ಗರಿಗೆದರಿದ ’ಈಶಾನ್ಯ ಶಿಕ್ಷಕರ’ ಚುನಾವಣೆ

ಗರಿಗೆದರಿದ ’ಈಶಾನ್ಯ ಶಿಕ್ಷಕರ’ ಚುನಾವಣೆ

ಗರಿಗೆದರಿದ ’ಈಶಾನ್ಯ ಶಿಕ್ಷಕರ’ ಚುನಾವಣೆ

ಕಲಬುರಗಿ: ಕರ್ನಾಟಕ ವಿಧಾನ ಪರಿಷತ್ತಿನ ಈಶಾನ್ಯ ಶಿಕ್ಷಕರ ಕ್ಷೇತ್ರದ ದ್ವೈವಾರ್ಷಿಕ ಚುನಾವಣೆಗೆ ಕೊನೆಗೂ ಮುಹೂರ್ತ ನಿಗದಿಯಾಗಿದೆ. ಅಕ್ಟೋಬರ್‌ 23ರಂದು ಮತದಾನ ನಡೆಯಲಿದ್ದು, ಅಕ್ಟೋಬರ್‌ 27ರಂದು ಮತಗಳ ಎಣಿಕೆ ನಡೆಯಲಿದೆ. ದಿನಾಂಕ ನಿಗದಿಯಾದ ಬೆನ್ನಲ್ಲೇ ಚುನಾವಣಾ ಅಖಾಡ ಸಜ್ಜಾಗಿದೆ.

ಕಲಬುರಗಿ, ಯಾದಗಿರಿ, ಬೀದರ್‌, ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಸೇರಿ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ವ್ಯಾಪ್ತಿಯನ್ನು ಈ ಕ್ಷೇತ್ರ ಹೊಂದಿದೆ. ಈಗಾಗಲೇ ಕಾಂಗ್ರೆಸ್‌, ಬಿಜೆಪಿ, ಜೆಡಿಯು ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಘೋಷಿಸಿವೆ.

ಬಿಜೆಪಿಯಿಂದ ಹಾಲಿ ಎಂಎಲ್‌ಸಿ ಶಶೀಲ್‌ ನಮೋಶಿ ಕಣಕ್ಕಿಳಿಯಲಿದ್ದಾರೆ. ಈ ಕುರಿತು ಬಿಜೆಪಿಯ ದೆಹಲಿ ಹೈಕಮಾಂಡ್‌ ಇದೇ ವರ್ಷದ ಮಾರ್ಚ್‌ 10ರಂದೇ ಪ್ರಕಟಿಸಿತ್ತು. ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ವಕೀಲ ಶರಣಪ್ಪ ಮಟ್ಟೂರ ಅವರನ್ನು ಕಾಂಗ್ರೆಸ್‌ ತನ್ನ ಉಮೇದುವಾರ ಎಂದು ಪ್ರಕಟಿಸಿದೆ. 2025ರ ಡಿಸೆಂಬರ್‌ 30ರಂದು ಕಾಂಗ್ರೆಸ್‌ ಹೈಕಮಾಂಡ್‌ ಈ ಘೋಷಣೆ ಮಾಡಿತ್ತು. ಇನ್ನು, ಪ್ರೊ.ಎಸ್‌.ಎಲ್‌.ಪಾಟೀಲ ಅವರನ್ನು ಕಣಕ್ಕಿಳಿಸಲು ಜೆಡಿಯು ನಿರ್ಧರಿಸಿದೆ. ಜೊತೆಗೆ ಹಲವರು ಪಕ್ಷೇತರ ಅಭ್ಯರ್ಥಿಗಳಾಗಿ ಕಣಕ್ಕಿಳಿಯಲು ಉತ್ಸುಕರಾಗಿದ್ದು, ಭರದ ಸಿದ್ಧತೆ ನಡೆಸಿದ್ದಾರೆ.

ಶಿಕ್ಷಕರ ಕ್ಷೇತ್ರ ವಿದ್ಯಾವಂತರ ಅಖಾಡ. ಬೋಧಕರು ಹಲವು ಬಗೆಯಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರ ಸಮಸ್ಯೆಗಳಿಗೆ ಸ್ಪಂದಿಸುವ, ಅವರಿಗೆ ನ್ಯಾಯ ಕೊಡಿಸುವ ಕೆಲಸವನ್ನು ಅಭ್ಯರ್ಥಿಗಳು ಕಳೆದ ಕೆಲವು ತಿಂಗಳಿಂದ ಬಿರುಸಿನಿಂದಲೇ ನಡೆಸುತ್ತಿದ್ದಾರೆ.

ನಾಲ್ಕು ಸಲ ಈ ಕ್ಷೇತ್ರವನ್ನು ಪ್ರತಿನಿಧಿಸಿರುವ ಶಶೀಲ್‌ ನಮೋಶಿ ಸದ್ದಿಲ್ಲದೇ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ಕಲ್ಯಾಣ ಕರ್ನಾಟಕದ ಏಳೂ ಜಿಲ್ಲೆಗಳಲ್ಲಿ ಓಡಾಡುತ್ತಿದ್ದಾರೆ. ಐದನೇ ಅವಧಿಗೆ ಶಿಕ್ಷಕರ ‘ಆಶೀರ್ವಾದ’ ಕೋರುತ್ತಿದ್ದಾರೆ.

‘ಕಲ್ಯಾಣ ಭಾಗದ ಜಿಲ್ಲೆಗಳ ಶಿಕ್ಷಕರ ವಲಯದ ಸಮಸ್ಯೆಗಳಿಗೆ ನಿರಂತರವಾಗಿ ಸ್ಪಂದಿಸುತ್ತ ಬಂದಿದ್ದೇನೆ. ಖಾಸಗಿ ಶಾಲೆಗಳ ಕಟ್ಟಡಗಳ ಸುರಕ್ಷತೆ, ಅಗ್ನಿಶಾಮಕ ಪರವಾನಗಿ, ಶಾಲಾ ಮಾನ್ಯತಾ ನವೀಕರಣದ ಜಟಿಲ ಸಮಸ್ಯೆಗಳಿಗೆ ಇಲಾಖೆ ಸಚಿವರೊಂದಿಗೆ ಚರ್ಚಿಸಿ ಪರಿಹರಿಸಲಾಗಿದೆ. ಮುಖ್ಯ ಶಿಕ್ಷಕರ ಬಡ್ತಿ, ಹೈಸ್ಕೂಲ್‌ನಿಂದ ಪಿಯು ಕಾಲೇಜಿಗೆ ಬಡ್ತಿಗೆ ಪರಿಣಾಮಕಾರಿ ಕ್ರಮವಹಿಸಿದ್ದೇನೆ. ಎನ್‌ಎಸ್‌ಕ್ಯುಎಫ್‌ ಸುತ್ತೋಲೆ ನೆಪವೊಡ್ಡಿ ತೃತೀಯ ಭಾಷೆ ಕೈಬಿಡಲು ಮುಂದಾದ ರಾಜ್ಯ ಸರ್ಕಾರದ ಮೇಲೆ ಶಿಕ್ಷಕರ ಹಿತ ಕಾಯಲು ಒತ್ತಡ ಹೇರಿದ್ದೇನೆ. ಶಿಕ್ಷಕರ ಸಮಸ್ಯೆಗಳಿಗೆ ಸತತವಾಗಿ ಸ್ಪಂದಿಸಿದ್ದರಿಂದ ಚುನಾವಣೆಯಲ್ಲಿ ಅವರು ನನ್ನ ಕೈಹಿಡಿಯಲಿದ್ದಾರೆ’ ಎಂದು ವಿಧಾನ ಪರಿಷತ್‌ ಹಾಲಿ ಸದಸ್ಯ ಶಶೀಲ್‌ ನಮೋಶಿ ವಿಶ್ವಾಸವ್ಯಕ್ತಪಡಿಸಿದ್ದಾರೆ.

‘ಕಳೆದ 14 ತಿಂಗಳಿಂದ ಕಲ್ಯಾಣ ಕರ್ನಾಟಕದ 3,957 ಸಂಸ್ಥೆಗಳಿಗೆ ಭೇಟಿ ನೀಡಿ, ಅಲ್ಲಿನ ಶಿಕ್ಷಕರ ಸಮಸ್ಯೆಗಳಿಗೆ ನೇರವಾಗಿ ಸ್ಪಂದಿಸಿದ್ದೇನೆ. ಸರ್ಕಾರಿ, ಅನುದಾನಿತ, ಖಾಸಗಿ ಶಾಲೆಗಳ ಶಿಕ್ಷಕರ ಸಮಸ್ಯೆ ಆಲಿಸಿದ್ದೇನೆ. ಹರಪನಹಳ್ಳಿಯಿಂದ ಔರಾದ್‌ ತನಕವೂ ಓಡಾಡುತ್ತಿದ್ದೇನೆ. ನಮ್ಮ ಕಾಂಗ್ರೆಸ್‌ ಸರ್ಕಾರವು ಶಿಕ್ಷಕರಿಗೆ 6ನೇ ವೇತನ, 7ನೇ ವೇತನ ಆಯೋಗ ಜಾರಿ ಮಾಡಿದೆ. ಮುಖ್ಯಶಿಕ್ಷಕರ ಬಡ್ತಿ, ಪಿಯು ಕಾಲೇಜಿಗೆ ಶಿಕ್ಷಕರ ಬಡ್ತಿಗೂ ಕ್ರಮವಹಿಸಿದೆ. ಇವೆಲ್ಲವೂ ನನ್ನ ಗೆಲುವಿಗೆ ನೆರವಾಗಲಿವೆ’ ಎಂಬುದು 2ನೇ ಅವಧಿಗೆ ಆಯ್ಕೆ ಬಯಸಿರುವ ಶರಣಪ್ಪ ಮಟ್ಟೂರ ಅಂಬೋಣ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ