
ಕನಕದಾಸರು ಕರ್ನಾಟಕ ಇತಿಹಾಸದಲ್ಲಿ ದಾಸ ಸಾಹಿತ್ಯದ ಮೇರು ಪ್ರವರ್ತಕರು
ಕಡೂರು: ಕನಕದಾಸರು ಕರ್ನಾಟಕದ ಇತಿಹಾಸದಲ್ಲಿ ದಾಸ ಸಾಹಿತ್ಯದ ಮೇರು ಪ್ರವರ್ತಕರಾಗಿ ದಾಸ ಪಂಥದ ಅಶ್ವಿನಿ ದೇವತೆಗಳಲ್ಲಿ ಒಬ್ಬರು ಎಂಬ ಶ್ರೇಯ ಹೊಂದಿದವರು. ತಮ್ಮ ಕೃತಿಗಳು ಹಾಗೂ ಭಕ್ತಿಯ ಮೂಲಕವೇ ನಾಡಿನಾದ್ಯಂತ ಮನೆ ಮಾತಾದವರು.
ಮೂಲತಃ ಹಾವೇರಿ ಜಿಲ್ಲೆಯ ಬಾಡ ಗ್ರಾಮದಲ್ಲಿ ಬೀರೇಗೌಡ ಮತ್ತು ಬಚ್ಚಮ್ಮ ದಂಪತಿಯ ಪುತ್ರನಾಗಿ 1509ರಲ್ಲಿ ಜನಿಸಿದ ಕನಕದಾಸರ ಮೂಲ ಹೆಸರು ತಿಮ್ಮಪ್ಪ ನಾಯಕ. ವಿಜಯನಗರ ಸಾಮ್ರಾಜ್ಯದ ಬಂಕಾಪುರ ಪ್ರಾಂತ್ಯದ ಕಾದಿಟ್ಟ ಸೈನ್ಯದ ದಳಪತಿಯಾಗಿದ್ದ ಬೀರಪ್ಪ ನಾಯಕ, ತಿರುಪತಿಯ ಶ್ರೀನಿವಾಸ ದೇವರಲ್ಲಿ ಬಹು ನಂಬಿಕೆ ಇರಿಸಿದವರು. ವಿಶಿಷ್ಟಾದ್ವೈತ ಪ್ರತಿಪಾದಕ ರಾಮಾನುಜಾಚಾರ್ಯರ ಶ್ರೀವೈಷ್ಣವ ಪಂಥ ಅನುಸರಿಸಿದ ಬೀರಪ್ಪ-ಬಚ್ಚಮ್ಮ ದಂಪತಿ, ತಿರುಪತಿಯ ಶ್ರೀನಿವಾಸನಿಗೆ ಹರಕೆ ಹೊತ್ತ ಪರಿಣಾಮವಾಗಿ ಜನಿಸಿದ ಪುತ್ರನಿಗೆ ಭಕ್ತಿ ಮತ್ತು ಪ್ರೀತಿಯಿಂದ ತಿಮ್ಮಪ್ಪ ಎಂದೇ ಕರೆದರು.
ಬಂಕಾಪುರದಲ್ಲಿ ಶಿಕ್ಷಣ ಪಡೆದು ವ್ಯಾಕರಣ, ತರ್ಕ ಮತ್ತು ಮೀಮಾಂಸೆಗಳಲ್ಲಿ ಉತ್ತಮ ಹಿಡಿತ ಸಾಧಿಸಿದ ತಿಮ್ಮಪ್ಪ ನಾಯಕ, ಜತೆಗೆ ಸಂಪ್ರದಾಯಬದ್ಧ ಯುದ್ಧ ಶಿಕ್ಷಣವನ್ನೂ ಪಡೆದು, ತಮ್ಮ ತಂದೆಯ ನಂತರ ಬಂಕಾಪುರ ಪ್ರಾಂತಕ್ಕೆ ಡಣಾಯಕರಾದರು (ದಳಪತಿ).
ತಮ್ಮ ಜೀವನದ ಹಲವು ವರ್ಷಗಳ ಕಾಲ ದಳಪತಿಯಾಗಿ ಕರ್ತವ್ಯ ನಿರ್ವಹಿಸಿದ ತಿಮ್ಮಪ್ಪ, ಯುದ್ಧವೊಂದರಲ್ಲಿ ಆದ ಗಾಯ ಹಾಗೂ ಸೋಲಿನ ಪರಿಣಾಮದಿಂದ ಆತ್ಮಾವಲೋಕನದ ಪಥ ಅನುಸರಿಸಿ ಕಡೆಗೆ ವೈರಾಗ್ಯ ಜೀವನಕ್ಕೆ ವಾಲಿದರು ಎಂದು ಹಲವು ಕಡೆ ಉಲ್ಲೇಖಿಸಲಾಗಿದೆ. ಬಳಿಕ ಅನನ್ಯ ಭಕ್ತಿಯ ಹಾಗೂ ಅಧ್ಯಾತ್ಮದ ಕಡೆ ಒಲವು ತೋರಿ ಆತ್ಮಜ್ಞಾನ ಅರಸುತ್ತಾ ಉಡುಪಿಗೆ ಬಂದು ವ್ಯಾಸರಾಯರ ಶಿಷ್ಯರಾಗಿ ಮಧ್ವಮತ ಅನುಸರಿಸಿ, ಕಡೆಗೆ ಗುರುಗಳಾದ ವ್ಯಾಸರಾಯರಿಂದ ತಮ್ಮ ಅಪ್ಪಟ ಬಂಗಾರದ ಗುಣಕ್ಕಾಗಿ ‘ಕನಕ’ ಎಂದು ಕರೆಯಲ್ಪಟ್ಟರು. ತಮ್ಮ ಗ್ರಾಮ ಕಾಗಿನೆಲೆಯ ಆದಿಕೇಶವನ ಅಂಕಿತದಲ್ಲಿ ಅವರು ರಚಿಸಿದ ದಾಸ ಸಾಹಿತ್ಯ ನಾಡಿನ ಸಾಹಿತ್ಯ ಪರಂಪರೆಗೆ ಶ್ರೇಷ್ಠ ಕೊಡುಗೆಯಾಗಿದೆ.
ಕನಕದಾಸರು ಸಾಹಿತ್ಯದ ವಿವಿಧ ಪ್ರಕಾರಗಳಾದ ಕೀರ್ತನೆಗಳು, ಸುಳಾದಿ, ಉಗಾಭೋಗಗಳ ಮೂಲಕ ಕನ್ನಡ ಸಾಹಿತ್ಯ ಪರಂಪರೆಯನ್ನು ಶ್ರೀಮಂತಗೊಳಿಸುವ ಜತೆಗೆ ಮುಂಡಿಗೆಗಳ ಮೂಲಕ ಸಂಗೀತ ಲೋಕಕ್ಕೂ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಕನಕದಾಸರು ರಚಿಸಿದ ಕೀರ್ತನೆಗಳಲ್ಲಿ 316 ಕೀರ್ತನೆಗಳು ಹಾಗೂ ಶ್ರೀಕೃಷ್ಣದೇವರಾಯನ ಆಳ್ವಿಕೆಯ ವಿಜಯನಗರದ ವೈಭವ ಸಾರುವ ಮೋಹನ ತರಂಗಿಣಿ, ಭಾಮಿನೀ ಷಟ್ಪದಿಯಲ್ಲಿ ರಚಿಸಿದ ಮಹಾಭಾರತದ ಪ್ರೇಮಕಥೆ ನಳಚರಿತ್ರೆ, ಭಾಮಿನೀ ಷಟ್ಪದಿಯಲ್ಲಿಯೇ ರಚಿತವಾಗಿರುವ ಮೇಲ್ವರ್ಗದವರ ಆಹಾರ ಎಂದು ಪರಿಗಣಿಸಲಾಗಿದ್ದ ಅಕ್ಕಿ ಹಾಗೂ ಕೆಳ ವರ್ಗದವರ ಆಹಾರಧಾನ್ಯ ಎಂದು ಬಿಂಬಿತವಾಗಿದ್ದ ರಾಗಿಯ ನಡುವೆ ಸಂಭಾಷಣೆ ನಡೆದು ಗುಣ ಹಾಗೂ ಸಾರದಲ್ಲಿ ರಾಗಿಯೇ ಶ್ರೇಷ್ಠ ಎನ್ನುವ ಸಾರ ಹೊಂದಿದ ಸೃಜನಶೀಲ ರಾಮಧಾನ್ಯ ಚರಿತೆಯನ್ನು ಇಂದಿನ ಯುಗದ ಬಂಡಾಯ ಸಾಹಿತ್ಯದ ಬೇರು ಎಂದೇ ಪರಿಗಣಿಸಲಾಗಿದೆ. ಹರಿಭಕ್ತಿ ಸಾರವು ಕನ್ನಡದ ಭಗವದ್ಗೀತೆ ಎಂದೂ, ಉಪಮೆಗಳ ಮೂಲಕ ಕಾವ್ಯ ಕೌಶಲದ ಪ್ರೌಢಿಮೆಯನ್ನು ಬಿಂಬಿಸಿವೆ ಎನ್ನುತ್ತದೆ ಸಾಹಿತ್ಯ ಪರಂಪರೆ. ತಮ್ಮ ಕೀರ್ತನೆಗಳ ಮೂಲಕ ಜಾತಿ ಪದ್ಧತಿಯ ವಿರುದ್ಧ ಧ್ವನಿ ಎತ್ತಿದ ಸಮಾನತೆಯ ಹರಿಕಾರ ಕನಕದಾಸರು. ಇಂತಹ ಕನಕದಾಸರು ಒಂದರ್ಥದಲ್ಲಿ ಅಲೆಮಾರಿಯಾದರು. ಆದರೆ, ನಾಡಿನ ಬಹುಸಂಖ್ಯಾತ ಪಂಗಡಗಳಲ್ಲಿ ಒಂದಾದ ಹಾಲುಮತ ಅಥವಾ ಕುರುಬ ಸಮುದಾಯಕ್ಕೆ ಸೇರಿದವರು ಎನ್ನುವುದು ಇತಿಹಾಸದ ಪುಟಗಳ ದಾಖಲಾಗಿದೆ.
ಕನಕದಾಸರ ಅಧ್ಯಯನ ಪೀಠಗಳು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ, ಉಡುಪಿಯ ಕನಕದಾಸ ಅಧ್ಯಯನ ಸಂಶೋಧನಾ ಪೀಠ, ಮಂಗಳ ಗಂಗೋತ್ರಿಯ ಕನಕದಾಸ ಅಧ್ಯಯನ ಪೀಠ (ಸಂಶೋಧನಾ ಕೇಂದ್ರ), ಬೆಂಗಳೂರಿನ ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರಗಳು ಅವರ ಮೌಲ್ಯಯುತ ಸಾಹಿತ್ಯದ ನಿರಂತರ ಅಧ್ಯಯನದ ಮೂಲಕ ಕನಕದಾಸರ ದಾಸ ಸಾಹಿತ್ಯವನ್ನು ಜೀವಂತವಾಗಿ ಇರಿಸಿವೆ. ಕನಕದಾಸರ ನೆಲೆ ಕಾಗಿನೆಲೆಯಲ್ಲಿ ಅಭಿವೃದ್ಧಿ ಪ್ರಾಧಿಕಾರವೂ ಇಂಗ್ಲಿಷ್, ಹಿಂದಿ ಮತ್ತು ತೆಲುಗಿಗೆ ಅವರ ಹಲವು ಕೃತಿಗಳನ್ನು ಅನುವಾದದ ಮೂಲಕ ಎಲ್ಲೆಡೆ ಪಸರಿಸುವ ಕೆಲಸ ಮಾಡುತ್ತಿದೆ.
1990ರಲ್ಲಿ ಕೇಂದ್ರ ಸರ್ಕಾರವು ಕನಕದಾಸರ ಗೌರವಾರ್ಥ ಅಂಚೆಚೀಟಿ ಹೊರತಂದರೆ, ಕರ್ನಾಟಕ ಸರ್ಕಾರವು 2006-07ರಲ್ಲಿ ಕನಕದಾಸರ ಜೀವನ ಮತ್ತು ಅವರ ಸಾಹಿತ್ಯದ ಬಗ್ಗೆ ಬೆಳಕು ಚೆಲ್ಲಲು ಅಭಿವೃದ್ಧಿ ಪ್ರಾಧಿಕಾರ ರಚಿಸಿದೆ. 2008ರಿಂದ ಕನಕದಾಸ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಘೋಷಿಸಿದೆ. ಇಂತಹ ಕನಕದಾಸರು ನಾಡಿನಾದ್ಯಂತ ಗೌರವ ಪಡೆದ ದಾಸಶ್ರೇಷ್ಠರಾಗಿದ್ದು, ಕಡೂರಿನ ಕನಕರಾಯನ ಗುಡ್ಡದಲ್ಲಿಯೂ ತಂಗಿದ್ದರು ಎಂಬ ಐತಿಹ್ಯ ಇದೆ.
ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ 1857ರ ಸಿಪಾಯಿ ದಂಗೆಯು ಮೊದಲ ಸ್ವಾತಂತ್ರ್ಯ ಸಂಗ್ರಾಮ ಎಂದೇ ಗುರುತಿಸಲ್ಪಟ್ಟರೂ ಅದಕ್ಕೂ ಸುಮಾರು 30 ವರ್ಷಗಳ ಮುನ್ನ 1826ರಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿ ಗೆಲುವು ಸಾಧಿಸಿ ಶೌರ್ಯ, ಸಾಹಸ ಮರೆದ ಕೀರ್ತಿ ಕರ್ನಾಟಕದ ಬೆಳಗಾವಿ ಜಿಲ್ಲೆಯ ಕಿತ್ತೂರು ಸಂಸ್ಥಾನಕ್ಕೆ ಸಲ್ಲಬೇಕು.
ದೇಶದಾದ್ಯಂತ ಸಾವಿರಾರು ಜನ ಹೋರಾಟ ಮಾಡಿ, ತ್ಯಾಗ, ಬಲಿದಾನಗಳ ಮೂಲಕ ಹೆಸರಾಗಿದ್ದರೂ ಬ್ರಿಟಿಷ್ ಸೈನ್ಯವನ್ನೇ ಹೊಡೆದೋಡಿಸಿ ತತ್ತರಿಸುವಂತೆ ಮಾಡಿದ ಕೀರ್ತಿ ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಆಕೆಯ ಧೀರ ಅನುಯಾಯಿ ಸಂಗೊಳ್ಳಿ ರಾಯಣ್ಣ ಅವರಿಗೆ ಸಲ್ಲುತ್ತದೆ. ಇದಕ್ಕೆ ಕಿತ್ತೂರು ಸಂಸ್ಥಾನ ಇಂದಿಗೂ ಸಾಕ್ಷಿಯಾಗಿದೆ. ಇದು ಸ್ಥಳೀಯ ಹೋರಾಟ ಎನಿಸಿಕೊಂಡ ಕಾರಣ ಮೊದಲ ಸ್ವಾತಂತ್ರ್ಯ ಸಂಗ್ರಾಮ ಎಂಬ ಶ್ರೇಯ ಲಭ್ಯವಾಗಲಿಲ್ಲ ಎನ್ನುವುದೂ ಸತ್ಯ.
ಮೂಲತಃ ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲ್ಲೂಕಿನ ಸಂಗೊಳ್ಳಿ ಗ್ರಾಮದಲ್ಲಿ ಭರಮಣ್ಣ ಮತ್ತು ಕೆಂಚವ್ವ ದಂಪತಿಯ ಪುತ್ರನಾಗಿ 1796ರ ಆಗಸ್ಟ್ 15ರಂದು ಜನಿಸಿದ ರಾಯಣ್ಣ, ತಂದೆಯ ಹಾದಿಯನ್ನೇ ಅನುರಿಸಿದ ದೇಶಪ್ರೇಮಿ.
ಸಮೀಪವೇ ಇದ್ದ ಕಿತ್ತೂರು ಸಂಸ್ಥಾನದ ಪ್ರಜೆಯೂ ಆಗಿದ್ದರು. ಇಡೀ ದೇಶವೇ ಬ್ರಿಟಿಷರ ದಾಸ್ಯದ ಸಂಕೋಲೆಯಲ್ಲಿ ಸಿಲುಕಿ ನರಳುತ್ತಿರುವ ಸಂದರ್ಭದಲ್ಲಿ ಕಿತ್ತೂರು ಸಂಸ್ಥಾನದ ಅರಸ ಮಲ್ಲಸರ್ಜನ ಸಾವಿನ ಬಳಿಕ ದತ್ತುಮಕ್ಕಳಿಗೆ ಹಕ್ಕಿಲ್ಲ ಎಂಬ ಕಾನೂನಿನ ಅಡಿಯಲ್ಲಿ ಈಸ್ಟ್ ಇಂಡಿಯಾ ಕಂಪನಿಯು ಸಂಸ್ಥಾನವನ್ನು ವಶಪಡಿಸಿಕೊಳ್ಳಲು ಮುಂದಾಯಿತು. ಚೆನ್ನಮ್ಮನ ಸೈನ್ಯ ಮತ್ತು ರಾಯಣ್ಣ ಅಪ್ರತಿಮ ಸಾಹಸ ಮೆರೆದು ಗೆಲುವು ಸಾಧಿಸಿತ್ತು.
ನಂತರ ಮರು ದಾಳಿ ನಡೆಸಿದ ಬ್ರಿಟಿಷ್ ಸೈನ್ಯ ಕಿತ್ತೂರು ಕೋಟೆಯನ್ನು ವಶಪಡಿಸಿಕೊಂಡಿತ್ತು. ಈ ಹಂತದಲ್ಲಿ ಚೆನ್ನಮ್ಮ ಸೆರೆಸಿಕ್ಕರೂ, ಬ್ರಿಟಿಷರಿಂದ ತಪ್ಪಿಸಿಕೊಂಡ ರಾಯಣ್ಣ ಗೆರಿಲ್ಲಾ ಯುದ್ಧ ತಂತ್ರದ ಮೂಲಕ ಜನ ಸಂಘಟನೆ ಮಾಡುತ್ತ ಹೋರಾಟ ರೂಪಿಸಿದರು.
ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚು ಹಚ್ಚುತ್ತಾ, ಜನರ ನೆರವಿನಿಂದ ತಪ್ಪಿಸಿಕೊಂಡು ಬ್ರಿಟಿಷರ ವಿರುದ್ಧ ಹೋರಾಡುತ್ತಿದ್ದ ರಾಯಣ್ಣ ಅವರು, ಸಂಗಡಿಗರ ಕುತಂತ್ರದಿಂದಲೇ ಬೆಳಗಾವಿ ಜಿಲ್ಲೆಯ ಖಾನಾಪುರ ಸಮೀಪದ ನಂದಘಡದ ಅರಣ್ಯ ಪ್ರದೇಶದಲ್ಲಿ ಬ್ರಿಟಿಷರಿಗೆ ಸೆರೆಯಾದರು. ತಮಗೆ ಸೆರೆ ಸಿಕ್ಕ ಸಂಗೊಳ್ಳಿ ರಾಯಣ್ಣನನ್ನು ಮತ್ತು 6 ಸಂಗಡಿಗರನ್ನು ಬ್ರಿಟಿಷರು ನಂದಘಡದಲ್ಲಿ 1831ರ ಜನವರಿ 26ರಂದು ನೇಣಿಗೇರಿಸುವ ಮೂಲಕ ಕ್ರಾಂತಿ ಜ್ಯೋತಿಯನ್ನು ನಂದಿಸಿದರು.
ಕಾಕತಾಳೀಯ ಎಂಬಂತೆ ರಾಯಣ್ಣ ಹುಟ್ಟಿದ್ದು ಆಗಸ್ಟ್ 15 ಭಾತದ ಸ್ವಾತಂತ್ರ್ಯ ದಿನವಾದರೆ, ಆತ ಬಲಿದಾನಗೈದ ಜನವರಿ 26 ಒಕ್ಕೂಟ ವ್ಯವಸ್ಥೆ ಜಾರಿಗೆ ಬಂದ ಗಣರಾಜ್ಯ ದಿನವಾಗಿದೆ. ಸಂಗೊಳ್ಳಿ ಗ್ರಾಮದ ಬಿಚ್ಚುಗತ್ತಿ ಚನ್ನಬಸವಣ್ಣ ಮಾರುವೇಷದಲ್ಲಿ ರಾಯಣ್ಣನ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡು ಇವನ ಸಮಾಧಿಯ ಮೇಲೆ ಆಲದ ಸಸಿ ನೆಡುವ ಮೂಲಕ ತನ್ನ ಗೆಳೆಯನಿಗೆ ಅಂತಿಮ ನಮನ ಸಲ್ಲಿಸಿದನು. ಅಂದು ನೆಟ್ಟ ಆಲದ ಸಸಿ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ.
ಆ ಸ್ಥಳದಲ್ಲಿಯೇ ಕರ್ನಾಟಕ ಸರ್ಕಾರವು ರಾಯಣ್ಣನ ಸ್ಮಾರಕ ನಿರ್ಮಿಸಿ ಆತನ ಧೀರ ಸೇನಾನಿಯ ನೆನಪನ್ನು ಅಮರಗೊಳಿಸಿದೆ. ಜನಮಾನಸದಲ್ಲಿ ನೆಲೆಯಾದ ರಾಯಣ್ಣನಿಗೆ ವೀರ ರಾಯ, ವೀರ ಸಂಗೊಳ್ಳಿ ರಾಯಣ್ಣ, ಶೂರ ರಾಯಣ್ಣ, ಧೀರ ರಾಯಣ್ಣ, ಕ್ರಾಂತಿವೀರ ರಾಯಣ್ಣ ಇತ್ಯಾದಿ ಬಿರುದುಗಳು ಜನರ ಮನದಾಳದಿಂದ, ಜನಪದರಿಂದ, ನಾಟಕಕಾರರಿಂದ, ಇತಿಹಾಸಕಾರರಿಂದ ಲಭಿಸಿದೆ.
ರಾಯಣ್ಣನ ನಿಃಸ್ವಾರ್ಥ ಹೋರಾಟ, ದೇಶಪ್ರೇಮ ಯುವಜನತೆಯಲ್ಲಿ ಸ್ಫೂರ್ತಿಯನ್ನು ತುಂಬುತ್ತದೆ. ಇದ್ದರೆ ರಾಯಣ್ಣನ ರೀತಿ ದೇಶಪ್ರೇಮಿಗಳು ಇರಬೇಕು ಎನ್ನುವುದು ಎಲ್ಲರ ಮಾತು. ರಾಯಣ್ಣನ ದಂಡಿನಲ್ಲಿ ಸ್ಮರಿಸಬೇಕಾದ ಅತ್ಯಂತ ಮಹತ್ವದ ವಿಷಯ ಎಂದರೆ ಒಗ್ಗಟ್ಟು ಉಂಟು ಮಾಡಿರುವ ಬಗೆಯನ್ನು ತಿಳಿಯುವುದು. ರಾಯಣ್ಣನ ಹೆಸರನ್ನು ಅಮರವಾಗಿಸಲು ಬೆಂಗಳೂರಿನ ರೈಲು ನಿಲ್ದಾಣಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಹೆಸರಿಡಲಾಗಿದೆ. ರಾಯಣ್ಣನ ನೆನಪಿನಲ್ಲಿ ರಾಜ್ಯ ಸರ್ಕಾರವು ಆತನನ್ನು ಗಲ್ಲಿಗೇರಿಸಿದ ಸ್ಥಳವನ್ನು ವೀರಭೂಮಿ ಎಂದು ಹೆಸರಿಸಿದೆ.
ಕನಕದಾಸ, ರಾಯಣ್ಣ ಪ್ರತಿಮೆ ಅನಾವರಣ ಇಂದು
ಕಡೂರು ತಾಲ್ಲೂಕಿನ ಬೀರೂರು ಪಟ್ಟಣದ ಕುರುಬರ ಸಂಘವು ಕನಕದಾಸರ ನೆನಪನ್ನು ಶಾಶ್ವತಗೊಳಿಸುವ ಉದ್ದೇಶದಿಂದ ಇದೇ ಸೆ.5ರಂದು ತನ್ನ ಕಟ್ಟಡದ ಮುಂಭಾಗದಲ್ಲಿ ಕನಕದಾಸರ 7 ಅಡಿ ಕಂಚಿನ ಪ್ರತಿಮೆ ಸ್ಥಾಪಿಸಲು ಮುಂದಾಗಿದೆ. ಜತೆಗೆ ಸಂಗೊಳ್ಳಿ ರಾಯಣ್ಣ ಅವರ 12 ಅಡಿ ಕಂಚಿನ ಪ್ರತಿಮೆಯನ್ನೂ ಸ್ಥಾಪಿಸಲಾಗುತ್ತಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಉಪಸ್ಥಿತಿಯಲ್ಲಿ ಮತ್ತು ಶಾಸಕ ಕೆ.ಎಸ್.ಆನಂದ್ ಅವರ ಸಹಕಾರದಲ್ಲಿ ಕಾರ್ಯಕ್ರಮ ನಡೆಯಲಿದೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260905-126-1553959874