ನಾವು ಎಲ್ಲೆಂದರಲ್ಲಿ ‘ಬಿಟ್ಟು’ ಬಂದದ್ದನ್ನು ತೆಗೆಯಲು ‘ಬಿಟ್ಟು’ ಬರೋದಿಲ್ಲ..!

ನಾವು ಎಲ್ಲೆಂದರಲ್ಲಿ ‘ಬಿಟ್ಟು’ ಬಂದದ್ದನ್ನು ತೆಗೆಯಲು ‘ಬಿಟ್ಟು’ ಬರೋದಿಲ್ಲ..!

ನಾವು ಎಲ್ಲೆಂದರಲ್ಲಿ ‘ಬಿಟ್ಟು’ ಬಂದದ್ದನ್ನು ತೆಗೆಯಲು ‘ಬಿಟ್ಟು’ ಬರೋದಿಲ್ಲ..!

ಒಂದು ನದಿಯನ್ನು ಸ್ವಚ್ಛಗೊಳಿಸುವುದೆಂದರೆ ಏನು? ಒಂದು ದಿನ ಅಭಿಯಾನ ನಡೆಸುವುದು, ಒಂದಷ್ಟು ಕಸವನ್ನು ಚೀಲಕ್ಕೆ ತುಂಬುವುದು, ಫೋಟೊ ತೆಗೆಸಿಕೊಳ್ಳುವುದು, ಸಾಮಾಜಿಕ ಜಾಲತಾಣದಲ್ಲಿ ಹಾಕುವುದು… ಮತ್ತೆ ಎಲ್ಲರೂ ತಮ್ಮ ತಮ್ಮ ಕೆಲಸಕ್ಕೆ ಮರಳುವುದು?

ನಾವಾಗಿದ್ದರೆ ಬಹುಶಃ ಇಷ್ಟು ಮಾಡಿ ಕೈತೊಳೆದುಕೊಂಡು ಬಿಡುತ್ತಿದ್ದೆವೇನೋ. ಹೆಚ್ಚೆಂದರೆ ಒಂದು ವರ್ಷದ ಬಳಿಕ ಫೇಸ್‌ಬುಕ್‌, ಇನ್‌ಸ್ಟಾಗಳಲ್ಲಿ ಅವೇ ಫೋಟೋಗಳನ್ನು ರೀ–ಶೇರ್‌ ಮಾಡಿ, ಇನ್ನಷ್ಟು ಲೈಕ್ಸ್‌–ಕಾಮೆಂಟ್ಸ್‌ಗಳಿಗಾಗಿ ಕಾತರಿಸುತ್ತ ಕುಳಿತಿರುತ್ತೇವೆ.

ಆದರೆ, ಮಧ್ಯಪ್ರದೇಶದ 21 ವರ್ಷದ ಬಿಎಸ್‌ಸಿ ವಿದ್ಯಾರ್ಥಿ ಸುರೇಂದ್ರ ಸಿಂಗ್ ಚೌಧರಿಯ ಪಾಲಿಗೆ (ಸಾಮಾಜಿಕ ಜಾಲತಾಣದಲ್ಲಿ ‘ಬಿಟ್ಟು ತಬಾಹಿ’ ಎಂದೇ ಪರಿಚಿತ) ಸ್ವಚ್ಛತೆ ಎಂದರೆ ಇದಲ್ಲ. ಕಸ ಕಂಡಾಗ ಮೂಗು ಮುಚ್ಚಿಕೊಂಡು ಮುಂದೆ ಹೋಗುವುದೂ ಅಲ್ಲ. ‘ಇದು ಸರ್ಕಾರದ ಕೆಲಸ’ ಎಂದು ಕೈಚೆಲ್ಲಿ ಕುಳಿತುಕೊಳ್ಳುವುದೂ ಅಲ್ಲ. ಅಸಲಿಗೆ ಸೋಶಿಯಲ್‌ ಮೀಡಿಯಾಗಳಿಗಾಗಿ ಆತ ಇಂಥದ್ದೊಂದು ಸ್ವಚ್ಛತೆಯ ಮಹಾಯಜ್ಞವನ್ನು ಕೈಗೊಳ್ಳಲೂ ಇಲ್ಲ.

‘ನಾನು ಮಾಡಬಹುದಾದ ಕೆಲಸವನ್ನು ನಾನೇ ಏಕೆ ಮಾಡಬಾರದು?’ ಈ ಒಂದೇ ಪ್ರಶ್ನೆಯನ್ನು ಆತ ತನ್ನೊಳಗೆ ತಾನು ಕೇಳಿಕೊಂಡ ಆ ನದಿಯ ಹರಿವಿನ ಎದುರು. ಅದಕ್ಕೆ ಉತ್ತರವನ್ನೂ ಆತನೇ ಕಂಡುಕೊಂಡ. ಅಷ್ಟೇ ನದಿಗೆ ಇಳಿದ. ಬರಿಗೈಯಲ್ಲಿ ಪ್ಲಾಸ್ಟಿಕ್, ಬಾಟಲಿ, ಕಳೆ, ಕೊಳೆ, ತ್ಯಾಜ್ಯಗಳನ್ನು ಹೊರತೆಗೆಯಲಾರಂಭಿಸಿದ. ಒಂದು ದಿನವಲ್ಲ, ಒಂದು ವಾರವೂ ಅಲ್ಲ—ತಿಂಗಳುಗಟ್ಟಲೆ ಅದೇ ಆ ಯುವಕನ ದಿನಚರಿಯಾಯಿತು.

ಕೊಟ್ಟ ಕೊನೆಗೆ 2026ರ ಜನವರಿ 26ರಂದು ಆರಂಭವಾದ ಈ ಪ್ರಯತ್ನ ಏಳು ತಿಂಗಳ ನಿರಂತರ ಪರಿಶ್ರಮದ ಕಥೆಯಾಯಿತು. ಬಿಯೋರಾದ ಅಜ್ನಾರ್ ನದಿಯೊಂದರ ಭಾಗ, ವರ್ಷಗಳ ನಿರ್ಲಕ್ಷ್ಯದಿಂದ ತ್ಯಾಜ್ಯದ ತಾಣದಂತಾಗಿದ್ದ ಜಾಗ, ನಿಧಾನವಾಗಿ ಬದಲಾಗತೊಡಗಿತು. ಅದೊಂದು ದಿನ ತಾನೇನು ಮಾಡಿದ್ದೇನೆಂಬುದನ್ನು ಸುಮ್ಮನೇ ಜನರಿಗೆ ತೋರಿಸೋಣವೆಂದುಕೊಂಡು ಸಾಮಾಜಿಕ ಜಾಲತಾಣವನ್ನು ಓಪನ್‌ ಮಾಡಿದ್ದ. ಆತನ ಕೆಲಸದ ‘ಮೊದಲು’ ಮತ್ತು ‘ನಂತರ’ದ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿಬಿಟ್ಟವು. ಸಾವಿರಾರು ಶೇರ್‌ಗಳು, ಲಕ್ಷಾಂತರ ಲೈಕ್ಸ್‌. ಅಷ್ಟೇ ಇಡೀ ದೇಶಕ್ಕೆ ದೇಶವೇ ಈ ಯುವಕನತ್ತ ತಿರುಗಿ ನೋಡಿತು. ಕೇವಲ ಭಾರತವಲ್ಲ, ದೇಶ–ವಿದೇಶಗಳವರೂ ಈತನ ಚಿತ್ರಗಳನ್ನು ಹಂಚಿಕೊಂಡರು.

ಆದರೆ ಬಿಟ್ಟು ತಬಾಹಿಯ ಕಥೆಯ ಕುತೂಹಲಕಾರಿ ಭಾಗ ಅಲ್ಲಿಗೆ ಮುಗಿಯುವುದಿಲ್ಲ. ತನ್ನೂರಿಂದ ಮೊದಲ ಬಾರಿಗೆ ಕಾಲ್ತೆಗೆದು, ಮೊನ್ನೆ ಮೊನ್ನೆ ನಾವೆಲ್ಲ ಗೌರಿ–ಗಣೇಶ ಹಬ್ಬದ ಸಿದ್ಧತೆಯ ಸಂಭ್ರಮದಲ್ಲಿದ್ದಾಗಲೇ ನಮ್ಮ ಬೆಂಗಳೂರಿನ ತುರಹಳ್ಳಿ ಕಾಡಿಗೆ ಬಂದಿಳಿದುಬಿಟ್ಟ. ಆತ ಹಾಗೆ ಬೆಂಗಳೂರಿಗೆ ಬಂದಿಳಿದಾಗ ಹುಟ್ಟಿದ್ದು ಇನ್ನೊಂದು ಪ್ರಶ್ನೆ – ಅಜ್ನಾರ್ ನದಿಯನ್ನು ಒಬ್ಬನೇ ಸ್ವಚ್ಛಗೊಳಿಸಿದ ಈ ಹುಡುಗನಿಗೆ, ಬೆಂಗಳೂರಿನ ತುರಹಳ್ಳಿ ಕಾಡು ಏನು ತೋರಿಸಿತು?

ಅಷ್ಟಕ್ಕೂ ‘ಬಿಟ್ಟು ತಬಾಹಿ’ ಯಾರು?

ಸುರೇಂದ್ರ ಸಿಂಗ್ ಚೌಧರಿ. ಮಧ್ಯಪ್ರದೇಶದ ರಾಜಗಢ ಜಿಲ್ಲೆಯ ಬಿಯೋರಾ ನಿವಾಸಿ. ಬಿಎಸ್‌ಸಿ ಓದುತ್ತಿರುವ ವಿದ್ಯಾರ್ಥಿ. ವಯಸ್ಸು 21. ಆನ್‌ಲೈನ್‌ನಲ್ಲಿ ಬಿಟ್ಟು ತಬಾಹಿ (Bittu Tabahi) ಎಂಬ ಹೆಸರಿನಿಂದಲೇ ಈಗ ಸುವಿಖ್ಯಾತ. ಹಾಗೆಂದು ಈ ಹೆಸರಿಗೆ ಈತ ಅನ್ವರ್ಥಕ ಎಂದುಕೊಳ್ಳಬೇಡಿ. ಏಕೆಂದರೆ, ‘ತಬಾಹಿ’ ಎಂದರೆ ಹಿಂದಿಯಲ್ಲಿ ‘ನಾಶ’ ಎಂಬ ಅರ್ಥವಿದೆ. ಆದರೆ ಆತ ಮಾಡುತ್ತಿರುವ ಕೆಲಸ ಅದಕ್ಕೆ ತದ್ವಿರುದ್ಧ—ನಾಶವಾಗುತ್ತಿರುವ ಪರಿಸರವನ್ನು ಉಳಿಸುವುದಕ್ಕೆ ಮುಂದಾಗಿದ್ದಾನೆ.

ಇಲಿ–ಜಿರಳೆ ನಿಯಂತ್ರಣಕ್ಕೂ ಸಚಿವಾಲಯ!

‘ಹೌದು, ಇದಕ್ಕೆಲ್ಲ ಪ್ರೇರಣೆಯೇನು?’ ಮೊನ್ನೆ ಬೆಂಗಳೂರಿಗೆ ಬಂದಿದ್ದಾಗ ಆತನನ್ನೇ ಪ್ರಶ್ನಿಸಿದರೆ, ಆ ತರುಣ ನೀಡಿದ ಉತ್ತರ ಬೇರೆಯದೇ ಮಜಲನ್ನು ತೆರೆದಿಟ್ಟಿತು. ನೀವೂ ಹೀಗೆಯೇ ವೃಷಭಾವತಿಯನ್ನು, ತುರಹಳ್ಳಿ ಕಾಡನ್ನು ಗಬ್ಬೆಬ್ಬಿಸಿಕೊಂಡೇ (ಹಾಗೇ ಇರುತ್ತೀರಿ ಬಿಡಿ) ಇದ್ದು ನೋಡಿ, ಇನ್ನು ಹತ್ತಾರು ವರ್ಷಗಳಲ್ಲಿ ಮಾಲಿನ್ಯದ ಮಾತು ಹಾಗಿರಲಿ, ನಿಮ್ಮ ರಾಜ್ಯ ಸಚಿವ ಸಂಪುಟದಲ್ಲಿ ಇಲಿ–ಜಿರಳೆ ಇತ್ಯಾದಿಗಳ ನಿಯಂತ್ರಣಕ್ಕೆಂದೇ ಪ್ರತ್ಯೇಕ ಖಾತೆ ಅದಕ್ಕೊಬ್ಬ ಮಂತ್ರಿ, ಅದಕ್ಕೊಂದು ಸಚಿವಾಲಯ, ಒಂದಷ್ಟು ಅಧಿಕಾರಿಗಳ ಪಡೆ ಸೃಷ್ಟಿ ಮಾಡಲೇಬೇಕಾಗುತ್ತದೆ. ಅದಕ್ಕೆ ವರ್ಷಕ್ಕೆ ಒಂದಷ್ಟು ಕೋಟಿ ಬಜೆಟ್‌ ಮೀಸಲಿಡಬೇಕಾಗುತ್ತದೆ. ಪರಿಸರ ಸಂಪನ್ಮೂಲಗಳ ದುಃಸ್ಥಿತಿ ಎಂಬುದು ಕೇವಲ ಮಾಲಿನ್ಯಕ್ಕೆ ಸೀಮಿತವಲ್ಲ. ಅಥವಾ ಜಲಮೂಲಗಳ ವಿನಾಶದಷ್ಟೇ ಪ್ರಶ್ನೆಯನ್ನು ಹುಟ್ಟು ಹಾಕುವುದಿಲ್ಲ. ನಗರ ನಾಗರಿಕತೆ ಉಂಟು ಮಾಡುವ ಇಂಥ ಅಪಸವ್ಯಗಳು ಮಾನವ ಜನಾಂಗ ಊಹಿಸಲೂ ಅಸಾಧ್ಯವಾದ ಸಮಸ್ಯೆಗಳನ್ನು ಸೃಷ್ಟಿಸುತ್ತವೆ. ಪಾಶ್ಚಾತ್ಯ ದೇಶಗಳ ಬೃಹತ್‌ ನಗರಗಳಲ್ಲೀಗ ಇಲಿ ನಿಯಂತ್ರವೇ ಬಹುದೊಡ್ಡ ಬಜೆಟ್‌ನ ಬಾಪತ್ತು. ಇದಕ್ಕೆ ಕಾರಣ ಸರಳ; ನಾವು ಹೀಗೆ ಎಲ್ಲೆಂದರಲ್ಲಿ ಸುರಿಯುವ ತ್ಯಾಜ್ಯ.

ಪರಿಸರಾಸಕ್ತನಾಗಿಯಷ್ಟೇ ಅಲ್ಲ, ಪಕ್ಕಾ ನಗರ ನಿರ್ಮಾಣ ಎಂಜಿನಿಯರ್‌ ಒಬ್ಬನಂತೆ ಮಾತನಾಡಿದ್ದ ತಬಾಹಿ.

ಅಜ್ನಾರ್ ನದಿಯ ಸ್ಥಿತಿ ಬಹಳ ಕಾಲದಿಂದ ಈ ತರುಣನನ್ನು ಕಾಡುತ್ತಿತ್ತಂತೆ. ದೇವಸ್ಥಾನಕ್ಕೆ ಹೋಗುವಾಗಲೋ, ನದಿಯ ಪಕ್ಕದಿಂದ ಸಾಗುವಾಗಲೋ ಕಸದಿಂದ ತುಂಬಿದ ನೀರಿನ ದೃಶ್ಯ ಕಣ್ಣಿಗೆ ರಾಚುತ್ತಿತ್ತು. ‘ಇದನ್ನು ತಿಳಿಗೊಳಿಸಬೇಕು’ ಎಂಬ ಆಲೋಚನೆ ಅದನ್ನು ನೋಡಿದಾಗೆಲ್ಲ ಬರುತ್ತಲೇ ಇತ್ತು ಎಂದವನು ನೆನಪಿಸಿಕೊಂಡ. ‘ಕೊನೆಗೆ 2026ರ ಗಣರಾಜ್ಯೋತ್ಸವದಂದು ಹೀಗೆ ಯೋಚಿಸುತ್ತಾ ಹೋಗುವುದನ್ನು ನಿಲ್ಲಿಸಿ, ಕೆಲಸ ಆರಂಭಿಸಿಯೇಬಿಟ್ಟೆ’ ಎಂದ.

‘ಮೊದಲಿಗೆ ಕೆಲ ಸ್ನೇಹಿತರೂ ನನ್ನೊಂದಿಗೆ ಸೇರಿಕೊಂಡಿದ್ದರು. ಆದರೆ ನದಿಯೊಳಗಿನ ಕೊಳೆ, ದುರ್ವಾಸನೆ ಮತ್ತು ತ್ಯಾಜ್ಯದ ಪ್ರಮಾಣ ಕಂಡು ನಿರಂತರವಾಗಿ ಅವರಿಗೆ ನನ್ನೊಂದಿಗೆ ಕೆಲಸಕ್ಕೆ ತೊಡಗುವುದು ಸುಲಭವಾಗಿರಲಿಲ್ಲ. ಒಬ್ಬೊಬ್ಬರೇ ಕಳಚಿಕೊಂಡರು. ವಾರ ಕಳೆಯುವಷ್ಟರಲ್ಲಿ ಬಹುತೇಕ ಎಲ್ಲರೂ ಒಂದಲ್ಲ ಒಂದು ನೆಪ ಹೇಳಿ ಬರುವುದನ್ನು ನಿಲ್ಲಿಸಿದರು. ಅಂತಿಮವಾಗಿ ಏಕಾಂಗಿಯಾಗಿ ನಾನೊಬ್ಬನೇ ಕೆಲಸ ಮುಂದುವರಿಸಿದೆ’ ಈ ಮಾತು ಹೇಳುವಾಗ ಆತ ಯಾರನ್ನೂ ಆಕ್ಷೇಪಿಸಿದ್ದಾಗಲೀ, ಬೇಸರಿಸಿಕೊಂಡಿದ್ದಾಗಲೀ ಗಮನಕ್ಕೆ ಬರಲಿಲ್ಲ.

ಕೈಗವಸು ಇಲ್ಲದೆ ನದಿಗೆ ಇಳಿದಿದ್ದೇಕೆ?

ಇದು ಆತನ ಯಶೋಗಾಥೆಯ ಅತ್ಯಂತ ಅಸಹಜ ಭಾಗ.ನದಿಯೊಳಗೆ ಪ್ಲಾಸ್ಟಿಕ್, ಬಾಟಲಿ, ಕಳೆ, ಕೊಳೆತ ವಸ್ತುಗಳು, ವಿವಿಧ ರೀತಿಯ ತ್ಯಾಜ್ಯ. ಸಾಮಾನ್ಯವಾಗಿ ಇಂಥ ಜಾಗವನ್ನು ನೋಡಿದರೆ ಯಾರಾದರೂ ಸ್ವಚ್ಛತಾ ಸಿಬ್ಬಂದಿ ಬರಬೇಕು ಎಂದು ಕಾಯುತ್ತಾರೆ. ಆದರೆ, ಬಿಟ್ಟು ಕಾಯಲಿಲ್ಲ. ಕೈಗವಸು ಇತ್ಯಾದಿಗಳು ಕೆಲಸವನ್ನು ವಿಳಂಬ ಮಾಡುತ್ತಿದೆ ಎನಿಸಿತು. ಅಂಥವು ದಿನಕ್ಕೆ ಹತ್ತಾರು ಬೇಕಾಗುತ್ತಿತ್ತು. ಎಲ್ಲಿಂದ ತರುವುದು? ಹೀಗಾಗಿ ಕೈಗವಸು, ದೊಡ್ಡ ಯಂತ್ರಗಳು, ವಿಶೇಷ ತಂಡ—ಯಾವುದೂ ಇಲ್ಲದೆ ಕೈಗಳಿಂದಲೇ ತ್ಯಾಜ್ಯ ಹೊರತೆಗೆದು ಹಾಕಲಾರಂಭಿಸಿದೆ.

ಇದರಿಂದ ಕೆಲವು ಆರೋಗ್ಯದ ಅಪಾಯಗಳೂ ಎದುರಾದವು. ಕೊಳಕು ನೀರಿನಲ್ಲಿ ಇಳಿದು ಕೆಲಸ ಮಾಡುವುದರಿಂದ ಚರ್ಮದ ಸಮಸ್ಯೆಗಳೂ ಎದುರಾಗಿದ್ದವು. ಸಂಜೆಯಷ್ಟರಲ್ಲಿ ಕೈ ಕಾಲುಗಳಲ್ಲಿ ತುರಿಕೆ ಆರಂಭವಾಗಿ ಕಜ್ಜಿಗಳೇಳುತ್ತಿದ್ದವು. ಆದರೂ ಮರುದಿನ ಬೆಳಗ್ಗೆಯ ಹೊತ್ತಿಗೆ ಕೆಲಸ ನಿಲ್ಲಲಿಲ್ಲ. ಕೆಲವೊಮ್ಮೆ ಒಂದೊಂದು ಘಟ್ಟವನ್ನು ಸ್ವಚ್ಛ ಮಾಡಲು ತಿಂಗಳೇ ಬೇಕಾದ ಸಂದರ್ಭಗಳೂ ಇದ್ದವು. ವೈಯಕ್ತಿಕ ಹಣದಿಂದಲೇ ಅಗತ್ಯವಿದ್ದ ಸರಳ ಉಪಕರಣಗಳನ್ನು ಖರೀದಿಸಿಕೊಂಡು ಕೆಲಸ ಮುಂದುವರಿಸಿದೆ ಎನ್ನುತ್ತಾನೆ ಬಿಟ್ಟು.

ಆತ ನದಿಯನ್ನು ಸ್ವಚ್ಛಗೊಳಿಸುವ ಮೊದಲು, ಜನರ ‘ಏನೇನೋ ಮಾತಾಡಿಕೊಳ್ಳುತ್ತಾರೆ’ ಎಂಬ ಯೋಚನೆಯನ್ನೇ ತಲೆಯಿಂದ ತೆಗೆದು ಹಾಕಿದ್ದನಂತೆ.

‘ನಾನು ಮಾಡದಿದ್ದರೆ ಇನ್ನಾರು?’

ಇಲ್ಲಿ ಗಮನಿಸಬೇಕಾದ ಅಂಶ ಒಂದಿದೆ. ಬಿಟ್ಟು ತಬಾಹಿಯ ಯಶೋಗಾಥೆಗೆ ಪ್ರೇರಣೆ ಯಾವುದೇ ದೊಡ್ಡ ಸಂಸ್ಥೆಯೊಂದರಿಂದ, ಯಾವುದೇ ಘಟನೆಯಿಂದ, ವ್ಯಕ್ತಿಯಿಂದ ಬಂದದ್ದಲ್ಲ. ಅದು ಆತನೊಳಗೆ ಮೊಳೆದದ್ದು.

ಅದು ಆತನದೇ ಊರು. ಆತನ ಕಣ್ಣೆದುರಿನದ್ದೇ ನದಿ. ಮತ್ತದನ್ನು ನೋಡಿದಾಗ ಆತನಲ್ಲಿ ಮೂಡಿದ ಅಸಹನೆ. ‘ಜನರು ನದಿಗೇ ಹೀಗೆ ಕಸವನ್ನು ಏಕೆ ಎಸೆಯುತ್ತಾರೆ?’ ಎಂಬ ಪ್ರಶ್ನೆ ಎಲ್ಲವನ್ನೂ ಮಾಡಿ ಮುಗಿಸಿದ ಮೇಲೆ ನನ್ನೊಳಗೆ ಕಾಡುತ್ತಲೇ ಇದೆ.

ಬಹುಶಃ ಇದೇ ಬಿಟ್ಟುವಿನ ಕೆಲಸದ ಮೂಲ ತತ್ವ, ಪ್ರೇರಣೆ ಇದೇ.

‘ಸಮಸ್ಯೆ ದೊಡ್ಡದಾಗಿರುವುದರಿಂದ ನಾನು ಏನೂ ಮಾಡಲಾಗುವುದಿಲ್ಲ ಎಂಬುದು ಒಂದು ಮನೋಭಾವ. ನಾನೊಬ್ಬ ಏನು ಮಾಡಲು ಸಾಧ್ಯ ಎಂದುಕೊಳ್ಳುವುದೇ ಎಲ್ಲರೂ ಮಾಡುವ ಮೊದಲ ತಪ್ಪು. ಸಮಸ್ಯೆ ದೊಡ್ಡದಾದರೂ ನನ್ನಿಂದ ಸಾಧ್ಯವಾದಷ್ಟು ಮಾಡುತ್ತೇನೆ ಎಂಬುದು ಮತ್ತೊಂದು ಮನೋಭಾವ. ಅದನ್ನು ಎಲ್ಲರೂ ಪಾಲಿಸಬೇಕು. ತಾನು ಎರಡನೆಯದನ್ನು ಆರಿಸಿಕೊಂಡೆ ಎನ್ನುತ್ತಾನೆ ಆದರ್ಶ ತರುಣ ತಬಾಹಿ.

ಅಜ್ನಾರ್‌ನಿಂದ ಬೆಂಗಳೂರಿನವರೆಗೆ

ಅಜ್ನಾರ್ ನದಿಯ ಸ್ವಚ್ಛತಾ ಕೆಲಸದ ವಿಡಿಯೊಗಳು ವೈರಲ್ ಆದವು. ಅವರ ‘Before–After’ ಚಿತ್ರಗಳು ಜನರ ಗಮನ ಸೆಳೆದವು. ಉದ್ಯಮಿ ಆನಂದ್ ಮಹೀಂದ್ರ ಸೇರಿದಂತೆ ಹಲವರು ಅವರ ಪ್ರಯತ್ನವನ್ನು ಮೆಚ್ಚಿಕೊಂಡರು. ನಂತರ ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಅವರೂ ಆತನನ್ನು ಆಹ್ವಾನಿಸಿ ಗೌರವಿಸಿದರು. ಸ್ಥಳೀಯ ಆಡಳಿತವೂ ಆತನ ಕೆಲಸಕ್ಕೆ ಯಂತ್ರೋಪಕರಣಗಳ ಮೂಲಕ ಬೆಂಬಲ ನೀಡಲು ಮುಂದಾಯಿತು. ಇವೆಲ್ಲದರ ನಡುವೆ ಆತನ ಕೆಲಸ ಅಂತರರಾಷ್ಟ್ರೀಯ ಗಮನವನ್ನೂ ಸೆಳೆಯಿತು. ಪರಿಣಾಮ, ನೆದರ್ಲೆಂಡ್ಸ್ ಮೂಲದ The Ocean Cleanup ಸಂಸ್ಥೆಯ ಸಂಸ್ಥಾಪಕ ಬೊಯಾನ್ ಸ್ಲಾಟ್ ಅವರು ಸಾಮಾಜಿಕ ಜಾಲತಾಣದಲ್ಲಿ, ಒಂದೊಮ್ಮೆ ಬಿಟ್ಟು ಬಂದರೆ ಆತನಿಗೆ ತಕ್ಷಣವೇ ಉದ್ಯೋಗ ಕೊಡುವುದಾಗಿಯೂ ಸಾರ್ವಜನಿಕವಾಗಿ ಆಹ್ವಾನ ನೀಡಿದರು. ಹಾಗೆಂದು ಅಧಿಕೃತ ನೇಮಕ ಆದೇಶವನ್ನೇನೂ ಕಳುಹಿಸಿಲ್ಲವಂತೆ. ಅದು ಬೇರೆ ಮಾತು.

ಆದರೆ, ಒಂದಂತೂ ನಿಜ. ಬಿಟ್ಟುಗೆ ಈಗ ಬಿಡುವಿಲ್ಲದ ಕಾರ್ಯಕ್ರಮಗಳ ಕರೆಗಳ ಬರುತ್ತಿವೆ. ದೇಶದ ಉದ್ದಗಲಕ್ಕೆ ಆತನನ್ನು ಆಹ್ವಾನಿಸುತ್ತಿದ್ದಾರೆ. ಆತನ ಮುಂದಿರುವ ಈಗಿರುವ ಸವಾಲು–‘ಒಂದು ನದಿಯಿಂದ ಆರಂಭವಾದ ಕೆಲಸವನ್ನು ದೇಶದ ಬೇರೆ ಬೇರೆ ಭಾಗಗಳಿಗೆ ಕೊಂಡೊಯ್ಯುವುದು ಹೇಗೆ?’

ಅದರ ಭಾಗವಾಗಿಯೇ ಮೊನ್ನೆ ಆತ ಬೆಂಗಳೂರಿಗೂ ಬಂದದ್ದು.

ತುರಹಳ್ಳಿ ಕಾಡಿನಲ್ಲಿ ಇದನ್ನು ನಿರೀಕ್ಷಿಸಿರಲಿಲ್ಲ!

ಸೆಪ್ಟೆಂಬರ್ 12–13ರಂದು ಬೆಂಗಳೂರಿನ ತುರಹಳ್ಳಿ ಅರಣ್ಯದ ಗಡಿಭಾಗದಲ್ಲಿ ನಡೆದ ಸ್ವಚ್ಛತಾ ಅಭಿಯಾನದಲ್ಲಿ ಬಿಟ್ಟು ತಬಾಹಿ, ಸ್ಥಳೀಯ ಪರಿಸರ ಕಾರ್ಯಕರ್ತರೊಂದಿಗೆ ಕೈಜೋಡಿಸಿದ್ದ. ಅಂದು ಸುಮಾರು ನಾಲ್ಕು ಗಂಟೆಗಳ ಕಾರ್ಯಾಚರಣೆಯಲ್ಲಿ ಎರಡು ಟನ್‌ಗೂ ಅಧಿಕ ತ್ಯಾಜ್ಯ ತೆರವುಗೊಳಿಸಲಾಯಿತು. ಪರಿಸರವಾದಿ ಎ.ಎನ್. ಯಲ್ಲಪ್ಪ ರೆಡ್ಡಿ ಸೇರಿದಂತೆ ಹಲವರು ಅಭಿಯಾನದಲ್ಲಿ ಭಾಗವಹಿಸಿದ್ದರು.

ಆದರೆ ಅಲ್ಲಿ ಕಂಡದ್ದು ಕೇವಲ ಪ್ಲಾಸ್ಟಿಕ್ ಕಸವಲ್ಲ.

ಕಾಡಿನ ಅಂಚಿನಲ್ಲಿ—ದೊಡ್ಡ ಪ್ರಮಾಣದ ಕೋಳಿ ತ್ಯಾಜ್ಯ, ಮನೆಗಳ (ಕಟ್ಟಡ) ತ್ಯಾಜ್ಯ, ಪ್ಲಾಸ್ಟಿಕ್‌ನಲ್ಲಿ ಸುತ್ತಿ ಬಿಸಾಡಿದ್ದ ನಾಯಿ ಸೇರಿದಂತೆ ಇನ್ನಷ್ಟು ಸಾಕುಪ್ರಾಣಿಗಳ ಶವಗಳು, ಮೆಡಿಕಲ್ ವೇಸ್ಟ್, ಪ್ಲಾಸ್ಟಿಕ್ ಚೀಲಗಳು ಸೇರಿದಂತೆ ಕೊಳೆತು ನಾರುವ ಇನ್ನೂ ಏನೇನೋ ಅಲ್ಲಿ ರಾಶೀ ರಾಶಿಯಾಗಿ ಬಿದ್ದಿದ್ದವು.

‘ಪ್ಲಾಸ್ಟಿಕ್ ರಾಶಿಯ ಕೆಳಗೆ ನಾಯಿಯ ಶವಗಳು ಮತ್ತು ವೈದ್ಯಕೀಯ ತ್ಯಾಜ್ಯ ಸಿಕ್ಕಿದ್ದು ನಿಜಕ್ಕೂ ಆಘಾತ ಉಂಟುಮಾಡಿತು‘ ಎನ್ನುತ್ತಾನೆ ಬಿಟ್ಟು. ಭಾರತದ ಸಿಲಿಕಾನ್‌ ಸಿಟಿ ಎಂಬ ಖ್ಯಾತಿಯ, ಉದ್ಯಾನನಗರಿ ಎಂಬ ಹೆಗ್ಗಳಿಕೆಯ ಭವ್ಯ (?) ಬೆಂಗಳೂರಿನ ಬಗ್ಗೆ ಇಟ್ಟುಕೊಂಡಿದ್ದ ನಿರೀಕ್ಷೆಗೂ ವಾಸ್ತವಕ್ಕೂ ದೊಡ್ಡ ಅಂತರ ಕಂಡಿದೆ ಎಂಬುದು ಆತನದೇ ಬೇಸರದ ನುಡಿ.

‘ಐಟಿ ಸಿಟಿ’ ಎಂದರೆ ತಂತ್ರಜ್ಞಾನದಲ್ಲಿ ಮಾತ್ರ ಮುಂದಿರುವ ನಗರವಲ್ಲ; ನಾಗರಿಕ ಪ್ರಜ್ಞೆಯಲ್ಲೂ ಮುಂದಿರಬಹುದು ಎಂದುಕೊಂಡಿದ್ದೆ. ಆದರೆ ಕಾಡಿನ ಅಂಚಿನಲ್ಲಿರುವ ಈ ದೃಶ್ಯ ಬೇಸರ ತಂದಿತು ಎಂಬ ಅರ್ಥದಲ್ಲಿ ಆತ ತನ್ನ ಅಸಮಾಧಾನ ವ್ಯಕ್ತಪಡಿಸಿದ್ದು ಸುಳ್ಳಲ್ಲ.

ಕಸ ಕೇವಲ ಕಾಡಿನ ಅಂಚಿನಲ್ಲಿಲ್ಲ… ನೀರಿನಲ್ಲೂ ಇದೆ

ತುರಹಳ್ಳಿಯಲ್ಲಿ ಬಿಟ್ಟು ಅವತ್ತು ಕಂಡ ತ್ಯಾಜ್ಯ ಒಂದು ಕಡೆ. ಒಂದೊಮ್ಮೆ ಆತ ನನ್ನ ಬೆಂಗಳೂರಿನ ಕೆರೆಗಳು, ವೃಷಭಾವತಿ ಸೇರಿದಂತೆ ಜಲಮೂಲಗಳನ್ನೇನಾದರೂ ಸಂದರ್ಶಿಸಿದ್ದರೆ ಇನ್ನೊಂದು ಮೂರ್ನಾಲ್ಕು ವರ್ಷ ಇಲ್ಲಿಯೇ (ಅವನ್ನೆಲ್ಲ ಸ್ವಚ್ಛಗೊಳಿಸಲು) ಉಳಿಯಬೇಕಾಗುತ್ತಿತ್ತೇನೋ.

2026ರ ಜೂನ್‌ನಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ವರದಿಯನ್ನು ಆಧರಿಸಿ ಹೇಳುವುದಾದರೆ, ಬೆಂಗಳೂರಿನ 182 ಜಲಮೂಲಗಳ ಪೈಕಿ 32 ಕೆರೆಗಳು Class E, ಅಂದರೆ ಅತ್ಯಂತ ಕೆಳಮಟ್ಟದ ನೀರಿನ ಗುಣಮಟ್ಟದ ವರ್ಗದಲ್ಲಿ ಇವೆ. ಸ್ವತಃ ಬಿಡಬ್ಲ್ಯುಎಸ್‌ಎಸ್‌ಬಿ ಸೆಪ್ಟೆಂಬರ್ 2026ರ ತನ್ನ ವರದಿಯಲ್ಲಿ ಹೇಳಿದ ಪ್ರಕಾರ, ಬೆಂಗಳೂರು ಪ್ರತಿದಿನ ಸುಮಾರು 2,580 MLD ಒಳಚರಂಡಿ ನೀರನ್ನು ಉತ್ಪಾದಿಸುತ್ತಿದೆ. ಅದರ ಸುಮಾರು ಶೇ 50ರಷ್ಟನ್ನು ಮಾತ್ರವೇ ಪ್ರಸ್ತುತ ಸಂಸ್ಕರಿಸಲಾಗುತ್ತಿದೆ. ಉಳಿದ ಸಾಮರ್ಥ್ಯವನ್ನು ಹೆಚ್ಚಿಸಲು ಹಂತ ಹಂತವಾಗಿ ಹೊಸ STPಗಳನ್ನು ನಿರ್ಮಿಸುವ ಯೋಜನೆ ರೂಪಿಸಲಾಗಿದೆ.

ಇದೇ ಸಮಸ್ಯೆಯ ಮತ್ತೊಂದು ಮುಖ ವೃಷಭಾವತಿ. 2026ರ ಮಾರ್ಚ್‌ನಲ್ಲಿ ಪ್ರಕಟವಾದ ದೀರ್ಘಾವಧಿಯ ಅಧ್ಯಯನದ ವರದಿ ನೋಡೋಣ ಬನ್ನಿ. ಅದರ ಪ್ರಕಾರ 2016ರಿಂದ 2025ರ ಅವಧಿಯಲ್ಲಿ (ಕ್ಷೇತ್ರವಾರು ಪರಿಶೀಲನೆ) ವೃಷಭಾವತಿಯ ಕೆಲವು ಕೆಳಹರಿವಿನ ಪ್ರದೇಶಗಳಲ್ಲಿ ಮಾಲಿನ್ಯ ಪ್ರಮಾಣ ಹಿಂದಿನ 50 ವರ್ಷಗಳಿಗಿಂತಲೂ ಹೆಚ್ಚು ತೀವ್ರಗೊಂಡಿದೆ. ಕೈಗಾರಿಕಾ ತ್ಯಾಜ್ಯ, ಸಂಸ್ಕರಿಸದ ಒಳಚರಂಡಿ ನೀರು ಮತ್ತು ಘನ ತ್ಯಾಜ್ಯದ ಸೇರ್ಪಡೆ ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸುತ್ತಿದೆ ಎಂದು ವರದಿ ಹೇಳಿದೆ.

ಸೆಪ್ಟೆಂಬರ್ 2026ರಲ್ಲಿಯೇ ರಾಜ್ಯದ ಪರಿಸರ ಸಚಿವರು ವೃಷಭಾವತಿ ಮತ್ತು ಕೆ.ಸಿ. ವ್ಯಾಲಿಯ ಮಾಲಿನ್ಯವನ್ನು ಪರಿಶೀಲಿಸುವುದಾಗಿ ಹೇಳಿದ್ದು, ಮಾಲಿನ್ಯದ ಮೂಲಗಳನ್ನು ಗುರುತಿಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದು ಇದನ್ನು ಪುಷ್ಟೀಕರಿಸುತ್ತದೆ.

ಹೀಗಾಗಿ ಪ್ರಶ್ನೆ ಕೇವಲ ‘ಬೆಂಗಳೂರು ಎಷ್ಟು ಸ್ವಚ್ಛ?’ ಎಂಬುದಲ್ಲ. ಪ್ರಶ್ನೆ ಇರುವುದು ‘ನಾವು ನಮ್ಮ ತ್ಯಾಜ್ಯವನ್ನು ಎಲ್ಲಿಗೆ ಕಳುಹಿಸುತ್ತಿದ್ದೇವೆ?’ ಎಂಬುದು.

ಬಿಟ್ಟು ಬಂದದ್ದು ಕೇವಲ ಕಸ ತೆಗೆಯಲೇ?

ಇದಕ್ಕುತ್ತರ–‘ಬಹುಶಃ ಅಲ್ಲ’. ಅಜ್ನಾರ್ ನದಿಯನ್ನು ಸ್ವಚ್ಛಗೊಳಿಸುವಾಗ ಆತ ಎದುರಿಸಿದ ದೊಡ್ಡ ಸಮಸ್ಯೆ ಕಸದ ಪ್ರಮಾಣವಾಗಿರಲಿಲ್ಲ. ‘ಜನರು ಕಸವನ್ನು ಜಲಮೂಲಕ್ಕೆ ತಂದು ಹಾಕುವುದೇ ಸಮಸ್ಯೆಯ ಮೂಲ’ ಎಂಬ ಅರಿವು ಆತನಲ್ಲಿ ಮೂಡಿದೆ.

ಅದೇ ಸಮಸ್ಯೆ ಬೆಂಗಳೂರಿನಲ್ಲೂ ಇದೆ. ತುರಹಳ್ಳಿ ಕಾಡಿನಲ್ಲಿ ಕಸ ಎಸೆಯುವ ವ್ಯಕ್ತಿ, ಕೆರೆಗೆ ಒಳಚರಂಡಿ ಸೇರುವುದನ್ನು ನಿರ್ಲಕ್ಷಿಸುವ ವ್ಯವಸ್ಥೆ, ವೃಷಭಾವತಿಗೆ ತ್ಯಾಜ್ಯ ಸೇರುವುದನ್ನು ತಡೆಯಲಾಗದ ನಗರ, ಮನೆಗಳಲ್ಲಿ ತ್ಯಾಜ್ಯವನ್ನು ಬೇರ್ಪಡಿಸದೆ ಎಲ್ಲವನ್ನೂ ಒಂದೇ ಚೀಲದಲ್ಲಿ ಹಾಕುವ ನಾಗರಿಕ...ಇವೆಲ್ಲವೂ ಒಂದೇ ಸರಪಳಿಯ ವಿಭಿನ್ನ ಕೊಂಡಿಗಳು. ಕಸವನ್ನು ತೆರವುಗೊಳಿಸುವುದು, ನದಿ, ಕಾಡು ಕೆರೆಗಳನ್ನು ಸ್ವಚ್ಛಗೊಳಿಸುವುದು ಪರಿಹಾರದ ಒಂದು ಹಂತ ಮಾತ್ರ. ಕಸ ಮತ್ತೆ ಅಲ್ಲಿ ಸೇರುವುದನ್ನು ತಡೆಯುವುದು, ಆ ಜಾಗೃತಿಯನ್ನು ಜನರಲ್ಲಿ ಮೂಡಿಸುವುದು ನಿಜವಾದ ಪರಿಹಾರ.

‘ಒಬ್ಬ ಬಿಟ್ಟು ತಬಾಹಿ’ ಸಾಕೇ?

ಖಡಿತವಾಗಿಯೂ ಸಾಲದು. ಒಬ್ಬ ವಿದ್ಯಾರ್ಥಿ ಏಳು ತಿಂಗಳು ನದಿಗೆ ಇಳಿದು ಮಾಡಿದ ಕೆಲಸ ನಮಗೆ ಸ್ಫೂರ್ತಿ ನೀಡಬಹುದು. ಆದರೆ, ಬೆಂಗಳೂರಿನಂತಹ ಕೋಟ್ಯಂತರ ಲೀಟರ್ ಒಳಚರಂಡಿ ನೀರು ಉತ್ಪತ್ತಿಯಾಗುವ ಮಹಾನಗರದ ಸಮಸ್ಯೆಯನ್ನು ಒಬ್ಬ ವ್ಯಕ್ತಿ ಪರಿಹರಿಸಲು ಸಾಧ್ಯವಿಲ್ಲ. ಅದಕ್ಕೆ ವ್ಯವಸ್ಥೆ ಬೇಕು. ಸರಿಯಾದ ತ್ಯಾಜ್ಯ ಸಂಗ್ರಹಣೆ ಬೇಕು. ಕಾನೂನು ಜಾರಿಯಾಗಬೇಕು. STPಗಳ ಪೂರ್ಣ ಸಾಮರ್ಥ್ಯದ ಬಳಕೆ ಬೇಕು.ಕೈಗಾರಿಕೆಗಳ ಮೇಲ್ವಿಚಾರಣೆ ಬೇಕು. ಅರಣ್ಯ, ಕೆರೆ, ರಾಜಕಾಲುವೆ ಮತ್ತು ನದಿಗಳ ಗಡಿಯಲ್ಲಿ ಅಕ್ರಮ ತ್ಯಾಜ್ಯ ವಿಲೇವಾರಿ ತಡೆಯಬೇಕು.... ಹೀಗೆ ‘ಆಗಬೇಕು’ಗಳ ಪಟ್ಟಿ ಹನುಮಂತನ ಬಾಲದಂತೆ ಬೆಳೆಯುತ್ತಲೇ ಹೋಗುತ್ತದೆ.

ಎಲ್ಲಕ್ಕಿಂತ ಮುಖ್ಯವಾಗಿ— ‘ನಾಗರಿಕನಾಗಿ ನನ್ನ ಕಸಕ್ಕೆ ನಾನೇ ಹೊಣೆ’ ಎಂಬ ಅರಿವು ಎಲ್ಲರಲ್ಲಿ ಬೇಕು. ಅದಕ್ಕೆ ಪೂರಕವಾದ ಜಾಗೃತಿ ಮೂಡಬೇಕು.

ಬಿಟ್ಟು ತಬಾಹಿಯ ಕಥೆ ಇಲ್ಲಿ ಒಂದು ಸ್ಫೂರ್ತಿಯಷ್ಟೇ. ಅವನು ಒಬ್ಬನೇ ನದಿಗೆ ಇಳಿದಿದ್ದಾನೆ. ಆದರೆ ಅವನ ಪ್ರಶ್ನೆ ನಮ್ಮೆಲ್ಲರಿಗೂ.‘ಕಸ ನೋಡಿ ದೂರುವುದೇ ನಮ್ಮ ಕೆಲಸವೇ? ಅಥವಾ ಸಾಧ್ಯವಾದಷ್ಟು ಅದನ್ನು ಬದಲಿಸಲು ನಾವೂ ಏನಾದರೂ ಮಾಡಬಹುದೇ?’

ನೇರವಾಗಿ ಆತನನ್ನೇ ಈ ಬಗ್ಗೆ ಕೇಳಿಯಾಯಿತು. ‘ಅಜ್ನಾರ್ ನದಿಯ ಸ್ವಚ್ಛತೆಯಿಂದ ಬಂದ ಜನಪ್ರಿಯತೆಯನ್ನು ವೈಯಕ್ತಿಕ ಖ್ಯಾತಿಯಲ್ಲೇ ನಿಲ್ಲಿಸದೆ, ಸ್ವಚ್ಛತಾ ಮತ್ತು ಪರಿಸರ ಜಾಗೃತಿಯ ಅಭಿಯಾನವನ್ನು ಬೇರೆ ಪ್ರದೇಶಗಳಿಗೂ ವಿಸ್ತರಿಸುವ ಪ್ರಯತ್ನದಲ್ಲಿದ್ದೇನೆ. ಬೆಂಗಳೂರಿನ ತುರಹಳ್ಳಿ ಅಭಿಯಾನವೂ ಆ ವಿಸ್ತರಣೆಯ ಮೊದಲ ಪ್ರಮುಖ ಹೆಜ್ಜೆಗಳಲ್ಲಿ ಒಂದು’. ಬಿಟ್ಟು ವಿಶ್ವಾಸದಲ್ಲಿ ಹೇಳಿದ.

ಆತನ ಮಾತುಗಳನ್ನು ಕೇಳಿದರೆ, ಆತನ ಮುಂದಿನ ಗುರಿ ಬಹುಶಃ ಇನ್ನೊಂದು ನದಿಯನ್ನು ಸ್ವಚ್ಛಗೊಳಿಸುವುದಕ್ಕಿಂತ ದೊಡ್ಡದು. ಅದೇನೆಂದರೆ ‘ಜನರು ಕಸ ಎಸೆಯುವ ಮೊದಲು ಒಂದು ಕ್ಷಣ ಯೋಚಿಸುವಂತೆ ಮಾಡುವುದು’. ಇಂಥ ಬೃಹತ್‌ ಆಂದೋಲನದ ನಾಯಕತ್ವ, ರಾಯಭಾರತ್ವಕ್ಕೆ ಬಿಟ್ಟು ಮಾತ್ರವೇ ಸೂಕ್ತ ವ್ಯಕ್ತಿ.

ಬೆಂಗಳೂರಿಗೂ ಬೇಕಿದೆ, ಒಬ್ಬನಲ್ಲ, ಸಾವಿರಾರು ‘ತಬಾಹಿ’ಗಳು

ಅಜ್ನಾರ್ ನದಿಯ ಸ್ಥಿತಿ ಒಬ್ಬ ಯುವಕನ ಹಠದಿಂದ ಬದಲಾಯಿತು. ತುರಹಳ್ಳಿ ಕಾಡಿನ ಅಂಚಿನಲ್ಲಿ ನಾಲ್ಕು ಗಂಟೆಗಳಲ್ಲಿ ಎರಡು ಟನ್‌ಗೂ ಹೆಚ್ಚು ಕಸ ಹೊರಬಂತು. ಆದರೆ ಆ ಎರಡು ಘಟನೆಗಳು ನಮಗೆ ಒಂದು ಕಠಿಣ ಸತ್ಯವನ್ನು ಸಾರುತ್ತಿವೆ–ಕಸವನ್ನು ಸ್ವಚ್ಛಗೊಳಿಸುವವರು ಕಡಿಮೆ. ಕಸ ಸೃಷ್ಟಿಸುವವರು ಹೆಚ್ಚು.

ಅದಕ್ಕಾಗಿಯೇ ಬೆಂಗಳೂರಿಗೆ ಒಬ್ಬ ಬಿಟ್ಟು ತಬಾಹಿ ಸಾಕಾಗುವುದಿಲ್ಲ.ಪ್ರತಿ ಬಡಾವಣೆಯಲ್ಲಿ ಒಬ್ಬ ಬಿಟ್ಟು ಬೇಕು. ಪ್ರತಿ ಕೆರೆಯ ಬಳಿ ಒಬ್ಬ ಬಿಟ್ಟು ಹುಟ್ಟಬೇಕು. ವೃಷಭಾವತಿಯ ದಡದಲ್ಲಿ ನೂರಾರು ಬಿಟ್ಟುಗಳು ಬಂದು ನಿಲ್ಲಬೇಕು. ಇಷ್ಟೇ ಸಾಲದು, ಪ್ರತಿಯೊಬ್ಬ ನಾಗರಿಕನೊಳಗೂ ಒಬ್ಬೊಬ್ಬ ‘ಬಿಟ್ಟು ತಬಾಹಿ’ ಮೊಳೆಯಬೇಕು.

ಇದು ದುರಾಸೆ ಎಂದು ಎನಿಸಬಹುದು. ಆದರೆ ಹಾಗಾದರೆ ಮಾತ್ರ ನಮ್ಮ ನದಿಗಳು ವೃಷಭಾವತಿಯಂತೆ ಯಾವತ್ತೂ ಗಬ್ಬೆದ್ದು ನಾರುವುದಿಲ್ಲ. ಕೆರೆಗಳು ಬಡಾವಣೆಗಳಾಗಿ ಬದಲಾಗಿ ಸಾಯುವುದಿಲ್ಲ. ಕಾಡಿನ ಅಂಚು ಒಂದು ರಾತ್ರಿ ಕಸದ ಗುಡ್ಡೆಯಾಗುವುದಿಲ್ಲ.

ಹೌದು, ಈ ಪರಿಯ ಮಾಲಿನ್ಯ ರಾತ್ರಿ ಬೆಳಗಾಗುವುದರೊಳಗೆ ಆದದ್ದಲ್ಲ. ಆದರೆ ನಾವೇ ಪ್ರತಿದಿನ ಸ್ವಲ್ಪ ಸ್ವಲ್ಪವೇ ಹಾಳು ಮಾಡಿದ್ದು ಎಂಬುದು ಒಪ್ಪಲೇಬೇಕಾದ ಸತ್ಯ. ಅದೇ ರೀತಿ ಪ್ರತಿದಿನ ಸ್ವಲ್ಪ ಸ್ವಲ್ಪವಾಗಿ ಅದನ್ನು ಉಳಿಸುವ ಕೆಲಸವನ್ನೂ ಬಿಟ್ಟುವಿನಂತೆ ನಾವೇ ಏಕೆ ಆರಂಭಿಸಬಾರದು?.

ಅಜ್ನಾರ್ ನದಿಯೊಳಗೆ ಬರಿಗೈಯಲ್ಲಿ ಇಳಿದ 21 ವರ್ಷದ ಆ ಹುಡುಗ ಬೆಂಗಳೂರಿಗೆ ಬಂದಾಗ, ಬಹುಶಃ ಕಸಕ್ಕಿಂತ ದೊಡ್ಡದಾದ ಒಂದು ಪ್ರಶ್ನೆಯನ್ನು ನಮ್ಮ ಮುಂದೆ ಇಟ್ಟಿದ್ದಾನೆ — ‘ನಿಮ್ಮ ನಗರದ ನದಿಯನ್ನು, ನಿಮ್ಮ ಕಾಡನ್ನು, ನಿಮ್ಮ ಕೆರೆಯನ್ನು ನೀವು ಎಷ್ಟು ದಿನ ಕೇವಲ ನೋಡುತ್ತಾ ಇರುತ್ತೀರಿ?’

ಬಿಟ್ಟು ತಬಾಹಿ ತನ್ನೂರಿನ ನದಿಯನ್ನು ಸ್ವಚ್ಛಗೊಳಿಸಿಕೊಂಡು ತೋರಿಸಿದ್ದಾನೆ. ಈಗ ಬೆಂಗಳೂರಿನವರಾದ ನಮ್ಮ ಸರದಿ. ಅದನ್ನೇ ಆತ ಗಣೇಶ ಚತುರ್ಥಿಯ ಮುನ್ನಾದಿನ ಇಲ್ಲಿಗೇ ಬಂದು ಹೇಳಿ ಹೋಗಿದ್ದು. ಆದರೆ ನಾವು ಮಾತ್ರ, ನೀರಿನಲ್ಲಿ ಕರಗದ ಪಿಒಪಿ ಗಣೇಶನ ಸುಂದರ ಮೂರ್ತಿಯನ್ನು, ಅದರ ಅಲಂಕಾರಕ್ಕೆ ಬಳಸಿದ ಸಕಲ ಪ್ಲಾಸ್ಟಿಕ್‌ ತ್ಯಾಜ್ಯ, ಹಾರ, ತುರಾಯಿ (ಅದರಲ್ಲೂ ಪ್ಲಾಸ್ಟಿಕ್‌ ದಾರ)ಗಳೊಂದಿಗೆ ಇನ್ಯಾವುದೋ ಕೆರೆಗೆ ಭವ್ಯ ಮೆರವಣಿಗೆಯಲ್ಲಿ ತೆರಳಿ, ವಿಸರ್ಜಿಸಿ ಪುನೀತ(?) ಭಾವದಲ್ಲಿ ಮನೆಗೆ ಮರಳಿದ್ದೇವೆ. ಗ್ರೇಟ್‌!

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ