ಗದಗ | ರೈತರಲ್ಲಿ ಭರವಸೆ ಮೂಡಿಸಿದ ಮಳೆ: ಹಿಂಗಾರು ಬೆಳೆ ಬಿತ್ತನೆಗೆ ಭೂಮಿ ಸಿದ್ಧ

ಗದಗ | ರೈತರಲ್ಲಿ ಭರವಸೆ ಮೂಡಿಸಿದ ಮಳೆ: ಹಿಂಗಾರು ಬೆಳೆ ಬಿತ್ತನೆಗೆ ಭೂಮಿ ಸಿದ್ಧ

ಗದಗ | ರೈತರಲ್ಲಿ ಭರವಸೆ ಮೂಡಿಸಿದ ಮಳೆ: ಹಿಂಗಾರು ಬೆಳೆ ಬಿತ್ತನೆಗೆ ಭೂಮಿ ಸಿದ್ಧ

ಗದಗ: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಮೂರು ದಿನಗಳಿಂದ ಉತ್ತಮವಾಗಿ ಮಳೆ ಸುರಿಯುತ್ತಿದೆ. ಬುಧವಾರ ಕೂಡ ಆಗಾಗ ಮಳೆಯಾಗಿದ್ದು, ಇಡೀ ದಿನ ಮೋಡಕವಿದ ವಾತಾವರಣವಿತ್ತು.

ಮುಂಗಾರು ಹಂಗಾಮಿನಲ್ಲಿ ಬೆಳೆದ ಬೆಳೆಗಳನ್ನು ಈಗಾಗಲೇ ಕಟಾವು ಮಾಡಿರುವ ರೈತರು, ಭೂಮಿಯನ್ನು ಹರಗಿ, ಹಿಂಗಾರು ಬಿತ್ತನೆಗೆ ಸಿದ್ಧತೆ ನಡೆಸಿದ್ದಾರೆ. ಈ ಸಮಯದಲ್ಲಿ ಉತ್ತಮವಾಗಿ ಮಳೆ ಸುರಿಯುತ್ತಿರುವುದರಿಂದ ಹಿಂಗಾರಿನ ಮೇಲೆ ಅಪಾರ ನಿರೀಕ್ಷೆ ಮೂಡಿದೆ.

ಕೆಲವು ದಿನಗಳಿಂದ ಬಿಸಿಲ ಧಗೆ ವಿಪರೀತವಾಗಿತ್ತು. ಮಳೆಗಾಲದಲ್ಲೇ ಬೇಸಿಗೆಯ ಅನುಭವ ತರಿಸಿತ್ತು. ಉರಿ ಬಸಿಲಿನಿಂದ ಜನರು ಹೈರಾಣಾಗಿದ್ದರು. ಹೊರಗೆ ಬಂದರೆ ಬೆವರಿನ ಮಜ್ಜನ ಸಹಜ ಎಂಬಂತಿತ್ತು. ಇದೀಗ ಮಳೆಯ ಕಾರಣ ತಂಪು ವಾತಾವರಣವಿದೆ.

‘ಮುಂಗಾರು ಮಳೆ ನಿರೀಕ್ಷೆಯಂತೆ ಸುರಿದಿದ್ದರೆ ಭೂಮಿಯಲ್ಲಿ ತೇವಾಂಶ ಉಳಿಯುತ್ತಿತ್ತು. ಈಗ ತೇವಾಂಶ ಇಲ್ಲ. ಮಳೆ ಹೀಗೇ ಮುಂದುವರಿದು, ಹಿಂಗಾರಿನಲ್ಲೂ ಉತ್ತಮವಾಗಿ ಮಳೆಯಾದರೆ ಭೂಮಿ ತೇವಾಂಶ ಕಾಯ್ದುಕೊಳ್ಳುತ್ತದೆ. ಅಂತರ್ಜಲ ವೃದ್ಧಿಯಾಗಿ ನೀರಾವರಿ ಬೆಳೆಗಳಿಗೂ ಅನುಕೂಲವಾಗುತ್ತದೆ’ ಎಂದು ರೈತ ಮುಖಂಡ ಶಂಕರಗೌಡ ಜಯನಗೌಡ್ರ ತಿಳಿಸಿದರು.

‘ಈಗ ಸುರಿಯುತ್ತಿರುವ ಮಳೆಯು ಹಿಂಗಾರು ಬಿತ್ತನೆಗೆ ಭೂಮಿ ಹದ ಮಾಡಿಕೊಳ್ಳಲು ಅನುಕೂಲವಾಗಲಿದೆ. ಬಹಳ ದಿನಗಳಿಂದ ಭೂಮಿ ಒಣಗಿದ್ದು, ತೇವಾಂಶ ಹೆಚ್ಚಬೇಕಿದೆ. ಸೆಪ್ಟೆಂಬರ್ ಕೊನೆಯಿಂದಲೇ ಜೋಳ ಬಿತ್ತನೆ ಪ್ರಾರಂಭಿಸಲಾಗುತ್ತದೆ. ಹಾಗಾಗಿ, ಸಹಾಯಧನ ಯೋಜನೆಯಡಿ ಶೀಘ್ರದಲ್ಲೇ ಬಿತ್ತನೆಬೀಜ ವಿತರಿಸಲಾಗುತ್ತದೆ’ ಎಂದು ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ ತಿಳಿಸಿದರು.

ಶಿರಹಟ್ಟಿ: ತಾಲ್ಲೂಕಿನಾದ್ಯಂತ ಬುಧವಾರ ಸಂಜೆ 20 ನಿಮಿಷಕ್ಕೂ ಹೆಚ್ಚು ಕಾಲ ಮಳೆ ಸುರಿಯಿದ್ದು, ಇಳೆ ತಂಪಾಗಿಸಿದೆ.

ಮುಂಗಾರಿನಲ್ಲಿ ನಿರೀಕ್ಷಿತ ಮಳೆ ಆಗದೇ ಇರುವುದರಿಂದ ಚಿಂತೆಯಲ್ಲಿರುವ ರೈತರಿಗೆ ಈ ಮಳೆ ಹೊಸ ಭರವಸೆ ಮೂಡಿಸಿದೆ. ಜಾನುವಾರುಗಳಿಗೆ ಮೇವಿನ ಕೊರತೆ ನೀಗಬಹುದೆಂಬ ನಿರೀಕ್ಷೆ ರೈತರಲ್ಲಿ ಮೂಡಿದೆ.

ಪಟ್ಟಣದ ನವನಗರದಲ್ಲಿನ ರಸ್ತೆಯಲ್ಲಿ ನೀರು ತುಂಬಿ ನಿವಾಸಿಗಳು ಪರದಾಡಿದರು. ಅವೈಜ್ಞಾನಿಕ ಚರಂಡಿ ನಿರ್ಮಾಣ ಮಾಡಿದ್ದರಿಂದ ರಸ್ತೆ ತುಂಬಿ ಹರಿಯುತ್ತಿದ್ದು, ಸಂಚಾರ ಅಸ್ತವ್ಯಸ್ತಗೊಂಡಿದೆ.

ಮುಳಗುಂದ : ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಬುಧವಾರ ಮಧ್ಯಾಹ್ನ ಒಂದು ಗಂಟೆಗೂ ಹೆಚ್ಚು ಕಾಲ ಧಾರಾಕಾರ ಮಳೆ ಸುರಿಯಿತು.

ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನದ ವೇಳೆಗೆ ಗುಡುಗು ಸಹಿತ ಮಳೆ ಶುರುವಾಯಿತು. ಮಳೆಯ ಅಬ್ಬರಕ್ಕೆ ಪಟ್ಟಣದ ಹಲವು ಚರಂಡಿಗಳು ತುಂಬಿ ಹರಿದವು. ಸಂತೆ ಮಾರುಕಟ್ಟೆ ಪ್ರದೇಶದಲ್ಲಿ ಮಳೆ ನೀರು ನಿಂತಿದ್ದರಿಂದ ತರಕಾರಿ ವ್ಯಾಪಾರಿಗಳು ಹಾಗೂ ಗ್ರಾಹಕರು ಕೆಲಕಾಲ ಪರದಾಡಿದರು.

ಮುಂಡರಗಿ: ಕಳೆದ ಮೂರು ದಿನಗಳಿಂದ ತಾಲ್ಲೂಕಿನಾದ್ಯಂತ ಭಾರಿ ಮಳೆ ಸುರಿದಿದೆ. ಬುಧವಾರ ಮಳೆ ಆಗಿದ್ದು, ಕೆಲ ಗ್ರಾಮೀಣ ಪ್ರದೇಶದಲ್ಲಿ ಬೆಳೆಗಳು ನಷ್ಟವಾಗಿವೆ.

ಭಾನುವಾರದಿಂದ ಆರಂಭವಾಗಿರುವ ಮಳೆಯು ಪ್ರತಿದಿನ ಮಧ್ಯಾಹ್ನ ಹಾಗೂ ಸಂಜೆ ಧಾರಾಕಾರ ಮಳೆ ಸುರಿದಿದ್ದರಿಂದ ಪಟ್ಟಣದ ಕೆಲ ಪ್ರದೇಶದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.

ಪಟ್ಟಣದ ಹೊರವಲಯದ ಕನಕನಗೌಡ ಪಾಟೀಲ ಎಂಬುವವರು ತಮ್ಮ ಮೂರು ಎಕರೆ ಜಮೀನಿನಲ್ಲಿ ಬೆಳೆದಿದ್ದ ಕಬ್ಬು, ಬಿರುಸಿನ ಮಳೆಗೆ ಧರೆಗುರುಳಿದೆ. ಮಳೆಯೊಂದಿಗೆ‌ ಭಾರಿ ಗಾಳಿಯೂ ಬೀಸಿದ್ದರೆ ಬಾಳೆ, ಪಪ್ಪಾಯಿ, ದಾಳಿಂಬೆ ಮೊದಲಾದ ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದೆ ಎಂಬುದು ತಿಳಿದುಬಂದಿದೆ.

ಶಿಂಗಟಾಲೂರ ಗ್ರಾಮದ ಚಂದ್ರಶೇಖರ ಮಜ್ಜಿಗಿ ಎಂಬ ರೈತ ಬೀಜೋತ್ಪಾದನೆಗಾಗಿ ನಾಲ್ಕು ಎಕರೆ ಜಮೀನಿನಲ್ಲಿ ಬೆಳೆದಿದ್ದ ಕುಂಬಳ ಬೆಳೆ ಮಳೆ ನೀರಿನಿಂದ ಕೊಳೆಯುತ್ತಿದೆ. ಆಯ್ದ ಭಾಗದಲ್ಲಿ ಬೆಳೆದ ಭತ್ತದ ಪೈರು ನೆಲಕ್ಕುರುಳಿರುವುದು ವರದಿಯಾಗಿದೆ.

ಧಾರಾಕಾರ ಮಳೆ ಸುರಿದಿದ್ದರಿಂದ ಪಟ್ಟಣದ ಬಹುತೇಕ ಕಚ್ವಾ ರಸ್ತೆಗಳು ಕೆಸರುಮಯವಾಗಿವೆ. ಸಾರ್ವಜನಿಕರು ಸಂಚರಿಸಲು ಸರ್ಕಸ್ ಮಾಡುವಂತಾಗಿದೆ. ಚರಂಡಿಗಳೆಲ್ಲ ಮಳೆ ನೀರು ತುಂಬಿದ್ದರಿಂದ ಮಲೀನ ನೀರು ಸಂಗ್ರಹವಾಗಿದೆ

ರಸ್ತೆಯಲ್ಲಿ ನೀರು: ಸಂಚಾರಕ್ಕೆ ಅಡಚಣೆ

ಗದಗ ನಗರದಲ್ಲಿ ಜೋರು ಮಳೆ ಸುರಿದಿದ್ದರಿಂದ ಜನರ ರಸ್ತೆಗಳಲ್ಲಿ ತಗ್ಗು–ಗುಂಡಿಗಳಲ್ಲಿ ನೀರು ನಿಂತಿತು. ಮಣ್ಣಿನ ರಸ್ತೆಗಳು ಕೆಸರುಮಯವಾದವು. ಇದರಿಂದ ವಾಹನಸವಾರರು ಹಾಗೂ ಪಾದಚಾರಿಗಳು ಪರದಾಡಿದರು. ಬೀದಿ ಬದಿ ವ್ಯಾಪಾರಕ್ಕೆ ಅಡಚಣೆ ಉಂಟಾಯಿತು. ರಭಸವಾಗಿ ಸುರಿದ ಮಳೆಗೆ ರಸ್ತೆಗಳೂ ಹದಗೆಟ್ಟಿವೆ.

‘ರಸ್ತೆ, ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿದುಹೋಗಲು ಈಗಾಗಲೇ ವ್ಯವಸ್ಥೆ ಮಾಡಲಾಗಿದೆ. ಕಟ್ಟಿಕೊಂಡಿದ್ದ ತ್ಯಾಜ್ಯವನ್ನು ತೆರವು ಮಾಡಲಾಗಿದೆ. ಮಳೆಯಾದರೆ ನೀರು ನಿಲ್ಲುವ ಪ್ರದೇಶಗಳು ನಗರದಲ್ಲಿ ಇಲ್ಲ’ ಎಂದು ನಗರಸಭೆ ಪೌರಾಯುಕ್ತ ರಾಜಾರಾಮ್ ಪವಾರ್‌ ತಿಳಿಸಿದರು.

ಬಿಡುವು ನೀಡದೆ ಸುರಿದ ಮಳೆ

ನರೇಗಲ್:‌ ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಪ್ರದೇಶದಲ್ಲಿ ಬುಧವಾರ ದಿನವಿಡೀ ಬಿಡುವು ನೀಡದೆ ಜಿಟಿಜಿಟಿ ಮಳೆ ಸುರಿಯಿತು.

ಇಡೀ ದಿನ ಸೂರ್ಯನ ದರ್ಶನವಾಗಲಿಲ್ಲ. ಆಗಾಗ ರಭಸವಾಗಿ ಸುರಿದ ಮಳೆಯಿಂದಾಗಿ ಜನಜೀವನ ಕೊಂಚ ಅಸ್ತವ್ಯಸ್ತಗೊಂಡಿತು. ಸಂಜೆ 7 ಗಂಟೆಗೆ ಗುಡುಗು, ಸಿಡಿಲು ಸಹಿತ ಮತ್ತೇ ಜೋರಾಗಿ ಮಳೆ ಸುರಿಯಿತು.

ಮಳೆಯೊಂದಿಗೆ ಬೀಸಿದ ಬಿರುಗಾಳಿಗೆ ಪಟ್ಟಣ ಪಂಚಾಯಿತಿ ಎದುರಿನ ಮರ ಹಾಗೂ ಕೊಂತಿ ಮಲ್ಲಪ್ಪನ ದೇವಸ್ಥಾನದ ಬಳಿಯಿದ್ದ ಮರಗಳು ನೆಲಕ್ಕುರುಳಿವೆ. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳ ಮಾಹಿತಿ ಮೇರೆಗೆ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ತೆರಳಿ ಧರೆಗೆ ಬಿದ್ದ ಮರಗಳನ್ನು ತೆರವುಗೊಳಿಸಿದರು.

ಅದೇ ರೀತಿ ಬಿರುಗಾಳಿಯ ಅಬ್ಬರಕ್ಕೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಮೂರು ವಿದ್ಯುತ್ ಕಂಬಗಳು ಹಾಗೂ ಒಳಕೋಟಿ ಓಣಿಯಲ್ಲಿ ಮೂರು ಕಂಬಗಳು ಮುರಿದು ಬಿದ್ದಿವೆ. ಈಗಾಗಲೇ ದುರಸ್ತಿ ಕಾರ್ಯ ಕೈಗೊಳ್ಳಲಾಗಿದ್ದು, ಅಲ್ಲಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು.

ಕಳೆದ ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಗೆ ಸ್ಥಳೀಯ ಜಲಮೂಲಗಳು ಮೈದುಂಬಿಕೊಂಡಿವೆ. ಕೋಡಿಕೊಪ್ಪ ಭಾಗದ ಹಿರೇಕೆರೆ, ಜಕ್ಕಲಿ ಮಾರ್ಗದ ಶಾಸ್ತ್ರಿಯವರ ಕಣಿವೆ, ತೋಟಗಂಟಿ, ಜಕ್ಕಲಿ ಕಣಿವೆ, ಕೋಟುಮಚಗಿ ಕೆರೆ ಹಾಗೂ ಸುತ್ತಮುತ್ತಲಿನ ಹೊಲಗಳ ಕೃಷಿಹೊಂಡ, ಚೆಕ್‌ಡ್ಯಾಂಗಳಲ್ಲಿ ನೀರು ಹರಿಯುತ್ತಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ