ಕಳಂಕ ಕಳೆದುಕೊಳ್ಳದ ಕೆಪಿಎಸ್‌ಸಿ: ಎರಡು ದಶಕಗಳಿಂದ ಭ್ರಷ್ಟಾಚಾರ...

ಕಳಂಕ ಕಳೆದುಕೊಳ್ಳದ ಕೆಪಿಎಸ್‌ಸಿ: ಎರಡು ದಶಕಗಳಿಂದ ಭ್ರಷ್ಟಾಚಾರ...

ಕಳಂಕ ಕಳೆದುಕೊಳ್ಳದ ಕೆಪಿಎಸ್‌ಸಿ: ಎರಡು ದಶಕಗಳಿಂದ ಭ್ರಷ್ಟಾಚಾರ...

ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಕಳೆದ ಎರಡು ದಶಕಗಳಿಂದಲೂ ಒಂದಲ್ಲಾ ಒಂದು ಬಗೆಯ ವಿವಾದಗಳಿಂದ ಸದ್ದು ಮಾಡುತ್ತಿರುವುದು ಆತಂಕದ ಸಂಗತಿಯಾಗಿದೆ. ಕೆಪಿಎಸ್‌ಸಿ ಬಗ್ಗೆ ಜನರಲ್ಲಿ ವಿಶ್ವಾಸ ಎಷ್ಟು ಕುಸಿದಿದೆ ಅಂದರೆ ಇದರ ಪ್ರತಿಯೊಂದು ನೇಮಕವನ್ನು ಸಂಶಯದಿಂದ ನೋಡಬೇಕಾದ ಪರಿಸ್ಥಿತಿ ಬಂದಿದೆ.

ಕೆಪಿಎಸ್‌ಸಿ ರಾಜ್ಯ ಸರ್ಕಾರಕ್ಕೆ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಗಳನ್ನು ಆಯ್ಕೆ ಮಾಡುವ ಅತ್ಯುನ್ನತ ಸಾಂವಿಧಾನಿಕ ಸಂಸ್ಥೆಯಾಗಿದೆ. ನೇಮಕ ಹಗರಣಗಳು, ಲಂಚದ ಆರೋಪಗಳು, ಉತ್ತರಪತ್ರಿಕೆಗಳ ತಿರುಚುವಿಕೆ, ಭ್ರಷ್ಟಾಚಾರ, ಪ್ರಶ್ನೆಪತ್ರಿಕೆ ಸೋರಿಕೆ, ಸ್ವಜನಪಕ್ಷಪಾತ, ನೇಮಕದಲ್ಲಿ ವಿಳಂಬ ಹಾಗೂ ದೀರ್ಘಕಾಲದ ನ್ಯಾಯಾಂಗ ಹೋರಾಟಗಳಂತಹ ವಿದ್ಯಮಾನಗಳ ಕಳಂಕ ಕೆಪಿಎಸ್‌ಸಿಗೆ ಮೆತ್ತಿಕೊಂಡಿದೆ.

ಕೆಪಿಎಸ್‌ಸಿ ಪದೇಪದೇ ಲಂಚಗುಳಿತನ ಮತ್ತು ಸ್ವಜನಪಕ್ಷಪಾತದ ಆರೋಪಗಳಿಗೆ ಗುರಿಯಾಗುತ್ತಾ ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿರುವುದು ಶೋಚನೀಯ. ಸುದೀರ್ಘ ಇತಿಹಾಸವನ್ನು ಹೊಂದಿರುವ ಕೆಪಿಎಸ್‌ಸಿ ಹಲವಾರು ಹಗರಣಗಲಿಂದ ಕಳಂಕಿತವಾಗಿದೆ. ಕೆಪಿಎಸ್‌ಸಿಯಲ್ಲಿ ನಡೆದ ಪ್ರಮುಖ ಹಗರಣಗಳ ಕಿರುನೋಟ ಇಲ್ಲಿದೆ. 

1998, 1999, 2004ರ ಕೆಎಎಸ್‌ ನೇಮಕ ಹಗರಣ...

ಕೆಪಿಎಸ್‌ಸಿ ಇತಿಹಾಸದಲ್ಲೇ ಮೊದಲ ಬೃಹತ್ ಅಕ್ರಮ ಬೆಳಕಿಗೆ ಬಂದದ್ದು 1998ರ ಅವಧಿಯಲ್ಲಿ. ಲಿಖಿತ ಪರೀಕ್ಷೆಯ ಅಂಕಗಳನ್ನು ತಿದ್ದುವುದು, ಸಂದರ್ಶನದಲ್ಲಿ ತಾರತಮ್ಯ ಎಸಗಿ ಲಂಚ ಕೊಟ್ಟವರಿಗೆ ಹೆಚ್ಚಿನ ಅಂಕ ನೀಡಿರುವುದು ಬೆಳಕಿಗೆ ಬಂದಿತು. ಕರ್ನಾಟಕ ಲೋಕಸೇವಾ ಆಯೋಗದ ಇತಿಹಾಸದಲ್ಲೇ ಅತ್ಯಂತ ದೀರ್ಘಕಾಲ ನಡೆದ ಕಾನೂನು ಸಮರಗಳಲ್ಲಿ ಇದು ಒಂದಾಗಿದೆ. ಘಟನೆ ಬಗ್ಗೆ ಸಿಐಡಿ ತನಿಖೆ ನಡೆಸಿ ಅಕ್ರಮಗಳು ನಡೆದಿರುವುದನ್ನು ದೃಢಪಡಿಸಿತ್ತು. ಕೆಲವು ಅಭ್ಯರ್ಥಿಗಳು ಕೆಲಸ ಪಡೆಯಲು ನಕಲಿ ಜಾತಿ ಮತ್ತು ಆದಾಯ ಪ್ರಮಾಣಪತ್ರಗಳನ್ನು ಸಲ್ಲಿಸಿದ್ದು ಪತ್ತೆಯಾಗಿತ್ತು. ಈ ಪ್ರಕರಣವು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ವರೆಗೆ ಹೋಗಿತ್ತು. ಅಂತಿಮವಾಗಿ, ಸುಪ್ರೀಂ ಕೋರ್ಟ್ 1998ರ ಬ್ಯಾಚ್‌ನ ಆಯ್ಕೆ ಪಟ್ಟಿಯನ್ನು ಪರಿಷ್ಕರಿಸುವಂತೆ ಸರ್ಕಾರಕ್ಕೆ ಸೂಚಿಸಿತ್ತು.

2019ರಲ್ಲಿ ಸುಪ್ರೀಂ ಕೋರ್ಟ್ ಆದೇಶದಂತೆ ರಾಜ್ಯ ಸರ್ಕಾರ 36 ಕೆಎಎಸ್ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಿತ್ತು. ಬಡ್ತಿ ಪಡೆದಿದ್ದ 12 ಐಎಎಸ್  ಅಧಿಕಾರಿಗಳಿಗೂ ಹಿಂಬಡ್ತಿ ನೀಡಿತ್ತು. ಹಾಗೂ ಅಕ್ರಮದಿಂದಾಗಿ ಕೆಲಸ ವಂಚಿತರಾಗಿದ್ದ 28 ಅರ್ಹ ಅಭ್ಯರ್ಥಿಗಳನ್ನು ಗುರುತಿಸಿ, ಅವರಿಗೆ 2019ರಲ್ಲಿ ಸರ್ಕಾರ ನೇಮಕಾತಿ ಆದೇಶ ನೀಡಿತ್ತು.

1999 ಮತ್ತು 2004ರ ನೇಮಕದಲ್ಲೂ ಅಕ್ರಮಗಳ ನಡೆದಿದ್ದವು. ಪ್ರಕರಣ ಹೈಕೋರ್ಟ್‌ ಸೇರಿದಂತೆ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ಈ ಪ್ರಕರಣದಲ್ಲಿ ಅನ್ಯಾಯಕ್ಕೆ ಒಳಗಾದ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳುವ ಮೂಲಕ ಈ ಹಗರಣಕ್ಕೆ ತಾರ್ತಿಕ ಅಂತ್ಯ ನೀಡಲಾಗಿತ್ತು.

2011ರ ಗೆಜೆಟೆಡ್‌ ಪ್ರೊಬೆಷನರಿ ನೇಮಕ ಹಗರಣ...

ಕರ್ನಾಟಕ ಗೆಜೆಟೆಡ್‌ ಪ್ರೊಬೆಷನರಿ ನೇಮಕಾತಿ (ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕ) ನಿಯಮ–1997ರ ಅನ್ವಯ 2011ನೇ ಸಾಲಿನಲ್ಲಿ ‘ಎ’ ಗುಂಪಿನಲ್ಲಿ 162 ಹಾಗೂ ‘ಬಿ’ ಗುಂಪಿನಲ್ಲಿ 200 ಹುದ್ದೆಗಳಿಗೆ ನೇಮಕ ಮಾಡುವಂತೆ ಆಯೋಗವು ಸರ್ಕಾರಕ್ಕೆ ಕೋರಿತ್ತು. ಈ ಕೋರಿಕೆ ಅನ್ವಯ ಆಯೋಗವು 2011ರ ನವೆಂಬರ್‌ 3ರಂದು ಅಧಿಸೂಚನೆ ಹೊರಡಿಸಿ, ನೇಮಕಾತಿ ಬಗ್ಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿತ್ತು.

2012ರ ಏಪ್ರಿಲ್ 22ರಂದು ಪೂರ್ವಭಾವಿ ಪರೀಕ್ಷೆಯನ್ನೂ, 2012ರ ಡಿಸೆಂಬರ್ 15ರಿಂದ 2013ರ ಮೇ 27ರವರೆಗೆ ಮುಖ್ಯ ಪರೀಕ್ಷೆಯನ್ನೂ ನಡೆಸಲಾಗಿತ್ತು. 2013ರ ಏಪ್ರಿಲ್ 1,2 ಹಾಗೂ ಮೇ 7ರಿಂದ 27ರವರೆಗೆ ಅಭ್ಯರ್ಥಿಗಳ ವ್ಯಕ್ತಿತ್ವ ಪರೀಕ್ಷೆ ನಡೆಸಲಾಗಿತ್ತು. ಈ ಮಧ್ಯೆ ಈ ನೇಮಕಾತಿ ಪ್ರಕ್ರಿಯೆಯಲ್ಲಿ ಭಾರಿ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಅನ್ಯಾಯ ನಡೆದಿದೆ ಎಂದು ‘ಪ್ರಜಾವಾಣಿ’ ವರದಿ ಮಾಡಿತ್ತು.

ಈ ಆರೋಪಕ್ಕೆ ಸಂಬಂಧಿಸಿದಂತೆ 2011ನೇ ಸಾಲಿನಲ್ಲಿ ನಡೆಸಿದ ಗೆಜೆಟೆಡ್‌ ಪ್ರೊಬೆಷನರಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ಬಗ್ಗೆ  ಅಡ್ವೊಕೇಟ್‌ ಜನರಲ್‌ ನೀಡಿದ ಅಭಿಪ್ರಾಯದ ಅನುಸಾರ ಸರ್ಕಾರ ಪ್ರಕರಣದ ಸಮಗ್ರ ತನಿಖೆಯನ್ನು ಸಿಐಡಿಗೆ ವಹಿಸಿತ್ತು. ಸಿಐಡಿ ಅಕ್ರಮ ನಡೆದಿದೆ ಎಂದು ಹೇಳಿತ್ತು. ಸಿಐಡಿ ವರದಿಯನ್ನು ಒಪ್ಪಿಕೊಂಡ ಸರ್ಕಾರ ಅಧಿಸೂಚನೆ ಹಿಂಪಡೆದಿತ್ತು. ಇದನ್ನು ಆಯ್ಕೆಯಾದ ಅಭ್ಯರ್ಥಿಗಳು ಕೆಎಟಿಯಲ್ಲಿ ಪ್ರಶ್ನಿಸಿದ್ದರು.

ಯಾರು ತಪ್ಪೆಸಗಿದ್ದಾರೆ ಅವರನ್ನು ಪ್ರತ್ಯೇಕಿಸಿ, ಉಳಿದವರಿಗೆ ನೇಮಕಾತಿ ಆದೇಶ ನೀಡುವಂತೆ ಕೆಎಟಿ ಹೇಳಿತ್ತು. ಆದರೆ, ಸರ್ಕಾರ ಎಲ್ಲರಿಗೂ ನೇಮಕಾತಿ ಆದೇಶ ಕೊಡಲು ಮುಂದಾಗಿತ್ತು. ನಂತರ ಪ್ರಕರಣ ಸುಪ್ರೀಂ ಕೋರ್ಟ್‌ವರೆಗೂ ಹೋಗಿತ್ತು. ಬಸವರಾಜ ಬೊಮ್ಮಾಯಿ (2022–23) ಸರ್ಕಾರವು ವಿಶೇಷ ಪ್ರಕರಣ ಎಂದು ಪರಿಗಣಿಸಿ, ಸುಗ್ರೀವಾಜ್ಞೆ ತಂದು ಅಂತಿಮ ಪಟ್ಟಿಯಲ್ಲಿದ್ದ ಎಲ್ಲರಿಗೂ ಹುದ್ದೆ ನೀಡಲಾಯಿತು.

ಕರ್ನಾಟಕ ಲೋಕಸೇವಾ ಆಯೋಗ 2024ರಲ್ಲಿ ಸಹಾಯಕ ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿ ಪರೀಕ್ಷೆ ನಡೆಸಿತ್ತು. ಆದರೆ ಹುದ್ದೆಗಳ ನೇಮಕಾತಿಯಲ್ಲಿ ಅಭ್ಯರ್ಥಿಗಳ ಒಎಂಆ‌ರ್ ಶೀಟ್ ತಿದ್ದಿದ ಹಗರಣ  ವರದಿಯಾಗಿತ್ತು. ಈ ಕುರಿತು ಹೈಕೋರ್ಟ್ ಕೆಪಿಎಸ್‌ಸಿಗೆ ಮರುಪರೀಕ್ಷೆ ನಡೆಸಿ ಫಲಿತಾಂಶ ಕಠಿಣ ಆದೇಶ ನೀಡಿ ಎಂದು ಎಚ್ಚರಿಕೆ ನೀಡಿತ್ತು.

ಎಫ್‌ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ...

2021ರಲ್ಲಿ ಪ್ರಥಮ ದರ್ಜೆ ಸಹಾಯಕರ ನೇಮಕಕ್ಕೆ ಕೆಪಿಎಸ್‌ಸಿ ಅರ್ಜಿ ಕರೆದು ಪರೀಕ್ಷೆ ನಡೆಸಿತ್ತು. ಆದರೆ ಪರೀಕ್ಷೆಯಲ್ಲಿ ಸಾಮಾನ್ಯ ಜ್ಞಾನ ಮತ್ತು ಕನ್ನಡ ಭಾಷೆ ವಿಷಯಗಳ ಪ್ರಶ್ನೆಪತ್ರಿಕೆಗಳು ಸೋರಿಕೆಯಾದ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ರದ್ದುಗೊಳಿತ್ತು. ತನಿಖೆಯ ವೇಳೆ ಕೆಪಿಎಸ್‌ಸಿ ಕಚೇರಿಯ ಸಿಬ್ಬಂದಿಗಳೇ ಈ ಸೋರಿಕೆಯ ಹಿಂದಿರುವುದು ಪತ್ತೆಯಾಗಿತ್ತು.

ಪಶು ವೈದ್ಯಾಧಿಕಾರಿ ನೇಮಕ ಹಗರಣ...

400 ಪಶು ವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷೆಯಲ್ಲಿ ಕೋಟ್ಯಂತರ ರೂಪಾಯಿಗಳ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ. ಪರೀಕ್ಷೆ ಆರಂಭವಾಗುವ ಮುನ್ನವೇ ಪ್ರಶ್ನೆಪತ್ರಿಕೆ ಮತ್ತು ಕೀ-ಉತ್ತರಗಳನ್ನು ಪೆನ್‌ಡ್ರೈವ್‌ಗಳ ಮೂಲಕ ಸೋರಿಕೆ ಮಾಡಲಾಗಿತ್ತು. ಹಣ ಕೊಟ್ಟ ಅಭ್ಯರ್ಥಿಗಳನ್ನು ಐಷಾರಾಮಿ ವಿಲ್ಲಾಗಳಲ್ಲಿ ಇರಿಸಿ, ಅವರಿಗೆ ಮುಂಚಿತವಾಗಿಯೇ ತರಬೇತಿ ನೀಡಲಾಗಿತ್ತು. ಅಭ್ಯರ್ಥಿಗಳಿಂದ ಕೋಟಿ ಕೋಟಿ ಹಣ ಪಡೆದಿರುವುದು ತನಿಖೆ ವೇಳೆ ಪತ್ತೆಯಾಗಿದೆ.

ಆಯೋಗದ ಕಾರ್ಯನಿರ್ವಹಣೆಯನ್ನು ಬಲಪಡಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಇತ್ತೀಚೆಗಷ್ಟೇ 'ಕರ್ನಾಟಕ ಲೋಕಸೇವಾ ಆಯೋಗ (ವ್ಯವಹಾರ ನಿರ್ವಹಣೆ ಮತ್ತು ಹೆಚ್ಚುವರಿ ಪ್ರಕಾರ್ಯಗಳು, ತಿದ್ದುಪಡಿ) ಮಸೂದೆ-2025'ನ್ನು ಜಾರಿಗೆ ತಂದಿದೆ. ಅದಕ್ಕೂ ಮುನ್ನ ಪಿ.ಸಿ. ಹೋಟಾ ಸಮಿತಿಯು ಆಯೋಗದ ಸುಧಾರಣೆಗೆ ಸಂಬಂಧಿಸಿದಂತೆ ಹಲವು ಶಿಫಾರಸುಗಳನ್ನು ಸಲ್ಲಿಸಿತ್ತು.

ನೇಮಕಾತಿಗೆ ಸಂಬಂಧಿಸಿದಂತೆ ವಾರ್ಷಿಕ ವೇಳಾಪಟ್ಟಿ ರೂಪಿಸುವುದು, ಸಂದರ್ಶನ ಸಮಿತಿಯ ವಿವೇಚನಾ ಅಧಿಕಾರ ಕನಿಷ್ಠಗೊಳಿಸುವುದು, ಮೌಲ್ಯಮಾಪನ ವ್ಯವಸ್ಥೆ ಬಲಪಡಿಸುವುದು ಹಾಗೂ ಆಯೋಗದ ಸದಸ್ಯರ ನೇಮಕಾತಿಯಲ್ಲಿ ಪಾರದರ್ಶಕತೆ ಖಾತರಿಪಡಿಸುವುದು ಸಮಿತಿಯ ಶಿಫಾರಸುಗಳಲ್ಲಿ ಸೇರಿದ್ದವು. ಆಯೋಗದ ಸದಸ್ಯರ ನೇಮಕಾತಿಯು ಸಂಪೂರ್ಣ ಪಾರದರ್ಶಕವಾಗಿದ್ದು, ಅರ್ಹತೆ ಮತ್ತು ಕಳಂಕಗಳಿಲ್ಲದ ಪ್ರಾಮಾಣಿಕತೆಯೇ ನೇಮಕಕ್ಕೆ ಮಾನದಂಡಗಳಾಗಿರಬೇಕು ಎಂದು ಹೋಟಾ ಸಮಿತಿ ಹೇಳಿತ್ತು. ಉದ್ಯೋಗ ನೇಮಕಾತಿಗಳು ತಂತ್ರಜ್ಞಾನವನ್ನು ಆಧರಿಸಿ, ನಿಗದಿತ ಕಾಲಮಿತಿಯೊಳಗೆ ಹಾಗೂ ಸ್ವತಂತ್ರ ಮೇಲ್ವಿಚಾರಣೆಯಲ್ಲಿ ನಡೆಯಬೇಕು ಎಂದು ಅದು ಹೇಳಿತ್ತು.

ಆಯೋಗದ ಸುಧಾರಣೆಗೆ ಸಂಬಂಧಿಸಿದಂತೆ ಹಲವು ಶಿಫಾರಸುಗಳನ್ನು ಇಲ್ಲಿಯವರೆಗೂ ಕೆಪಿಎಸ್‌ಸಿ ಅಳವಡಿಸಿಕೊಳ್ಳದಿರುವುದು ಹಾಗೂ ಸರ್ಕಾರಗಳ ಮೇಲ್ವಿಚಾರಣೆ ಕೊರತೆ ಈ ವಿವಾದಗಳಿಗೆ ಕಾರಣ ಎನ್ನಲಾಗಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ