
ಪ್ರಜಾವಾಣಿ ವರದಿಗೆ ಮುಖ್ಯಮಂತ್ರಿ ಕಚೇರಿ ಸ್ಪಂದನೆ: ತುರ್ತು ಕ್ರಮಕ್ಕೆ ಸೂಚನೆ
ಮೈಸೂರು: ಹೂಟಗಳ್ಳಿ ನಗರಸಭೆ ವ್ಯಾಪ್ತಿಯ ಮುಖ್ಯರಸ್ತೆ ಕಾಮಗಾರಿ ಜಾಗದಲ್ಲಿ ನೀರು ಪೋಲಾಗುತ್ತಿರುವ ಕುರಿತು ‘ಪ್ರಜಾವಾಣಿ’ ಪ್ರಕಟಿಸಿದ್ದ ವರದಿಗೆ ಮುಖ್ಯಮಂತ್ರಿಗಳ ಕಚೇರಿಯು ಸ್ಪಂದಿಸಿದ್ದು, ತುರ್ತು ಕ್ರಮಕ್ಕೆ ಸೂಚಿಸಿದೆ.
ಹೂಟಗಳ್ಳಿ–ಕೆಎಚ್‌ಬಿ ಕಾಲೊನಿ ಮುಖ್ಯ ರಸ್ತೆಯಲ್ಲಿ ರಸ್ತೆಗೆ ನೀರು ಹರಿದಿರುವ ಕುರಿತು ಹಾಗೂ ಕಾಮಗಾರಿ ವಿಳಂಬದ ಬಗ್ಗೆ ‘ಪ್ರಜಾವಾಣಿ’ಯು ಸೆ. 10ರ ಸಂಚಿಕೆಯಲ್ಲಿ ವರದಿ ಪ್ರಕಟಿಸಿ ಗಮನ ಸೆಳೆದಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿ ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ ಕೆ. ವೈಷ್ಣವಿ ಸೆ. 10ರಂದೇ ಹೂಟಗಳ್ಳಿ ನಗರಸಭೆ ಆಯುಕ್ತರಿಗೆ ಪ್ರತ್ರ ಬರೆದಿದ್ದರು. ತಕ್ಷಣವೇ ಕ್ರಮ ಕೈಗೊಂಡು ಅನುಪಾಲನಾ ವರದಿ ನೀಡುವಂತೆ ಸೂಚಿಸಿದ್ದರು.
ಹೂಟಗಳ್ಳಿ ಆಯುಕ್ತರು ಸೆ.17ರಂದು ಅನುಪಾಲನಾ ವರದಿ ಸಲ್ಲಿಸಿದ್ದಾರೆ. ‘ ಹೂಟಗಳ್ಳಿ ಸಿಗ್ನಲ್‌ನಿಂದ ಸರಸ್ವತಿ ಕನ್ವೆಕ್ಷನ್ ಹಾಲ್‌ವರೆಗಿನ ಜೋಡಿ ರಸ್ತೆ ಕಾಮಗಾರಿಯು ಆಗಸ್ಟ್ 14ರಿಂದ ಆರಂಭ ಆಗಿದೆ. ಕಾಮಗಾರಿ ನಿರ್ವಹಿಸುವ ವೇಳೆ ಕುಡಿಯುವ ನೀರಿನ ಪೈಪ್‌ಲೈನ್‌ಗೆ ಹಾನಿಯಾಗಿತ್ತು. ನಂತರದಲ್ಲಿ ಕೊಳವೆ ದುರಸ್ಥಿ ಕೈಗೊಳ್ಳಲಾಗಿದೆ. ಈ ರಸ್ತೆಯಲ್ಲಿನ ನೀರು, ಒಳಚರಂಡಿ ಹಾಗೂ ಗ್ಯಾಸ್ ಪೈಪ್‌ಲೈನ್‌ಗಳನ್ನು ಫುಟ್‌ಪಾತ್‌ಗೆ ಸ್ಥಳಾಂತರಿಸಲಾಗುತ್ತಿದೆ. ನವೆಂಬರ್ ಅಂತ್ಯದ ವೇಳೆಗೆ ಈ ಕಾಮಗಾರಿಯು ಪೂರ್ಣಗೊಳ್ಳಲಿದೆ’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.