
ನರೇಗಲ್ | ಮುಖ್ಯರಸ್ತೆಯಲ್ಲಿ ನೀರು ಸಂಗ್ರಹ: ವಿದ್ಯಾರ್ಥಿಗಳು, ಸಾರ್ವಜನಿಕರ ಪರದಾಟ
ನರೇಗಲ್: ಪಟ್ಟಣದಿಂದ ಅಬ್ಬಿಗೇರಿಗೆ ತೆರಳುವ ಪ್ರಮುಖ ರಸ್ತೆ ನೀರಿನಿಂದ ಆವೃತವಾಗಿದ್ದು, ನಿತ್ಯ ಸಂಚರಿಸುವ ಸಾವಿರಾರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.
ಇತ್ತೀಚೆಗೆ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದಿಂದ ಕಾಲೊನಿವರೆಗೆ ನಿರ್ಮಿಸಿದ ಕಾಂಕ್ರೀಟ್ ದ್ವಿಪಥವು ಅವೈಜ್ಞಾನಿಕವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ರಸ್ತೆ ನಿರ್ಮಿಸುವಾಗ ಮಳೆನೀರು ಸರಾಗವಾಗಿ ಹರಿದುಹೋಗಲು ಚರಂಡಿ ವ್ಯವಸ್ಥೆ ಮಾಡಿಲ್ಲ. ಪರಿಣಾಮ, ತುಸು ಮಳೆಯಾದರೂ ರಸ್ತೆ ಕೆರೆಯಂತಾಗುತ್ತಿದೆ.
‘ಪೆಟ್ರೋಲ್ ಬಂಕ್ ಸಮೀಪದಲ್ಲಿ ಅಪಾರ ಪ್ರಮಾಣದ ನೀರು ನಿಲ್ಲುತ್ತಿದೆ. ಇದರಿಂದ ರಸ್ತೆಯಲ್ಲಿರುವ ತಗ್ಗು–ಗುಂಡಿಗಳು ಕಾಣದೆ ಬೈಕ್ ಸವಾರರು ಬಿದ್ದು ಗಾಯಗೊಂಡಿದ್ದಾರೆ. ಇತ್ತೀಚೆಗಷ್ಟೇ ಬೈಕ್ ಸವಾರನೊಬ್ಬ ವಿದ್ಯಾರ್ಥಿನಿಯರಿಗೆ ಡಿಕ್ಕಿ ಹೊಡೆದು, ಗಾಯಗೊಳಿಸಿದ್ದನು. ಇಂತಹ ಘಟನೆಗಳು ಪದೇಪದೆ ಸಂಭವಿಸುತ್ತಿದ್ದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮಾತ್ರ ಕುಂಭಕರ್ಣ ನಿದ್ದೆಯಲ್ಲಿದ್ದಾರೆ’ ಎಂದು ದಲಿತ ಮುಖಂಡ ಸೋಮಪ್ಪ ಹನಮಸಾಗರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಈ ಮಾರ್ಗದಲ್ಲಿ ಅನ್ನದಾನೇಶ್ವರ ಮಠದ ಹತ್ತಾರು ಶಿಕ್ಷಣ ಸಂಸ್ಥೆಗಳು, ಪಿಎಸ್‌ಎಸ್ ಪ್ರಾಥಮಿಕ ಮತ್ತು ಪ್ರೌಢಶಾಲೆ, ಸರ್ಕಾರಿ ಪ್ರೌಢಶಾಲೆ, ಪಿಯು ಹಾಗೂ ಪದವಿ ಕಾಲೇಜುಗಳಿದ್ದು, ನಿತ್ಯ ಸಾವಿರಾರು ವಿದ್ಯಾರ್ಥಿಗಳು ಇದೇ ಮಾರ್ಗದಲ್ಲಿ ಸಂಚರಿಸುತ್ತಾರೆ. ಅಬ್ಬಿಗೇರಿ, ರೋಣ, ಕೋಚಲಾಪುರ, ಯರೇಬೇಲೇರಿ ಹಾಗೂ ಕುರುಡಗಿ ಮುಂತಾದ ಗ್ರಾಮಗಳ ಸಂಪರ್ಕಕ್ಕೂ ಇದು ಮುಖ್ಯ ಕೊಂಡಿಯಾಗಿದೆ. ವಾಹನಗಳು ವೇಗವಾಗಿ ಚಲಿಸುವಾಗ ಕೆಸರು ನೀರು ಸಮವಸ್ತ್ರದ ಮೇಲೆ ಸಿಡಿದು ಅನೇಕ ವಿದ್ಯಾರ್ಥಿಗಳು ಮನೆಗೆ ಮರಳಿದ ನಿದರ್ಶನಗಳಿವೆ’ ಎಂದು ಸ್ಥಳೀಯ ನಿವಾಸಿ ಉದಯ ಸವದಿ ಹೇಳಿದರು.
ಲೋಕೋಪಯೋಗಿ ಇಲಾಖೆಯಿಂದ ₹1.50 ಕೋಟಿ ವೆಚ್ಚದ 2ನೇ ಹಂತದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸೆಪ್ಟೆಂಬರ್ 9ರಂದು ಚಾಲನೆ ನೀಡಲಾಗಿದೆ. ಈ ಕುರಿತು ಮಾಹಿತಿ ಪಡೆಯಲು ರೋಣ ಪಿಡಬ್ಲ್ಯೂಡಿ ಎಇಇ ಜಿ.ಎಸ್. ಪಾಟೀಲ ಅವರನ್ನು ಸಂಪರ್ಕಿಸಿದರೂ ಅವರು ಕರೆ ಸ್ವೀಕರಿಸಲಿಲ್ಲ.
ಕಾಮಗಾರಿ ಪೂರ್ಣಗೊಳಿಸಲು ಸೂಚನೆ
ಪಟ್ಟಣ ಪಂಚಾಯಿತಿ ವತಿಯಿಂದ ಈಗಾಗಲೇ ನಾಲ್ಕೈದು ಬಾರಿ ಗರಸು ಹಾಕಿ ತಾತ್ಕಾಲಿಕವಾಗಿ ದುರಸ್ತಿ ಮಾಡಲಾಗಿದೆ. ಆದರೆ, ಜೋರು ಮಳೆಗೆ ಗರಸು ಕೊಚ್ಚಿ ಹೋಗುತ್ತಿದೆ. ಸಾರ್ವಜನಿಕರಿಗೆ ತೊಂದರೆ ಆಗದಂತೆ ತ್ವರಿತವಾಗಿ ವೈಜ್ಞಾನಿಕ ಕಾಮಗಾರಿ ಪೂರ್ಣಗೊಳಿಸಲು ಪಿಡಬ್ಲ್ಯೂಡಿ ಇಲಾಖೆಗೆ ಮತ್ತೊಮ್ಮೆ ಸೂಚಿಸಲಾಗುವುದು ಎಂದು ನರೇಗಲ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಲ್ಲೇಶ ಪಚ್ಚಿ ತಿಳಿಸಿದರು.