
ಕುಷ್ಟಗಿ ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಡಿಜೆ ಸದ್ದಿಗೆ ಜನ ಬೆಚ್ಚಿಬಿದ್ದರು
ಕುಷ್ಟಗಿ: ಪಟ್ಟಣದಲ್ಲಿ ಶುಕ್ರವಾರ ಸಾರ್ವಜನಿಕ ಗಣೇಶ ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ಬಳಸಿದ ಭಾರಿ ಪ್ರಮಾಣದ ಡಿಜೆ ಧ್ವನಿವರ್ಧಕದ ಸದ್ದಿಗೆ ಜನ ಬೆಚ್ಚಿಬಿದ್ದ ಘಟನೆ ನಡೆಯಿತು.
ಸುಮಾರು ಎರಡು ಮೂರು ತಾಸುಗಳವರೆಗೂ ಪಟ್ಟಣದ ಪ್ರಮುಖ ಬೀದಿಗಳು, ಆಸ್ಪತ್ರೆಗಳ ಬಳಿ ಸಾಗಿದ ಮೆರವಣಿಗೆಯಲ್ಲಿ ಮಿತಿ ಮೀರಿದ ಶಬ್ದ ಹೊರಸೂಸುವ ರೀತಿಯಲ್ಲಿ ಡಿಜೆ ಬಳಕೆ ಮಾಡಲಾಯಿತು. ಅಸಭ್ಯ ಹಾಡುಗಳಿಗೆ ಯುವಕರು ಹುಚ್ಚೆದ್ದು ಕುಣಿಯುತ್ತಿದ್ದುದಕ್ಕೆ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದರು.
ಡಿಜೆ ಬಳಕೆ ಮಾಡದಂತೆ ಜಿಲ್ಲಾಧಿಕಾರಿ ಹೊರಡಿಸಿದ ಆದೇಶ ನಗೆಪಾಟಲಿಗೀಡಾಯಿತು. ಅಷ್ಟೇ ಏಕೆ ಗಣೇಶೋತ್ಸವ ಶಾಂತಿ ಸಭೆ ನಡೆಸಿದ್ದ ಇಲ್ಲಿಯ ಪೊಲೀಸರು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿ ನಿಯಮ ಉಲ್ಲಂಘಿಸಿದರೆ ಕ್ರಮ ಕೈಗೊಳ್ಳುವುದಾಗಿ ಸ್ವತಃ ಇಲ್ಲಿಗೆ ಬಂದಿದ್ದ ಎಸ್‌ಪಿ ಸಾಹಿಲ್ ಬಾಗ್ಲಾ ಸಹಿತ ಇಲ್ಲಿಯ ಪೊಲೀಸ್ ಅಧಿಕಾರಿಗಳು ಸಭೆಯಲ್ಲಿ ಸ್ಪಷ್ಟಪಡಿಸಿದ್ದರು. ಆದರೆ, ಅದ್ಯಾವುದೂ ಕಾರ್ಯರೂಪಕ್ಕೆ ಬರಲಿಲ್ಲ. ಸಿಪಿಐ, ಪಿಎಸ್‌ಐ ಸಮ್ಮುಖದಲ್ಲಿಯೇ ಡಿಜೆ ಬಳಕೆ ಮಾಡಿದರೂ ಮೌನಕ್ಕೆ ಶರಣಾಗಿದ್ದು ಅಚ್ಚರಿ ಮೂಡಿಸಿತು.
‘ಪೊಲೀಸರ ವೈಫಲ್ಯ ಇಲ್ಲಿ ಎದ್ದು ಕಂಡಿದ್ದು, ಯಾವ ಪುರುಷಾರ್ಥಕ್ಕೆ ಇವರು ಶಾಂತಿ ಸಭೆ ನಡೆಸಬೇಕಿತ್ತು’ ಎಂದು ಸಾರ್ವಜನಿಕರಾದ ಪಾಂಡುರಂಗ ಆಶ್ರೀತ್, ಬಸವರಾಜ ಇತರರು ದೂರಿದರು.