ಜಗಳೂರು | ಭದ್ರಾ ಮೇಲ್ದಂಡೆ ಯೋಜನೆ ಅನುದಾನ ಕೊರತೆಯಿಂದ ವಿಳಂಬ

ಜಗಳೂರು | ಭದ್ರಾ ಮೇಲ್ದಂಡೆ ಯೋಜನೆ ಅನುದಾನ ಕೊರತೆಯಿಂದ ವಿಳಂಬ

ಜಗಳೂರು | ಭದ್ರಾ ಮೇಲ್ದಂಡೆ ಯೋಜನೆ ಅನುದಾನ ಕೊರತೆಯಿಂದ ವಿಳಂಬ

ಜಗಳೂರು: ರಾಜ್ಯದಲ್ಲೇ ಅತ್ಯಂತ ಹಿಂದುಳಿದ ಜಗಳೂರು ತಾಲ್ಲೂಕಿನ 45 ಸಾವಿರ ಎಕರೆಗೆ ನೀರಾವರಿ ಸೌಲಭ್ಯ ಕಲ್ಪಿಸುವ ಹಾಗೂ 9 ಕೆರೆಗಳಿಗೆ ನೀರುಣಿಸುವ ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿ ಅನುದಾನದ ಕೊರತೆಯಿಂದ ಕುಂಟುತ್ತಾ ಸಾಗಿದ್ದು, ಮತ್ತಷ್ಟು ವಿಳಂಬವಾಗುವ ಆತಂಕ ಎದುರಾಗಿದೆ.

ಅತ್ಯಂತ ಕಡಿಮೆ ಮಳೆ ಬೀಳುವ, ಬಯಲುಸೀಮೆ ಪ್ರದೇಶ ಎಂದೇ ಹೆಸರಾಗಿರುವ ಚಿತ್ರದುರ್ಗ, ಚಳ್ಳಕೆರೆ, ಮೊಳಕಾಲ್ಮುರು, ಹೊಸದುರ್ಗ, ಹಿರಿಯೂರು ಹಾಗೂ ಜಗಳೂರು ತಾಲ್ಲೂಕುಗಳ ಕೆರೆಗಳು ಹಾಗೂ ಕೃಷಿ ಜಮೀನುಗಳಿಗೆ ನೀರುಣಿಸುವ ಮಹತ್ವದ ಯೋಜನೆ ಇದು. ಹಲವು ತೊಡರುಗಳ ನಡುವೆಯೂ ಈಗ ಪಕ್ಕದ ತಾಲ್ಲೂಕಿನ ಗೋನೂರು ಕೆರೆಗೆ ನೀರು ಹರಿದು ಬಂದಿದೆ.

ಚಿತ್ರದುರ್ಗ ತಾಲ್ಲೂಕಿನವರೆಗೆ ಕಾಲುವೆಯಲ್ಲಿ ಹರಿದು ಬರುವ ನೀರನ್ನು ಬೆಳಗಟ್ಟದಿಂದ 14 ಕಿ.ಮೀ. ದೂರದ ಜಗಳೂರು ತಾಲ್ಲೂಕಿನ ಸಂಗೇನಹಳ್ಳಿ ಕೆರೆಗೆ ಪೈಪ್ ಲೈನ್ ಮೂಲಕ ತೆಗೆದುಕೊಂಡು ಹೋಗಲಾಗುತ್ತದೆ. ಜಮೀನು ಹಾಗೂ ಕೆರೆಗಳಿಗೆ ಪೈಪ್‌ಲೈನ್ ನಿರ್ಮಾಣ, ಪಂಪ್ ಹೌಸ್ ನಿರ್ಮಾಣ ಸೇರಿದಂತೆ ಇನ್ನಿತರ ಕಾಮಗಾರಿಗೆ ₹ 1,200 ಕೋಟಿ ವೆಚ್ಚವಾಗಲಿದೆ.

‘ಈ ಕಾಮಗಾರಿಯನ್ನು ಬೆಂಗಳೂರಿನ ಮೆಗಾ ಎಂಜಿನಿಯರ್ ಸಂಸ್ಥೆ ಗುತ್ತಿಗೆ ಪಡೆದಿದೆ. ಈಗಾಗಲೇ ₹ 414 ಕೋಟಿ ಮೊತ್ತದ ಕಾಮಗಾರಿ ಮುಗಿದಿದೆ. ₹ 175 ಕೋಟಿ ಅನುದಾನ ಬಿಡುಗಡೆಯಾಗಿದೆ. ₹ 225 ಕೋಟಿ ಬಿಲ್ ಬಾಕಿ ಇದೆ’ ಎಂದು ಭದ್ರಾ ಮೇಲ್ದಂಡೆ ಯೋಜನೆಯ ಕಾರ್ಯನಿರ್ವಾಹಕ ಎಂಜಿನಿಯರ್ ಚಂದ್ರಶೇಖರ್ ತಿಳಿಸಿದರು.

‘ರಾಜ್ಯ ಸರ್ಕಾರ ₹ 12 ಸಾವಿರ ಕೋಟಿ ಮಂಜೂರು ಮಾಡಿದೆ. ಕೇಂದ್ರ ಸರ್ಕಾರದಿಂದ ಅನುದಾನ ಬಂದಿಲ್ಲ. ಹೀಗಾಗಿ 2027ರ ಆಗಸ್ಟ್ ವೇಳೆಗೆ ಕಾಮಗಾರಿ ಮುಗಿಯಬಹುದು’ ಎಂದರು.

‘ತಾಲ್ಲೂಕಿನಲ್ಲಿ ಒಟ್ಟು 38 ಪಂಪ್ ಹೌಸ್‌ಗಳನ್ನು ನಿರ್ಮಾಣ ಮಾಡಲಿದ್ದು, ಆ ಪೈಕಿ ಈಗಾಗಲೇ 28 ಪೂರ್ಣವಾಗಿವೆ. ಬೆಳಗಟ್ಟದಿಂದ ಸಂಗೇನಹಳ್ಳಿ ಕೆರೆವರೆಗೆ ಪೈಪ್‌ಲೈನ್ ಕೈಗೊಳ್ಳಬೇಕಿದೆ. ಚಿತ್ರದುರ್ಗ– ಹೊಸಪೇಟೆ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಸ್ಥಳದಲ್ಲಿ ನೆಲಮಟ್ಟದಿಂದ 3 ಮೀಟರ್ ಕೆಳಗೆ ವಿಶೇಷ ಒಳಕಾಲುವೆ ನಿರ್ಮಿಸಲಾಗುತ್ತದೆ’ ಎಂದು ವಿವರಿಸಿದರು.

ಈ ಮಧ್ಯೆ ಬಿಜೆಪಿಯಿಂದ ಸೆ.21ರಂದು ಭದ್ರಾ ಮೇಲ್ದಂಡೆ ಯೋಜನೆಯ ತ್ವರಿತ ಕಾಮಗಾರಿ ಜಾರಿ ಹಾಗೂ ಬರಪೀಡಿತ ತಾಲ್ಲೂಕು ಘೋಷಣೆಗೆ ಆಗ್ರಹಿಸಿ ಜಗಳೂರು ಬಂದ್‌ ನಡೆಸಲಾಗುತ್ತಿದೆ.

‘ಭದ್ರಾ ಮೇಲ್ದಂಡೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸಿದ್ದರೂ ಕೇಂದ್ರದಿಂದ ಇದುವರೆಗೂ ನಯಾಪೈಸೆ ಅನುದಾನ ಬಂದಿಲ್ಲ. ಕೇಂದ್ರ ಕೊಡಲಿ– ಬಿಡಲಿ ರಾಜ್ಯ ಸರ್ಕಾರದಿಂದ ಉಳಿದ ಹಣ ಬಿಡುಗಡೆ ಮಾಡಿಸಿ ಕಾಮಗಾರಿ ಪೂರ್ಣಗೊಳಿಸಲಾಗುವುದು’ ಎಂದು ಶಾಸಕ ಬಿ. ದೇವೇಂದ್ರಪ್ಪ ತಿಳಿಸಿದರು.

‘ಬಿಜೆಪಿ ಮುಖಂಡರಿಗೆ ಬಂದ್‌ ನಡೆಸಲು ಯಾವ ನೈತಿಕತೆ ಇದೆ’ ಎಂದು ಕಾಂಗ್ರೆಸ್‌ನ ಎಸ್.ಟಿ. ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಡಿ. ಕೀರ್ತಿಕುಮಾರ್ ಪ್ರಶ್ನಿಸಿದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ