
ಮೈಷುಗರ್ ಕಂಪನಿಯಿಂದ ಕಬ್ಬು ಬೆಳೆಗಾರರಿಗೆ ಪ್ರೋತ್ಸಾಹಧನ ನೀಡಿಲ್ಲ: ವೇಣುಗೋಪಾಲ್
ಮಂಡ್ಯ: ಸರ್ಕಾರ ಟನ್ ಕಬ್ಬಿಗೆ ₹50 ಪ್ರೋತ್ಸಾಹಧನ ನೀಡುವಂತೆ ಸಕ್ಕರೆ ಕಾರ್ಖಾನೆಗಳಿಗೆ ಸೂಚನೆ ನೀಡಿದ್ದರೂ ಈವರೆಗೂ ಮೈಷುಗರ್ ಕಂಪನಿ ರೈತರಿಗೆ ಪ್ರೋತ್ಸಾಹ ಧನ ನೀಡಿಲ್ಲ ಎಂದು ಮೈಷುಗರ್ ಕಬ್ಬು ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಸಾತನೂರು ವೇಣುಗೋಪಾಲ್ ಅವರು ಆರೋಪಿಸಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ಕಾರ್ಖಾನೆ ಆರಂಭವಾಗುವ ಮುನ್ನ ಜುಲೈ ತಿಂಗಳ ಅಂತ್ಯದೊಳಗೆ ಪ್ರೋತ್ಸಾಹಧನ ಕೊಟ್ಟು ಕಾರ್ಖಾನೆ ಪ್ರಾರಂಭ ಮಾಡುವುದಾಗಿ ಮೈಷುಗರ್ ಅಧ್ಯಕ್ಷ ಸಿ.ಡಿ. ಗಂಗಾಧರ್ ಹೇಳಿಕೆ ನೀಡಿದ್ದರು. ಆದರೇ ಜುಲೈ, ಆಗಸ್ಟ್ ತಿಂಗಳು ಮುಗಿದು ಸೆಪ್ಟಂಬರ್ ತಿಂಗಳು ಮುಗಿಯುವ ಹೊತ್ತು ಬಂದರೂ ಇನ್ನೂ ನೀಡಿಲ್ಲ ಎಂದು ದೂರಿದರು.
ಉಸ್ತುವಾರಿ ಸಚಿವರು, ಜಿಲ್ಲೆಯ ಎಲ್ಲಾ ಶಾಸಕರು ಮಧ್ಯ ಪ್ರವೇಶಿಸಿ ರೈತರಿಗೆ ಕೊಡಬೇಕಾಗಿರುವ ಪ್ರೋತ್ಸಾಹಧನವನ್ನು ತಕ್ಷಣ ಕೊಡಿಸಬೇಕು. ರೈತರ ಬೇಡಿಕೆ ಸ್ಪಂದಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.