
ಮಾತಿನ ಮಂಟಪ ಕಟ್ಟುವಲ್ಲಿ ಡಿ.ಕೆ.ಶಿವಕುಮಾರ್ ಮಹಾಬುದ್ಧಿವಂತ; ಗೋವಿಂದ ಕಾರಜೋಳ
ಕುಷ್ಟಗಿ: ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಅರಮನೆ ಕಟ್ಟಿ ತೋರಿ ಸಬೇಕು. ಆದರೆ, ಸರ್ಕಾರ ಅಂಗೈಯಲ್ಲೇ ಅರಮನೆ ತೋರಿಸುತ್ತಿದೆ. ಅದರಲ್ಲೂ ಮಾತಿನ ಮಂಟಪ ಕಟ್ಟುವಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಹಾಬುದ್ಧಿವಂತ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿ,‘ರಸ್ತೆಗೆ ಒಂದಷ್ಟು ಡಾಂಬರು ಹಾಕಿಲ್ಲ. ನೀರಾವರಿಯಂತೂ ಮೊದಲೇ ಇಲ್ಲ. ಜನರಿಗೆ ಮೋಸ ಮಾಡುತ್ತ ಬಂದಿದೆ. ಹಾಗಾಗಿ ರಾಜ್ಯದ ಎಲ್ಲ ವರ್ಗಗಳ ಜನರು ಕಾಂಗ್ರೆಸ್ ಸರ್ಕಾರದ ವಿರುದ್ಧ ದಂಗೆ ಏಳುವ ಪರಿಸ್ಥಿತಿ ಕಂಡುಬರುತ್ತಿದ್ದು, ವಿಧಾನಸೌಧದಿಂದ ಕಾಂಗ್ರೆಸ್ ಸರ್ಕಾರವನ್ನು ತೊಲಗಿಸಲು ಜನ ಸಿದ್ಧರಾಗಿದ್ದಾರೆ’ ಎಂದು ಹೇಳಿದರು.
‘ನೂರಕ್ಕೆ ನೂರರಷ್ಟು ಮತ ಹಾಕುವ ಮುಸಲ್ಮಾನರಿಗೆ ಈ ಸರ್ಕಾರ ಮಾಡಿದ್ದೇನು ಎಂಬುದರ ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ದಲಿತ, ಅಲ್ಪಸಂಖ್ಯಾತರ ಹೆಸರಲ್ಲಿ ಅಧಿಕಾರಕ್ಕೆ ಬಂದರೂ ಈ ಜನರಿಗೆ ಅನ್ಯಾಯ ಮಾಡುತ್ತಿದೆ. ಈ ಸಮುದಾಯಗಳ ಅಭಿವೃದ್ಧಿಗೆ ಬಳಕೆಯಾಗಬೇಕಿದ್ದ ₹52 ಸಾವಿರ ಕೋಟಿ ಬೇರೆ ಉದ್ದೇಶಕ್ಕೆ ಬಳಕೆ ಮಾಡಿಕೊಂಡಿರುವುದೇ ಅದಕ್ಕೆ ಸಾಕ್ಷಿ ಒದಗಿಸುತ್ತಿದೆ’ ಎಂದರು.
ಬಳ್ಳಾರಿವರೆಗೆ ನಡೆದ ಪಾದಯಾತ್ರೆಯ ಯಶಸ್ಸಿನ ಫಲ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಸೇರುತ್ತದೆಯೆ ಎಂಬುದಕ್ಕೆ ಪ್ರತಿಕ್ರಿಯಿಸಿದ ಕಾರಜೋಳ,‘ಪಾದಯಾತ್ರೆಯ ಯಶಸ್ಸಿನಿಂದ ಯಾರ ವೈಯಕ್ತಿಕ ಪ್ರತಿಷ್ಠೆಯೂ ಹೆಚ್ಚಾಗುವುದಿಲ್ಲ. ಬದಲಾಗಿ ಪಕ್ಷದ ವರ್ಚಸ್ಸು ಹೆಚ್ಚಿಸಿದೆ’ ಎಂದು ಸ್ಪಷ್ಟಪಡಿಸಿದರು.
‘ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಲು, ಕೇಂದ್ರ ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸುವ ಸಲುವಾಗಿ ಇಂಥ ಸಮಾವೇಶಗಳನ್ನು ನಡೆಸಲಾಗುತ್ತಿದೆ. ಮೂರು ಜಿಲ್ಲೆಗಳಲ್ಲಿ ಹೆಚ್ಚಾಗಿ ಎಸ್‌ಸಿ, ಎಸ್‌ಟಿ ಜನರೇ ಹೆಚ್ಚಾಗಿರುವ ಪ್ರದೇಶಗಳ ಮಾರ್ಗವಾಗಿ ಪಾದಯಾತ್ರೆ ಸಾಗಿ ಬಂದಿದ್ದು, ಜನರಿಂದ ಅಭೂತಪೂರ್ವ ಬೆಂಬಲ ದೊರೆತಿದೆ’ ಎಂದು ವಿವರಿಸಿದರು.
‘ಇಡಿ ದಾಳಿ ರಾಜಕೀಯ ಪ್ರೇರಿತವಲ್ಲ’
‘ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ ನಡೆಸಿರುವ ದಾಳಿ ರಾಜಕೀಯ ಪ್ರೇರಿತ ಅಲ್ಲ. ಸಾಂವಿಧಾನಿಕ ಸಂಸ್ಥೆಗಳು ಸ್ವತಂತ್ರವಾಗಿ ಕರ್ತವ್ಯ, ಜವಾಬ್ದಾರಿ ನಿರ್ವಹಿಸುತ್ತಿವೆ. ಹೀಗಿರುವಾಗ ರಾಜಕೀಯ ಪ್ರೇರಿತ ದಾಳಿ ಎನ್ನುವ ಸತೀಶ್ ಅವರ ಹೇಳಿಕೆ ಬಾಲಿಶವಾಗಿದೆ’ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‘ಕಾಂಗ್ರೆಸ್‌ನವರ ಆರೋಪದಂತೆ ಒಂದು ವೇಳೆ ಯಾವುದೇ ತನಿಖಾ ಸಂಸ್ಥೆಗಳು ಒತ್ತಡಕ್ಕೆ ಮಣಿದು ದಾಳಿ ನಡೆಸಿದರೆ, ಮುಂದೆ ಅದನ್ನು ನ್ಯಾಯಾಲಯದಲ್ಲಿ ಸಾಬೀತುಪಡಿಸಬೇಕಾಗುತ್ತದೆ. ಹಾಗಾಗಿ ಆ ಸಂಸ್ಥೆಗಳು ಯಾವುದೇ ಸರ್ಕಾರಗಳ ಅಣತಿಯಂತೆ ಕಾರ್ಯನಿರ್ವಹಿಸುವುದಿಲ್ಲ’ ಎಂದರು.
‘ಸಿಬಿಐ, ಇಡಿ, ಐಟಿ ಹೀಗೆ ದೇಶದಲ್ಲಿ ಸ್ವಾತಂತ್ರ್ಯ ಬಂದ ನಂತರ ಅನೇಕ ಸಾಂವಿಧಾನಿಕ ಸಂಸ್ಥೆಗಳು ಹುಟ್ಟಿಕೊಂಡಿವೆ. ನೆಹರೂ, ಶಾಸ್ತ್ರಿ, ಇಂದಿರಾಗಾಂಧಿ, ರಾಜೀವ್‌ಗಾಂಧಿ, ಪಿ.ವಿ.ನರಸಿಂಹರಾವ್, ಮನಮೋಹನ್‌ಸಿಂಗ್ ಅಧಿಕಾರದ ಅವಧಿಯಲ್ಲಿಯೂ ಇಂಥ ಪ್ರಕರಣಗಳಿಗೆ ಸಂಬಂಧಿಸಿದಂತೆ ದಾಳಿಗಳು ನಡೆದಿದ್ದವು. ಅವೂ ಕೂಡ ರಾಜಕೀಯ ಪ್ರೇರಿತ ಎನ್ನಲಾಗದು’ ಎಂದು ಹೇಳಿದರು.
‘ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಸಚಿವರಾಗಿದ್ದ ದಾವಣಗೆರೆ ಸಂಸದ ಸಿದ್ದೇಶ್ವರ ಅವರ ಮೇಲೆಯೂ ಐಟಿ ದಾಳಿ ನಡೆದಿತ್ತು. ಹೀಗಿರುವಾಗ ಕೇವಲ ಕಾಂಗ್ರೆಸ್ ಅನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುತ್ತದೆ ಎಂಬುದು ಕಾಂಗ್ರೆಸ್‌ನ ಹತಾಶೆಯನ್ನು ಎತ್ತಿ ತೋರಿಸುತ್ತಿದೆ’ ಎಂದರು.
‘ತನಿಖಾ ಸಂಸ್ಥೆಗಳನ್ನು ಸಂಶಯದಿಂದ ನೋಡುವುದು ಸರಿಯಲ್ಲ. ಆದರೆ, ಮಾಡಿದ ತಪ್ಪನ್ನು ಮುಚ್ಚಿಕೊಳ್ಳುವ ಸಲುವಾಗಿ ಕಾಂಗ್ರೆಸ್ ಈ ವಿಷಯವನ್ನು ರಾಜಕೀಯಕರಣಗೊಳಿಸುತ್ತಿದೆ’ ಎಂದು ಆರೋಪಿಸಿದರು.
ತಮ್ಮ ಮೇಲೆಯೂ ದಾಳಿ ನಡೆಯಬಹುದು ಎಂದು ಮುಖ್ಯಮಂತ್ರಿ ಶಿವಕುಮಾರ್ ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ,‘ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಳ್ಳುವ ಅಗತ್ಯವೇ ಇರುವುದಿಲ್ಲ ಅಲ್ಲವೆ?’ ಎಂದರು.
ಈ ಹಿಂದೆಯೇ ದಲಿತರು ಸಿಎಂ ಆಗಬೇಕಿತ್ತು ಎಂಬುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ, ಬಿಜೆಪಿ ಸ್ವಂತ ಬಲದಿಂದ ಅಧಿಕಾರಕ್ಕೆ ಬಾರದ ಕಾರಣ ಅಂಥ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ. ಯಡಿಯೂರಪ್ಪ ಅವರು ಪಕ್ಷವನ್ನು ಕಟ್ಟಿ ಬೆಳೆಸಿದ ಕಾರಣ ಅವರಿಗೆ ಆದ್ಯತೆ ಸಿಕ್ಕಿತು