ತೇರದಾಳ| ಪಲ್ಲಕ್ಕಿಗಳಿಗೆ ದರ್ಗಾವೇ ವಿಶ್ರಾಂತಿಯ ತಾಣ: ಭಾವೈಕ್ಯದ ಪ್ರತೀಕ

ತೇರದಾಳ| ಪಲ್ಲಕ್ಕಿಗಳಿಗೆ ದರ್ಗಾವೇ ವಿಶ್ರಾಂತಿಯ ತಾಣ: ಭಾವೈಕ್ಯದ ಪ್ರತೀಕ

ತೇರದಾಳ| ಪಲ್ಲಕ್ಕಿಗಳಿಗೆ ದರ್ಗಾವೇ ವಿಶ್ರಾಂತಿಯ ತಾಣ: ಭಾವೈಕ್ಯದ ಪ್ರತೀಕ

ತೇರದಾಳ: ಹಿಂದೂ ದೇವತೆಗಳ ಹತ್ತು ಪಲ್ಲಕ್ಕಿಗಳು ತೇರದಾಳದ ದರ್ಗಾವೊಂದರಲ್ಲಿ ಕೆಲ ಕಾಲ ವಿರಮಿಸಿ ಮುಂದೆ ಸಾಗುವ ಭಾವೈಕ್ಯದ ಪರಿಪಾಠ ಶತಮಾನಗಳಿಂದ ಮುಂದುವರಿದಿದೆ.

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಇಟ್ನಾಳ ಗ್ರಾಮದ ಹತ್ತು ಪಲ್ಲಕ್ಕಿಗಳು ಶ್ರಾವಣ ಮಾಸದ ಮೂರನೇ ಸೋಮವಾರ ಕೃಷ್ಣಾ ನದಿಗೆಂದು ತೆರಳುವುದು ವಾಡಿಕೆ. ನದಿ ತೀರದ ತಮದಡ್ಡಿಗೆ ತೆರಳುವಾಗ ದೂರದಿಂದ ನಡೆದು ಬರುವ ಭಕ್ತರಿಗೆ ಸಸಾಲಟ್ಟಿ ರಸ್ತೆ ಬಳಿಯೇ ಅದ್ದೂರಿ ಸ್ವಾಗತ ನೀಡಲಾಗುತ್ತದೆ. ಉಪಾಹಾರ ಎಲ್ಲವೂ ಮುಗಿದ ಬಳಿಕ ಪಲ್ಲಕ್ಕಿ ಸಮೇತ ಇಲ್ಲಿನ ಬಸ್ ನಿಲ್ದಾಣದ ಬಳಿಯ ದರ್ಗಾದಲ್ಲಿ ಕೆಲ ಹೊತ್ತು ಆಶ್ರಯ ಪಡೆಯುತ್ತಾರೆ.

ಅಲ್ಲಿ ತಮ್ಮೂರಿನಿಂದ ತಂದ ಗೊಂಜಾಳ ರೊಟ್ಟಿ, ಪುಂಡಿಪಲ್ಯ ನ್ಯಾರೆ (ಉಪಾಹಾರ) ಮಾಡಿ, ನದಿ ದಡದಲ್ಲಿ ನೈವೇದ್ಯ ತಯಾರಿಸಲು ಪಟ್ಟಣದಲ್ಲಿ ಸಂತೆ ಮಾಡಿ ಮುಂದುವರಿಯುತ್ತಾರೆ. ಈ ದಿನಕ್ಕಾಗಿ ದರ್ಗಾವನ್ನು ಕೆಲವು ಮುಸ್ಲಿಂ ಯುವಕರು ಸ್ವಚ್ಛ ಮಾಡಿರುತ್ತಾರೆ.

ಅಲ್ಲಿ ನದಿಯಲ್ಲಿ ಭಕ್ತರು ಮಿಂದೆದ್ದು, ನೈವೇದ್ಯ ತಯಾರಿಸಿ, ಪಲ್ಲಕ್ಕಿಗಳಿಗೆ ಅರ್ಪಿಸಿ, ತಾವೂ ಸೇವಿಸಿ ಮರಳಿ ತೇರದಾಳಕ್ಕೆ ಬರುತ್ತಾರೆ. ಅವರು ಬಂದ ಸಂಭ್ರಮಕ್ಕೆ ಸ್ಥಳೀಯರು ಅವರು ಉಳಿದುಕೊಂಡಿರುವ ಕಲ್ಲಟ್ಟಿಯ ಹನುಮಾನ್‌ ದೇವಸ್ಥಾನದ ಮುಂದೆ ರಾತ್ರಿಯಿಡಿ ಡೊಳ್ಳಿನ ಗಾಯನ ಏರ್ಪಡಿಸುತ್ತಾರೆ. ರಾತ್ರಿ ಅವರಿಗೆಲ್ಲ ಊಟದ ವ್ಯವಸ್ಥೆ ಇಟ್ನಾಳ ಮನೆತನದವರು ಮಾಡುತ್ತಾರೆ. ಬೆಳಿಗ್ಗೆ ಉಪಾಹಾರ ಮುಗಿಸಿ, ಸಸಾಲಟ್ಟಿ, ಮುಗಳಖೋಡ ಮಾರ್ಗವಾಗಿ ತಮ್ಮ ಊರಿನತ್ತ ತೆರಳುತ್ತಾರೆ.

ಈ ಯಾತ್ರೆಯಲ್ಲಿ ಏಳೆಂಟು ಟ್ರ್ಯಾಕ್ಟರ್, ನೂರಾರು ಬೈಕ್‌ಗಳ ಮೂಲಕ 200 ಜನ, ಕಾಲ್ನಡಿಗೆಯಿಂದ 600 ಜನ ಭಕ್ತರು ಆಗಮಿಸುತ್ತಾರೆ.

‘ಹಿರಿಹೊಳಿ(ಕೃಷ್ಣಾ ನದಿ) ಜಳಕಾ ಮಾಡಾಕ ನಾ ಪಲ್ಲಕ್ಕಿ ಜೋಡಿ ಬರಾಕ ಚಾಲು ಮಾಡಿ 30 ವರ್ಸ ಆತ್ರಿ, ನಮ್ಮ ಅಪ್ಪ, ಅಜ್ಜನ ಕಾಲದಿಂದ ಇದು ಚಾಲು ಅದ, ಭಕ್ತರ ನಂಬಿಕಿ ಹಂಗ ಹೆಚ್ಚಾಗೆದ. ಒಂದ್ ನೂರ ವರ್ಸ ಆಗಿರಬಹುದ್ರಿ’ ಎನ್ನುತ್ತಾರೆ ಅಶೋಕ ಪೂಜೇರಿ.

ಈ ವರ್ಷದ ಯಾತ್ರೆಯಲ್ಲಿ ದುರ್ಗಾದೇವಿ, ಲಕ್ಷ್ಮೀದೇವಿ, ಕಾಶಿಲಿಂಗ, ಯಲ್ಲಮ್ಮ, ಹನುಮಾನ, ಅಮೋಘಸಿದ್ದ, ಬೀರದೇವರ, ಮಾಸೂಮ್ಮಾಯಿ, ಹಳೆಲಕ್ಷ್ಮೀ ದೇವಿ, ಸೂರಮುತ್ಯಾ ಹೀಗೆ ಹತ್ತು ಪಲ್ಲಕ್ಕಿಗಳ ಜೊತೆ ಮರಗೊಂಡ ಪೂಜೇರಿ, ಹನಮಂತ ಪೂಜೇರಿ, ಮಾಯಪ್ಪ ಪೂಜೇರಿ, ಫೋಜಾರ ಪೂಜೇರಿ, ಸದಾಶಿವ ಪೂಜೇರಿ, ಲಕ್ಕಪ್ಪ ಪೂಜೇರಿ, ಲಕ್ಷ್ಮವ್ವ ಪೂಜೇರಿ ಸೇರಿದಂತೆ ಸಾವಿರದಷ್ಟು ಭಕ್ತರು ಆಗಮಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260901-19-1494821358

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ