
ಉತ್ತರ ಕನ್ನಡದ ಪ್ರಿಯಾಂಕಾ ಹೆಗಡೆ ಬಹುಮುಖ ಪ್ರತಿಭೆ: ಮಹಿಳಾ ಲೋಕಕ್ಕೆ ಶೋಭೆ
‘ಕ್ರಿಯಾಶೀಲರಿಗೆ ಕೆಲಸವೇ ವಿಶ್ರಾಂತಿ, ಆಲಸಿಗಳಿಗೆ ವಿಶ್ರಾಂತಿ ಕೂಡ ಕೆಲಸ’ ಎಂಬ ಮಾತಿದೆ. ಸದಾ ಒಂದಿಲ್ಲೊಂದು ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡು, ಛಾಪು ಮೂಡಿಸುವುದು ಸಣ್ಣ ಮಾತಲ್ಲ. ಇದಕ್ಕೆ ನಿದರ್ಶನವೆಂಬಂತಿದೆ ಉತ್ತರ ಕನ್ನಡ ಜಿಲ್ಲೆ ಶಿರಸಿಯ ಪ್ರಿಯಾಂಕಾ ಹೆಗಡೆ ಅವರ ಸಾಧನೆ.
ಒಂದು ಕಾಲಕ್ಕೆ ಕೀರ್ತನೆ ಎಂಬುದು ಪುರುಷರಿಗೆ ಮಾತ್ರ ಸಿದ್ಧಿಸಿದ ಕಲೆ ಎನ್ನಲಾಗುತ್ತಿತ್ತು. ಇಂಥ ಕ್ಲಿಷ್ಟ ಕಲೆಯಲ್ಲಿ ಪ್ರಿಯಾಂಕಾ ಅವರು ಪ್ರಾವೀಣ್ಯ ಸಾಧಿಸಿದ್ದಾರೆ. ಇವರ ಪ್ರವೇಶದಿಂದ ಕೀರ್ತನೆಯಲ್ಲಿ ಮಹಿಳೆಯರೂ ಮುಂದುವರಿಯಬಹುದು ಎಂಬುದನ್ನು ತೋರಿಸಿಕೊಟ್ಟಂತಾಗಿದೆ.
ಈ ಕ್ಷೇತ್ರದಲ್ಲಿನ ಚಾಕಚಕ್ಯತೆಯನ್ನು ಗುರುತಿಸಿದ ಹಲವು ಸಂಘ-ಸಂಸ್ಥೆಗಳು ಇವರಿಗೆ ರಾಜ್ಯಮಟ್ಟದ ಬಹುಮಾನಗಳನ್ನು ನೀಡಿವೆ. ಇವರು ಸಂಗೀತ ಕ್ಷೇತ್ರದಲ್ಲಿಯೂ ಮುಂದಿದ್ದಾರೆ. ಕಾರ್ಯಕ್ರಮಗಳ ನಿರೂಪಕಿಯಾಗಿಯೂ ಸೈ ಎನಿಸಿಕೊಂಡಿರುವ ಪ್ರಿಯಾಂಕಾ ಯಕ್ಷರಂಗದಲ್ಲಿಯೂ ಗೆಜ್ಜೆ ಕಟ್ಟಿ, ಹೆಜ್ಜೆ ಹಾಕಿ ನರ್ತಿಸುವುದರಲ್ಲಿ ನಿಪುಣರು.
‘ಯೋಗ ಮಾಡುವವನಿಗೆ ರೋಗವಿಲ್ಲ’ ಎಂಬ ಮಾತನ್ನು ಅಕ್ಷರಶಃ ಪಾಲಿಸುವ ಇವರು, ಉತ್ತಮ ಯೋಗಪಟುವೂ ಹೌದು. ನೀರಿನ ಆಳಕ್ಕಿಳಿದು ಈಜಬಲ್ಲ ಈಜುಗಾರ್ತಿ. ಯೋಗ ಮತ್ತು ಈಜು ಕ್ಷೇತ್ರಗಳಲ್ಲಿನ ಶ್ರದ್ಧೆಗಾಗಿ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
ಜೊತೆಗೆ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಪ್ರಿಯಾಂಕಾ ಜನಪರ ಕಾರ್ಯಕ್ರಮಗಳ ಸಂಘಟಕಿಯೂ ಆಗಿದ್ದಾರೆ. ‘ಜುಂಬಾ ನೃತ್ಯ’ದ ತರಬೇತಿಯನ್ನು ನೀಡುತ್ತಾರೆ. ಕ್ರೀಡೆಯಲ್ಲೂ ಮುಂದಿರುವ ಇವರು, ಎತ್ತರ ಜಿಗಿತ, ರಿಲೇ, ಖೋಖೋ ಆಟದಲ್ಲಿ ರಾಜ್ಯಮಟ್ಟದಲ್ಲಿ ಮಿಂಚಿದ್ದಾರೆ.
ಸದ್ಯ ವಾಣಿಜ್ಯ ಪದವಿ ಮುಗಿಸಿ ಕಾನೂನು ಕಾಲೇಜಿನಲ್ಲಿ ಓದುತ್ತಿರುವ ಪ್ರಿಯಾಂಕಾ ಹೆಗಡೆ ಅವರ ಪ್ರತಿಭೆ ಗುರುತಿಸಿ ಮಯೂರವರ್ಮ ಸಾಂಸ್ಕೃತಿಕ ಪ್ರತಿಷ್ಠಾನ ಇವರಿಗೆ ‘ರಾಣಿ ಚೆನ್ನಮ್ಮ ದೇವಿ’ ಪ್ರಶಸ್ತಿ ನೀಡಿ ಪುರಸ್ಕರಿಸಿದೆ.
ಪ್ರಿಯಾಂಕಾ ಅವರು ಹಿರಿಯ ಪತ್ರಕರ್ತ ಪರಮಾನಂದ ಹೆಗಡೆ ಹಾಗೂ ಸುಮಿತ್ರಾ ಹೆಗಡೆ ಅವರ ಪುತ್ರಿ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260905-51-743213505