೇಲೂ ಗಂಭೀರವಾದ ಪರಿಣಾಮ ಬೀರಿದೆ.

ಮಳೆ ಕೊರತೆಯಿಂದ ಬಯಲು ಪ್ರದೇಶಗಳಲ್ಲಿ ಮೇವು ಲಭ್ಯವಾಗದೆ, ಕುರಿಗಳಿಗೆ ನೀರು ಮತ್ತು ಆಹಾರ ಒದಗಿಸಲು ಕುರಿಗಾಹಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಪರಿಣಾಮ ‘ಮಂದೆ ಕುರಿ ಸಾಕಣೆ’ ವೆಚ್ಚ ಹೆಚ್ಚಾಗಿದ್ದು ಆದಾಯ ಕುಸಿತ ಕಂಡಿದೆ, ಕುರಿ ಸಾಕಾಣೆ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ ಎನ್ನುತ್ತಾರೆ ಸಾಕಾಣೆದಾರರು.

ಸಾಮಾನ್ಯವಾಗಿ ಮುಂಗಾರು ಹಂಗಾಮಿಗೂ ಮಧ್ಯ ಕರ್ನಾಟಕ, ಮಲೆನಾಡು ಹಾಗೂ ಉತ್ತರ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳಿಂದ ಕುರಿಗಾಹಿಗಳು ಕುರಿಗಳನ್ನು ಮೇಯಿಸಲು ಗ್ರಾಮಗಳತ್ತ ಧಾವಿಸುತ್ತಾರೆ. ಸಾವಿರಾರು ಕುರಿಗಳನ್ನು ಹೊಂದಿರುವ ಮಂದೆಯನ್ನು ವಿಶಾಲವಾದ ಬಯಲು ಪ್ರದೇಶಗಳಲ್ಲಿ ಮೇಯಿಸುತ್ತಾರೆ. ಮಣ್ಣಿನ ಫಲವತ್ತತೆ ಹೆಚ್ಚಿಸುವ ಉದ್ದೇಶದಿಂದ ಕೃಷಿಕರು ಕುರಿ ಮಂದೆಗಳನ್ನು ಹೊಲಗಳಲ್ಲಿ ರಾತ್ರಿ ತಂಗಿಸಿ ಅವುಗಳ ಗೊಬ್ಬರವನ್ನು ಜಮೀನುಗಳಿಗೆ ಹರಡಿಸುತ್ತಾರೆ. ಇದಕ್ಕಾಗಿ ಕುರಿಗಾಹಿಗಳಿಗೆ ನಿರ್ದಿಷ್ಟ ಮೊತ್ತದ ಹಣ ಹಾಗೂ ಧಾನ್ಯಗಳನ್ನು ನೀಡುವ ಪದ್ಧತಿಯೂ ಇದೆ. ಕುರಿಗಳ ಗೊಬ್ಬರ ಹಾಗೂ ಗಂಜಲ ಮಣ್ಣಿನಲ್ಲಿ ಸೇರಿ ಫಲವತ್ತತೆ ಹೆಚ್ಚುವುದರಿಂದ ಉತ್ತಮ ಬೆಳೆ ಪಡೆಯಲು ಸಹಕಾರಿ ಆಗುತ್ತಿತ್ತು.

ಆದರೆ, ಈ ಬಾರಿ ಜಿಲ್ಲೆಯಲ್ಲಿ ಮಳೆ ಕೊರತೆ ಗಂಭೀರವಾಗಿರುವುದರಿಂದ ಬಹುತೇಕ ರೈತರು ಕೃಷಿ ಚಟುವಟಿಕೆಗಳಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ಕುರಿಮಂದೆಗಳಿಗೆ ಬೇಡಿಕೆ ಕುಸಿತವಾಗಿದೆ ಎನ್ನುತ್ತಾರೆ ಕುರಿಗಾಯಿಗಳು.

ಒಂದೆಡೆ ಆದಾಯವಿಲ್ಲದೆ, ಮತ್ತೊಂದೆಡೆ ಕುರಿಗಳಿಗೆ ಸಮೃದ್ದ ಮೇವು ನೀರಿನ ಲಭ್ಯತೆ ಇಲ್ಲದೆ ಬದುಕು ಕಟ್ಟಿಕೊಳ್ಳುವುದು ಕಷ್ಟವಾಗಿದೆ. ಕುಟುಂಬ ನಿರ್ವಹಣೆ ಕಷ್ಟವಾಗಿದ್ದು ಆರ್ಥಕ ಸಮಸ್ಯೆಯ ಸುಳಿಯಲ್ಲಿ ಸಿಲುಕಿದ್ದೇವೆ ಎನ್ನುತ್ತಾರೆ ಕುರಿ ಮಂದೆಗಳ ಮಾಲೀಕರು.

‘ಕೆಲವು ರೈತರು ಕಾಲುವೆ ನೀರನ್ನು ಬಳಸಿಕೊಂಡು ಕೃಷಿ ಚಟುವಟಿಕೆ ನಡೆಸುತ್ತಿದ್ದು ಇಂತಹ ಸ್ಥಳದಲ್ಲಿ ಕುರಿ ಮಂದೆಗಳನ್ನು ಒಂದೆಡೆ ನಿಲ್ಲಿಸುವುದು ಕಷ್ಟವಾಗಿದೆ. ಮಳೆಯ ನಿರೀಕ್ಷೆಯೂ ಇಲ್ಲದಿರುವುದರಿಂದ ಕುರಿಗಳನ್ನು ಹೊಲಗಳಲ್ಲಿ ಕೂಡಿಸಲು ರೈತರು ಮುಂದಾಗುತ್ತಿಲ್ಲ. ನೀರು, ಮೇವು ಒದಗಿಸಲು ಹೊಳೆ, ಹಳ್ಳ ಹಾಗೂ ಕೆರೆಗಳ ಸಮೀಪದಲ್ಲಿ ತಂಗಬೇಕಾದ ಪರಿಸ್ಥಿತಿ ಇದೆ ಎಂದು ತುಮಕೂರಿನ ಕುರಿ ಸಾಕಣೆದಾರ ಶಿವಲಿಂಗಪ್ಪ ತಿಳಿಸಿದರು.

ಎಳೆಮರಿಗಳಿಗೆ ಖರ್ಚು ಹೆಚ್ಚು: ಮಂದೆಯಲ್ಲಿ 400ಕ್ಕೂ ಹೆಚ್ಚು ಕುರಿಗಳಿದ್ದು, 100ಕ್ಕೂ ಹೆಚ್ಚು ಮರಿಗಳಿವೆ. ದೊಡ್ಡ ಕುರಿಗಳು ಒಣ ಹುಲ್ಲು, ಸೊಪ್ಪು ತಿಂದು ಬದುಕುತ್ತವೆ. ಆದರೆ, ಎಳೆ ಮರಿಗಳಿಗೆ ಪೌಷ್ಟಿಕ ಆಹಾರ ಮತ್ತು ಧಾನ್ಯವನ್ನೇ ನೀಡಬೇಕಾಗುತ್ತದೆ. ಇದಕ್ಕಾಗಿ ಹೆಚ್ಚಿನ ಹಣ ವ್ಯಯವಾಗುತ್ತಿದೆ. ಖರ್ಚು ಸರಿದೂಗಿಸಲು ಸಣ್ಣಪುಟ್ಟ ಮರಿಗಳನ್ನು ಮಾರಾಟ ಮಾಡಿ ಉಳಿದ ಕುರಿಗಳನ್ನು ಸಾಕುತ್ತಿದ್ದೇವೆ’ ಎಂದು ಕುರಿ ವ್ಯಾಪಾರಿ ರಾಕೇಶ್ ಹೇಳಿದರು.

ಪ್ರತಿದಿನ ಎರಡರಿಂದ ಮೂರು ಮರಿಗಳನ್ನು ಮಾರಾಟ ಮಾಡುವುದರಿಂದ ಬರುವ ಹಣದಲ್ಲಿ ಉಳಿದ ಮರಿಗಳಿಗೆ ಅಗತ್ಯ ಆಹಾರ ಖರೀದಿಸುತ್ತಿದ್ದೇವೆ. ಇತ್ತೀಚಿನ ದಿನಗಳಲ್ಲಿ ಕುರಿಗಳ ಆಹಾರದ ಬೆಲೆಯೂ ಹೆಚ್ಚಾಗಿರುವುದರಿಂದ ಸಾಕಣೆ ವೆಚ್ಚವೂ ಅಧಿಕವಾಗಿದೆ ಎನ್ನುತ್ತಾರೆ ಅವರು.

ಒಂದೆರಡು ಗಟ್ಟಿ ಮಳೆ ಸುರಿದು ಬಯಲು ಪ್ರದೇಶಗಳಲ್ಲಿ ಹಸಿರು ಮೇವು ಸಮೃದ್ಧವಾಗಿ ದೊರೆತರೆ ಆಹಾರಕ್ಕಾಗಿ ಮಾಡಬೇಕಾದ ಹೆಚ್ಚುವರಿ ಖರ್ಚು ಉಳಿಯುತ್ತದೆ. ರೈತರು ಮತ್ತೆ ಕುರಿಮಂದೆಗಳಿಗೆ ಬೇಡಿಕೆ ಸಲ್ಲಿಸಿದರೆ ಕುರಿಗಾಯಿಗಳ ಬದುಕು ಚೇತರಿಸಿಕೊಳ್ಳಬಹುದು ಎನ್ನುತ್ತಾರೆ ಸಾಕಣೆದಾರರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260902-37-82655342

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ