
ಗದಗ ತಾಲ್ಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸುವಂತೆ ರೈತ ಸಂಘ ಮನವಿ
ಮುಳಗುಂದ: ಗದಗ ತಾಲ್ಲೂಕನ್ನು ತಕ್ಷಣವೇ ಬರಪೀಡಿತ ಪ್ರದೇಶವೆಂದು ಘೋಷಿಸಿಸಿ, ತ್ವರಿತವಾಗಿ ಪರಿಹಾರ ಬಿಡುಗಡೆ ಮಾಡಬೇಕು’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಗದಗ ತಹಶೀಲ್ದಾರ್ ಶ್ರೀನಿವಾಸಮೂರ್ತಿ ಕುಲಕರ್ಣಿಗೆ ಗುರುವಾರ ಮನವಿ ಸಲ್ಲಿಸಿದರು.
ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಆಗದ ಹಿನ್ನೆಲೆಯಲ್ಲಿ ಅನಾವೃಷ್ಟಿಯ ಪರಿಸ್ಥಿತಿ ನಿರ್ಮಾಣವಾಗಿದೆ. ಹಿಂಗಾರು ಮಳೆ ಕೂಡಾ ಬಾರದ ಸ್ಥಿತಿ ಉಂಟಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಕೂಡಾ ಭೇಟಿ ನೀಡಿ ವಾಸ್ತವ ಪರಿಸ್ಥಿತಿ ನೋಡಿದ್ದಾರೆ. ಆದರೂ ಈವರೆಗೆ ಬರಪೀಡಿತ ಪ್ರದೇಶ ಪಟ್ಟಿಗೆ ಸೇರಿಸಿಲ್ಲ. ಇದರಿಂದ ರೈತ ಸಮುದಾಯ ಆತಂಕಗೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ಕೂಡಲೇ ಬೆಳೆ ವಿಮೆ ಬಿಡುಗಡೆ ಹಾಗೂ ರೈತರ ಬೆಳೆಸಾಲ ಮನ್ನಾ ಮಾಡಬೇಕು. ಇಲ್ಲದಿದ್ದರೆ ಸರ್ಕಾರದ ವಿರುದ್ದ ರಸ್ತೆ ತಡೆದು ಪ್ರತಿಭಟಿಸಲಾಗುವುದು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಗದಗ ಕೃಷಿ ಸಹಾಯಕ ನಿದೇರ್ಶಕ ಮಲ್ಲಯ್ಯ ಕೊರಣ್ಣವರ, ರೈತ ಸಂಘದ ಅಧ್ಯಕ್ಷ ದೇವಪ್ಪ ಅಣ್ಣಿಗೇರಿ, ಬಸವರಾಜ ಕರಿಗಾರ, ದೇವರಾಜ ಸಂಗನಪೇಟಿ, ಮಹಾಂತೇಶ ಗುಂಜಳ, ದತ್ತಪ್ಪ ಯಳವತ್ತಿ, ಮಹ್ಮದಲಿ ಶೇಖ, ಮಹಾಂತೇಶ ಬಳ್ಳಾರಿ, ಈರಪ್ಪ ದೋಟಿಕಲ್ ಇದ್ದರು.