
ಪಿ.ಸಿ ಹುದ್ದೆ: ದೇಹದಾರ್ಢ್ಯ, ಸಹಿಷ್ಣುತಾ ಪರೀಕ್ಷೆ ವೇಳಾಪಟ್ಟಿ
ಬೆಂಗಳೂರು: ಸಿವಿಲ್ ಪೊಲೀಸ್ ಕಾನ್‌ಸ್ಟೆಬಲ್(ಆರ್‌ಪಿಸಿ ಮತ್ತು ಕೆ.ಕೆ) ಹುದ್ದೆಗಳ ನೇಮಕಾತಿಗೆ ದೇಹದಾರ್ಢ್ಯ ಹಾಗೂ ಸಹಿಷ್ಣುತಾ ಪರೀಕ್ಷೆಯ ವೇಳಾಪಟ್ಟಿಯನ್ನು ರಾಜ್ಯ ಪೊಲೀಸ್ ನೇಮಕಾತಿ ವಿಭಾಗವು ಬಿಡುಗಡೆ ಮಾಡಿದೆ.
ಒಟ್ಟು 3,991 ಹುದ್ದೆಗಳ ಭರ್ತಿಗೆ ಪೊಲೀಸ್ ನೇಮಕಾತಿ ವಿಭಾಗವು ಪ್ರಕ್ರಿಯೆ ಆರಂಭಿಸಿದೆ. ರಾಜ್ಯದಾದ್ಯಂತ ವಿವಿಧ ಹಂತಗಳಲ್ಲಿ ಆಯ್ಕೆಯಾಗಿರುವ ಒಟ್ಟು 19,396 ಅರ್ಹ ಅಭ್ಯರ್ಥಿಗಳು ಈ ದೈಹಿಕ ಪರೀಕ್ಷೆಗಳಲ್ಲಿ ಭಾಗವಹಿಸಲಿದ್ದಾರೆ.
ಉಳಿಕೆ ಮೂಲ ವೃಂದದ (ಆರ್‌ಪಿಸಿ) ಪರೀಕ್ಷಾ ವಿವರಗಳು: 2,015 ಹುದ್ದೆಗಳಿದ್ದು, ಒಟ್ಟು 9,887 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ. ಸೆ.28ರಿಂದ ಅ.5ರ ವರೆಗೆ ಪರೀಕ್ಷೆ ನಡೆಯಲಿದೆ. ಪರೀಕ್ಷೆಗಳು ಸಿಎಆರ್(ಎಚ್‌ಕ್ಯೂ) ಚಾಮರಾಜಪೇಟೆಯ ಸಿರ್ಸಿ ಸರ್ಕಲ್ ಮೈದಾನ, ಆಡುಗೋಡಿಯ ಸಿಎಆರ್ (ದಕ್ಷಿಣ) ಮೈದಾನ ಹಾಗೂ ಆರ್.ಕೆ. ಹೆಗಡೆ ನಗರದ ಸಿಎಆರ್(ಉತ್ತರ) ಮೈದಾನದಲ್ಲಿ ಪರೀಕ್ಷೆ ನಡೆಯಲಿದೆ.
ಕೇಂದ್ರ ವಲಯ: ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಬೆಂಗಳೂರು ಜಿಲ್ಲೆ ಹಾಗೂ ರೈಲ್ವೆ ಘಟಕಗಳನ್ನು ಒಳಗೊಂಡಂತೆ 200 ಹುದ್ದೆಗಳಿಗೆ 946 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ. ಸೆ.28ರಿಂದ ಅ.3ರ ವರೆಗೆ ಬೆಂಗಳೂರಿನ ಕೋರಮಂಗಲದ ಮಡಿವಾಳ ಮಾರುಕಟ್ಟೆ ಎದುರು ಮೂರನೇ ಬೆಟಾಲಿಯನ್ ಕೆಎಸ್‌ಆರ್‌ಪಿ ಮೈದಾನದಲ್ಲಿ ಪರೀಕ್ಷೆ ನಡೆಯಲಿದೆ.ದಕ್ಷಿಣ ವಲಯ: ಮೈಸೂರು ನಗರ, ಮೈಸೂರು ಜಿಲ್ಲೆ, ಹಾಸನ, ಕೊಡಗು, ಚಾಮರಾಜನಗರ ಮತ್ತು ಮಂಡ್ಯ ಘಟಕಗಳ 395 ಹುದ್ದೆಗಳಿಗೆ 1,891 ಅಭ್ಯರ್ಥಿಗಳು ಆಯ್ಕೆ ಆಗಿದ್ದಾರೆ. ಸೆ.28 ರಿಂದ ಅ.5ರ ವರೆಗೆ ಮೈಸೂರಿನ ರೇಸ್ ಕೋರ್ಸ್ ಹಿಂಭಾಗದಲ್ಲಿರುವ ಸಿಟಿ ಆರ್ಮ್ಸ್ ರಿಸರ್ವ್ (ಸಿಎಆರ್) ಪರೇಡ್ ಮೈದಾನದಲ್ಲಿ ದೈಹಿಕ ಪರೀಕ್ಷೆ ಜರುಗಲಿದೆ.
ಪೂರ್ವ ವಲಯ: ಶಿವಮೊಗ್ಗ, ಹಾವೇರಿ, ದಾವಣಗೆರೆ ಹಾಗೂ ಚಿತ್ರದುರ್ಗ ಘಟಕಗಳ ವ್ಯಾಪ್ತಿಯ 250 ಹುದ್ದೆಗಳಿಗೆ 1,234 ಅಭ್ಯರ್ಥಿಗಳು ಪರೀಕ್ಷೆಗೆ ಅರ್ಹರಾಗಿದ್ದಾರೆ. ಪರೀಕ್ಷೆಯು ಸೆ.29ರಿಂದ ಅ.6ರ ವರೆಗೆ ಶಿವಮೊಗ್ಗದ ನವಿಲೆಯಲ್ಲಿರುವ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಮೈದಾನದಲ್ಲಿ ನಡೆಯಲಿದೆ.
ಪಶ್ಚಿಮ ವಲಯ: ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ (ಕಾರವಾರ), ಚಿಕ್ಕಮಗಳೂರು ಮತ್ತು ಮಂಗಳೂರು ನಗರ ಘಟಕಗಳ 395 ಹುದ್ದೆಗಳಿಗೆ 1,803 ಅಭ್ಯರ್ಥಿಗಳು ಆಯ್ಕೆ ಆಗಿದ್ದಾರೆ. ಸೆ.28ರಿಂದ ಅ.3ರ ವರೆಗೆ ಮಂಗಳೂರಿನ ಲಾಲ್‌ಬಾಗ್‌ನಲ್ಲಿರುವ ಮಂಗಳ ಕ್ರೀಡಾಂಗಣದಲ್ಲಿ ದೈಹಿಕ ಪರೀಕ್ಷೆ ನಿಗದಿಯಾಗಿದೆ.
ಉತ್ತರ ವಲಯ: ಗದಗ ಹಾಗೂ ಹುಬ್ಬಳ್ಳಿ–ಧಾರವಾಡ ನಗರ ಘಟಕ ಒಳಗೊಂಡ 110 ಹುದ್ದೆಗಳಿಗೆ 549 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ. ಇವರಿಗೆ ಸೆ.29 ಮತ್ತು 30ರಂದು ಬೆಳಗಾವಿಯ ವಿಟಿಯು ಬಳಿಯ 2ನೇ ಬೆಟಾಲಿಯನ್ ಕೆಎಸ್‌ಆರ್‌ಪಿ ಮೈದಾನದಲ್ಲಿ ಪರೀಕ್ಷೆ ನಡೆಯಲಿದೆ.
ಬಳ್ಳಾರಿ ವಲಯ (ಆರ್‌ಪಿಸಿ): ಬಳ್ಳಾರಿ ಮತ್ತು ರಾಯಚೂರು ಘಟಕಗಳ 30 ಹುದ್ದೆಗಳಿಗೆ 144 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಅ.5 ಹಾಗೂ ಅ.6ರಂದು ಕೊಪ್ಪಳದ ಮುನಿರಾಬಾದ್‌ನ ಹೊಸಹಳ್ಳಿ ಬಳಿಯಿರುವ ಕೆಎಸ್‌ಆರ್‌ಪಿ ಪಿ.ಟಿ.ಎಸ್ ಮೈದಾನದಲ್ಲಿ (ಐಆರ್‌ಬಿ ಕ್ಯಾಂಪಸ್) ನಡೆಯಲಿದೆ.
ಪರೀಕ್ಷೆಗೆ ಅರ್ಹತೆ ಪಡೆದಿರುವ ಅಭ್ಯರ್ಥಿಗಳು ತಮ್ಮ ಕರೆ ಪತ್ರವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಅಧಿಕೃತ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ಅರ್ಹ ಅಭ್ಯರ್ಥಿಗಳು ತಮಗೆ ನಿಗದಿಪಡಿಸಿದ ದಿನಾಂಕಗಳಂದು ನಿಗದಿತ ದೈಹಿಕ ಪರೀಕ್ಷಾ ಕೇಂದ್ರಗಳಿಗೆ ಕಡ್ಡಾಯವಾಗಿ ವರದಿ ಮಾಡಬೇಕೆಂದು ಪೊಲೀಸ್ ನೇಮಕಾತಿ ವಿಭಾಗವು ಕೋರಿದೆ.
ಕಲ್ಯಾಣ ಕರ್ನಾಟಕ (ಕೆಕೆ) ವೃಂದದ ಪರೀಕ್ಷಾ ವಿವರಗಳು
ಸಿಒಪಿ ಬೆಂಗಳೂರು ನಗರ (ಕೆಕೆ): ಈ ಭಾಗದ 171 ಹುದ್ದೆಗಳಿಗೆ 833 ಅಭ್ಯರ್ಥಿಗಳು ಅರ್ಹರಾಗಲಿದ್ದು, ಅ.8ರಂದು ಬೆಂಗಳೂರಿನ ಚಾಮರಾಜಪೇಟೆಯ ಸಿಎಆರ್ ಪರೇಡ್ ಮೈದಾನ (ಎಚ್.ಕ್ಯೂ) ಹಾಗೂ ಆಡುಗೋಡಿಯ ಸಿಎಆರ್ ಪರೇಡ್ ಮೈದಾನಗಳಲ್ಲಿ (ದಕ್ಷಿಣ) ಏಕಕಾಲದಲ್ಲಿ ದೈಹಿಕ ಪರೀಕ್ಷೆ ನಡೆಯಲಿದೆ.
ಬಳ್ಳಾರಿ ವಲಯ (ಕೆಕೆ ಘಟಕಗಳು): ಕೊಪ್ಪಳ, ರಾಯಚೂರು, ಬಳ್ಳಾರಿ ಹಾಗೂ ವಿಜಯನಗರ ಘಟಕಗಳ 174 ಹುದ್ದೆಗಳಿಗೆ 869 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ. ಅ.12ರಿಂದ 15ರ ವರೆಗೆ ಕೊಪ್ಪಳದ ಮುನಿರಾಬಾದ್ ಹೊಸಹಳ್ಳಿಯಲ್ಲಿರುವ ಕೆಎಸ್‌ಆರ್‌ಪಿ ಪಿ.ಟಿ.ಎಸ್ ಮೈದಾನದಲ್ಲಿ ದೈಹಿಕ ಪರೀಕ್ಷೆ ನಡೆಯಲಿದೆ.
ಈಶಾನ್ಯ ವಲಯ: ಕಲಬುರಗಿ ನಗರ, ಕಲಬುರಗಿ ಜಿಲ್ಲೆ ಹಾಗೂ ಬೀದರ್ ಘಟಕಗಳ 251 ಹುದ್ದೆಗಳಿಗೆ 1,240 ಅಭ್ಯರ್ಥಿಗಳು ಆಯ್ಕೆ ಆಗಿದ್ದಾರೆ. ಪರೀಕ್ಷೆಯು ಅ.12 ರಿಂದ 14 ರವರೆಗೆ ಕಲಬುರಗಿಯ ತಾಜ್ ಸುಲ್ತಾನ್‌ಪುರದ ಇಲ್ಲಿರುವ 6ನೇ ಬೆಟಾಲಿಯನ್ ಕೆಎಸ್‌ಆರ್‌ಪಿ ಮೈದಾನದಲ್ಲಿ ನೆಡೆಯಲಿದೆ.