ದಕ್ಷಿಣ ಕನ್ನಡ | ಆಟೊ ದರ: ಮುಂದುವರಿದ ಗೊಂದಲ

ದಕ್ಷಿಣ ಕನ್ನಡ | ಆಟೊ ದರ: ಮುಂದುವರಿದ ಗೊಂದಲ

ದಕ್ಷಿಣ ಕನ್ನಡ | ಆಟೊ ದರ: ಮುಂದುವರಿದ ಗೊಂದಲ

ಮಂಗಳೂರು: ಜಿಲ್ಲೆಯಲ್ಲಿ ಆಟೊರಿಕ್ಷಾಗಳ ಬಾಡಿಗೆ ದರ ಪರಿಷ್ಕರಿಸಿ, ಜಿಲ್ಲಾ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ದರ್ಶನ್‌ ಎಚ್‌.ವಿ. ಅವರು ಆಗಸ್ಟ್ ಮೂರನೇ ವಾರದಲ್ಲಿ ಆದೇಶ ಹೊರಡಿಸಿ, ಸೆ. 1ರಿಂದ ಹೊಸ ದರ ಜಾರಿಗೆ ಬರಲಿದೆ ಎಂದು ಪತ್ರಿಕಾ ಪ್ರಕಟಣೆ ನೀಡಿದ್ದರು. ಆದರೆ, ಸೆಪ್ಟೆಂಬರ್ ಮೂರನೇ ವಾರ ಪರಿಷ್ಕೃತ ದರ ಅಧಿಕೃತವಾಗಿ ಅನುಷ್ಠಾನಕ್ಕೆ ಬರದ ಕಾರಣ ಪ್ರಯಾಣಿಕರು ಗೊಂದಲಕ್ಕೆ ಒಳಗಾಗಿದ್ದಾರೆ. 

ಆಟೊಗಳ ಮೀಟರ್‌ಗಳಲ್ಲಿ ಕನಿಷ್ಠ ದರ ಮೊದಲ 1.5 ಕಿ.ಮೀ.ಗೆ ₹35 ಇದ್ದಿದ್ದನ್ನು ₹40ಕ್ಕೆ ಹಾಗೂ ನಂತರದ ಪ್ರತಿ ಕಿ.ಮೀ.ಗೆ ₹17 ಇದ್ದ ದರವನ್ನು ₹20ಕ್ಕೆ ಹೆಚ್ಚಳ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿತ್ತು. ಆದರೆ ಈವರೆಗೂ, ಆಟೊರಿಕ್ಷಾಗಳ ಮೀಟರ್‌ನಲ್ಲಿ ಕನಿಷ್ಠ ದರ ಮೊದಲಿನಂತೆಯೇ ₹35 ತೋರಿಸುತ್ತದೆ. ಪ್ರಯಾಣಿಕರು ಅದರ ಪ್ರಕಾರ ಹಣ ನೀಡಲು ಮುಂದಾದಾಗ, ಕೆಲವು ರಿಕ್ಷಾ ಚಾಲಕರು ಪರಿಷ್ಕೃತ ದರ ನೀಡುವಂತೆ ಒತ್ತಾಯಿಸುವುದು, ಗ್ರಾಹಕರು ಹೆಚ್ಚಿನ ಹಣ ನೀಡಲು ನಿರಾಕರಿಸುವುದು, ಇದರಿಂದ ಪರಸ್ಪರ ವಾಗ್ವಾದ ನಡೆಯುವುದು ಮಾಮೂಲು ಎಂಬಂತಾಗಿದೆ. 

ಗೊಂದಲಕ್ಕೆ ಕಾರಣಗಳೇನು?: ‘ದರ ಪರಿಷ್ಕರಣೆ ಪೂರ್ವದಲ್ಲಿ ಜಿಲ್ಲಾಧಿಕಾರಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ಉಪಸ್ಥಿತಿಯಲ್ಲಿ ಆಟೊರಿಕ್ಷಾ ಸಂಘಟನೆಗಳ ಪ್ರಮುಖರು, ಸಾರ್ವಜನಿಕರ ಸಭೆ ಕರೆದು ಅಭಿಪ್ರಾಯ ಸಂಗ್ರಹಿಸಲಾಗಿತ್ತು. ಕೆಲವು ದಿನಗಳ ನಂತರ ದರ ಪರಿಷ್ಕರಣೆಯ ಆದೇಶ ಹೊರಡಿಸಲಾಗಿದೆ. ನಾವು ಮೊದಲ 1.5 ಕಿ.ಮೀ.ಗೆ ಕನಿಷ್ಠ ದರವನ್ನು ₹35ರಿಂದ ₹50ಕ್ಕೆ ಹೆಚ್ಚಳ ಮಾಡಬೇಕು ಎಂದು ಹೇಳಿಕೊಂಡಿದ್ದೆವು. ಆದರೆ, ಕನಿಷ್ಠ ದರವನ್ನು ₹40ಕ್ಕೆ ಹೆಚ್ಚಳ ಮಾಡಲಾಗಿದೆ. ನಂತರದ ಪ್ರತಿ ಕಿ.ಮೀ. ದರವನ್ನು ₹20ರಿಂದ 25ಕ್ಕೆ ಹೆಚ್ಚಳ ಮಾಡಬೇಕು ಎಂದು ಬೇಡಿಕೆ ಇಟ್ಟಿದ್ದೆವು. ಹಳೆಯ ದರವನ್ನು ₹17 ಎಂದು ತೋರಿಸಿ, ₹20ಕ್ಕೆ ಹೆಚ್ಚಳ ಮಾಡಲಾಗಿದೆ’ ಎಂದು ರಿಕ್ಷಾ ಸಂಘಟನೆಯ ಪ್ರಮುಖರೊಬ್ಬರು ಆರೋಪಿಸಿದರು. 

ದರ ಪರಿಷ್ಕರಣೆ ಮಾಡುವ ಭರವಸೆ ಸಿಕ್ಕಿದೆ. ಹಳೆಯ ದರವನ್ನೇ ಮುಂದುವರಿಸಿದರೆ, ಆಟೊ ರಿಕ್ಷಾಗಳ ಸಂಚಾರ ಬಂದ್ ಮಾಡಿ ಪ್ರತಿಭಟಿಸುವ ಬಗ್ಗೆ ಸಂಘಟನೆಗಳು ಚರ್ಚಿಸುತ್ತಿವೆ. ಪ್ರಸ್ತುತ ಎಲ್ಲ ರಿಕ್ಷಾದವರು ಹಳೆಯ ದರವನ್ನೇ ಪಡೆಯುತ್ತಿದ್ದು, ಗ್ರಾಹಕರು ಗೊಂದಲ ಮಾಡಿಕೊಳ್ಳಬೇಕಾಗಿಲ್ಲ ಎಂದು ಅವರು ಹೇಳಿದರು. 

‘ಎಲ್‌ಪಿಜಿ, ಸಿಎನ್‌ಜಿ ದರ ಹೆಚ್ಚಳವಾಗಿದೆ. ದೈನಂದಿನ ವಸ್ತುಗಳು ದುಬಾರಿಯಾಗಿದ್ದು, ರಿಕ್ಷಾ ಚಾಲಕರು ಜೀವನ ನಡೆಸಲು ದರ ಹೆಚ್ಚಳ ಅನಿವಾರ್ಯ. ಮೊದಲ 1.5 ಕಿ.ಮೀ ನಂತರದ ದರದಲ್ಲಿ ಪರಿಷ್ಕರಣೆ ಆಗದ ವಿನಾ ನಾವು ಮೀಟರ್‌ನಲ್ಲಿ ಬದಲಾವಣೆ ಮಾಡುವುದಿಲ್ಲ ಎಂದು ನಿರ್ಧರಿಸಿದ್ದೇವೆ. ಈ ಸಂಬಂಧ ಒಕ್ಕೂಟದವರು ಜನಪ್ರತಿನಿಧಿಗಳನ್ನೂ ಭೇಟಿ ಮಾಡಿ ವಿನಂತಿಸಿದ್ದೇವೆ. ಆರ್‌ಟಿಒ ಅವರು ಸೆಪ್ಟೆಂಬರ್ ಅಂತ್ಯದ ಒಳಗಾಗಿ ದರ ಪರಿಷ್ಕರಣೆ ಬಗ್ಗೆ ಇತ್ಯರ್ಥಕ್ಕೆ ಬರಲಾಗುವುದು ಎಂದು ಭರವಸೆ ನೀಡಿದ್ದಾರೆ’ ಎಂದು ದಕ್ಷಿಣ ಕನ್ನಡ ಆಟೊರಿಕ್ಷಾ ಚಾಲಕ ಮಾಲೀಕರ ಸಂಘಗಳ ಒಕ್ಕೂಟ ಮಂಗಳೂರು ನಗರದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಶೆಟ್ಟಿ ಪ್ರತಿಕ್ರಿಯಿಸಿದರು.

‘ಕನಿಷ್ಠ ದರವನ್ನು ₹50ಕ್ಕೆ ನಿಗದಿ ಪಡಿಸಬೇಕು ಎಂಬ ಬೇಡಿಕೆ ಇಟ್ಟಿದ್ದರೂ, ₹40ಕ್ಕೆ ನಿಗದಿಗೊಳಿಸಲಾಗಿದೆ. ಇದನ್ನು ಒಪ್ಪಿಕೊಂಡಿದ್ದೇವೆ. ಆದರೆ, ನಂತರದ ಪ್ರತಿ ಕಿ.ಮೀ.ಗೆ ಪ್ರಸ್ತುತ ಇರುವ ದರವನ್ನೇ ಮುಂದುವರಿಸಿದ್ದಕ್ಕೆ ನಮ್ಮ ವಿರೋಧ ಇದೆ. ಜಿಲ್ಲಾ ಸಾರಿಗೆ ಪ್ರಾಧಿಕಾರವು ಏಕಪಕ್ಷೀಯವಾಗಿ ಈ ನಿರ್ಧಾರ ಕೈಗೊಂಡಿದೆ. ಹೀಗಾಗಿ, ಯಾರೂ ಈ ಪರಿಷ್ಕೃತ ದರ ಅನುಷ್ಠಾನಗೊಳಿಸಿಲ್ಲ’ ಎನ್ನುತ್ತಾರೆ ಕರ್ನಾಟಕ ರಕ್ಷಣಾ ವೇದಿಕೆ ಆಟೊ ಚಾಲಕರ ಸಂಘದ ಅಧ್ಯಕ್ಷ ಅರುಣ್. 

ಜಿಲ್ಲಾಧಿಕಾರಿ ಆದೇಶದ ನಂತರ ತೂಕ ಮತ್ತು ಮಾಪನ ಇಲಾಖೆಗೆ ಆದೇಶ ರವಾನೆಯಾಗಬೇಕು, ಅಲ್ಲಿಂದ ಮೀಟರ್ ಸರ್ವಿಸ್ ನಡೆಸುವ ಏಜೆನ್ಸಿಗಳಿಗೆ ಸೂಚನೆ ಹೋದ ನಂತರ ಮೀಟರ್‌ನಲ್ಲಿ ದರ ಬದಲಾವಣೆ ಮಾಡಿ, ಸೀಲ್ ಮಾಡಬೇಕಾಗುತ್ತದೆ. ಮಂಗಳೂರಿನಲ್ಲಿ ಪಾಂಡೇಶ್ವರ ಹಾಗೂ ಬಂದರ್ ಈ ಎರಡು ಸ್ಥಳಗಳಲ್ಲಿ ಏಜೆನ್ಸಿಗಳು ಇವೆ. ಒಮ್ಮೆ ಮೀಟರ್‌ನಲ್ಲಿ ಬದಲಾವಣೆ ಮಾಡಲು ₹400 ವೆಚ್ಚವಾಗುತ್ತದೆ. ಮಂಗಳೂರು ನಗರದಲ್ಲಿ ಸಿಎನ್‌ಜಿ ಮತ್ತು ಎಲ್‌ಪಿಜಿ ರಿಕ್ಷಾಗಳು 6,850ರಷ್ಟು ಇದ್ದು, ಎಲೆಕ್ಟ್ರಿಕ್ ರಿಕ್ಷಾಗಳು 3 ಸಾವಿರದಷ್ಟು ಇವೆ. ಎಲ್ಲ ರಿಕ್ಷಾಗಳಲ್ಲೂ ಈ ಬದಲಾವಣೆ ಮಾಡಬೇಕಾಗುತ್ತದೆ ಎಂದು ರಿಕ್ಷಾ ಚಾಲಕರೊಬ್ಬರು ತಿಳಿಸಿದರು.

‘₹25ಕ್ಕೆ ಹೆಚ್ಚಳ ಮಾಡಿ ಕೊಡಿ’

‘2022ರಲ್ಲಿ ರಿಕ್ಷಾಗಳ ಬಾಡಿಗೆ ದರ ಪರಿಷ್ಕರಣೆ ಆಗುವ ವೇಳೆ ಮೊದಲ 1.5 ಕಿ.ಮೀ.ಗೆ ಕನಿಷ್ಠ ದರ ನಿಗದಿಪಡಿಸಿ ನಂತರದ ಪ್ರತಿ ಕಿ.ಮೀ.ಗೆ ₹20ರಂತೆ ಬಾಡಿಗೆ ಪಡೆಯಲು ಆದೇಶ ಆಗಿತ್ತು. ಇದಕ್ಕೆ ಸಂಬಂಧಿಸಿದ ದಾಖಲೆಗಳು ನಮ್ಮ ಬಳಿ ಇವೆ. ಅಲ್ಲದೆ ಪ್ರಸ್ತುತ ನಂತರದ ಪ್ರತಿ ಕಿ.ಮೀ.ಗೆ ₹20ರಂತೆ ಬಾಡಿಗೆ ದರ ಪಡೆಯಲಾಗುತ್ತಿದೆ. ರಿಕ್ಷಾಗಳ ಮೀಟರ್‌ನಲ್ಲೂ ಇದೇ ನಮೂದು ಆಗಿದೆ. ಈಗ ನಮ್ಮ ಬೇಡಿಕೆ ಇರುವುದು ಹಾಲಿ ಇರುವ ₹20 ಅನ್ನು ₹23 ಅಥವಾ ₹25ಕ್ಕೆ ಹೆಚ್ಚಳ ಮಾಡಬೇಕು ಎಂಬುದಾಗಿದೆ’ ಎನ್ನುತ್ತಾರೆ ದಕ್ಷಿಣ ಕನ್ನಡ ಆಟೊರಿಕ್ಷಾ ಚಾಲಕ ಮಾಲೀಕರ ಸಂಘಗಳ ಒಕ್ಕೂಟ ಮಂಗಳೂರು ನಗರದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಶೆಟ್ಟಿ.

ಜಿಲ್ಲೆಯಲ್ಲಿರುವ ರಿಕ್ಷಾಗಳ ಸಂಖ್ಯೆ  ಪೆಟ್ರೋಲ್;ಡೀಸೆಲ್;ಪೆಟ್ರೋಲ್/ಡೀಸೆಲ್;ಎಲೆಕ್ಟ್ರಿಕ್;ಪೆಟ್ರೋಲ್ ಎಲ್‌ಪಿಜಿ;ಸಿಎನ್‌ಜಿ;ಎಲ್‌ಪಿಜಿ;ಶುದ್ಧ ಇವಿ;ಉಳಿದವು;ಒಟ್ಟು 279;1644810;2618;4618;4828;2679;1494;3898;22888 (ಮಾಹಿತಿ: ಆರ್‌ಟಿಒ)

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ