
ಕೂಡಲಸಂಗಮ| ಸಂತ್ರಸ್ತರ ಶೆಡ್ಡಿಗೆ ಬೆಂಕಿ; ಮಗಳ ಮದುವೆಗೆಂದು ಸಾಲ ಮಾಡಿ ತಂದ ಹಣ ನಾಶ
ಕೂಡಲಸಂಗಮ: ‘ಮಗಳ ಮದುವೆಗೆ ಎಂದು ಸಾಲ ಮಾಡಿ ತಂದ ₹ 3 ಲಕ್ಷ ಹಣ, 20 ಗ್ರಾಂ ಬಂಗಾರ, 20 ಸೀರೆ, 50 ಗ್ರಾಂ ಬೆಳ್ಳಿ ಕಾಲು ಚೈನ್ ಕಣ್ಣೆದುರಿನಲ್ಲಿಯೇ ಸುಟ್ಟು ಹೋದವು. ಮಗಳ ಮದುವೆ ಹೇಗೆ ಮಾಡಲಿ’ ಎಂದು ಕಣ್ಣಿರು ಇಟ್ಟರು ಹಣಮಂತ ಚಲವಾದಿ.
‘ಕಣ್ಣೆದುರೇ ದವಸ –ಧಾನ್ಯ, ಬಟ್ಟೆ, ಪಾತ್ರೆ ಎಲ್ಲವೂ ಸುಟ್ಟು ಹೊದವು. ಬೀದಿಯಲ್ಲಿ ನಿಂತಿದ್ದೇವೆ’ ಎಂದು ಸಂತ್ರಸ್ತರಯ ನೋವು ವ್ಯಕ್ತ ಪಡಿಸಿದರು.
ಭಾನುವಾರ ರಾತ್ರಿ ಇದ್ದಲಗಿ ಗ್ರಾಮದ ಸಂತ್ರಸ್ತರು ಶರಣಬಸವೇಶ್ವರ ಪುರಾಣ, ರಾಶಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇತ್ತ ಸಂತ್ರಸ್ತರ ಶೆಡ್ಡಿನಲ್ಲಿ ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದ ಬೆಂಕಿ ಹೊತ್ತಿಕೊಂಡು 28 ಶೆಡ್‌ಗಳು ಸುಟ್ಟು ಕರಕಲಾಗಿವೆ. ಒಂದು ಎಮ್ಮೆ, ಕರು ಸಜೀವ ದಹನಗೊಂಡ ದೃಶ್ಯ ಮನಕಲಕುವಂತಿದೆ.
ಶೆಡ್ಡಿನಲ್ಲಿ ಇದ್ದ ಎರಡು ಸಿಲಿಂಡರ್‌ಗಳು ಸ್ಫೋಟಗೊಂಡು ಬೆಂಕಿಯ ತೀವ್ರತೆ ಹೆಚ್ಚಾಯಿತು. ಗ್ರಾಮದ ಯುವಕರು ಬೆಂಕಿಯನ್ನು ಲೆಕ್ಕಿಸದೇ ಶೆಡ್ಡಿನಲ್ಲಿ ಇದ್ದ 12 ಎತ್ತುಗಳನ್ನು ಹೊರ ತೆಗೆದುಕೊಂಡು ಬಂದರು. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿ ಶೆಡ್ಡಿನಲ್ಲಿ ಇದ್ದ ಸಿಲಿಂಡರ್‌ಗಳನ್ನು ತೆಗೆದು ಅಪಾಯ ತಡೆದರು.
‘54 ವರ್ಷಗಳಿಂದ ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಶರಣ ಬಸವೇಶ್ವರ ಪುರಾಣ ಕಾರ್ಯಕ್ರಮ ಹಮ್ಮಿಕೊಂಡು ಬರಲಾಗಿದ್ದು, ಗ್ರಾಮದ ಎಲ್ಲರೂ ಪಾಲ್ಗೊಳ್ಳುತ್ತಾರೆ. ಭಾನುವಾರ ರಾತ್ರಿ ರಾಶಿ ಕಾರ್ಯಕ್ರಮ ನಡೆಯಿತು. ಮಕ್ಕಳು, ವಯೋವೃದ್ಧರು, ಯುವಕರು ಭಾಗವಹಿಸಿದ್ದರು. ಯಾರು ಶೆಡ್ಡಿನಲ್ಲಿ ಇರಲಿಲ್ಲ. ಬೆಂಕಿ ಹೊತ್ತಿ ಉರಿಯಲು ಆರಂಭಿಸಿದಾಗ ಎಲ್ಲರಿಗೂ ಗೊತ್ತಾಯಿತು. ಬಂದು ನೋಡುವ ಹೊತ್ತಿಗೆ ಎಲ್ಲವೂ ಸುಟ್ಟು ಹೊಗಿದ್ದವು’ ಎಂದು ಅಬೀಸಾಬ ನಿಡಗುಂದಿ ಹೇಳಿದರು.
‘ನನ್ನ ಎಲ್ಲ ಪುಸ್ತಕ ಸುಟ್ಟು ಹೋದವು’ ಎಂದು ಮಕ್ಕಳು ಕಣ್ಣಿರು ಹಾಕಿದರೆ, ಕೃಷಿಗೆ ಬಳಸುವ ಯಂತ್ರೋಪಕರಣ, ದವಸ ಧಾನ್ಯ, ಬಟ್ಟೆಗಳು ಎಲ್ಲವೂ ಸುಟ್ಟಿವೆ. ಬೀದಿಯಲ್ಲಿ ಮಲಗುವ ಸ್ಥಿತಿ ನಮಗೆ ಬಂದಿದೆ. ಮಕ್ಕಳು, ವಯೋವೃದ್ಧರು ದೇವಾಲಯಗಳಲ್ಲಿ ಮಲಗಿದ್ದಾರೆ’ ಎಂದು ಸಂತ್ರಸ್ತರು ಹೇಳಿದರು.
‘ಸೆ. 13ರಂದು ಶರಣಬಸವೇಶ್ವರ ಪುರಾಣ ಮುಕ್ತಾಯ ಸಮಾರಂಭ ಇದ್ದು 12 ಸಾಮೂಹಿಕ ವಿವಾಹ ಹಮ್ಮಿಕೊಳ್ಳಲಾಗಿದೆ. ಮಕ್ಕಳ ಮದುವೆ ಮಾಡಿಸಲು ಎಲ್ಲ ಸಿದ್ಧತೆ ಮಾಡಿಕೊಂಡಿದ್ದೆವು. ಬಟ್ಟೆ, ಆಭರಣ ತಂದಿದ್ದೆವು. ಬಂಧುಗಳು ಬರಲಿದ್ದಾರೆ ಎಂದು ಹೆಚ್ಚಿನ ಪ್ರಮಾಣದ ಕಿರಾಣಿ ಸಾಮಗ್ರಿ ತಂದಿದ್ದೆವು. ಎಲ್ಲವೂ ಸುಟ್ಟು ಹೋದವು’ ಎಂದು ಕಮಲಮ್ಮ ಅಳಲು ತೋಡಿಕೊಂಡರು.
‘18 ವರ್ಷಗಳಿಂದ ತಗಡಿನ ಶೆಡ್ಡಿನಲ್ಲಿ ನರಕ ಯಾತನೆಯಲ್ಲೇ ಜೀವನ ಸವೆಸುತ್ತಿದ್ದೇವೆ. ಮೂಲ ಸೌಲಭ್ಯ ಇಲ್ಲ. ಶೆಡ್ಡಿನ ದುರಸ್ತಿ ಕಾರ್ಯವನ್ನು ಯಾವ ಅಧಿಕಾರಿಯೂ ಮಾಡಿಸಿಲ್ಲ. ಅಧಿಕಾರಿ, ಜನಪ್ರತಿನಿಧಿಗಳು ಬರುತ್ತಾರೆ. ಭರವಸೆ ನೀಡುತ್ತಾರೆ. ಹೋಗುತ್ತಾರೆ. ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಬೇಸಿಗೆಯಲ್ಲಿ ಬಿಸಿಲಿನಿಂದ, ಮಳೆಗಾಲದಲ್ಲಿ ಮಳೆಯಿಂದ ಜೀವನವೇ ತತ್ತರಿಸಿ ಹೊಗಿದೆ. ಶೆಡ್ಡಿನಲ್ಲಿ ಇರುವುದರಿಂದ ಮಕ್ಕಳ ಮದುವೆ ಮಾಡುವುದೇ ಹರಸಾಹಸವಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ’ ಎಂದು ಸಂತ್ರಸ್ತ ಈರಪ್ಪ ಲೋಕಾಪುರ ಹೇಳಿದರು.
117 ದಿನಗಳಿಂದ ನಿರಂತರ ಧರಣಿ
ಪ್ರವಾಹಕ್ಕೆ ಸಿಲುಕಿ ಮನೆ ಕಳೆದುಕೊಂಡ ಇದ್ದಲಗಿ ಗ್ರಾಮದ ಸಂತ್ರಸ್ತರು ನಿವೇಶನ ಹಾಗೂ ಇತರ ಬೇಡಿಕೆ ಈಡೇರಿಕೆಗಾಗಿ ಕಳೆದ 117 ದಿನಗಳಿಂದ ನಿರಂತರವಾಗಿ ಧರಣಿ ಮಾಡುತ್ತಿದ್ದಾರೆ. ಬೇಡಿಕೆಗೆ ಸರ್ಕಾರ ಸಮರ್ಪಕವಾಗಿ ಸ್ಪಂದಿಸಿಲ್ಲ ಎಂದು ದೂರಿದ್ದಾರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260901-19-424966554