
ಸರ್ಕಾರಿ ನೌಕರರಲ್ಲಿ ಪ್ರಾಮಾಣಿಕತೆ, ಬದ್ಧತೆ ಮುಖ್ಯ: ಸಚಿವ ಎನ್.ಚಲುವರಾಯಸ್ವಾಮಿ
ನಾಗಮಂಗಲ: ಸರ್ಕಾರಿ ನೌಕರರು ಪ್ರಾಮಾಣಿಕತೆ, ಬದ್ಧತೆ ಹಾಗೂ ಸೇವಾ ಮನೋಭಾವದಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ಪಟ್ಟಣದ ಶಿಕ್ಷಕರ ಭವನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ತಾಲ್ಲೂಕು ಸರ್ಕಾರಿ ನೌಕರರ ಸಂಘದ 2025-26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರದ ವಿವಿಧ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸುವ ಜವಾಬ್ದಾರಿ ಸರ್ಕಾರಿ ನೌಕರರ ಮೇಲಿದೆ ಎಂದರು.
ಸರ್ಕಾರಿ ಸೇವೆ ಎಂದರೆ ಜನಸೇವೆ ಎಂಬ ಆಶಯದೊಂದಿಗೆ ನೌಕರರು ಕಾರ್ಯ ನಿರ್ವಹಿಸಬೇಕು. ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸುವ ಮೂಲಕ ಆಡಳಿತ ವ್ಯವಸ್ಥೆ ಮತ್ತಷ್ಟು ಬಲಪಡಿಸುವಲ್ಲಿ ಪ್ರತಿಯೊಬ್ಬ ನೌಕರರೂ ತಮ್ಮದೇ ಕೊಡುಗೆ ನೀಡಬೇಕು ಎಂದು ತಿಳಿಸಿದರು.
ಸರ್ಕಾರಿ ನೌಕರರ ಹಿತರಕ್ಷಣೆ ಹಾಗೂ ಅವರ ನ್ಯಾಯಯುತ ಬೇಡಿಕೆಗಳಿಗೆ ಸರ್ಕಾರ ಸದಾ ಸಕಾರಾತ್ಮಕವಾಗಿ ಸ್ಪಂದಿಸಲಿದೆ. ನೌಕರರು ಎದುರಿಸುತ್ತಿರುವ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಸರ್ಕಾರಿ ನೌಕರರು ಸಂಘಟಿತರಾಗಿ ಕಾರ್ಯ ನಿರ್ವಹಿಸುವ ಜೊತೆಗೆ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಜನರ ವಿಶ್ವಾಸ ಗಳಿಸಬೇಕು. ಸರ್ಕಾರ ಮತ್ತು ಜನರ ನಡುವೆ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜೆ.ವೈ.ಮಂಜುನಾಥ್ ಮಾತನಾಡಿ, ಸರ್ಕಾರಿ ನೌಕರರು ಮತ್ತು ಶಿಕ್ಷಕರು ಕಾರ್ಯಕ್ಷೇತ್ರದಲ್ಲಿ ಕೆಲಸ ಮಾಡುವಾಗ ನಿರ್ಭೀತಿಯಿಂದ ಸ್ವತಂತ್ರವಾಗಿ ಕೆಲಸ ಮಾಡುವಂತಹ ವಾತಾವರಣ ಸೃಷ್ಟಿಸುವುದು ಸಂಘಟನೆಯ ಕರ್ತವ್ಯವಾಗಿದೆ ಎಂದರು.
103 ವರ್ಷ ಇತಿಹಾಸ ಹೊಂದಿರುವ ಸರ್ಕಾರಿ ನೌಕರರ ಸಂಘವು ಶಿಕ್ಷಕರ ಸಂಘ ಸೇರಿದಂತೆ ಎಲ್ಲಾ ಇಲಾಖೆಗಳ ಸಂಘಟನೆ ಜೊತೆಗೂಡಿಸಿಕೊಂಡು 28 ಇಲಾಖೆಗಳ ನೌಕರರ ಹಿತಾಸಕ್ತಿ ಕಾಯುವ ಜೊತೆಗೆ ಸೇವಾ ಸೌಲಭ್ಯ ಒದಗಿಸುವ ಕೆಲಸ ಮಾಡುತ್ತಿದೆ ಎಂದರು.
ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಂ.ಪ್ರಕಾಶ್ ಮಾತನಾಡಿ, ತಾಲ್ಲೂಕು ಸರ್ಕಾರಿ ನೌಕರರ ಸಂಘವು ನೌಕರ ಸ್ನೇಹಿಯಾಗಿ, ಕ್ರಿಯಾಶೀಲತೆ ಹಾಗೂ ಸಂಘಟನಾ ಶಕ್ತಿಯಿಂದ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಜಿಪಿಟಿ ಶಿಕ್ಷಕರಿಗೆ ಖಾಯಂ ಪೂರ್ವ ಸೇವಾ ಅವಧಿ ಘೋಷಣಾ ಪತ್ರ ವಿತರಿಸಲಾಯಿತು. ಕಳೆದ ಸಾಲಿನಲ್ಲಿ ಸೇವಾ ನಿವೃತ್ತಿ ಹೊಂದಿದ ಸರ್ಕಾರಿ ನೌಕರರು ಮತ್ತು ವರ್ಗಾವಣೆಗೊಂಡಿರುವ ಸಂಘದ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.
ತಹಶೀಲ್ದಾರ್ ಯು.ಎಸ್.ಅಶೋಕ್, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಆರ್.ಲೋಕೇಶ್, ಕ್ಷೇತ್ರ ಸಮನ್ವಯಾಧಿಕಾರಿ ಕೆ.ರವೀಶ್, ವಿಶ್ವಮಂಜು ಹಾಜರಿದ್ದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260901-40-1568033138