
ಚಿಂಚೋಳಿ: ಐದು ವರ್ಷಗಳಲ್ಲಿ ಸರ್ಕಾರಿ ಶಾಲೆಯ ದಾಖಲಾತಿ ದುಪ್ಪಟ್ಟು
ಚಿಂಚೋಳಿ: ಶಾಲೆ ಎಂಬುದು ಕೇವಲ ನಾಲ್ಕು ಗೋಡೆಗಳ ಕಟ್ಟಡವಲ್ಲ. ಮಗುವಿನ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುವ ವಿದ್ಯಾ ದೇಗುಲ. ಜ್ಞಾನಾರ್ಜನೆ ಜತೆಗೆ ಮಕ್ಕಳ ವ್ಯಕ್ತಿತ್ವ ವಿಕಸನ ಹಾಗೂ ಸಂಸ್ಕಾರ ಕೇಂದ್ರವಾಗಿದೆ.
ಶಿಸ್ತು, ಕಲಿಕಾ ವಾತಾವರಣ, ಮಗುವಿನ ಸರ್ವತೋಮುಖ ಬೆಳವಣಿಗೆಗೆ ಮಾರ್ಗದರ್ಶನ ನೀಡುವ ಶಿಕ್ಷಣ ಕೇಂದ್ರವೊಂದು ಕೋಮಾ ಸ್ಥಿತಿಯಿಂದ ಫಿನಿಕ್ಸ್ ಪಕ್ಷಿಯಂತೆ ಮೇಲೆದ್ದ ಸರ್ಕಾರಿ ಶಾಲೆಯ ಕತೆಯಿದು.
ಖಾಸಗಿ ಶಾಲೆಗಳ ಪೈಪೋಟಿ ಹಾಗೂ ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವ ಕಾಲಘಟ್ಟದಲ್ಲಿ ತಾಲ್ಲೂಕಿನ ಕಲಭಾವಿ ತಾಂಡಾದ ಸರ್ಕಾರಿ ಹಿರಿಯ ಪ್ರಾಥಮಿಕ ಕೇವಲ ಐದೇ ವರ್ಷದಲ್ಲಿಯೇ ದಾಖಲಾತಿ ದುಪ್ಪಟ್ಟಾಗಿ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುತ್ತಿದೆ.
ಮುಖ್ಯ ಶಿಕ್ಷಕರ ಕೊಠಡಿ, ಕಚೇರಿ ಹಾಗೂ ಅಕ್ಷರ ದಾಸೋಹ ಅಡುಗೆ ಕೋಣೆ ಮತ್ತು ಕುಡಿವ ನೀರಿನ ಕೊರತೆಗಳ ಮಧ್ಯೆ ಗುಣಾತ್ಮಕ ಶಿಕ್ಷಣದ ಪರಿಣಾಮ ಸಮುದಾಯಕ್ಕೆ ತೋರಿಸುವಲ್ಲಿ ಶಾಲೆಯ ಶಿಕ್ಷಕರು ಯಶಸ್ವಿಯಾಗಿದ್ದಾರೆ.
ಮಕ್ಕಳ ದಾಖಲಾತಿ: 2022–23 (43), 2023–24 (58), 2024–25 (63), 2025–26 (72), 2026–27 (76)ಕ್ಕೆ ತಲುಪಿದೆ. ಕಲಭಾವಿ ತಾಂಡಾ ಮತ್ತು ಬಾವಿ ತಾಂಡಾದ ಮಕ್ಕಳು ಚಿಂಚೋಳಿ, ಚಂದಾಪುರದ ವಿವಿಧ ಖಾಸಗಿ ಶಾಲೆಗಳಿಂದ ವರ್ಗಾವಣೆ ಪ್ರಮಾಣ ಪತ್ರ ಪಡೆದುಕೊಂಡು ತಮ್ಮ ತಾಂಡಾದ ಸರ್ಕಾರಿ ಶಾಲೆಗೆ ದಾಖಲಿಸುತ್ತಿದ್ದಾರೆ. ಐದು ವರ್ಷಗಳ ಹಿಂದೆ 46 ಮಕ್ಕಳ ದಾಖಲಾತಿ ಹೊಂದಿದ್ದ ಶಾಲೆಯಲ್ಲಿ ಈಗ ದಾಖಲಾತಿ ಸಂಖ್ಯೆ 76ಕ್ಕೆ ಏರಿದೆ.
ಶಾಲೆಯಲ್ಲಿ ಕೇವಲ ಒಬ್ಬ ಶಿಕ್ಷಕರು ಮಾತ್ರ ಇದ್ದರು. ಕಲಿಕೆಯೂ ಸಂಪೂರ್ಣ ಕುಸಿದಿತ್ತು. ಇದರಿಂದ ನಿತ್ಯ 10–15 ಮಕ್ಕಳು ಮಾತ್ರ ಶಾಲೆಗೆ ಹಾಜರಾಗುತ್ತಿದ್ದರು. ಇದರಿಂದ ತಾಂಡಾದ ಜನ ತಮ್ಮ ಮಕ್ಕಳನ್ನು ತಾಲ್ಲೂಕು ಕೇಂದ್ರದಲ್ಲಿರುವ ಖಾಸಗಿ ಶಾಲೆಗೆ ದಾಖಲಿಸಿದ್ದರು ಎನ್ನುತ್ತಾರೆ ಶಿಕ್ಷಣ ಪ್ರೇಮಿ ಗೋಪಾಲ ಜಾಧವ. ಈಗ ತಮ್ಮ ಊರಿನ ಶಾಲೆಯಲ್ಲಿಯೇ ಗುಣಮಟ್ಟದ ಶಿಕ್ಷಣ ದೊರೆಯುತ್ತಿರುವ ಹಿನ್ನೆಲೆಯಲ್ಲಿ ತಾಂಡಾದ ಜನರು ಖಾಸಗಿ ಶಾಲೆ ತೊರೆದು ಮರಳಿ ಸರ್ಕಾರಿ ಶಾಲೆಗೆ ದಾಖಲಾದ ಮಕ್ಕಳ ಸಂಖ್ಯೆ 20 ದಾಟಿದೆ. ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ಪಡೆಯುತ್ತಿರುವ ಶಾಲೆ ಮಕ್ಕಳಿಗೆ ಮುಖ್ಯಶಿಕ್ಷಕಿ ಸಹಿತ ಮೂವರು ಶಿಕ್ಷಕಿಯರು ಮತ್ತು ಓರ್ವ ಅತಿಥಿ ಶಿಕ್ಷಕಿ ಸೇವೆ ಸಲ್ಲಿಸುತ್ತಿದ್ದು ಮಕ್ಕಳು ತಮ್ಮ ತರಗತಿಯ ಕಲಿಕಾ ಸಾಮರ್ಥ್ಯ ಸಾಧಿಸುವಲ್ಲಿ ಯಶಶ್ವಿಯಾಗಿದ್ದಾರೆ.
ನಾಲ್ವರು ಶಿಕ್ಷಕಿಯರು ತಮ್ಮ ಕ್ರಿಯಾಶೀಲತೆಯಿಂದ ಮಾದರಿಯಾಗಿದ್ದಾರೆ. ಮಕ್ಕಳನ್ನು ಕರೆ ತರಲು ಶಿಕ್ಷಕಿಯರೇ ಮನೆ ಮನೆಗೆ ತೆರಳಿ ಪಾಲಕರ ಮನವೊಲಿಸಿದರು. ಪರಿಣಾಮ ಮಕ್ಕಳ ಹಾಜರಾತಿಯಲ್ಲಿ ಗಮನಾರ್ಹ ಹೆಚ್ಚಳವಾಯಿತು.
ನಾವು ಪಠ್ಯ ಭೋಧನೆ, ಪಾಠ, ರಸಪ್ರಶ್ನೆ ಆರಂಭಿಸಿ ಮಕ್ಕಳ ಕಲಿಕೆ ಸುಧಾರಿಸಿದೆವು. ಆಗ ಶಾಲೆ ಸಮುದಾಯದ ಗಮನ ಸೆಳೆಯಿತು. ಇದಕ್ಕೆ ಶಾಲಾ ಮಕ್ಕಳ ಪಾಲಕರ ವ್ಯಾಟ್ಸ್‌ಆ್ಯಪ್ ಗ್ರುಪ್ ನೆರವಾಯಿತು ಎನ್ನುತ್ತಾರೆ ಮುಖ್ಯ ಶಿಕ್ಷಕಿ ಶಂಕ್ರಮ್ಮ ದುಕಾನ್.
ಈಗ ಸಭೆ ಕರೆದರೆ ಪಾಲಕರು ಹೆಚ್ಚಾಗಿ ಬರುತ್ತಾರೆ, ಶೇ 95 ಮಕ್ಕಳ ಹಾಜರಾತಿಯಿದೆ. ಪೂಜೆ ಹಬ್ಬ ಹರಿದಿನಗಳಲ್ಲಿ ಶೇ80ರಿಂದ 85 ಹಾಜರಾತಿ ಇರಲಿದೆ. ಮಕ್ಕಳ ಶಿಸ್ತು, ಕಲಿಕೆಯಿಂದ ಸ್ಫೂರ್ತಿ ಪಡೆದ ಬೇರೆ ಪಾಲಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಯಿಂದ ವರ್ಗಾವಣೆ ಪತ್ರ ಪಡೆದುಕೊಂಡು ಸ್ವಂತ ಊರಿನ ಶಾಲೆಗೆ ದಾಖಲಿಸಿದ್ದಾರೆ. ಮುಚ್ಚುವ ಹಂತ ತಲುಪಿದ್ದ ಶಾಲೆಗೆ ಶಿಕ್ಷಕಿಯರೇ ಪುನರ್ ಜನ್ಮ ನೀಡಿದ್ದಾರೆ. ಕೋಮಾದಲ್ಲಿದ್ದ ಶಾಲೆ ಮತ್ತು ಶಿಕ್ಷಣವನ್ನು ಪುನರುತ್ಥಾನಗೊಳಿಸಿದ ಶಿಕ್ಷಕಿಯರ ಶ್ರಮ ಸಾರ್ಥಕಗೊಳಿಸಿದೆ.
ಶಂಕ್ರಮ್ಮ ಬಿ. ದುಕಾನ, ಮುಖ್ಯ ಶಿಕ್ಷಕಿ
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260905-34-1495434146