ಹುಲಸೂರು: ಪ.ಪಂಚಾಯಿತಿಗೂ ಗ್ರಾ.ಪಂ ಮೀಸಲಾತಿಯೇ?

ಹುಲಸೂರು: ಪ.ಪಂಚಾಯಿತಿಗೂ ಗ್ರಾ.ಪಂ ಮೀಸಲಾತಿಯೇ?

ಹುಲಸೂರು: ಪ.ಪಂಚಾಯಿತಿಗೂ ಗ್ರಾ.ಪಂ ಮೀಸಲಾತಿಯೇ?

ಹುಲಸೂರ: ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಿ ಸರ್ಕಾರ ಅಧಿಸೂಚನೆ ಪ್ರಕಟಿಸಿದ ಬಳಿಕವೂ ಹುಲಸೂರು ಗ್ರಾಮ ಪಂಚಾಯಿತಿಯ ಚುನಾವಣೆಗೆ ಮೀಸಲಾತಿ ಪ್ರಕಟಿಸಿರುವುದು ಸಾರ್ವಜನಿಕರಲ್ಲಿ ಗೊಂದಲ ಮೂಡಿಸಿದೆ.

ರಾಜ್ಯ ಸಚಿವ ಸಂಪುಟವು 2025ರ ನವೆಂಬರ್ 27ರಂದು ಹುಲಸೂರನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಲು ನಿರ್ಧರಿಸಿತ್ತು. ಅದರಂತೆ 2026ರ ಜನವರಿ 8ರಂದು ಹುಲಸೂರು ಗ್ರಾಮ ಪಂಚಾಯಿತಿ ಪ್ರದೇಶವನ್ನು ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಒಳಪಡಿಸುವ ಸಂಬಂಧ ಅಧಿಸೂಚನೆಯೂ ಪ್ರಕಟವಾಗಿದೆ. ಹೀಗಿದ್ದರೂ ಆ.14ರಂದು ಹುಲಸೂರು ಗ್ರಾಮ ಪಂಚಾಯಿತಿಯ 12 ವಾರ್ಡ್‌ಗಳ 34 ಸದಸ್ಯ ಸ್ಥಾನಗಳಿಗೆ ಮೀಸಲಾತಿ ಪ್ರಕಟಿಸಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಪಟ್ಟಣ ಪಂಚಾಯಿತಿ ರಚನೆಗೆ ಸಚಿವ ಸಂಪುಟವೇ ನಿರ್ಧಾರ ಕೈಗೊಂಡಿರುವಾಗ ಗ್ರಾಮ ಪಂಚಾಯಿತಿ ಚುನಾವಣಾ ಪ್ರಕ್ರಿಯೆಯನ್ನು ಮುಂದುವರಿಸುವ ಅಗತ್ಯವೇನು? ಸಚಿವ ಸಂಪುಟದ ನಿರ್ಧಾರ ಹಾಗೂ ಅಧಿಸೂಚನೆಯ ಪ್ರಸ್ತುತ ಸ್ಥಿತಿ ಏನು? ಪಟ್ಟಣ ಪಂಚಾಯಿತಿ ರಚನೆಯ ಪ್ರಕ್ರಿಯೆ ಯಾವ ಹಂತದಲ್ಲಿದೆ? ಗ್ರಾಮ ಪಂಚಾಯಿತಿ ಚುನಾವಣೆಗೆ ಮೀಸಲಾತಿ ಪ್ರಕಟಿಸಲು ಕಾರಣವೇನು? ಎಂಬ ಪ್ರಶ್ನೆಗಳಿಗೆ ಸರ್ಕಾರ ಸ್ಪಷ್ಟ ಉತ್ತರ ನೀಡಬೇಕು ಎನ್ನುತ್ತಿದ್ದಾರೆ ಸಾರ್ವಜನಿಕರು.

ಅಭಿವೃದ್ಧಿಯ ನಿರೀಕ್ಷೆ: ಹುಲಸೂರು ಕೇವಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮವಾಗಿರದೆ, ತಾಲ್ಲೂಕು ಕೇಂದ್ರವಾಗಿ ವೇಗವಾಗಿ ಬೆಳೆಯುತ್ತಿರುವ ಪ್ರದೇಶವಾಗಿದೆ. ಜನಸಂಖ್ಯೆ ಹಾಗೂ ವಾಣಿಜ್ಯ ಚಟುವಟಿಕೆಗಳು ಹೆಚ್ಚುತ್ತಿದ್ದರೂ ಅಗತ್ಯ ಮೂಲಸೌಕರ್ಯಗಳ ಕೊರತೆ ಮುಂದುವರಿದಿದೆ. ಕುಡಿಯುವ ನೀರು, ಸಮರ್ಪಕ ರಸ್ತೆ, ಒಳಚರಂಡಿ, ಬೀದಿ ದೀಪ, ಸ್ವಚ್ಛತೆ ಹಾಗೂ ತ್ಯಾಜ್ಯ ನಿರ್ವಹಣೆಯಂತಹ ನಾಗರಿಕ ಸೌಲಭ್ಯಗಳಿಗಾಗಿ ಜನರು ಇನ್ನೂ ನಿರೀಕ್ಷಿಸುವಂತಾಗಿದೆ.

ಪಟ್ಟಣ ಪಂಚಾಯಿತಿ ರಚನೆಯಾದರೆ ಸ್ಥಳೀಯ ಆಡಳಿತದ ಸ್ವರೂಪ ಬದಲಾಗುವುದರ ಜತೆಗೆ ಪಟ್ಟಣದ ಯೋಜಿತ ಅಭಿವೃದ್ಧಿಗೆ ಅಗತ್ಯವಾದ ನಗರ ಸ್ಥಳೀಯ ಸಂಸ್ಥೆಯ ವ್ಯವಸ್ಥೆ ದೊರೆಯಲಿದೆ. ರಸ್ತೆ, ಚರಂಡಿ, ನೀರು ಸರಬರಾಜು, ಸ್ವಚ್ಛತೆ, ಬೀದಿ ದೀಪ ಹಾಗೂ ಇತರ ನಾಗರಿಕ ಸೌಲಭ್ಯಗಳನ್ನು ಯೋಜಿತವಾಗಿ ಅಭಿವೃದ್ಧಿಪಡಿಸಲು ಅವಕಾಶ ಹೆಚ್ಚಲಿದೆ.

ಸಚಿವ ಸಂಪುಟದ ನಿರ್ಧಾರ ಮತ್ತು ಅಧಿಸೂಚನೆ ಹೊರಬಂದಿರುವ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯಿತಿ ರಚನೆಯ ಪ್ರಕ್ರಿಯೆಯನ್ನು ಸರ್ಕಾರ ಯಾವ ಹಂತದಲ್ಲಿ ನಿಲ್ಲಿಸಿದೆ ಅಥವಾ ಮುಂದುವರಿಸುತ್ತಿದೆ ಎಂಬುದನ್ನು ಬಹಿರಂಗಪಡಿಸಬೇಕು. ಇಲ್ಲವಾದರೆ ಒಂದು ಕಡೆ ಪಟ್ಟಣ ಪಂಚಾಯಿತಿ ಘೋಷಣೆ, ಮತ್ತೊಂದೆಡೆ ಗ್ರಾಮ ಪಂಚಾಯಿತಿ ಚುನಾವಣಾ ಪ್ರಕ್ರಿಯೆ ಎಂಬ ವೈರುಧ್ಯ ಮುಂದುವರಿದು, ಸಾರ್ವಜನಿಕರಲ್ಲಿ ಮತ್ತಷ್ಟು ಗೊಂದಲ ಉಂಟಾಗುವ ಸಾಧ್ಯತೆ ಇದೆ.

ಪಟ್ಟಣ ಪಂಚಾಯಿತಿ ರಚನೆಯಿಂದ ಹುಲಸೂರಿನ ನಗರಾಭಿವೃದ್ಧಿಗೆ ವೇಗ ದೊರೆಯಲಿದೆ ಎಂಬ ನಿರೀಕ್ಷೆ ಸ್ಥಳೀಯರಲ್ಲಿದೆ. ಆದ್ದರಿಂದ ಸರ್ಕಾರ ತನ್ನ ಹಿಂದಿನ ನಿರ್ಧಾರಕ್ಕೆ ಅಂತಿಮ ರೂಪ ನೀಡಿ, ಆಡಳಿತಾತ್ಮಕ ಗೊಂದಲಕ್ಕೆ ಶೀಘ್ರ ತೆರೆ ಎಳೆಯಬೇಕು ಎಂಬುದು ಸ್ಥಳೀಯರ ಒತ್ತಾಯ.

ಇತಿಹಾಸದ ಪುಟಗಳಲ್ಲಿ ಹುಲಸೂರು ವಿಧಾನಸಭಾ ಕ್ಷೇತ್ರ

ಹುಲಸೂರು 1951ರಲ್ಲಿ ಪ್ರತ್ಯೇಕ ವಿಧಾನಸಭಾ ಕ್ಷೇತ್ರವಾಗಿ ಅಸ್ತಿತ್ವಕ್ಕೆ ಬಂದಿತ್ತು. 1952ರಿಂದ 2004ರವರೆಗೆ ವಿವಿಧ ಪಕ್ಷಗಳ ಅಭ್ಯರ್ಥಿಗಳು ಕ್ಷೇತ್ರವನ್ನು ಪ್ರತಿನಿಧಿಸಿದ್ದರು. 2008ರ ಕ್ಷೇತ್ರ ಪುನರ್‌ವಿಂಗಡಣೆ ವೇಳೆ ಹುಲಸೂರು ವಿಧಾನಸಭಾ ಕ್ಷೇತ್ರ ರದ್ದುಗೊಂಡು, ಅದರ ವ್ಯಾಪ್ತಿಯ ಪ್ರದೇಶಗಳು ಇತರ ಕ್ಷೇತ್ರಗಳೊಂದಿಗೆ ವಿಲೀನಗೊಂಡವು.

ಕ್ಷೇತ್ರವನ್ನು ಪ್ರತಿನಿಧಿಸಿದ ಪ್ರಮುಖರು: ದೇಶಪಾಂಡೆ ಬಾಪುರಾವ್, ಮಹಾದೇವರಾವ್, ಬಾಪುರಾವ್, ಪಿ.ಆರ್. ಧೊಂಡಿಬಾ, ಮಹೇಂದ್ರಕುಮಾರ ಕಲ್ಲಪ್ಪ, ಮದನಲಾಲ್ ಬಡೆಪ್ಪ, ರಾಮಚಂದ್ರ ವೀರಪ್ಪ, ಶಿವಕಾಂತ ಚೆತೂರೆ, ಎಲ್.ಕೆ. ಚವಾಣ್ ಹಾಗೂ ರಾಜೇಂದ್ರ ವರ್ಮಾ.

ಒಮ್ಮೆ ವಿಧಾನಸಭಾ ಕ್ಷೇತ್ರವಾಗಿದ್ದ ಹುಲಸೂರು, ಇಂದು ತಾಲ್ಲೂಕು ಕೇಂದ್ರವಾಗಿದ್ದರೂ ಮೂಲಸೌಕರ್ಯಗಳ ಕೊರತೆಯಿಂದ ಅಭಿವೃದ್ಧಿಗಾಗಿ ಹೋರಾಟ ನಡೆಸುವಂತಾಗಿದೆ.

ಪಟ್ಟಣ ಪಂಚಾಯಿತಿ ರಚನೆಯಿಂದ ಹುಲಸೂರಿನ ಅಭಿವೃದ್ಧಿಗೆ ವೇಗ ಸಿಗಲಿದೆ. ಸರ್ಕಾರ ಕೂಡಲೇ ಗೊಂದಲ ನಿವಾರಿಸಿ, ತನ್ನ ನಿರ್ಧಾರವನ್ನು ಜಾರಿಗೊಳಿಸಬೇಕು

–ಆಕಾಶ ಖಂಡಾಳೆ, ಸಾಮಾಜಿಕ ಕಾರ್ಯಕರ್ತ

ಹುಲಸೂರ ತಾಲ್ಲೂಕಿಗೆ ಹಲವು ಸೌಲಭ್ಯಗಳು ಹೋರಾಟದ ಮೂಲಕವೇ ದೊರೆತಿವೆ. ಪಟ್ಟಣ ಪಂಚಾಯಿತಿ ರಚನೆಯೂ ಶೀಘ್ರ ಜಾರಿಯಾಗಲಿ ಎಂಬುದು ನಮ್ಮ ಆಶಯ. ಈ ಕುರಿತು ಸರ್ಕಾರದ ಗಮನ ಸೆಳೆದು, ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗುವುದು.

–ಶಿವರಾಜ ಖಪಲೆ, ಕಜಾಪ ಅಧ್ಯಕ್ಷ

ಪಟ್ಟಣ ಪಂಚಾಯಿತಿ ರಚನೆಗೆ ಸರ್ಕಾರ ಕೂಡಲೇ ಅಂತಿಮ ರೂಪ ನೀಡಬೇಕು. ಗ್ರಾಮ ಪಂಚಾಯಿತಿ ಚುನಾವಣಾ ಪ್ರಕ್ರಿಯೆಯಿಂದ ಜನರಲ್ಲಿ ಗೊಂದಲ ಉಂಟಾಗಿದೆ. ನಿರ್ಧಾರ ಜಾರಿಯಾಗದಿದ್ದರೆ ಕಾನೂನುಬದ್ಧ ಹೋರಾಟ ನಡೆಸುತ್ತೇವೆ.

–ಪ್ರವೀಣ ಕಾಡದಿ, ಯುವ ಮುಖಂಡ, ಹುಲಸೂರ

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260903-33-222957687

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ