
ಕೋಲಾರದಲ್ಲಿ ಕ್ರೀಡಾ ಸೌಲಭ್ಯಗಳ ಕೊರತೆ, ಮೈದಾನಗಳಿಗಾಗಿ ಪರದಾಟ
ಕೋಲಾರ: ಬೆಂಗಳೂರಿನಿಂದ ಕೇವಲ 70 ಕಿ.ಮೀ ದೂರದಲ್ಲಿರುವ ಜಿಲ್ಲಾ ಕೇಂದ್ರ ಕೋಲಾರದಲ್ಲಿ ಕ್ರೀಡಾ ಸೌಲಭ್ಯಗಳು ಇಲ್ಲದೆ ಪ್ರತಿಭಾವಂತ ಕ್ರೀಡಾಪಟುಗಳಿಗೆ ಭಾರಿ ಹಿನ್ನಡೆ ಆಗಿದೆ. ಫುಟ್‌ಬಾಲ್, ಬ್ಯಾಸ್ಕೆಟ್‌ಬಾಲ್ ಹಾಗೂ ಅಥ್ಲೆಟಿಕ್ಸ್ ಹೊರತುಪಡಿಸಿ ಬೇರೆ ಗುಂಪು ಕ್ರೀಡೆಗಳಿಗೆ ಸರಿಯಾದ ಮೈದಾನವೇ ಇಲ್ಲ.
ಹೀಗಾಗಿ, ವಾಲಿಬಾಲ್, ಕೊಕ್ಕೊ, ಕಬಡ್ಡಿ, ಹಾಕಿ, ಕ್ರಿಕೆಟ್ ಆಟಗಾರರು ಮೈದಾನಗಳಿಗಾಗಿ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಖಾಸಗಿ ಮೈದಾನಗಳನ್ನು ಹುಡುಕಿಕೊಂಡು ಅಲೆಯಬೇಕಾದ ಪರಿಸ್ಥಿತಿ ಇದೆ.
ನಗರದ ಸರ್ ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣವನ್ನು ವರ್ಷದ ಹಿಂದೆ ಸುಮಾರು ₹8 ಕೋಟಿ ವೆಚ್ಚದಲ್ಲಿ ಸಿಂಥೆಟಿಕ್ ಟ್ರ್ಯಾಕ್ ಆಗಿ ನವೀಕರಣ ಮಾಡಲಾಗಿದೆಯಾದರೂ ಅದು ಅಥ್ಲೆಟಿಕ್ಸ್ ಹಾಗೂ ಫುಟ್‌ಬಾಲ್‌ಗೆ ಸೀಮಿತವಾಗಿದೆ. ಮಿನಿ ಕ್ರೀಡಾಂಗಣದಲ್ಲಿ ಬ್ಯಾಸ್ಕೆಟ್‌ಬಾಲ್, ಒಳಾಂಗಣ ಕ್ರೀಡಾಂಗಣವನ್ನು ಬ್ಯಾಡ್ಮಿಂಟನ್, ಕಬಡ್ಡಿ ಆಟಕ್ಕೆ ಬಳಸಲಾಗುತ್ತಿದೆ.
ಕ್ರೀಡಾಪಟುಗಳಿಗೆ ಮಾತ್ರವಲ್ಲ; ಸಾರ್ವಜನಿಕರು, ಮಕ್ಕಳು ಬಿಡುವಿನ ಸಮಯದಲ್ಲಿ ಆಟವಾಡಲು ಸರಿಯಾದ ಸ್ಥಳಾವಕಾಶ ಇಲ್ಲ. ಜಿಲ್ಲಾ ಕ್ರೀಡಾಂಗಣದಲ್ಲಿ ಅಥ್ಲೆಟಿಕ್ಸ್ ಹಾಗೂ ಫುಟ್‌ಬಾಲ್ ಮೈದಾನದ ಸೌಲಭ್ಯ ಬಳಸಿಕೊಳ್ಳಲು ಶುಲ್ಕ ಕೂಡ ಪಾವತಿಸಬೇಕಿದೆ.
‘ಕೋಲಾರದಲ್ಲಿ ಪ್ರತಿಭಾವಂತ ಕ್ರೀಡಾಳುಗಳು ಇದ್ದಾರೆ. ಆದರೆ, ಗುಂಪು ಕ್ರೀಡೆಗಳ ಸಂಬಂಧ ತರಬೇತಿ ನೀಡಲು ಹಾಗೂ ರಾಜ್ಯಮಟ್ಟದ ಕ್ರೀಡಾಕೂಟ ನಡೆಸಲು ಸರಿಯಾದ ಮೈದಾನ ಸೌಲಭ್ಯ ಇಲ್ಲ. ಇದು ಜಿಲ್ಲೆಯ ಕ್ರೀಡಾಪಟುಗಳ ದೌರ್ಭಾಗ್ಯ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಚೌಡಪ್ಪ.
ಈಚೆಗೆ ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ವಕ್ಕಲೇರಿ ಹೋಬಳಿ ಮಟ್ಟದ ಅಂತರ ಶಾಲಾ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿತ್ತು. ಆದರೆ, ದೂರದ ಹಳ್ಳಿಗಳಿಂದ ಬಂದಿದ್ದ ಮಕ್ಕಳು ಸರಿಯಾದ ವ್ಯವಸ್ಥೆ ಇಲ್ಲದೆ ಪರದಾಡಿದರು. ಕುಡಿಯುವ ನೀರು, ಕುಳಿತುಕೊಳ್ಳಲು ಸರಿಯಾದ ಜಾಗವಿಲ್ಲದೆ ಬಿಸಿಲ ಬೇಗೆಗೆ ಬಳಲಿದರು.
ಈ ಮೈದಾನದಲ್ಲಿ ನಗರಸಭೆಯಿಂದ ಗಣೇಶನ ಮೂರ್ತಿಗಳನ್ನು ಇಟ್ಟು ಮಾರಲು ಅನುಮತಿ ನೀಡಲಾಗಿದೆ. ಹೀಗಾಗಿ, ಮೈದಾನದ ಮಧ್ಯ ಭಾಗದಲ್ಲೇ ಮಾರಾಟವೂ ನಡೆಯುತ್ತಿದೆ. ಅದರ ಪಕ್ಕದಲ್ಲೇ ವಾಲಿವಾಲ್, ಕಬಡ್ಡಿ, ಕೊಕ್ಕೊ, ಥ್ರೋಬಾಲ್ ಸೇರಿದಂತೆ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆದವು. ಪಕ್ಕದಲ್ಲೇ ತರಗತಿಗಳು ನಡೆಯುತ್ತಿದ್ದು, ಇದರಿಂದ ಅವರಿಗೂ ತೊಂದರೆ ಆಗುತ್ತಿದೆ. ಆದರೆ, ನಗರದಲ್ಲಿ ಗುಂಪು ಕ್ರೀಡೆಗಳಿಗೆ ಬೇರೆ ಮೈದಾನವೂ ಇಲ್ಲ.
ಹೊಳಲಿ ಬಳಿ ಕ್ರಿಕೆಟ್ ಮೈದಾನ: ಕೋಲಾರ ತಾಲ್ಲೂಕಿನ ಹೊಳಲಿ ಬಳಿಯ ಕೆಎಸ್‌ಸಿಎನಿಂದ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣ ಯೋಜನೆ ಇದೆ. ಅದಕ್ಕೆ ಜಾಗದ ಗೊಂದಲ ಇನ್ನೂ ಬಗೆ ಹರಿದಿಲ್ಲ. ಕ್ರೀಡಾಂಗಣ ನಿರ್ಮಾಣವಾದರೆ ಅಲ್ಲೇನೂ ಸಾರ್ವಜನಿಕರಿಗೆ ಅವಕಾಶ ಸಿಗುವುದಿಲ್ಲ. ಬದಲಾಗಿ ಕೆಎಸ್‌ಸಿಎ ಟೂರ್ನಿಗಳು, ತಾಲೀಮಿಗೆ ಮಾತ್ರ ಅವಕಾಶವಿರುತ್ತದೆ.
ಸಂಸದ ಎಂ.ಮಲ್ಲೇಶ್ ಬಾಬು ಅವರು ಖೇಲೋ ಇಂಡಿಯಾದಡಿ ಕ್ರೀಡಾಂಗಣ ನಿರ್ಮಿಸಲು 15 ಎಕರೆ ಜಾಗ ನೀಡಿ ಎಂದು ಮನವಿ ಮಾಡಿದ್ದಾರೆ. ಆದರೆ, ಜಿಲ್ಲಾಡಳಿತ ಈವರೆಗೆ ಸ್ಪಂದಿಸಿಲ್ಲ. ಈ ಬಗ್ಗೆ ಅವರು ಹಲವಾರು ಬಾರಿ ಬೇಸರ ಕೂಡ ವ್ಯಕ್ತಪಡಿಸಿದ್ದಾರೆ.
ಜನಸಾಮಾನ್ಯರ ಬಳಕೆಗೆ ಮೈದಾನ ಇಲ್ಲ
ಸಾರ್ವಜನಿಕರ ಬಳಕೆಗೆ ಕೋಲಾರದಲ್ಲಿ ಕ್ರೀಡಾಂಗಣ, ಮೈದಾನ ಇಲ್ಲವೇ ಇಲ್ಲ. ಜನರು, ಮಕ್ಕಳು ಅಭ್ಯಾಸ ನಡೆಸಲು ಜಾಗವಿಲ್ಲದಂತಾಗಿದೆ. ಸರ್ಕಾರದಿಂದ ಇನ್ನೊಂದು ಮೈದಾನ ನಿರ್ಮಿಸಬೇಕು. ಜೂನಿಯರ್ ಮೈದಾನದಲ್ಲಿ ಪದೇಪದೇ ಕಾರ್ಯಕ್ರಮ ನಡೆಯುವ ಕಾರಣ ಸರಿಯಾಗಿ ಲಭ್ಯವಾಗುತ್ತಿಲ್ಲ.
–ಕೃಷ್ಣಮೂರ್ತಿ ಎನ್, ನಿವೃತ್ತ ಯೋಧ, ಕೋಲಾರ
ಅಧಿಕಾರಿಗಳಿಗೆ ಆಸಕ್ತಿ ಇಲ್ಲ
ಕೋಲಾರದಲ್ಲಿ ಪ್ರತಿಭಾವಂತ ಕ್ರೀಡಾಪಟುಗಳು ಇದ್ದಾರೆ. ಆದರೆ, ಕ್ರೀಡೆಗಳ ಬಗ್ಗೆ ಜಿಲ್ಲೆಯ ಅಧಿಕಾರಿಗಳಿಗೆ ಯಾವುದೇ ಆಸಕ್ತಿ ಇಲ್ಲ. ಈ ಸಂಬಂಧ ಸರಿಯಾದ ಪ್ರೋತ್ಸಾಹ ಇಲ್ಲವಾಗಿದೆ. ಸರ್ಕಾರದಿಂದ ಕ್ರೀಡಾಂಗಣ ನಿರ್ಮಿಸಬೇಕು. ಜನಸಾಮಾನ್ಯರು, ಮಕ್ಕಳು ಆಟವಾಡಲು ಮೈದಾನ ಅಗತ್ಯವಿದೆ. ಸಂಬಂಧಪಟ್ಟವರು ಇತ್ತ ಗಮನ ಹರಿಸಬೇಕು
–ಅಂಚೆ ಅಶ್ವಥ್, ಕ್ರೀಡಾ ಪೋಷಕ, ಕೋಲಾರ
ಈ ಮೊದಲು ಜಿಲ್ಲಾ ಕ್ರೀಡಾಂಗಣದಲ್ಲಿ ಬೇರೆ ಕ್ರೀಡೆಗಳಿಗೆ ಅವಕಾಶ ಇತ್ತು. ಫುಟ್‌ಬಾಲ್ ಮೈದಾನಕ್ಕೆ ಸೀಮಿತವಾದ ಮೇಲೆ ಉಳಿದ ಕ್ರೀಡೆಗಳಿಗೆ ಅವಕಾಶ ಇಲ್ಲವಾಗಿದೆ. ಜೂನಿಯರ್ ಕಾಲೇಜು ಮೈದಾನದಲ್ಲಿ ಕ್ರೀಡಾಕೂಟ ನಡೆಸಿದರೆ ಪಕ್ಕದಲ್ಲೇ ತರಗತಿ ನಡೆಯುವ ಕಾರಣ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತದೆ. ಹೀಗಾಗಿ, ಕಬಡ್ಡಿ, ವಾಲಿಬಾಲ್, ಕ್ರಿಕೆಟ್‌ಗೆ ಪ್ರತ್ಯಕ್ಷವಾಗಿ ಸರ್ಕಾರದಿಂದ ಮೈದಾನ ನಿರ್ಮಿಸಬೇಕು. ಇಲ್ಲದಿದ್ದರೆ ವಿಭಾಗ ಮಟ್ಟ ಹಾಗೂ ರಾಜ್ಯಮಟ್ಟದ ಕ್ರೀಡಾಕೂಟ ನಡೆಸುವಾಗ ತುಂಬಾ ಕಷ್ಟವಾಗುತ್ತದೆ. ಜಿಲ್ಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಕೊರತೆಯೂ ಇದೆ
–ಚೌಡಪ್ಪ ಎಸ್., ಅಧ್ಯಕ್ಷ, ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘ
ಮಕ್ಕಳಿಗೆ ತರಬೇತಿ ಸಿಗುತ್ತಿಲ್ಲ
ಕೋಲಾರ ಜಿಲ್ಲೆಯ ಮಕ್ಕಳಿಗೆ ಯಾವುದೇ ಕ್ರೀಡೆಯಲ್ಲಿ ಸರಿಯಾದ ತರಬೇತಿ ಸಿಗುತ್ತಿಲ್ಲ. ಅದಕ್ಕೆ ಸರಿಯಾದ ಸೌಲಭ್ಯಗಳು ಕೂಡ ಇಲ್ಲ. ಫುಟ್‌ಬಾಲ್, ಬ್ಯಾಸ್ಕೆಟ್‌ಬಾಲ್ ಹೊರತುಪಡಿಸಿ ಗುಂಪು ಆಟಗಳಿಗೆ ಎಲ್ಲೂ ಮೈದಾನವೇ ಇಲ್ಲ. ಜೂನಿಯರ್ ಕಾಲೇಜು ಮೈದಾನದಲ್ಲಿ ಸಮತಟ್ಟಾಗಿಲ್ಲ, ಜೊತೆಗೆ ಸೌಲಭ್ಯವೂ ಇಲ್ಲಿಲ್ಲ.
–ಶಶಿಕಲಾ, ದೈಹಿಕ ಶಿಕ್ಷಣ ಶಿಕ್ಷಕಿ, ಕೋಲಾರ
ಕ್ರಿಕೆಟ್ ಆಟಕ್ಕಿಲ್ಲ ಅಂಗಳ, ಪರದಾಟ
ಕೋಲಾರದಲ್ಲಿ ಕ್ರಿಕೆಟ್ ಆಡಲು ಕ್ರೀಡಾಂಗಣ ಇಲ್ಲದೆ ಯುವಕರ ಪರದಾಟ ಅಷ್ಟಿಷ್ಟಲ. ಖಾಸಗಿ ಶಾಲಾ ಕಾಲೇಜುಗಳ ಮೈದಾನಕ್ಕಾಗಿ ಬೇಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅದಕ್ಕಾಗಿ ಹತ್ತಾರು ಕಿ.ಮೀ. ದೂರ ಕ್ರಮಿಸಬೇಕಾಗಿದೆ.
ತಾಲ್ಲೂಕಿನ ಕೋರಗೊಂಡನಹಳ್ಳಿ ಗ್ರಾಮದಲ್ಲಿ ಐಪಿಎಸ್ ಅಧಿಕಾರಿ ಡಿ.ದೇವರಾಜ್ ನಿರ್ಮಿಸಿರುವ ಸುಸಜ್ಜಿತ ಕ್ರಿಕೆಟ್ ಕ್ರೀಡಾಂಗಣವಿದೆ. ಹೀಗಾಗಿ, ಟೂರ್ನಿಗಳನ್ನು ಆಡಲು ಅದು ಸಹಕಾರಿ ಆಗಿದೆ.
ನಿರ್ಮಾಣ ಹಂತದಲ್ಲಿ ಈಜುಕೊಳ
ಕೋಲಾರ ಜಿಲ್ಲೆಯಲ್ಲಿ ಪ್ರತಿಭಾವಂತ ಈಜುಪಟುಗಳಿದ್ದರೂ ಸರ್ಕಾರದಿಂದ ನಿರ್ಮಾಣವಾದ ಒಂದೂ ಈಜುಕೊಳ ಇರಲಿಲ್ಲ. ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸ್ಪರ್ಧಿಸುವ ಈಜುಪಟುಗಳು ತಾಲೀಮು ನಡೆಸಲು ಬೆಂಗಳೂರು ನಗರಿಯನ್ನೇ ನೆಚ್ಚಿಕೊಳ್ಳಬೇಕಿತ್ತು.
ಈ ಸಂಬಂದ ಹಲವರು ಧ್ವನಿ ಎತ್ತಿದ್ದರು. ಈ ಪರಿಣಾಮ ಮಿನಿ ಕ್ರೀಡಾಂಗಣದ ಬಳಿ ಕೆಲ ತಿಂಗಳ ಹಿಂದೆ ಶಂಕುಸ್ಥಾಪನೆ ಆಗಿತ್ತು. ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ₹ 4.70 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದ್ದು, ಕೆಲವೇ ತಿಂಗಳಲ್ಲಿ ಬಳಕೆಗೆ ಲಭ್ಯವಾಗಲಿದೆ ಎಂದು ಕ್ರೀಡಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. 25 ಮೀಟರ್ ಉದ್ದದ ಈಜುಕೊಳ ಇದಾಗಿದೆ.
ಬ್ಯಾಸ್ಕೆಟ್‌ಬಾಲ್‌ಗೆ ಹೊಸ ರೂಪ
ಬ್ಯಾಸ್ಕೆಟ್‌ಬಾಲ್ ಆಟಗಾರರು ಹಾಗೂ ಕ್ರೀಡಾ ಪೋಷಕರ ಒತ್ತಾಯದಿಂದ ಕೋಲಾರದಲ್ಲಿ ಬ್ಯಾಸ್ಕೆಟ್‌ಬಾಲ್ ಕೋರ್ಟ್‌ಗೆ ಹೊಸ ರೂಪ ಲಭಿಸಿದೆ. ಒಳಾಂಗಣ ಕ್ರೀಡಾಂಗಣ ಹಿಂಭಾಗ ಕ್ರೀಡಾ ಇಲಾಖೆಯಿಂದ ಸುಮಾರು ₹45 ಲಕ್ಷ ವೆಚ್ಚದಲ್ಲಿ ಸಿಂಥೆಟಿಕ್ ಕೋರ್ಟ್ ನಿರ್ಮಿಸಲಾಗಿದೆ. ಪ್ರತಿಭಾವಂತ ಬ್ಯಾಸ್ಕೆಟ್‌ಬಾಲ್ ಆಟಗಾರರನ್ನು ಒಳಗೊಂಡಿರುವ ಕೋಲಾರಕ್ಕೆ ಇದರಿಂದ ಬಹಳ ಅನುಕೂಲವಾಗಿದೆ.
ಕ್ರೀಡಾ ಇಲಾಖೆಯಿಂದ ಪರಿಶೀಲನೆ
ಕೆಲ ಕ್ರೀಡೆಗಳಿಗೆ ಸಂಬಂಧಿಸಿದಂತೆ ಮೈದಾನದ ಕೊರತೆ ಇರುವುದು ನಿಜ. ಈಚೆಗೆ ರಾಜ್ಯ ಕ್ರೀಡಾ ಇಲಾಖೆಯಿಂದ ನಿಯೋಗ ಬಂದು ಜಾಗ ಹಾಗೂ ಸೌಕರ್ಯಗಳ ಪರಿಶೀಲನೆ ನಡೆಸಿದೆ. ಪ್ರಮುಖವಾಗಿ ಕಬಡ್ಡಿ, ವಾಲಿಬಾಲ್, ಕೊಕ್ಕೊ ಹಾಗೂ ಬ್ಯಾಸ್ಕೆಟ್‌ಬಾಲ್ ಸಂಬಂಧಿಸಿದಂತೆ ಹೆಚ್ಚು ಒತ್ತು ನೀಡಲು ಈ ಪರಿಶೀಲನೆ ನಡೆದಿದೆ. ಸಂಸದ ಎಂ.ಮಲ್ಲೇಶ್ ಬಾಬು ಕೂಡ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.
ಜಿಲ್ಲಾ ಕ್ರೀಡಾಂಗಣದಲ್ಲಿ ಫುಟ್‌ಬಾಲ್, ಅಥ್ಲೆಟಿಕ್ಸ್‌ಗೆ ಅವಕಾಶವಿದ್ದು, ಶುಲ್ಕ ಪಾವತಿಸಿ ಬಳಕೆ ಮಾಡಿಕೊಳ್ಳಬಹುದು. ಮಿನಿ ಕ್ರೀಡಾಂಗಣದಲ್ಲಿ ಬ್ಯಾಸ್ಕೆಟ್‌ಬಾಲ್, ಬ್ಯಾಡ್ಮಿಂಟನ್‌ಗೆ ವ್ಯವಸ್ಥೆ ಇದೆ. ಎರಡು ತಿಂಗಳಲ್ಲಿ ಈಜುಕೊಳದ ಕಾಮಗಾರಿ ಮುಗಿಯಲಿದೆ.
ಪ್ರಭಾರ ಸಹಾಯಕ ನಿರ್ದೇಶಕ,ಕ್ರೀಡಾ ಇಲಾಖೆ