
ಫಾಲ್ಕೆ ಪ್ರಶಸ್ತಿ, ನಟ ಧನಂಜಯ್ ಮಗನ ನಾಮಕರಣ ಸೇರಿ ಈ ವಾರದ ಪ್ರಮುಖ 10 ಸುದ್ದಿಗಳು
ಇದುವರೆಗೆ ಫಾಲ್ಕೆ ಪ್ರಶಸ್ತಿ ಪಡೆದವರು, ನಟ ಧನಂಜಯ್ ಮಗನ ನಾಮಕರಣ, ಬರ ನಿರ್ವಹಣೆ ಬಗ್ಗೆ ಫಡಣವೀಸ್ ಹೇಳಿಕೆ, ಶಾ ಕಾರ್ಯಕ್ರಮಗಳಲ್ಲಿ ಮುಸ್ಲಿಂ ಅಧಿಕಾರಿಗಳಿಗೆ ಪ್ರವೇಶವಿಲ್ಲ ಎಂಬುದೂ ಸೇರಿದಂತೆ ಈ ವಾರ (ಸೆಪ್ಟೆಂಬರ್ 14ರಿಂದ 20ರವರೆಗೆ) ಹೆಚ್ಚು ಓದುಗರನ್ನು ಸೆಳೆದ ಪ್ರಮುಖ 10 ಸುದ್ದಿಗಳು ಇಲ್ಲಿವೆ...
ನಟಿ ಸಮಂತಾ ಸೀಮಂತದಲ್ಲಿ ನೆರವೇರಿದ ‘ಉದಕಶಾಂತಿ ಸ್ನಾನ’ದ ಮಹತ್ವವೇನು?
ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ರುತ್ ಪ್ರಭು ಅವರು ತಮ್ಮ ಜೀವನದ ಅತ್ಯಂತ ಸುಂದರ ಕ್ಷಣಗಳನ್ನು ಆನಂದಿಸುತ್ತಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ನಟಿ ಸಮಂತಾ ಅವರು ಇತ್ತೀಚೆಗೆ ತಮಿಳು ಸಾಂಪ್ರದಾಯದಂತೆ ಸೀಮಂತ ಮಾಡಿಕೊಂಡಿದ್ದಾರೆ.
ಅವರ ಸೀಮಂತದಲ್ಲಿ ನೆರವೇರಿದ ‘ಉದಕಶಾಂತಿ ಸ್ನಾನ’ (Udakashanthi Snanam) ಎಂಬ ಪವಿತ್ರ ಧಾರ್ಮಿಕ ವಿಧಿವಿಧಾನದ ಬಗ್ಗೆ ಸಾರ್ವಜನಿಕವಾಗಿ ತೀವ್ರ ಕುತೂಹಲ ಮೂಡಿದೆ.
ನಮ್ಮ ಬದುಕಿನ ಪುಟ್ಟ ಅಧಿಪತಿ'ಎರೆಯ'; ಮಗನ ನಾಮಕರಣ ಸಂಭ್ರಮದಲ್ಲಿ ನಟ ಧನಂಜಯ್ ದಂಪತಿ
ಚಂದನವನದ ನಟ ಡಾಲಿ ಧನಂಜಯ್, ಗಣೇಶ ಚತುರ್ಥಿ ಹಬ್ಬದ ಜತೆಗೆ ಮಗನ ನಾಮಕರಣ ಕಾರ್ಯಕ್ರಮದ ಸಂಭ್ರಮದಲ್ಲಿದ್ದಾರೆ.
ಧನಂಜಯ್ ಮತ್ತು ಪತ್ನಿ ಧನ್ಯತಾ, ಮೇನಲ್ಲಿ ಗಂಡು ಮಗುವನ್ನು ಬರಮಾಡಿಕೊಂಡಿದ್ದರು. ಇದೀಗ ಮಗನಿಗೆ ನಾಮಕರಣ ಮಾಡಿರುವ ದಂಪತಿ 'ಎರೆಯ' ಎಂದು ಹೆಸರಿಟ್ಟಿದ್ದಾರೆ. ಮಗನ ನಾಮಕರಣದ ಸಂಭ್ರಮದ ಬಗ್ಗೆ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಮುಂದಿನ ಪೀಳಿಗೆ ಬರಗಾಲವನ್ನೇ ನೋಡುವುದಿಲ್ಲ: 'ಮಹಾ' ಸಿಎಂ ದೇವೇಂದ್ರ ಫಡಣವೀಸ್
ರಾಜ್ಯದ ಮರಾಠವಾಡ ಪ್ರದೇಶದಲ್ಲಿ ಆವರಿಸುವ ಬರಗಾಲವನ್ನು ಶಾಶ್ವತವಾಗಿ ನಿರ್ಮೂಲನೆ ಮಾಡಲು ಬಿಜೆಪಿ ನೇತೃತ್ವದ 'ಮಹಾಯುತಿ' ಸರ್ಕಾರ ಬದ್ಧವಾಗಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಗುರುವಾರ ಹೇಳಿದ್ದಾರೆ.
ಮುಂದಿನ ಏಳು ವರ್ಷಗಳಲ್ಲಿ ಹಂತ-ಹಂತವಾಗಿ ಉಲ್ಲಾಸ್ ಜಲಾನಯನ ಪ್ರದೇಶದಿಂದ ಗೋದಾವರಿ ಜಲಾನಯನ ಪ್ರದೇಶಕ್ಕೆ 70 ಟಿ.ಎಂ.ಸಿ ನೀರನ್ನು ಹರಿಸುವ ಬೃಹತ್ ಯೋಜನೆಯನ್ನು ಫಡಣವೀಸ್ ಪ್ರಕಟಿಸಿದ್ದಾರೆ.
ಬದುಕು ಬದಲಿಸಿದ ಆರೋಗ್ಯ ಸಮಸ್ಯೆ: ಸಾವಯವ ಕೃಷಿಯಲ್ಲಿ ಯಶಸ್ಸು ಕಂಡ ದಂಪತಿ
ವೈದ್ಯರ ಅದೊಂದು ಮಾತು ದಂಪತಿಯ ಜೀವನವನ್ನೇ ಬದಲಾಯಿಸಿತು. ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದ ರೂಪಿಕಾ ಆನಂದ್ ಮತ್ತು ಪತಿ ರಾಕೇಶ್ ಆನಂದ್, ಭವಿಷ್ಯದಲ್ಲಿ ಆರೋಗ್ಯಕರ ಜೀವನ ಕಟ್ಟಿಕೊಳ್ಳುವ ನಿಟ್ಟಿನಲ್ಲಿ ನಗರವನ್ನೇ ತೊರೆಯಲು ನಿರ್ಧರಿಸಿದರು. ಆರೋಗ್ಯ ಸಮಸ್ಯೆ ಎಂದು ಹೆದರದ ದೆಹಲಿ ಮೂಲದ ದಂಪತಿ, ಈಗ ಲಕ್ಷಾಂತರ ರೂಪಾಯಿ ಆದಾಯ ತರುವ ಸಾವಯವ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ.
15 ವರ್ಷಗಳಲ್ಲಿ ಮೊದಲ ಸಲ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಕಾಣಿಸಿಕೊಳ್ಳದ ಮಮತಾ ಬ್ಯಾನರ್ಜಿ
ಕಳೆದ 15 ವರ್ಷಗಳಲ್ಲೇ ಇದೇ ಮೊದಲ ಬಾರಿಗೆ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಮಮತಾ ಬ್ಯಾನರ್ಜಿ ಕಾಣಿಸಿಕೊಳ್ಳುತ್ತಿಲ್ಲ.
ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಎದುರು ಮುಖಭಂಗ ಅನುಭವಿಸಿದ ನಂತರ ಪಕ್ಷದೊಳಗೆ ತೀವ್ರ ಬಂಡಾಯ ಎದುರಿಸುತ್ತಿರುವ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕಿ, ವಿಧಾನಸಭೆಗೆ ಮರಳಿ ಪ್ರವೇಶ ಪಡೆಯಲು ನಂದಿಗ್ರಾಮ ಉಪಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂಬ ಊಹಾಪೋಹಗಳು ಹರಡಿದ್ದವು.
ಅಮಿತ್ ಶಾ ಕಾರ್ಯಕ್ರಮಗಳಲ್ಲಿ ಮುಸ್ಲಿಂ ಅಧಿಕಾರಿಗಳಿಗೆ ಪ್ರವೇಶ ರದ್ದು: ಮೊಯಿತ್ರಾ
‘ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪಶ್ಚಿಮ ಬಂಗಾಳಕ್ಕೆ ಜುಲೈ ಮತ್ತು ಆಗಸ್ಟ್‌ನಲ್ಲಿ ಮೂರು ಬಾರಿ ಭೇಟಿ ನೀಡಿದ್ದರು. ಮೂರು ಬಾರಿಯೂ ಮುಸ್ಲಿಂ ಸಮುದಾಯಕ್ಕೆ ಸೇರಿದ ಐಎಎಸ್ ಮತ್ತು ಐಪಿಎಸ್‌ನ ಮೂವರು ಅಧಿಕಾರಿಗಳನ್ನು ಅಧಿಕೃತ ಕಾರ್ಯಕ್ರಮಗಳಿಂದ ದೂರ ಇಡಲಾಗಿತ್ತು’ ಎಂದು ಆರೋಪಿಸಿ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು ವಿಶ್ವಸಂಸ್ಥೆಗೆ ಪತ್ರ ಬರೆದಿದ್ದಾರೆ.
ಬೀಡಿ ಕಟ್ಟಿ ಬೆಳೆಸಿದ ಅಮ್ಮನಿಗೆ 'ಚಿನ್ನ'ದ ಕಾಣಿಕೆ ಕೊಟ್ಟ ಯೋಗಪಟು ನಿಖಿಲ್
4 ವರ್ಷಗಳ ಹಿಂದಿನ ಮಾತು...ಎಸ್‌ಎಸ್‌ಎಲ್‌ಸಿ ಮುಗಿಸಿದ್ದ ನಿಖಿಲ್ ಪೂಜಾರಿ ಅವರು ಪಿಯುಸಿಗೆ ಪ್ರವೇಶ ಪಡೆದುಕೊಂಡು, ವಿಜ್ಞಾನ ವಿಷಯವನ್ನು ಆಯ್ಕೆ ಮಾಡಿಕೊಂಡಿದ್ದರು. ಬಾಲ್ಯದಿಂದಲೇ ಯೋಗಾಭ್ಯಾಸ ಮಾಡುತ್ತ ಬೆಳೆದ ಅವರಿಗೆ ಮುಂದೊಂದು ದಿನ ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸುತ್ತೇನೆ ಎಂಬ ಆತ್ಮವಿಶ್ವಾಸವೂ ಇತ್ತು. ಅದೇ ಆಶಾ ಭಾವನೆಯೊಂದಿಗೆ ಸ್ಪರ್ಧೆಯೊಂದರಲ್ಲಿ ಭಾಗಿಯಾಗಿದ್ದರು. ಆದರೆ ದುರದೃಷ್ಟವಶಾತ್, ಕೇವಲ 0.5 ಅಂಕದಿಂದ ರಾಷ್ಟ್ರಮಟ್ಟದ ಯೋಗ ಸ್ಪರ್ಧೆಗೆ ಆಯ್ಕೆಯಾಗುವ ಅವಕಾಶ ಕೈತಪ್ಪಿತ್ತು. ಆದರೂ ನಂಬಿಕೆ ಕಳೆದುಕೊಳ್ಳದ ನಿಖಿಲ್, ನಿರಂತರ ಪ್ರಯತ್ನದ ಫಲವಾಗಿ ತಮ್ಮ ಕನಸನ್ನು ನನಸಾಗಿಸಿಕೊಂಡಿದ್ದಾರೆ.
ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ: 1969ರಿಂದ ಪ್ರಶಸ್ತಿ ಪಡೆದವರ ಪಟ್ಟಿ ಇಲ್ಲಿದೆ...
ಸಿನಿರಂಗದ ಏಳಿಗೆಗೆ ಶ್ರಮಿಸಿದ ಕಲಾವಿದರಿಗೆ ನೀಡಲಾಗುವ ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವವೇ 'ದಾದಾಸಾಹೇಬ್ ಫಾಲ್ಕೆ' ಪ್ರಶಸ್ತಿ.
1913ರಲ್ಲಿ ಭಾರತದ ಮೊದಲ ಪೂರ್ಣಪ್ರಮಾಣದ ಮೂಕಿ ಚಿತ್ರ 'ರಾಜಾ ಹರಿಶ್ಚಂದ್ರ' ನಿರ್ಮಿಸಿದ್ದ 'ಭಾರತೀಯ ಚಿತ್ರರಂಗದ ಪಿತಾಮಹ' ಧುಂಡಿರಾಜ್ ಗೋವಿಂದ್ ಫಾಲ್ಕೆ ಅವರ ಸ್ಮರಣಾರ್ಥ 1969ರಲ್ಲಿ ಈ ಪ್ರಶಸ್ತಿಯನ್ನು ಪ್ರಾರಂಭಿಸಲಾಯಿತು.
ಡಚ್ CEOಯಿಂದ ಉದ್ಯೋಗದ ಆಫರ್ ಬೆನ್ನಲ್ಲೇ ಮುಂದಿನ ಹೆಜ್ಜೆಯಿಟ್ಟ ಸುರೇಂದ್ರ
ಮಧ್ಯಪ್ರದೇಶದ ರಾಜ್‌ಗಢ ಜಿಲ್ಲೆಯ ಬ್ಯಾವರಾ ಪಟ್ಟಣದ 20 ವರ್ಷದ ಸುರೇಂದ್ರ ಕಲುಷಿತಗೊಂಡಿದ್ದ ಅಜ್ನಾರ್ ನದಿಯನ್ನು ಸ್ವತಃ ಕೈಯಾರೆ ಸ್ವಚ್ಛಗೊಳಿಸುವ ಮೂಲಕ ದೇಶದ ಗಮನ ಸೆಳೆದಿದ್ದರು. ಸಾಮಾಜಿಕ ಮಾಧ್ಯಮದಲ್ಲಿ ‘ಬಿಟ್ಟು ತಬಾಹಿ’ ಎಂದೇ ಖ್ಯಾತಿ ಪಡೆದುಕೊಂಡಿರುವ ಸುರೇಂದ್ರ ಅವರ ಪರಿಸರ ಕಾಳಜಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಸಿಕ್ಕಿತ್ತು. ಆ ಬಳಿಕ ‘ದಿ ಓಷನ್ ಕ್ಲೀನಪ್’ ಸಂಸ್ಥೆಯ ಸಿಇಒ ಬೋಯನ್ ಸ್ಲ್ಯಾಟ್ ಅವರು ಸುರೇಂದ್ರ ಶ್ರಮಕ್ಕೆ ಮನಸೋತು ತಮ್ಮ ಸಂಸ್ಥೆಯಲ್ಲಿ ಉದ್ಯೋಗದ ಆಫರ್ ನೀಡಿದ್ದರು.
ಸಾಗರ ಇಲ್ಲದಿದ್ದರೆ ನೆಹರೂ ಕುಟುಂಬ ಅರಬ್ ನಲ್ಲೂ ಚುನಾವಣೆಗೆ ನಿಲ್ತಿತ್ತು: MP ಸಿಎಂ
ಸಮುದ್ರ ಅಡ್ಡ ಬರದೇ ಇದ್ದಿದ್ದರೆ, ನೆಹರೂ-ಗಾಂಧಿ ಕುಟುಂಬದ ಸದಸ್ಯರು ಚುನಾವಣೆಯಲ್ಲಿ ಸ್ಪರ್ಧಿಸಲು ಅರಬ್ ದೇಶಗಳಿಗೆ ಬೇಕಾದರೂ ಹೋಗುತ್ತಿದ್ದರು ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಭಾನುವಾರ ವ್ಯಂಗ್ಯವಾಡಿದ್ದಾರೆ.