
ಜಿಡಿಪಿ ಏರಿಕೆ: ದೇಶದಲ್ಲಿ ‘ಸುಳ್ಳು’ ಹರಡುವವರಿಗೆ ತಕ್ಕ ಉತ್ತರ ಎಂದ ಮೋದಿ
ನವದೆಹಲಿ: ಅನಿಶ್ಚಿತತೆ ನಡುವೆಯೂ 2026–27ರ ಮೊದಲ ತ್ರೈಮಾಸಿಕದಲ್ಲಿ ದೇಶದ ಒಟ್ಟು ಆಂತರಿಕ ಉತ್ಪಾದನೆ(ಜಿಡಿಪಿ) ಶೇ 7.8ರಷ್ಟು ಬೆಳವಣಿಗೆ ದಾಖಲಿಸಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಕಿರ್ಗಿಸ್ತಾನದಿಂದ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೊ ಹಂಚಿಕೊಂಡಿರುವ ಪ್ರಧಾನಿ ಮೋದಿ, ‘ದೇಶದ ಜನರ ಸಂಕಲ್ಪ, ಪರಿಶ್ರಮ ಮತ್ತು ಸಾಮೂಹಿಕ ಶಕ್ತಿಯಿಂದ ಈ ಸಾಧನೆ ಸಾಧ್ಯವಾಗಿದೆ’ ಎಂದು ತಿಳಿಸಿದ್ದಾರೆ.
‘ಜಗತ್ತಿನಲ್ಲಿ ಯುದ್ಧ ಮತ್ತು ಸಂಘರ್ಷಗಳು ನಡೆಯುತ್ತಿದ್ದು, ಪೂರೈಕೆ ಸರಪಳಿಗಳು ಅಸ್ತವ್ಯಸ್ತವಾಗಿವೆ. ಕೋವಿಡ್ ನಂತರವೂ ಜಾಗತಿಕ ಸ್ಥಿರತೆ ಮರಳಿಲ್ಲ. ಇಂತಹ ಪರಿಸ್ಥಿತಿಯ ನಡುವೆಯೂ ಭಾರತ ವೇಗವಾಗಿ ಪ್ರಗತಿ ಸಾಧಿಸುತ್ತಿದೆ’ ಎಂದು ಹೇಳಿದ್ದಾರೆ.
ರಾಹುಲ್ ವಿರುದ್ಧ ಪರೋಕ್ಷ ವಾಗ್ದಾಳಿ
ಇದೇ ವೇಳೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿರುವ ಮೋದಿ, ದೇಶದ ಆರ್ಥಿಕ ಪ್ರಗತಿ ಕುರಿತು ತಪ್ಪು ಅಭಿಪ್ರಾಯಗಳನ್ನು ಸೃಷ್ಟಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಟೀಕಿಸಿದ್ದಾರೆ.
‘ನಿರಾಶೆಯ ಮಡುವಿನಲ್ಲಿ ಮುಳುಗಿರುವ ಜನ ದೇಶದಾದ್ಯಂತ ‘ಜೂಠ್ ಕೀ ಗೂಂಜ್’ (ಸುಳ್ಳಿನ ಪ್ರತಿಧ್ವನಿ) ಹರಡುತ್ತಿದ್ದಾರೆ. ಆದರೆ ಇಂತಹ ಎಲ್ಲ ಅಡೆತಡೆಗಳನ್ನು ಮೆಟ್ಟಿ ನಿಂತು ದೇಶವು ಶೇ 7.8ರಷ್ಟು ಬೆಳವಣಿಗೆ ಸಾಧಿಸಿದೆ’ ಎಂದು ಅವರು ಹೇಳಿದ್ದಾರೆ.
ದೇಶದಾದ್ಯಂತ ವಿದ್ಯಾರ್ಥಿಗಳ ಜೊತೆ ಸಂಪರ್ಕ ಸಾಧಿಸುವ ಉದ್ದೇಶದಿಂದ ಕಾಂಗ್ರೆಸ್, ‘ಛತ್ರೋಂ ಕಿ ಗೂಂಜ್’ (ವಿದ್ಯಾರ್ಥಿಗಳ ಪ್ರತಿಧ್ವನಿ) ಸಮಾವೇಶಗಳನ್ನು ನಡೆಸುತ್ತಿದೆ.
ಆತ್ಮನಿರ್ಭರ ಭಾರತಕ್ಕೆ ಒತ್ತು
ಭಾರತದ ಆರ್ಥಿಕ ಬೆಳವಣಿಗೆ ಇನ್ನಷ್ಟು ವೇಗ ಪಡೆಯಬೇಕಿದೆ ಎಂದು ಹೇಳಿರುವ ಪ್ರಧಾನಿ ಮೋದಿ, ಇದಕ್ಕಾಗಿ ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದಿದ್ದಾರೆ.
ಜಾಗತಿಕ ಆರ್ಥಿಕ ಅನಿಶ್ಚಿತತೆಯ ನಡುವೆಯೂ ದೇಶದ ಆರ್ಥಿಕತೆ ವೇಗವಾಗಿ ಬೆಳೆಯುತ್ತಿರುವುದು ಭಾರತದ ಆಂತರಿಕ ಸಾಮರ್ಥ್ಯ ಹಾಗೂ ಜನರ ಪರಿಶ್ರಮವನ್ನು ತೋರಿಸುತ್ತದೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.