
ಸತೀಶ ಜಾರಕಿಹೊಳಿ ಇ.ಡಿ ದಾಳಿ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ
ಚಿತ್ರದುರ್ಗ: ಸಚಿವ ಸತೀಶ ಜಾರಕಿಹೊಳಿ, ಅವರ ಪುತ್ರಿ, ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಸೇರಿದಂತೆ ಕುಟುಂಬದವರ ನಿವಾಸಗಳ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ದಾಳಿ ನಡೆಸಿರುವುದನ್ನು ಖಂಡಿಸಿ ಕಾಂಗ್ರೆಸ್ ಜಿಲ್ಲಾ ಘಟಕದಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.
‘ಕಾಂಗ್ರೆಸ್ ಕಚೇರಿಯಿಂದ ಅಂಬೇಡ್ಕರ್ ಪ್ರತಿಮೆವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕಾಂಗ್ರೆಸ್‌ಗೆ ಶಕ್ತಿಯಾಗಿರುವ ಸತೀಶ ಅವರನ್ನು ರಾಜಕೀಯವಾಗಿ ಕುಗ್ಗಿಸುವ ಉದ್ದೇಶದಿಂದ ಇ.ಡಿ. ದಾಳಿ ನಡೆಸಲಾಗುತ್ತಿದೆ’ ಎಂದು ಆರೋಪಿಸಿದರು.
‘ಕೇಂದ್ರ ಸರ್ಕಾರ ಮೊದಲು ಬಿಜೆಪಿಯಲ್ಲಿರುವ ಭ್ರಷ್ಟರ ವಿರುದ್ಧ ತನಿಖೆ ನಡೆಸಲಿ. ಕಾಂಗ್ರೆಸ್ ನಾಯಕರನ್ನು ಮಾತ್ರ ಗುರಿಯಾಗಿಸಿಕೊಂಡು ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿರುವುದು ಯಾವ ನ್ಯಾಯ’ ಎಂದು ಪ್ರಶ್ನಿಸಿದರು.
‘ಸತೀಶ ರಾಜಕೀಯದ ಜತೆಗೆ ಉದ್ಯಮದಲ್ಲೂ ತೊಡಗಿಸಿಕೊಂಡು ಆರ್ಥಿಕವಾಗಿ ಬೆಳೆದಿದ್ದಾರೆ. ಇದನ್ನು ಮೊದಲು ಬಿಜೆಪಿ ಅರ್ಥಮಾಡಿಕೊಳ್ಳಬೇಕು. ಪಿಎಂ ಕೇರ್‌ಗೆ ಸಂಬಂಧಿಸಿದ ಆರೋಪಗಳ ಕುರಿತು ಏಕೆ ತನಿಖೆ ನಡೆಸುತ್ತಿಲ್ಲ. ಕಾಂಗ್ರೆಸ್ ವಿರುದ್ಧ ರಾಜ್ಯದಾದ್ಯಂತ ಪಾದಯಾತ್ರೆ ನಡೆಸಲು ಬಿಜೆಪಿಗೆ ಹಣ ಎಲ್ಲಿಂದ ಬರುತ್ತಿದೆ ಎಂಬುದನ್ನು ಸ್ಪಷ್ಟಪಡಿಸಲಿ’ ಎಂದು ಸವಾಲು ಹಾಕಿದರು.
ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ತಾಜ್‌ಪೀರ್, ಪರಿಶಿಷ್ಟ ವರ್ಗಗಳ ವಿಭಾಗದ ಅಧ್ಯಕ್ಷ ಬಿ.ಮಂಜುನಾಥ್, ಕಾರ್ಯಾಧ್ಯಕ್ಷ ಕೆ.ಎಂ.ಹಾಲಸ್ವಾಮಿ, ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎನ್.ಡಿ.ಕುಮಾರ್, ವಕ್ತಾರ ಜಿ.ಎಸ್.ಕುಮಾರ್ ಗೌಡ, ಪ್ರಧಾನ ಕಾರ್ಯದರ್ಶಿಗಳಾದ ಕೆ.ಪಿ.ಸಂಪತ್ ಕುಮಾರ್, ಡಿ.ಎನ್.ಮೈಲಾರಪ್ಪ, ಜಿ.ವಿ.ಮಧುಗೌಡ, ಉಪಾಧ್ಯಕ್ಷ ಎಸ್.ಎನ್.ರವಿಕುಮಾರ್ ಇದ್ದರು.