
ಕಲ್ಯಾಣ ಕರ್ನಾಟಕದಲ್ಲಿ ₹1,775 ಕೋಟಿ ಕಾಮಗಾರಿಗಳಿಗೆ ಸಿಎಂ ಚಾಲನೆ: ಪ್ರಿಯಾಂಕ್
ಕಲಬುರಗಿ: ಇದೇ 17ರಂದು ಹೈದರಾ ಬಾದ್ ನಿಜಾಮರ ಆಡಳಿತದಿಂದ ವಿಮೋಚನೆಗೊಂಡ ಪ್ರಯುಕ್ತ ಆಚರಿಸ ಲಾಗುವ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಭಾಗವಹಿಸಲಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕಲಬುರಗಿ ಜಿಲ್ಲೆಯ ₹ 1,105 ಕೋಟಿ ಸೇರಿದಂತೆ ಕಲ್ಯಾಣ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಕೈಗೆತ್ತಿಕೊಳ್ಳಲಿರುವ ₹ 1,775 ಕೋಟಿ ಮೊತ್ತದ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ.
ನಗರದ ಐವಾನ್ ಇ ಶಾಹಿ ಅತಿಥಿ ಗೃಹದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಜಿಲ್ಲಾ ಉಸ್ತುವಾರಿಯೂ ಆದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು, ‘ಮುಖ್ಯಮಂತ್ರಿಗಳು ಗುರುವಾರ ಬೆಳಿಗ್ಗೆ 8.30ಕ್ಕೆ ಎಸ್.ವಿ.ಪಿ ವೃತ್ತದಲ್ಲಿರುವ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಪೊಲೀಸ್ ಪರೇಡ್ ಮೈದಾನದಲ್ಲಿ ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಪ್ರದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಕಲಬುರಗಿ ಜಿಲ್ಲೆಗೆ ಸಂಬಂಧಿಸಿದಂತೆ ಒಂದು ಮಹತ್ವದ ಘೋಷಣೆಯನ್ನೂ ಮಾಡುವ ನಿರೀಕ್ಷೆ ಇದೆ’ ಎಂದು ಅವರು ಹೇಳಿದರು.
ಬರಗಾಲದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡುವ ಚಿಂತನೆಯಲ್ಲಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ ಅವರು, ‘ಹಿಂದಿನ ಯುಪಿಎ ಸರ್ಕಾರದಲ್ಲಿ ಪ್ರಧಾನಿಯಾಗಿದ್ದ ಡಾ. ಮನಮೋಹನ್ ಸಿಂಗ್ ಹಾಗೂ ರಾಜ್ಯದಲ್ಲಿ ನಿಕಟಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಲ ಮನ್ನಾ ಮಾಡಿದ್ದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಉದ್ಯಮಿಗಳ ₹ 14 ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡಿದೆ. ಆದರೆ, ರೈತರತ್ತ ತಿರುಗಿಯೂ ನೋಡಿಲ್ಲ. ರಾಜ್ಯದಲ್ಲಿ ಮಳೆಗಾಲ ಇನ್ನೂ ಮುಗಿದಿಲ್ಲ. ಇನ್ನೂ ಎರಡು ವಾರ ಮಳೆಯ ಸ್ಥಿತಿಗತಿ ನೋಡಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ಹೇಳಿದರು.
‘ತಳವಾರ ಸಮುದಾಯದವರಿಗೆ ಎಸ್.ಟಿ. ಪ್ರಮಾಣ ಪತ್ರ ನೀಡಲು ವಿಳಂಬ ಮಾಡುತ್ತಿಲ್ಲ. ಈಗಾಗಲೇ ಡಿಸಿ ಲಾಗಿನ್‌ನಲ್ಲಿರುವ ಅರ್ಜಿಗಳನ್ನು ವಿಲೇವಾರಿ ಮಾಡಲಾಗುತ್ತಿದೆ. ಕಳೆದ ಬೆಳಗಾವಿ ಅಧಿವೇಶನದಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮುದಾಯದ ಮುಖಂಡರೊಂದಿಗೆ ಚರ್ಚಿಸಿಯೇ ಆದೇಶ ಮಾಡಿದ್ದು, ಅದರಂತೆ ಅರ್ಹರಿಗೆ ಎಸ್.ಟಿ. ಪ್ರಮಾಣ ಪತ್ರ ನೀಡಲಾಗುತ್ತಿದೆ. ಇದರಲ್ಲಿ ಯಾವುದೇ ಗೊಂದಲವಿಲ್ಲ. ಹಿಂದೆ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಮಾಡಿದ ಗೊಂದಲವನ್ನು ನಮ್ಮ ಸರ್ಕಾರ ಹಂತ ಹಂತವಾಗಿ ಪರಿಹಾರ ಕಲ್ಪಿಸುತ್ತಿದೆ’ ಎಂದು ಹೇಳಿದರು. ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಹಾಗೂ ಜೆಸ್ಕಾಂ ಅಧ್ಯಕ್ಷ ಪ್ರವೀಣ ಪಾಟೀಲ ಹರವಾಳ ಹಾಜರಿದ್ದರು.
‘ಅಪ್ಪ ಕೆರೆ ನೀರಿನ ಹರಿವಿಗೆ ಕನಿಷ್ಠ ಹಾನಿ’
ಹಿಂದಿನ ಬಿಜೆಪಿ ಸರ್ಕಾರ ಕೆರೆ ಅಭಿವೃದ್ಧಿ ಪ್ರಾಧಿಕಾರದ ನಿಯಮಗಳನ್ನು ಗಾಳಿಗೆ ತೂರಿ ಕೆರೆಯ ದಡದಲ್ಲಿ ಸಿಮೆಂಟ್ ಕಾಂಕ್ರೀಟ್ ಹಾಕಿತ್ತು. ಇದನ್ನು ನಾನೇ ಪ್ರಶ್ನೆ ಮಾಡಿದ್ದೆ. ಇದಕ್ಕೆ ಆದ ಹಾನಿಯನ್ನು ಸರಿಪಡಿಸಲು ಸಾಧ್ಯವಿಲ್ಲ. ಆದರೆ, ಹಾಗೆಯೇ ಬಿಡುವ ಬದಲು ತಜ್ಞರ ವರದಿ ಅನುಸಾರ ಅಲ್ಲಿ ವಾಕಿಂಗ್ ಪಾಥ್ ನಿರ್ಮಾಣ ಮಾಡಲಾಗಿದೆ. ಬೃಹತ್ ಕಂಬಗಳು, ಮೂರ್ತಿಗಳನ್ನು ಅಳವಡಿಸುವ ನಿರ್ಧಾರ ಕೈಬಿಡಲಾಗಿದೆ. ಕೆರೆಯ ಒಳಬರುವ ಹಾಗೂ ಹೊರಹೋಗುವ ನೀರಿನ ಮಾರ್ಗಕ್ಕೆ ಧಕ್ಕೆ ತರದೇ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಸಚಿವ ಪ್ರಿಯಾಂಕ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಈಗ ಆಗಿರುವ ಹಾನಿಯನ್ನು ಕನಿಷ್ಠಗೊಳಿಸುವ ನಿಟ್ಟಿನಲ್ಲಿ ಕೆಲ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಹಾಗೆಯೇ ಬಿಟ್ಟಿದ್ದರೆ ಅದಕ್ಕೆ ಖರ್ಚು ಮಾಡಿದ ಹಣವೂ ವ್ಯರ್ಥವಾಗುತ್ತಿತ್ತು ಎಂದರು.