
ವಿಬಿಜಿರಾಮ್‌ಜಿ ಆರಂಭಿಕ ಗೊಂದಲಗಳೇ ಯೋಜನೆ ಜಾರಿಗೆ ತೊಡಕು
ಚಿಕ್ಕಮಗಳೂರು: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ಎಂಜಿಎಂಎನ್‌ಆರ್‌ಇಜಿ) ಯೋಜನೆ ಈಗ ‘ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್‌ಗಾರ್ ಆ್ಯಂಡ್ ಅಜೀವಿಕ್ ಮಿಷನ್ (ವಿಬಿ ಜಿ ರಾಮ್‌ಜಿ) ಎಂದು ಬದಲಾಗಿದೆ. ಯೋಜನೆ ಜಾರಿಯಾಗಿ ಎರಡು ತಿಂಗಳಾಗಿದ್ದು, ಆರಂಭಿಕ ಗೊಂದಲಗಳು ಇನ್ನೂ ಮುಂದುವರಿದು ಯೋಜನೆ ಜಾರಿಯಲ್ಲಿ ಹಿನ್ನಡೆಯಾಗಿದೆ.
ನರೇಗಾ ಯೋಜನೆಯಡಿ 268 ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶ ಇತ್ತು. ವಿಬಿ ಜಿ ರಾಮ್‌ಜಿ ಯೋಜನೆಯಡಿ 317 ಕಾಮಗಾರಿಗಳಿಗೆ ಅವಕಾಶ ಇದೆ. ಕಾಮಗಾರಿಗಳ ಸಂಖ್ಯೆ ಹೆಚ್ಚಳವಾಗಿದೆ. ಆದರೆ, ಗೊಂದಲಗಳಿಂದ ಯೋಜನೆ ಕಾರ್ಯಗತವಾಗಲು ತೊಡಕಾಗಿದೆ.
2026–27ರ ಆರ್ಥಿಕ ವರ್ಷದಲ್ಲಿ ಏಪ್ರಿಲ್, ಮೇ ಮತ್ತು ಜೂನ್ ತನಕ ನರೇಗಾ ಯೋಜನೆಯಡಿ 2.05 ಲಕ್ಷ ಮಾನವ ದಿನಗಳನ್ನು ಸೃಜಿಸಿ ಉದ್ಯೋಗ ನೀಡಲಾಗಿದೆ. ಆದರೆ, ಜುಲೈ 1ರಿಂದ ವಿಬಿ ಜಿ ರಾಮ್‌ಜಿ ಯೋಜನೆ ಜಾರಿಯಾಗಿದೆ. ಎರಡು ತಿಂಗಳ ಅವಧಿಯಲ್ಲಿ 63 ಸಾವಿರ ಮಾನವ ದಿನಗಳಷ್ಟೇ ಸೃಜನೆಯಾಗಿವೆ.
ವಿಬಿ ಜಿ ರಾಮ್‌ಜಿ ಯೋಜನೆಯಡಿ ಸೃಜನೆಯಾಗಿರುವ 63 ಸಾವಿರ ಮಾನವ ದಿನಗಳಲ್ಲಿ ಮಹಿಳೆಯರಿಗೆ 34 ಸಾವಿರ ಮಾನವ ದಿನ, ಪರಿಶಿಷ್ಟ ಜಾತಿಯವರಿಗೆ 10 ಸಾವಿರ ಮತ್ತು ಪರಿಶಿಷ್ಟ ಪಂಗಡಿದವರಿಗೆ 2 ಸಾವಿರ ಮಾನವ ದಿನಗಳನ್ನು ನೀಡಲಾಗಿದೆ.
ತಾಲ್ಲೂಕುವಾರು ಮಾಹಿತಿ ಗಮನಿಸಿದರೆ ಕಡೂರು ತಾಲ್ಲೂಕಿನಲ್ಲಿ 17 ಸಾವಿರ ಮಾನವ ದಿನಗಳು ಸೃಜನೆಯಾಗಿವೆ. ಕಳಸ ತಾಲ್ಲೂಕಿನಲ್ಲಿ ಒಂದೇ ಒಂದು ಮಾನವ ದಿನವೂ ಸೃಜನೆಯಾಗಿಲ್ಲ. ಮನೆ ನಿರ್ಮಾಣ ಯೋಜನೆಯಡಿ 79,763 ಜಾಬ್ ಕಾರ್ಡ್‌ಗಳು ಸಕ್ರಿಯವಾಗಿದ್ದು, 7,228 ಉದ್ಯೋಗಕ್ಕಾಗಿ ಬೇಡಿಕೆ ಇದೆ.
ವೈಯಕ್ತಿಕ ಕಾಮಗಾರಿ, ರಾಜ್ಯ ಮತ್ತು ಕೇಂದ್ರ ಸರ್ಕಾರದ ಅನುದಾನ ಬಳಕೆಯ ಕಾರ್ಯವಿಧಾನ, ಕೂಲಿ–ಸಾಮಗ್ರಿ ಅನುಪಾತ ಸೇರಿ ಹಲವು ಗೊಂದಲಗಳಿವೆ. ಇವು ಪರಿಹಾರವಾಗದ ಕಾರಣ ಮಾನವ ದಿನಗಳನ್ನು ಸೃಜಿಸಿ ಉದ್ಯೋಗ ನೀಡಲು ತೊಡಕಾಗಿದೆ.
ಇಡಬ್ಲ್ಯುಎಸ್ ವರ್ಗಕ್ಕೆ ಮಾತ್ರ ವೈಯಕ್ತಿಕ ಕಾಮಗಾರಿ
ವಿಬಿ ಜಿ ರಾಮ್‌ಜಿ ಯೋಜನೆಯಡಿ ವೈಯಕ್ತಿಕ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶ ಇದೆ. ದನ, ಕುರಿ, ಮೇಕೆ, ಕೋಳಿ ಮತ್ತು ಹಂದಿ ಸಾಕಾಣಿಕೆಗೆ ಶೆಡ್ ನಿರ್ಮಾಣ, ಕೃಷಿಹೊಂಡ, ಬಾವಿ ನಿರ್ಮಾಣ, ಬಚ್ಚಲು ಗುಂಡಿ, ಜೈವಿಕ ಗೊಬ್ಬರ ಘಟಕ, ಎರೆಹುಳು ಗೊಬ್ಬರ ತೊಟ್ಟಿಗಳ ನಿರ್ಮಾಣ, ಮನೆ ನಿರ್ಮಾಣ ಕಾಮಗಾರಿಗಳು ವೈಯಕ್ತಿಕ ಕಾಮಗಾರಿಗಳ ಪಟ್ಟಿಯಲ್ಲಿವೆ.
ನರೇಗಾ ಯೋಜನೆಯಡಿ ವೈಯಕ್ತಿಕ ಕಾಮಗಾರಿ ಕೈಗೊಳ್ಳಲು ಬಿಪಿಎಲ್ ಪಡಿತರ ಚೀಟಿ ಹೊಂದಿದವರಿಗೆ ಅವಕಾಶ ಇತ್ತು. ಆದರೆ, ಈಗ ವಿಬಿ ಜಿ ರಾಮ್‌ಜಿ ಯೋಜನೆಯಡಿ ವೈಯಕ್ತಿಕ ಕಾಮಗಾರಿಗಳ ಫಲಾನುಭವಿಗಳು ಬಿಪಿಎಲ್ ಬದಲಿಗೆ ಇಡಬ್ಲ್ಯುಎಸ್ ವರ್ಗ ಎಂದು ಉಲ್ಲೇಖಿಸಲಾಗಿದೆ.
ಆರ್ಥಿಕ ಹಿಂದುಳಿದ ವರ್ಗಗಳ (ಇಡಬ್ಲ್ಯುಎಸ್) ಮೀಸಲಾತಿ ಪಟ್ಟಿಯಲ್ಲಿ ಎಸ್‌ಸಿ–ಎಸ್‌ಟಿ ಮತ್ತು ಒಬಿಸಿ ವರ್ಗಗಳು ಇಲ್ಲ. ಜಿಲ್ಲೆಯಲ್ಲಿ ಅತೀ ಹೆಚ್ಚು ಫಲಾನುಭವಿಗಳು ಎಸ್‌ಸಿ–ಎಸ್‌ಟಿ ಮತ್ತು ಒಬಿಸಿ ಸಮುದಾಯದವರೇ ಇದ್ದಾರೆ. ಇದರಿಂದಾಗಿ ವೈಯಕ್ತಿಕ ಕಾಮಗಾರಿ ಕೈಗೊಳ್ಳಲು ತೊಡಕಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಅಂಗನವಾಡಿ ಕಡ್ಟಡ ನಿರ್ಮಾಣಕ್ಕೆ ವಿಬಿ ಜಿರಾಮ್‌ಜಿ ಯೋಜನೆಯಡಿ ಅವಕಾಶ ಇದೆ. ಆದರೆ, ಲಾಗಿನ್ ಬಗ್ಗೆ ಸ್ಪಷ್ಟತೆ ಇಲ್ಲದಿರುವುದು ಹಿನ್ನಡೆಯಾಗಿದೆ. ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಎರಡು ಸರ್ಕಾರಗಳ ಅನುದಾನ ಬಳಕೆಯಾಗಲಿದೆ. ಆ ಅನುದಾನ ಒಟ್ಟುಗೂಡಿಸಿ ಯಾವ ಲಾಗಿನ್ ಮೂಲಕ ಪಾವತಿಸಬೇಕು ಎಂಬುದಕ್ಕೆ ಯೋಜನೆಯ ಎಸ್‌ಇಪಿಯಲ್ಲಿ ಸ್ಪಷ್ಟತೆ ಇಲ್ಲ. ಇದರಿಂದಾಗಿ ವಿಬಿ ಜಿರಾಮ್‌ಜಿ ಯೋಜನೆಯಡಿ ಅಂಗನವಾಡಿ ಕಟ್ಟಡ ನಿರ್ಮಾಣ ಹಿನ್ನೆಡೆಯಾಗಿದೆ. ಸ್ಪಷ್ಟನೆ ಕೇಳಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಮೇವು ಉತ್ಪಾದನೆಗೂ ಅವಕಾಶ
ಜಿಲ್ಲೆಯ ಅಮೃತ್ ಮಹಲ್ ಕಾವಲುಗಳಲ್ಲಿ ಮೇವು, ಗೋಕಟ್ಟೆ, ಕೊಳವೆಬಾವಿ ಸೇರಿ ಹಲವು ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶ ಇದೆ. ಆದರೆ, ಗೊಂದಲಗಳು ಬಗೆಹರಿಯದ ಕಾರಣ ಮೇವು ಬೆಳೆಯಲು ಕೂಡ ಹಿನ್ನಡೆಯಾಗಿದೆ. 6 ಸಾವಿರ ಎಕರೆ ಅಮೃತ್ ಮಹಲ್ ಕಾವಲುಗಳಿವೆ. 78 ಕಾಮಗಾರಿಗಳನ್ನು ಕೈಗೊಳ್ಳಲು ಕ್ರಿಯಾ ಯೋಜನೆಯನ್ನು ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಮಾಡಿದ್ದಾರೆ. 51 ಸಾವಿರದಷ್ಟು ಮಾನವ ದಿನಗಳು ಸೃಜನೆಯಾಗಲು ಅವಕಾಶ ಇದೆ ಎಂದೂ ಅಂದಾಜಿಸಿದ್ದಾರೆ.
ನರೇಗಾ ಮತ್ತು ವಿಬಿ ಜಿರಾಮ್‌ಜಿ ಮಾನವ ದಿನಗಳ ಸೃಜನೆ ವಿವರ
ತಾಲ್ಲೂಕು; ನರೇಗಾ(ಏಪ್ರಿಲ್‌ನಿಂದ ಜೂನ್; ವಿಬಿ ಜಿರಾಮ್‌ಜಿ(ಜುಲೈ ಮತ್ತು ಆಗಸ್ಟ್)
ಅಜ್ಜಂಪುರ; 20,000; 9000
ಚಿಕ್ಕಮಗಳೂರು; 28,000; 10,000
ಕಡೂರು; 62,000; 17,000
ಮೂಡಿಗೆರೆ; 14,000; 5,000
ನರಸಿಂಹರಾಜಪುರ; 14,000; 3,000
ಶೃಂಗೇರಿ; 16,000; 4,000
ತರೀಕೆರೆ; 24,000; 9,000
ಒಟ್ಟು; 2,05,000; 63,000
ಹಿಂದಿಗಿಂತ ಈಗ ಹೆಚ್ಚು ಅನುಕೂಲ
ನರೇಗಾ ಯೋಜನೆಯಡಿ 268 ಕಾಮಗಾರಿ ಇದ್ದವು. ಈಗ ವಿಬಿ ಜಿ ರಾಮ್‌ಜಿ ಯೋಜನೆಯಡಿ 317 ಕಾಮಗಾರಿಗಳಿವೆ. ಹಿಂದಿಗಿಂತ ಈಗ ಹೆಚ್ಚು ಅನುಕೂಲ ಆಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಕೃಷಿ, ಪ್ರವಾಹ ನಿರ್ವಹಣೆ, ನೀರಾವರಿಗೆ ಈಗ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗಿದೆ. ಅದರೊಂದಿಗೆ ಪಾರದರ್ಶಕತೆಗೆ ಹೆಚ್ಚು ಒತ್ತು ನೀಡಲಾಗಿದೆ. ಅದೇ ರೀತಿ ಜವಾಬ್ದಾರಿಯನ್ನೂ ನೀಡಲಾಗಿದೆ ಎಂದರು. ‘ಬಿಪಿಎಲ್ ಪಡಿತರ ಚೀಟಿ ಹೊಂದಿದವರಿಗೆ ವೈಯಕ್ತಿಕ ಕಾಮಗಾರಿ ಕೈಗೊಳ್ಳಲು ಅವಕಾಶ ಆಗುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತಾವ ಸಿದ್ಧಪಡಿಸಲು ತಿಳಿಸಲಾಗಿದ್ದು, ಅದನ್ನು ಕೇಂದ್ರಕ್ಕೆ ಕಳುಹಿಸಿ ಸರಿಪಡಿಸಲು ಪ್ರಯತ್ನ ನಡೆಸಲಾಗುವುದು’ ಎಂದು ಹೇಳಿದರು.