ಕಲಬುರಗಿ: ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಲೇಸರ್‌ ಶೋ ರಂಗು, ಡ್ರೋನ್ ಶೋ ಮೆರುಗು

ಕಲಬುರಗಿ: ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಲೇಸರ್‌ ಶೋ ರಂಗು, ಡ್ರೋನ್ ಶೋ ಮೆರುಗು

ಕಲಬುರಗಿ: ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಲೇಸರ್‌ ಶೋ ರಂಗು, ಡ್ರೋನ್ ಶೋ ಮೆರುಗು

ಕಲಬುರಗಿ: ವಿಶಾಲ ಕೆರೆ, ಪ್ರಶಾಂತ ವಾತಾವರಣ. ಮನಸ್ಸಿಗೆ ಮುದ ನೀಡುವ ಸಂಗೀತ ವಾದ್ಯಗಳ ನಿನಾದ. ಕತ್ತಲೆ ರಂಗು ತುಂಬಿದ ಲೇಸರ್‌ ಶೋ. ಕಗ್ಗತ್ತಲ ಬಾನಲ್ಲಿ ಕಲ್ಯಾಣ ಕರ್ನಾಟಕ ವೈಶಿಷ್ಟ್ಯ ಸ್ಫುಟವಾಗಿ ಪರಿಚಯಿಸಿದ ಡ್ರೋನ್ ಶೋ. ನಭದಲ್ಲಿ ಚಿತ್ತಾರ ಮೂಡಿಸಿದ ಪಟಾಕಿಗಳು...

ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ನಗರದ ಶರಣಬಸವೇಶ್ವರ ಅಪ್ಪ ಕೆರೆ ಆವರಣದಲ್ಲಿ ಬುಧವಾರ ರಾತ್ರಿ ಕಂಡ ದೃಶ್ಯಗಳಿವು.

ರಾತ್ರಿ 9.50ಕ್ಕೆ ಅಪ್ಪ ಕೆರೆಯ ವೇದಿಕೆಗೆ ಬಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಒಟ್ಟು ₹13.43 ಕೋಟಿ ವೆಚ್ಚದಲ್ಲಿ ಕೈಗೊಂಡ ಕೆರೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿದರು. ಬಳಿಕ ಅರ್ಧ ಗಂಟೆಗಳ ಕಾಲ ಲೇಸರ್‌ ಶೋ, ಡ್ರೋನ್ ಶೋ ಕಣ್ತುಂಬಿಕೊಂಡರು.

ಅಪ್ಪ ಕೆರೆಯ ಕೋಟೆ ಬದಿಯಲ್ಲಿ ಅಳವಡಿಸಿದ್ದ ಬಣ್ಣ–ಬಣ್ಣದ ಲೈಟ್‌ಗಳಿಂದ ಲೇಸರ್‌ ಕಿರಣಗಳ ಥಳಕುತ್ತ–ಬಳಕುತ್ತ ಆಗಸದಲ್ಲಿ ಚಿತ್ತಾರ ಮೂಡಿಸಿದರೆ, ಹಿನ್ನೆಲೆ ಸಂಗೀತ ಸೇರಿದ ಜನರಿಗೆ ಮುದ ನೀಡಿತು.

ಬಳಿಕ ವಿಶಿಷ್ಟ್ಯವಾದ ಡ್ರೋನ್ ಶೋ ಮೊದಲಾಯಿತು. ಅಪ್ಪ ಉದ್ಯಾನದ ಕಡೆಯಿಂದ ಆಗಸವನ್ನೇರಿದ ಡ್ರೋನ್‌ಗಳು ಕಗ್ಗತ್ತಲ ನಭದಲ್ಲಿ ಮೊದಲಿಗೆ ‘ಕಲ್ಯಾಣ ಕರ್ನಾಟಕ ಉತ್ಸವ –2026’ ಎಂದು ಮೂಡಿಸಿದವು.

ಬಳಿಕ ‘371(ಜೆ)’, ‘ರಾಷ್ಟ್ರಪಿತ ಮಹಾತ್ಮ ಗಾಂಧಿ’, ‘ಮೊದಲ ಪ್ರಧಾನಿ ಜವಾಹರ್‌ ಲಾಲ್‌ ನೆಹರೂ’, ಕಲ್ಯಾಣ ಕರ್ನಾಟಕದ ವಿಮೋಚನೆಯ ರೂವಾರಿ ‘ಸರ್ದಾರ್‌ ವಲ್ಲಭಭಾಯಿ ಪಟೇಲ್‌’ ಚಿತ್ರಗಳನ್ನು ಡ್ರೋನ್‌ಗಳು ಮೂಡಿಸಿದವು. ತದನಂತರ ಡೋನ್ ಲೇಸರ್‌ ಕಿರಣಗಳಲ್ಲಿ ‘ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌’ ಚಿತ್ರವೂ, ಕರ್ನಾಟಕದ ಸಾಂಸ್ಕೃತಿಕ ನಾಯಕ ‘ಬಸವಣ್ಣ’ನ ಚಿತ್ರವೂ ಮೂಡಿದವು. ನೆರೆದಿದ್ದ ಜನರು ಹರ್ಷೋದ್ಗಾರ, ಸಿಳ್ಳೆ, ಕೇಕ್‌ ಹಾಕಿ ಖುಷಿಪಟ್ಟರು.

ಕಲ್ಯಾಣ ಭಾಗದ ಹಂಪಿಯ ‘ಕಲ್ಲಿನ ರಥ’, ಬೀದರ್‌ನ ‘ಬಿದರಿ ಕಲೆ’, ಕೊಪ್ಪಳದ ‘ಕಿನ್ನಾಳ ಕಲೆ’ಗಳು ಡ್ರೋಣ್‌ ಶೋನಲ್ಲಿ ಮೂಡಿದವು. ಕಲಬುರಗಿಯ ಕಣ್ಣುಗಳಂತಿರುವ ಸೂಫಿಸಂತ ‘ಖಾಜಾ ಬಂದಾನವಾಜ್‌ ದರ್ಗಾ’ ಹಾಗೂ ‘ಶರಣಬಸವೇಶ್ವರ ದೇವಸ್ಥಾನ’ ಲೇಸರ್‌ ಬೆಳಕಿನಲ್ಲಿ ಮೂಡಿದವು. ಈ ವೇಳೆ ‘ಶರಣಬಸವೇಶ್ವರ ಮಹಾರಾಜ್‌ಕೀ ಜೈ’ ಎಂಬ ಹರ್ಷೋದ್ಘಾರ ಮೊಳಗಿತು. ಅಂತಿಮವಾಗಿ ‘ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌’ ಚಿತ್ರ ಆಕಾಶದಲ್ಲಿ ಮೂಡುವುದರೊಂದಿಗೆ ಡ್ರೋನ್ ಶೋ ಸಂಪನ್ನಗೊಂಡಿತು. ಬಳಿಕ ಕೆಲವು ನಿಮಿಷ ನಭದಲ್ಲಿ ಪಟಾಕಿಗಳು ಚಿತ್ತಾರ ಮೂಡಿಸಿದವು.

ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ₹10 ಕೋಟಿ ವೆಚ್ಚದಲ್ಲಿ ಹೊರಾಂಗಣ ಪಥ, ತಂತಿಬೇಲಿ ಹಾಗೂ ಆಲಂಕಾರಿಕ ಬೆಳಕು ವ್ಯವಸ್ಥೆ ಮಾಡಲಾಗಿದೆ. ಟಾಟಾ ಎಲೆಕ್ಟ್ರಾನಿಕ್ಸ್‌ನ ಸಿಎಸ್ಆರ್ ನಿಧಿಯಡಿ ₹2.43 ಕೋಟಿ ವೆಚ್ಚದಲ್ಲಿ ಆಂತರಿಕ ಪಥ, ಫೆನ್ಸಿಂಗ್, ಕೆರೆ ಪಥದ ಕೋಟೆ ಭಾಗದಲ್ಲಿ ಗ್ರಾನೈಟ್ ಪರ್ಗೋಲಾ ಮತ್ತು ಆಲಂಕಾರಿಕ ಬೆಳಕಿನ ವ್ಯವಸ್ಥೆ ಅಭಿವೃದ್ಧಿಪಡಿಸಲಾಗಿದೆ. ಕೆಕೆಆರ್‌ಡಿಬಿ ಅನುದಾನದಲ್ಲಿ ಮಹಾನಗರ ಪಾಲಿಕೆಯಿಂದ ₹1 ಕೋಟಿ ವೆಚ್ಚದಲ್ಲಿ ಕೆರೆ ಸುತ್ತಲೂ ಸಾರ್ವಜನಿಕ ಬಳಕೆಗೆ ಅನುಕೂಲವಾಗುವಂತೆ 11 ಡೆಕ್‌ಗಳನ್ನು ನಿರ್ಮಿಸಲಾಗಿದೆ. ಇವೆಲ್ಲವನ್ನೂ ಮುಖ್ಯಮಂತ್ರಿ ಶಿವಕುಮಾರ್ ಉದ್ಘಾಟಿಸಿದರು.

‘ಕಲ್ಯಾಣದ ಇತಿಹಾಸವೇ‌ ನಾಡಿನ ಇತಿಹಾಸ’

ಕಲಬುರಗಿ: ‘ಕಲ್ಯಾಣ ಕರ್ನಾಟಕದ ಇತಿಹಾಸ ಇಡೀ ಕರ್ನಾಟಕದ ಇತಿಹಾಸವಾಗಿ ಬದಲಾಗಿದೆ. ಕಲ್ಯಾಣ ಕರ್ನಾಟಕ ಭಾಗ ಯಾವುದಕ್ಕೂ ಕಡಿಮೆ ಇಲ್ಲದಂತೆ ಅಭಿವೃದ್ಧಿ ಹೊಂದುತ್ತಿದೆ. ಬೆಂಗಳೂರಿಗಿಂತ ಕಲಬುರಗಿ ಕಡಿಮೆಯೇನಿಲ್ಲ’ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.

‘ಪವಿತ್ರವಾದ ಸ್ವಾತಂತ್ರ್ಯ ನಮಗೆ ಸಿಕ್ಕ ಮೇಲೆ ಕಲ್ಯಾಣ ಕರ್ನಾಟಕ ಭಾಗಕ್ಕೆ ಸ್ವಾತಂತ್ರ್ಯ ಸಿಕ್ಕಿತು. ಇದು ಶುಭ ಸಂದರ್ಭ. ಜನರು ಸಂತಸದಿಂದ ಇರುವಂತೆ ಮಾಡುವುದೇ ಕಾಂಗ್ರೆಸ್ ಸರ್ಕಾರದ ಗುರಿ. ಇಂತಹ ಭವ್ಯ ಕಾರ್ಯಕ್ರಮ, ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಸಾಕ್ಷಿ ಗುಡ್ಡೆ’ ಎಂದರು.

‘ಮಲ್ಲಿಕಾರ್ಜುನ ಖರ್ಗೆ 371(ಜೆ) ಮೂಲಕ ಅವಕಾಶ ಹೆಬ್ಬಾಗಿಲು ತೆರೆದಿದ್ದಾರೆ. ಅತಿ ಹೆಚ್ಚು ವೈದ್ಯಕೀಯ, ಎಂಜಿನಿಯರಿಂಗ್ ಸೀಟು ಸೇರಿದಂತೆ ಸಾಕಷ್ಟು ಅಭಿವೃದ್ಧಿ ಕಾಣುತ್ತಿದೆ. ಈ ಭಾಗದ ಜನ ತಮ್ಮ ಮನೆಗಳಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಭಾವಚಿತ್ರ ಇಟ್ಟು ಪೂಜಿಸಬೇಕು. ಋಣಿಯಾಗಿರಬೇಕು’ ಎಂದು ಅವರು ಹೇಳಿದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ