ಹಾಸನ| ಅವಧಿಗೂ ಮುನ್ನವೇ ಹಣ್ಣಾದ ಅರೇಬಿಕಾ ಕಾಫಿ; ದಿಕ್ಕು ತೋಚದಂತಾದ ಬೆಳೆಗಾರರು

ಹಾಸನ| ಅವಧಿಗೂ ಮುನ್ನವೇ ಹಣ್ಣಾದ ಅರೇಬಿಕಾ ಕಾಫಿ;  ದಿಕ್ಕು ತೋಚದಂತಾದ ಬೆಳೆಗಾರರು

ಹಾಸನ| ಅವಧಿಗೂ ಮುನ್ನವೇ ಹಣ್ಣಾದ ಅರೇಬಿಕಾ ಕಾಫಿ; ದಿಕ್ಕು ತೋಚದಂತಾದ ಬೆಳೆಗಾರರು

ಹೆತ್ತೂರು: ಮಲೆನಾಡು ಭಾಗವಾದ ಹೆತ್ತೂರು, ಯಸಳೂರಿನಲ್ಲಿ ಮಳೆ ಮತ್ತು ಬಿಸಿಲಿನ ನಡುವೆ ಅವಧಿಗೆ ಮುನ್ನವೇ ಅರೇಬಿಕಾ ಕಾಫಿ ಹಣ್ಣಾಗುತ್ತಿದ್ದು, ಬೆಳೆಗಾರರಲ್ಲಿ ಆತಂಕ ಶುರುವಾಗಿದೆ.

ಸಾಮಾನ್ಯವಾಗಿ ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ಮೊದಲ ಮಳೆ ಬೀಳುತ್ತಿತ್ತು. ಮಳೆ ಬಿದ್ದ ಕೂಡಲೇ ಕಾಫಿ ಗಿಡದಲ್ಲಿ ಹೂವು ಬಿಡಲಾರಂಭಿಸುತ್ತದೆ. ಆ ಮಳೆಯನ್ನು ಕಾಫಿ ಬೆಳೆಗಾರರು ಹೂಮಳೆ ಎಂದೂ ಕರೆಯುತ್ತಾರೆ.

ಈ ವರ್ಷ ಈ ಭಾಗದಲ್ಲಿ ಹಲವೆಡೆ ಜನವರಿ ಮತ್ತು ಫೆಬ್ರುವರಿಯಲ್ಲೇ ಮಳೆ ಬಿದ್ದಿದ್ದರಿಂದ ಬೇಗನೆ ಹೂವು ಅರಳಿದವು. ಆ ಗಿಡಗಳಲ್ಲಿ ಈಗ ಕಾಫಿ ಕಾಯಿ ಹಣ್ಣಾಗುತ್ತಿವೆ. ಈ ಹಣ್ಣು ಈಗ ಮಳೆ-ಗಾಳಿಗೆ ನೆಲಕ್ಕೆ ಉದುರುತ್ತಿದ್ದು, ಏನು ಮಾಡಬೇಕು ಎಂಬುದು ತೋಚುತ್ತಿಲ್ಲ ಎಂದು ಚಂಗಡಿಹಳ್ಳಿ ನಿರಂಜನ ಬೆಳೆಗಾರ ಹೇಳುತ್ತಾರೆ.

ಜೊತೆಗೆ ಜೂನ್‌ನಲ್ಲಿ ಆರಂಭವಾಗಿ ನಿರಂತರವಾಗಿ ಮಳೆ ಸುರಿಯುತ್ತಿದ್ದರೆ, ಇಷ್ಟು ಬೇಗ ಕಾಫಿ ಹಣ್ಣಾಗುತ್ತಿರಲಿಲ್ಲ. ಶೀತದ ವಾತಾವರಣ ಇದ್ದರೆ ಕಾಫಿ ಹಣ್ಣಾಗಲು ಸಮಯ ಬೇಕಾಗುತ್ತದೆ. ಆದರೆ, ಈ ವರ್ಷ ಮಳೆ ಬಂದು ನಿಂತ ಕೂಡಲೇ ಬಿಸಿಲಿನ ವಾತಾವರಣ ನಿರ್ಮಾಣವಾಗುತ್ತಿದೆ.

ಜೂನ್ ಮತ್ತು ಜುಲೈನಲ್ಲೇ ಉಷ್ಣಾಂಶ ಹೆಚ್ಚಾಗಿದ್ದರಿಂದ ಕಾಫಿ ಕಾಯಿಗಳು ಹಣ್ಣಾಗಲಾರಂಭಿಸಿವೆ. ಈ ಹಣ್ಣನ್ನು ಬೆಳೆಗಾರರು ಬಿಡಿಸಲೂ ಆಗದ, ಬಿಡಲೂ ಆಗದ ಅತಂತ್ರ ಸ್ಥಿತಿಗೆ ತಲುಪಿದ್ದಾರೆ. ಈಗ ಮಲೆನಾಡಿನಲ್ಲಿ ರೋಬಸ್ಟ್ ಕಾಫಿ ಗೊಂಚಲುಗಳೇ ಕರಗಿ ಕಪ್ಪು ಬಣ್ಣಕ್ಕೆ ತಿರುಗುತ್ತಿವೆ. ಸಾಧಾರಣ ಮಳೆ ಜೊತೆಗೆ ಗಾಳಿ ಕೂಡ ಬೀಸುತ್ತಿದೆ. ಇದರಿಂದ ಹಣ್ಣು ನೆಲಕ್ಕೆ ಉದುರುತ್ತಿದ್ದು, ಅದನ್ನು ಮೇಲೆತ್ತಿಕೊಳ್ಳಲು ಸಹ ಆಗದ ಸ್ಥಿತಿ ತೋಟಗಳಲ್ಲಿ ಇದೆ.

ಮಳೆ ಮತ್ತು ಬಿಸಿಲು ಒಟ್ಟಿಗೆ ಬರುತ್ತಿದ್ದರೆ ಕಾಫಿ ಗೊಂಚಲುಗಳ ಸಹಿತ ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಈ ರೀತಿ ಹಾಳಾಗಿರುವ ಕಾಫಿ ಗಿಡಗಳೂ ತೋಟಗಳಲ್ಲಿ ಕಾಣಿಸುತ್ತಿವೆ. ಇದೇ ರೀತಿಯಾದರೆ ಈ ವರ್ಷ ಕಾಫಿ ಫಸಲು ಕೈಸೇರುವುದು ಕಷ್ಟ ಎಂದು ಬೆಳೆಗಾರರು ಹೇಳುತ್ತಾರೆ.

ಕೊಯ್ಲಿಗೆ ಇದು ಸಕಾಲವಲ್ಲ

ಕಾಫಿ ಹಣ್ಣುಗಳನ್ನು ಕೊಯ್ಲು ಮಾಡಿ ಒಣಗಿಸಲು ಇದು ಸಕಾಲವಲ್ಲ. ಆದ್ದರಿಂದ ಫಸಲು ಕೈಸೇರುವುದಿಲ್ಲ ಎಂದು ಬೆಳೆಗಾರ ರೂಪ ಶಂಕರೇಗೌಡ ಐಗೂರು ಹೇಳುತ್ತಾರೆ.

ಈಗ ಕಾಫಿ ಕೊಯ್ಲಿಗೆ ಕಾರ್ಮಿಕರು ಸಿಗುವುದಿಲ್ಲ. ಸಿಕ್ಕರೂ ಮಳೆಯಲ್ಲಿ ಕೊಯ್ಲು ಮಾಡುವುದು ಕಷ್ಟ. ನಂತರ ಹಣ್ಣು ತಂದು ಒಣಗಿಸಲು ಆಗುವುದಿಲ್ಲ. ಒಣಗದಿದ್ದರೆ ಕಪ್ಪು ಬಣ್ಣಕ್ಕೆ ತಿರುಗಿ ಕೊಳೆಯುತ್ತವೆ ಎಂದು ಬೆಳೆಗಾರ ರೇಷ್ಮಾ ಆತಂಕ ವ್ಯಕ್ತಪಡಿಸುತ್ತಾರೆ.

ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಹಣ್ಣು ಕೊಯ್ದರೆ ಬಿಸಿಲಿನಲ್ಲಿ ಸುಲಭವಾಗಿ ಒಣಗಿಸಲು ಅವಕಾಶ ಇದೆ. ಈಗ ಮಳೆಗಾಲದಲ್ಲಿ ಕಾಫಿ ಹಣ್ಣು ಒಣಗಿಸಲು ಯಂತ್ರಗಳು ಸಾಮಾನ್ಯ ಬೆಳೆಗಾರರ ಬಳಿ ಇಲ್ಲ. ಕಾಫಿ ಹಣ್ಣು ಮಣ್ಣು ಪಾಲಾಗುವ ಸಾಧ್ಯತೆಯೇ ಹೆಚ್ಚು ಎಂದು ಬೆಳೆಗಾರ ಸಂತೋಷ ಅತ್ತಿಗನಹಳ್ಳಿ ಹೇಳುತ್ತಾರೆ.

ಜಾಗತಿಕ ತಾಪಮಾನ ಕಾಫಿ ಉದ್ಯಮಕ್ಕೆ ಸಾಕಷ್ಟು ಹೊಡೆತ ನೀಡುತ್ತಿದೆ ಎಂದು ಎಚ್‌ಡಿಪಿಎ ಕಾಫಿ ಬೆಳೆಗಾರರ ಒಕ್ಕೂಟದ ಉಪಾಧ್ಯಕ್ಷ ಎಂ.ಜೆ. ಸಚ್ಚಿನ್ ಹೇಳಿದರು.

ಈಗ ಅಲ್ಲಲ್ಲಿ ಹಣ್ಣು ಕಾಣಿಸುತ್ತಿದ್ದು, ನಿರಂತರ ಮಳೆ ಸುರಿದರೆ ಹಣ್ಣಾಗುವುದು ಕಡಿಮೆಯಾಗಲಿದೆ. ಮಳೆ ಕಡಿಮೆಯಾಗಿ ಬಿಸಿಲು ಬಂದ ಕೂಡಲೇ ಉಷ್ಣಾಂಶ ಹೆಚ್ಚಾಗಿ ಹಣ್ಣಾಗುತ್ತದೆ. ಆ ಹಣ್ಣು ಕೊಯ್ದು ಮಾಡಿ ಸಂರಕ್ಷಣೆ ಮಾಡುವುದು ಈಗ ಕಷ್ಟದ ಕೆಲಸ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260901-36-771086519

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ