ಕೆಪಿಎಸ್‌ಸಿ ಅಕ್ರಮ ತನಿಖೆಗೆ ಎಸ್‌ಐಟಿ: ಸುಪ್ರೀಂಗೆ ರಾಜ್ಯ ಮೇಲ್ಮನವಿ

ಕೆಪಿಎಸ್‌ಸಿ ಅಕ್ರಮ ತನಿಖೆಗೆ ಎಸ್‌ಐಟಿ: ಸುಪ್ರೀಂಗೆ ರಾಜ್ಯ ಮೇಲ್ಮನವಿ

ಕೆಪಿಎಸ್‌ಸಿ ಅಕ್ರಮ ತನಿಖೆಗೆ ಎಸ್‌ಐಟಿ: ಸುಪ್ರೀಂಗೆ ರಾಜ್ಯ ಮೇಲ್ಮನವಿ

ನವದೆಹಲಿ: ಕರ್ನಾಟಕ ಲೋಕಸೇವಾ ಆಯೋಗವು ಪಶು ವೈದ್ಯಾಧಿಕಾರಿಗಳು ಹಾಗೂ ಇತರೆ ಹುದ್ದೆಗಳಿಗೆ ನಡೆಸಿದ ನೇಮಕಾತಿಗಳಲ್ಲಿನ ಸಂಪೂರ್ಣ ಪಿತೂರಿ ಬಯಲಿಗೆಳೆದು ಅಪರಾಧಿಗಳನ್ನು ಪತ್ತೆ ಹಚ್ಚಲು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿ ಹೈಕೋರ್ಟ್‌ ತೀರ್ಪು ನೀಡಿರುವುದನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಶುಕ್ರವಾರ ವಿಶೇಷ ಮೇಲ್ಮನವಿ ಅರ್ಜಿ ಸಲ್ಲಿಸಿದೆ.

‘ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು’ ಎಂದು ಕೋರಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಮತ್ತಿತರರು ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಕಾಯ್ದಿರಿಸಿದ್ದ ತೀರ್ಪನ್ನು ಸೋಮವಾರ ಪ್ರಕಟಿಸಿತ್ತು.

ತನಿಖಾ ತಂಡದ ನೇತೃತ್ವ ವಹಿಸಬೇಕಾಗಿದ್ದ ಅಧಿಕಾರಿಯನ್ನು ಸ್ವತಃ ಹೈಕೋರ್ಟ್‌ ಹೆಸರಿಸಿರುವುದು ರಾಜ್ಯ ಸರ್ಕಾರದ ಆಕ್ಷೇಪಕ್ಕೆ ಕಾರಣ.

‘ಈ ಪ್ರಕರಣದ ತನಿಖೆಯನ್ನು ಸಿಐಡಿ ಶೇ 80ರಷ್ಟು ಮುಗಿಸಿದೆ. ಹಲವರನ್ನು ಬಂಧಿಸಿ, ಮಹತ್ವದ ದಾಖಲೆ, ಹಣ, ಸಿಸಿಟಿವಿ ದೃಶ್ಯಾವಳಿಗಳನ್ನು ವಶಪಡಿಸಿಕೊಂಡಿದೆ. ಸಿಐಡಿಯ ಅಧಿಕಾರಿಗಳು ದಕ್ಷವಾಗಿ ಕೆಲಸ ಮಾಡುತ್ತಿರುವಾಗ ನಿರ್ದಿಷ್ಟ ಅಧಿಕಾರಿಗಳನ್ನೇ ಹೆಸರಿಸಿ ಎಸ್‌ಐಟಿ ರಚಿಸಲು ಸೂಚಿಸಿರುವುದು ತಪ್ಪು ಸಂದೇಶ ರವಾನಿಸಿದಂತಾಗಿದೆ’ ಎಂಬುದು ಸರ್ಕಾರದ ವಾದ. ‘ಯಾವ ಅಧಿಕಾರಿಯನ್ನು ತನಿಖಾ ತಂಡಕ್ಕೆ ನೇಮಿಸಬೇಕು ಎಂಬುದು ಕಾರ್ಯಾಂಗದ (ಸರ್ಕಾರದ) ವಿವೇಚನೆಗೆ ಬಿಟ್ಟ ವಿಚಾರ. ಇದರಲ್ಲಿ ನ್ಯಾಯಾಲಯಗಳು ಹೇಗೆ ಹಸ್ತಕ್ಷೇಪ ಮಾಡುವುದು ಸರಿಯಲ್ಲ’ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದ್ದರು. ರಾಜ್ಯ ಸರ್ಕಾರದ ಮೇಲ್ಮನವಿ ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.

‘ರಾಜ್ಯ ಕಾರಾಗೃಹ ಇಲಾಖೆಯ ಎಡಿಜಿಪಿ ಅಲೋಕ್‌ ಕುಮಾರ್‌ ನೇತೃತ್ವದ ಐವರು ಐಪಿಎಸ್‌ ಅಧಿಕಾರಿಗಳ ತಂಡವು 100 ದಿನಗಳಲ್ಲಿ ತನಿಖೆಯನ್ನು ಪೂರ್ಣಗೊಳಿಸಿ ಅಂತಿಮ ವರದಿಯನ್ನು ಕೋರ್ಟ್‌ಗೆ ಸಲ್ಲಿಸಬೇಕು’ ಎಂದು ನ್ಯಾಯಪೀಠ ಗಡುವು ವಿಧಿಸಿತ್ತು.

‘ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ) ಈಗಾಗಲೇ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ–2002ರ (ಪಿಎಂಎಲ್‌ಎ) ಅಡಿ ಪ್ರಕರಣ ದಾಖಲಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಇ.ಡಿ ಮತ್ತು ಎಸ್‌ಐಟಿ ಪರಸ್ಪರ ಸಹಕಾರದ ಮೂಲಕ ತನಿಖೆ ನಡೆಸಬೇಕು. ಎಲ್ಲ ಇಲಾಖೆಗಳು, ತನಿಖಾ ಸಂಸ್ಥೆಗಳು, ಸಾರ್ವಜನಿಕ ಪ್ರಾಧಿಕಾರಗಳು ಮತ್ತು ಸಂಬಂಧಿತ ಅಧಿಕಾರಿಗಳು ಎಸ್‌ಐಟಿಗೆ ಸಂಪೂರ್ಣ ನೆರವು ನೀಡಬೇಕು. ಎಸ್‌ಐಟಿ ತನಗೆ ಅಗತ್ಯವಾದ ವಿಧಿ ವಿಜ್ಞಾನ ಪ್ರಯೋಗಾಲಯದ ಸೌಲಭ್ಯ, ಸೈಬರ್‌, ಆರ್ಥಿಕ, ತಾಂತ್ರಿಕ ಮತ್ತು ಇತರೆ ವಿಶೇಷ ನೆರವು ಪಡೆಯಲು ಸ್ವತಂತ್ರವಾಗಿದೆ’ ಎಂದು ನ್ಯಾಯಪೀಠ ಸ್ಪಷ್ಟಪಡಿಸಿತ್ತು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ