ತುಳು ಭಾಷೆ: ವಿದೇಶಿ ವಿದ್ವಾಂಸರ ಸೆಳೆತ

ತುಳು ಭಾಷೆ: ವಿದೇಶಿ ವಿದ್ವಾಂಸರ ಸೆಳೆತ

ತುಳು ಭಾಷೆ: ವಿದೇಶಿ ವಿದ್ವಾಂಸರ ಸೆಳೆತ

ಬಾಸೆಲ್‌ ಮಿಷನ್‌ನಿಂದ ಆರಂಭವಾಗಿ ಆಧುನಿಕ ಕಾಲಘಟ್ಟದವರೆಗೆ ಹಲ ವಾರು ವಿದೇಶಿ ವಿದ್ವಾಂಸರನ್ನು ತುಳು ಜಾನಪದ, ಸಂಸ್ಕೃತಿ, ಪರಂಪರೆ ಸೂಜಿ ಗಲ್ಲಿನಂತೆ ಸೆಳೆದಿದೆ. ತುಳುನಾಡಿಗೆ ಬಂದು ತುಳು ಭಾಷೆಯನ್ನು ಕಲಿತು ಅಧ್ಯಯನ ನಡೆಸಿದವರು ಅದೆಷ್ಟೋ ಮಂದಿ ಇದ್ದಾರೆ.

ಬಾಸೆಲ್ ಮಿಷನ್‌ನಿಂದ ಬಂದಿದ್ದ ಜರ್ಮನ್ ಮಿಷನರಿಗಳು ತುಳು ಬಗ್ಗೆ ಕೆಲಸ ಮಾಡಿದ ವಿದೇಶಿಗರಲ್ಲಿ ಮೊದಲಿಗರು. ಹರ್ಮನ್ ಮೊಗ್ಲಿಂಗ್ ಅವರು ಕನ್ನಡದ ಹಾಗೆ ತುಳುವಿನಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ರೆವರೆಂಡ್ ಎ. ಮ್ಯಾನರ್ ಅವರ 21 ಪಾಡ್ದನಗಳ ಸಂಗ್ರಹ ‘ಪಾಡ್ದನೊಳು’ ಸಂಕಲನವನ್ನು ಮಂಗಳೂರಿನ ಬಾಸೆಲ್ ಮಿಷನ್ ಪ್ರೆಸ್ 1886ರಲ್ಲಿ ಪ್ರಕಟಿಸಿತ್ತು. ಅವರು ರಚಿಸಿದ 1886ರಲ್ಲಿ ತುಳು– ಇಂಗ್ಲಿಷ್ ಶಬ್ದಕೋಶ ಹಾಗೂ 1888ರಲ್ಲಿ ಇಂಗ್ಲಿಷ್– ತುಳು ಶಬ್ದಕೋಶಗಳು, ನಂತರದ ತುಳು ಶಬ್ದಕೋಶ ರಚನೆಗೆ ಬುನಾದಿ ಯಾದವು. ಜರ್ಮನಿಯಲ್ಲಿರುವ ಗ್ರಂಥಾಲಯವೊಂದರಲ್ಲಿ ತುಳು ಗಾದೆಗಳ ಸಂಗ್ರಹದ ಸಂಕಲನ ಇರುವುದನ್ನು ನಾನೇ ಕಣ್ಣಾರೆ ಕಂಡು ಸಂಭ್ರಮಿಸಿದ್ದೇನೆ. ಇವು 19ನೇ ಶತಮಾನದ ಹೆಜ್ಜೆ ಗುರುತುಗಳು.

20ನೇ ಶತಮಾನದಲ್ಲಿ ಅನೇಕ ವಿದೇಶಿ ವಿದ್ವಾಂಸರು ತುಳುಭೂಮಿಯಲ್ಲಿ ಕ್ಷೇತ್ರ ಅಧ್ಯಯನ ನಡೆಸಿ, ಕೃತಿಗಳನ್ನು ರಚಿಸುವ ಜೊತೆಗೆ, ತಮ್ಮ ಕರ್ಮಭೂಮಿಯಲ್ಲೂ ಅದನ್ನು ಪಸರಿಸಿದ್ದಾರೆ. ಅಮೆರಿಕದ ಮಾನವವಿಜ್ಞಾನ ವಿದ್ವಾಂಸ ಪ್ರೊ. ಪೀಟರ್ ಜೆ. ಕ್ಲಾಸ್ ಅವರು ತುಳು ಸಮುದಾಯಗಳ ಬಂಧುತ್ವದ ಸ್ವರೂಪದ ಸಂಶೋಧನೆ, ಸಿರಿ ತುಳು ಜನಪದ ಮಹಾಕಾವ್ಯದ ಸಂಗ್ರಹ ಮತ್ತು ಅಧ್ಯಯನ, ಕೋಡ್ದಬ್ಬು ದೈವ, ತುಳು ಜನಪದ ಸಂಸ್ಕೃತಿಯ ಚೆನ್ನೆಮಣೆ ಮತ್ತು ಆಚರಣೆಗಳ ಕುರಿತು ಅಧ್ಯಯನ ನಡೆಸಿ, ಪುಸ್ತಕ ಪ್ರಕಟಿಸಿದ್ದಾರೆ. ಇದೇ ರೀತಿಯ ಕೆಲಸ ಫ್ರಾನ್ಸ್‌ನ ಜಾನಪದ ವಿದ್ವಾಂಸ ಡೆನಿಸ್ ಗೊಂತಾರ್ಡ್ ಅವರಿಂದಲೂ ನಡೆದಿದೆ.

ಜರ್ಮನಿಯ ಇಂಡಾಲಜಿ ಪ್ರಾಧ್ಯಾಪಕಿ ಹೈಡ್ರೂನ್ ಬ್ರೂಕ್ನರ್, ತುಳು ಭಾಷೆ ಕಲಿತು, ದೈವಾರಾಧನೆ ಬಗ್ಗೆ ಸಂಶೋಧನೆ ನಡೆಸಿ, 24 ತುಳು ಪಾಡ್ದನಗಳನ್ನು ಜರ್ಮನ್ ಭಾಷೆಗೆ ಅನುವಾದಿಸಿ, ಅವುಗಳ ಮೇಲಿನ ಸಂಶೋಧನೆಯನ್ನು ಜರ್ಮನ್ ಭಾಷೆಯಲ್ಲಿ ಬರೆದು ಡಾಕ್ಟರೇಟ್ ಪಡೆದಿದ್ದಾರೆ.

ಫಿನ್‌ಲೆಂಡ್‌ನ ಪ್ರಾಧ್ಯಾಪಕ ಪ್ರೊ. ಲೌರಿ ಹಾಂಕೊ ಅವರು, ತುಳು ಕಲಾವಿದ ಮಾಚಾರು ಗೋಪಾಲ ನಾಯ್ಕರು ಹಾಡಿದ ಸುಮಾರು 16 ಸಾವಿರ ಸಾಲುಗಳ ಸಿರಿ ಜನಪದ ಮಹಾಕಾವ್ಯವನ್ನು ದಾಖಲಿಸಿ ಬರಹಕ್ಕೆ ಇಳಿಸಿ, ಇಂಗ್ಲಿಷ್‌ಗೆ ಅನುವಾದ ಮಾಡಿ ಎರಡು ಸಂಪುಟಗಳಲ್ಲಿ ಪ್ರಕಟಿಸುವ ಮೂಲಕ ತುಳು ಕಲಾವಿದನ ಸೃಜನಶೀಲತೆಯನ್ನು ಜಗತ್ತಿಗೆ ಸಾರಿದ್ದಾರೆ.

ಜಪಾನ್‌ನ ರಂಗಭೂಮಿ ತಜ್ಞ ಪ್ರೊ.ಸುಮಿಯೋ ಮೊರಿಜಿರಿ, ಯಕ್ಷಗಾನ ಮತ್ತು ದೈವಾರಾಧನೆ ಬಗ್ಗೆ, ತುಳು ಜಾನಪದ ರಂಗಭೂಮಿಯ ಬಗ್ಗೆ ಜಪಾನಿ ಭಾಷೆಯಲ್ಲಿ ಪುಸ್ತಕ ಪ್ರಕಟಿಸಿದ್ದಾರೆ. ಯುವ ಪೀಳಿಗೆಯ ಅನೇಕ ಸಂಶೋಧಕರು ತುಳು ಜಾನಪದದ ಬಗ್ಗೆ ಅಧ್ಯಯನ ನಡೆಸಿ, ಇಂಗ್ಲಿಷ್ ಮತ್ತು ತಮ್ಮ ಮಾತೃಭಾಷೆಗಳಲ್ಲಿ ಪುಸ್ತಕ, ಲೇಖನಗಳನ್ನು ಬರೆದಿದ್ದಾರೆ. ಜಪಾನಿನ ಸಂಶೋಧಕಿ ಮಿಹೋ ಇಶಿ, ದೈವಾರಾಧನೆಯ ಸ್ಥಿತಿಗತಿ ಅಧ್ಯಯನ ಮಾಡಿ, ಇಂಗ್ಲಿಷ್ ಮತ್ತು ಜಪಾನಿ ಭಾಷೆಯಲ್ಲಿ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ. ಜರ್ಮನಿಯ ಸಂಶೋಧಕಿ ಪೌಲಿನೆ ಪಿಎಚ್‌ಡಿ ಪ್ರಬಂಧ ಮಂಡಿಸಿದ್ದಾರೆ.

ಇಂತಹ ಶ್ರೀಮಂತ ತುಳು ಭಾಷೆಗೆ ರಾಜ್ಯದ ಎರಡನೇ ಭಾಷೆಯ ಮಾನ್ಯತೆ ನೀಡಿದರೆ, ಈ ಭಾಷೆಯಲ್ಲಿ ವ್ಯವಹಾರ ನಡೆಸುವ ಮೂಲಕ ಆಡಳಿತ ಜನರಿಗೆ ಹೆಚ್ಚು ಹತ್ತಿರವಾಗುತ್ತದೆ. ತುಳು ಹಲವು ಸಮುದಾಯಗಳ ಮಾತೃಭಾಷೆ ಅಷ್ಟೇ ಅಲ್ಲ, ಇದು ಜನರ ಭಾಷೆ. ಕನ್ನಡದ ಜೊತೆಗೆ ಕರ್ನಾಟಕದ ಇನ್ನೊಂದು ಭಾಷೆ ತುಳು ಆಗಲಿ.

(ಲೇಖಕರು ನಿವೃತ್ತ ಕುಲಪತಿ, ವಿದ್ವಾಂಸ)

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260904-29-1924527697

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ