
ಬದುಕಿನ ದಿಕ್ಕು ಬದಲಿಸಿದ ಗುರುವೆಂಬ ಬಂಧು
ಕಲಬುರಗಿ: ಸಾಮಾನ್ಯವಾಗಿ ಮನೆಗಳಲ್ಲಿ ನಮ್ಮ ಕುಟುಂಬದ ಹಿರಿಯರ ಫೋಟೊಗಳನ್ನು ಸ್ಮರಣೆಗಾಗಿ ಗೋಡೆಗೆ ನೇತು ಹಾಕುತ್ತೇವೆ. ಇತ್ತೀಚೆಗೆ ನಮ್ಮನ್ನಗಲಿದ ಕಲಬುರಗಿಯ ಹಿರಿಯ ಕಾಷ್ಠ ಹಾಗೂ ಶಿಲ್ಪಕಲಾವಿದ ಚಂದ್ರಶೇಖರ ವೈ. ಶಿಲ್ಪಿ ಅವರ ಮನೆಯಲ್ಲಿ ಕಕ್ಕೇರಿ ಗ್ರಾಮದಲ್ಲಿ ತಮ್ಮ ಶಾಲಾ ಶಿಕ್ಷಕರಾಗಿದ್ದ ಗುರುಲಿಂಗಯ್ಯ ಹಿರೇಮಠ ಅವರ ಭಾವಚಿತ್ರವನ್ನು ನೇತು ಹಾಕಿದ್ದಾರೆ.
ಇದಕ್ಕೆ ಕಾರಣ ಬಿಚ್ಚಿಟ್ಟಿದ್ದ ಚಂದ್ರಶೇಖರ ಶಿಲ್ಪಿ ಅವರು, ‘ಶಾಲಾ ಶುಲ್ಕ ಪಾವತಿಸಲೂ ಪರದಾಡುತ್ತಿದ್ದ ನನಗೆ ಗುರುಲಿಂಗಯ್ಯ ಮಾಸ್ತರ್ ತಮ್ಮದೇ ಸಂಬಳದಲ್ಲಿ ಶುಲ್ಕ ಪಾವತಿಸಿದ್ದರು. ಯಾವುದೋ ತಪ್ಪು ಮಾಡಿದ್ದಕ್ಕೆ ಲಕ್ಕಿ ಜಬರಿಯಿಂದ ನನ್ನ ಕಾಲಿಗೆ ಕೊಟ್ಟಿದ್ದ ಏಟಿಗೆ ರಕ್ತ ಸುರಿದಿತ್ತು. ಇದನ್ನು ಕಂಡು ತೀವ್ರ ವ್ಯಥೆಪಟ್ಟ ಅವರು ತಾವೇ ಅದಕ್ಕೆ ಔಷಧ ಹಚ್ಚಿ ಆರೈಕೆ ಮಾಡಿದ್ದರು. ನನ್ನ ಜೀವನದ ತಿರುವು ಸಿಕ್ಕಿದ್ದೇ ಅವರಿಂದಾಗಿ’ ಎಂದು ನೆನಪಿಸಿಕೊಂಡಿದ್ದರು.
ದೇಶದಾದ್ಯಂತ ಗುರುಲಿಂಗಯ್ಯನವರಂತಹ ಲಕ್ಷಾಂತರ ಶಿಕ್ಷಕರು ವಿದ್ಯಾರ್ಥಿಗಳ ಬಾಳು ಬೆಳಗುವಲ್ಲಿ ಅಹರ್ನಿಶಿ ಶ್ರಮಿಸಿದ್ದಾರೆ. ಅವರನ್ನು ಸ್ಮರಿಸಲೆಂದೇ ಸೆಪ್ಟೆಂಬರ್ 5ರಂದು ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.
ಭಾರತದಲ್ಲಿ ಗುರು–ಶಿಷ್ಯರ ಪರಂಪರೆಗೆ ಶತಮಾನಗಳ ಇತಿಹಾಸವೇ ಇದೆ. ಗುರುಕುಲ ಪದ್ಧತಿಯಿದ್ದ ಆದಿ ಕಾಲದಲ್ಲಿ ಶಿಷ್ಯರನ್ನು ಗುರುಗಳೇ ತಮ್ಮ ಮನೆಯಲ್ಲಿಟ್ಟುಕೊಂಡು ಊಟ ಕೊಟ್ಟು ಶಿಕ್ಷಣವನ್ನೂ ಕೊಡುತ್ತಿದ್ದರು. ಕೇವಲ ದ್ರೋಣಾಚಾರ್ಯರ ಪ್ರತಿಮೆ ಇಟ್ಟುಕೊಂಡು ಬಿಲ್ವಿದ್ಯೆ ಕಲಿತ ಏಕಲವ್ಯನಂತಹ ವಿದ್ಯಾರ್ಥಿ ರತ್ನಗಳೂ ದೇಶದಲ್ಲಿದ್ದಾರೆ.
ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರಗಳನ್ನು ಕೊಡಿಸಲು ತಮ್ಮ ಸಂಬಳದ ಬಹುತೇಕ ಭಾಗವನ್ನೇ ಖರ್ಚು ಮಾಡುವುದನ್ನು ನೋಡಿದ್ದೇವೆ.
ಧಾರವಾಡ ಜಿಲ್ಲೆಯಲ್ಲಿ ಶಿಕ್ಷಕಿಯಾಗಿದ್ದ ಲೂಸಿ ಸಾಲ್ಡಾನಾ ಅವರು ತಮ್ಮ ದುಡಿಮೆಯ ಹಣವನ್ನೆಲ್ಲ ಮಕ್ಕಳ ಶಿಕ್ಷಣಕ್ಕಾಗಿ, ಶಾಲೆಯ ಅಭಿವೃದ್ಧಿಗಾಗಿ ಖರ್ಚು ಮಾಡಿದ್ದಾರೆ. ಪಿಂಚಣಿ ಹಣವನ್ನೂ ದತ್ತಿ ಆರಂಭಿಸಿ ಆ ಮೂಲಕ ಶಿಕ್ಷಣಕ್ಕಾಗಿ ಖರ್ಚು ಮಾಡುತ್ತಿದ್ದಾರೆ. ಅವರ ಜೀವನ ಗಾಥೆಯನ್ನು ಆಧರಿಸಿ ಸಿನಿಮಾ ಸಹ ತಯಾರಾಗಿದೆ.
ಕೋವಿಡ್ ಸಮಯದಲ್ಲಿ ಎಲ್ಲರೂ ಮನೆಯಲ್ಲಿ ಕುಳಿತು ತಮ್ಮ ಜೀವರಕ್ಷಣೆ ಮಾಡಿಕೊಂಡರೆ ಶಿಕ್ಷಕರು ಪ್ರತಿ ಓಣಿಗೆ ಹೋಗಿ ಮಕ್ಕಳನ್ನು ಸೇರಿಸಿ ಪಾಠ ಮಾಡಿ ಬಂದರು. ಇನ್ನೂ ಕೆಲ ಶಿಕ್ಷಕರು ಆನ್‌ಲೈನ್ ಮೂಲಕ ಎಲ್ಲ ಮಕ್ಕಳನ್ನು ಸಂಪರ್ಕಿಸಿ ಅವರಿಗೆ ಪಾಠ ಮಾಡಿ ಪರೀಕ್ಷಾ ವಿಷಯಗಳನ್ನು ಮನದಟ್ಟು ಮಾಡಿಸಿದರು. ಇದಕ್ಕಾಗಿಯೇ ರಾಜ್ಯಮಟ್ಟದಲ್ಲಿ ವಿಷಯ ತಜ್ಞರ ಪಟ್ಟಿಯನ್ನು ತಯಾರಿಸಿ ನಿತ್ಯ ಅವರಿಂದ ಪಾಠ ಮಾಡಿಸಿದರು. ಈ ಕೈಂಕರ್ಯದಲ್ಲಿ ಕಲ್ಯಾಣ ಕರ್ನಾಟಕದ ಕಲಬುರಗಿ, ಬೀದರ್, ರಾಯಚೂರು ಜಿಲ್ಲೆಗಳ ಶಿಕ್ಷಕರ ಮುಂದೊಡಗುವಿಕೆಯೇ ಇದೆ.
ರಾಜ್ಯದ ಸರ್ಕಾರಿ ಶಾಲೆಗಳ ಶಿಕ್ಷಕರು ಪ್ರತಿಯೊಂದಕ್ಕೂ ಸರ್ಕಾರಿ ಅನುದಾನವನ್ನು ನೆಚ್ಚಿಕೊಳ್ಳದೇ ತಮ್ಮ ಶಾಲೆಗಳಿಗೆ ಕುರ್ಚಿ, ಟೇಬಲ್, ಸ್ಮಾರ್ಟ್ ಕ್ಲಾಸ್, ಕೊನೆಗೆ ಕಟ್ಟಡವನ್ನೂ ದುರಸ್ತಿ ಮಾಡಿಸಿದ್ದಾರೆ. ಮಕ್ಕಳ ಸಂದೇಹವನ್ನು ನಿವಾರಿಸಲು ತಡರಾತ್ರಿಯಲ್ಲಿಯೂ ವಿದ್ಯಾರ್ಥಿಗಳಿಗಾಗಿ ತಮ್ಮ ಮನೆ ಬಾಗಿಲನ್ನು ತೆರೆದ, ಹಸಿದು ಬಂದ ಮಕ್ಕಳಿಗೆ ಹೋಟೆಲ್‌ಗೆ ಕರೆದೊಯ್ದು ಊಟ ಮಾಡಿಸಿದ ಉದಾಹರಣೆಗಳೂ ಸಾಕಷ್ಟಿವೆ.
ಕಲಬುರಗಿಯ ಹಿಂಗುಲಾಂಬಿಕಾ ಅನುದಾನಿತ ಪ್ರೌಢಶಾಲೆಯ ಶಿಕ್ಷಕರು ಅತಿಹೆಚ್ಚು ಅಂಕಗಳನ್ನು ಪಡೆಯುವುದನ್ನು ಉತ್ತೇಜಿಸಲು ವಿದ್ಯಾರ್ಥಿಗಳನ್ನು ಸ್ವಂತ ಖರ್ಚಿನಲ್ಲಿ ಬೆಂಗಳೂರಿಗೆ ವಿಮಾನದಲ್ಲಿ ಕರೆದೊಯ್ದಿದ್ದರು. ಇಂತಹ ಘಟನೆಗಳು ವಿದ್ಯಾರ್ಥಿಗಳ ಜೀವನದಲ್ಲಿ ಅವಿಸ್ಮರಣೀಯ ಕ್ಷಣಗಳಾಗಿ ಉಳಿಯುತ್ತವೆ.
ತಮ್ಮ ಶಾಲೆಯ ಮಕ್ಕಳಿಗೆ ಅಗತ್ಯ ಕ್ರೀಡಾಪರಿಕರಗಳು, ಬೋಧನಾ ಸಾಮಗ್ರಿಗಳನ್ನು ತಮ್ಮ ಸಂಬಳದಲ್ಲಿ ಖರೀದಿ ಮಾಡುವುದರ ಜೊತೆಗೆ ವಿವಿಧ ಜನಪರ ಸಂಸ್ಥೆಗಳು ಹಾಗೂ ದಾನಿಗಳನ್ನು ಸಂಪರ್ಕಿಸಿ ಶಾಲೆಯ ಅಭಿವೃದ್ಧಿ ಮಾಡಿದ್ದಾರೆ. ಸದಾ ವಿದ್ಯಾರ್ಥಿಗಳು, ಶಾಲೆಗಳ ಶ್ರೇಯೋಭಿವೃದ್ಧಿಗೆ ಶ್ರಮಿಸುವ ಇಂತಹ ಶಿಕ್ಷಕರ ಸಂಖ್ಯೆ ಹೆಚ್ಚಾಗಲಿ.
ರಾಧಾಕೃಷ್ಣನ್ ಸ್ಮರಣಾರ್ಥ ಶಿಕ್ಷಕರ ದಿನ
ಭಾರತದ ರಾಷ್ಟ್ರಪತಿಗಳಾಗಿದ್ದ ಸರ್ವಪಲ್ಲಿ ರಾಧಾಕೃಷ್ಣನ್ ಅವರು ಜನಿಸಿದ ಸೆಪ್ಟೆಂಬರ್ 5ಅನ್ನು ಶಿಕ್ಷಕರ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ.
ತಮಿಳುನಾಡಿನಲ್ಲಿ ಜನಿಸಿದ ರಾಧಾಕೃಷ್ಣನ್ ಅವರು ಆಂಧ್ರಪ್ರದೇಶ ವಿ.ವಿ. ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಕುಲಪತಿಗಳಾಗಿ ಮೈಸೂರಿನ ಮಹಾರಾಜ ಕಾಲೇಜಿನ ತತ್ವಶಾಸ್ತ್ರ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದರು. ವಿದೇಶಗಳಲ್ಲೂ ತಮ್ಮ ತತ್ವಶಾಸ್ತ್ರದ ಪಾಂಡಿತ್ಯಪೂರ್ಣ ಉಪನ್ಯಾಸಗಳನ್ನು ನೀಡಿದ್ದರು.
ಉಪರಾಷ್ಟ್ರಪತಿ ಹುದ್ದೆಗೆ ಆಯ್ಕೆಯಾದ ಸಂದರ್ಭದಲ್ಲಿ ಮೈಸೂರಿನ ಮಹಾರಾಜ ಕಾಲೇಜಿನಲ್ಲಿದ್ದ ರಾಧಾಕೃಷ್ಣನ್ ಅವರನ್ನು ವಿದ್ಯಾರ್ಥಿಗಳು ಸಾರೋಟಿನಲ್ಲಿ ಕೂರಿಸಿ ಕುದುರೆಯ ಬದಲು ತಾವೇ ಎಳೆದುಕೊಂಡು ಗುರು ಭಕ್ತಿ ಸಲ್ಲಿಸಿದರು.
ತಮ್ಮ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸುವಂತೆ ಕರೆ ನೀಡಿದ್ದರು. ಅದರಂತೆಯೇ 1962ರಿಂದ ಸೆಪ್ಟೆಂಬರ್ 5 ಅನ್ನು ದೇಶದಾದ್ಯಂತ ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತದೆ. ಅಂದು ರಾಷ್ಟ್ರೀಯ, ರಾಜ್ಯಮಟ್ಟ ಹಾಗೂ ಜಿಲ್ಲಾ ಮಟ್ಟದಲ್ಲಿ ಸಾಧಕ ಶಿಕ್ಷಕರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಗುತ್ತದೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260905-34-2023585443