
ದಸರಾ ಗಜಪಡೆಗೆ ಬಿಗಿ ಭದ್ರತೆ, ವೀಕ್ಷಣೆಗಿಲ್ಲ ಅವಕಾಶ; ನಿರಾಸೆಯಿಂದ ಹಿಂದಿರುಗಿದ ಜನ
ಮೈಸೂರು: ಅಂಬಾವಿಲಾಸ ಅರಮನೆ ಆವರಣದಲ್ಲಿ ಬಿಡಾರ ಹೂಡಿರುವ ದಸರಾ ಗಜಪಡೆಗಳ ಪಾಲನೆ ವಿಚಾರದಲ್ಲಿ ಅರಣ್ಯ ಇಲಾಖೆ ಹಲವು ಶಿಸ್ತುಕ್ರಮ ವಹಿಸಿದ್ದು, ಆನೆಗಳ ವೀಕ್ಷಣೆಗೂ ಸಂಪೂರ್ಣ ನಿರ್ಬಂಧ ವಿಧಿಸಿದೆ.
ಪ್ರತಿ ದಸರಾದಲ್ಲೂ ಆನೆ ಬಿಡಾರ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತಿತ್ತು. ಆನೆಗಳಿಗೆ ಗೊಂದಲ ಸೃಷ್ಟಿಸುವ, ಇಲಾಖೆಯ ನಿಯಮಗಳನ್ನು ಮೀರುವ ಘಟನೆಗಳು ನಡೆಯುತ್ತಿದ್ದವು. ಈ ಬಾರಿ ಇವುಗಳಿಗೆ ಕಡಿವಾಣ ಹಾಕಲು ಅರಣ್ಯ ಇಲಾಖೆ ಅಧಿಕಾರಿಗಳು ಶಿಸ್ತುಕ್ರಮ ಕೈಗೊಂಡಿದ್ದಾರೆ.
ಈ ಹಿಂದೆ ನೂರಾರು ಜನರು, ಸಾಮಾಜಿಕ ಮಾಧ್ಯಮದ ಪ್ರತಿನಿಧಿಗಳಿಂದ ತುಂಬಿರುತ್ತಿದ್ದ ಬಿಡಾರ ಆನೆಗಳು ಅರಮನೆಗೆ ಬಂದ ಬಳಿಕ ಈ ಬಾರಿ ಬಿಕೊ ಎನ್ನುತ್ತಿದೆ. ಆನೆಗಳೂ ಸ್ವಚ್ಛಂದವಾಗಿ ಓಡಾಡುವ ಪರಿಸರ ನಿರ್ಮಿಸಲಾಗಿದೆ. ಗೇಟ್‌ಗಳಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳೇ ಪರಿಶೀಲನೆ ನಡೆಸುತ್ತಿದ್ದು, ಯಾರೂ ಆನೆಯ ಬಳಿ ತೆರಳದಂತೆ ಕ್ರಮವಹಿಸಿದ್ದಾರೆ.
ಈಚೆಗೆ ಆನೆ ಮಾವುತ ಹಾಗೂ ಕಾವಾಡಿಗಳ ಸಭೆ ಕರೆದ ಇಲಾಖೆಯ ಅಧಿಕಾರಿಗಳು ಶಿಸ್ತುಕ್ರಮಗಳ ಬಗ್ಗೆ ಸೂಚನೆ ನೀಡಿದ್ದಾರೆ. ಗಂಡಾನೆಗಳನ್ನು ಏಕಕಾಲದಲ್ಲಿ ಹೊರಗಡೆ ಕರೆದೊಯ್ಯಬಾರದು. ನೀರು ಕುಡಿಸಲು, ಸ್ನಾನ ಮಾಡಿಸಲು ಒಂದೊಂದೇ ಆನೆಯನ್ನು ಕೊಂಡೊಯ್ಯಬೇಕು. ಆನೆಗಳ ಹಗ್ಗ ಬಿಚ್ಚುವಾಗ ಮಾವುತ, ಕಾವಾಡಿ ಇರಲೇಬೇಕು, ಆನೆ ಕಟ್ಟಿ ಹಾಕಿರುವ ಸ್ಥಳದಲ್ಲೂ ಮಾವುತ ಅಥವಾ ಕಾವಾಡಿ ಇರಬೇಕು ಎಂಬ ನಿಯಮ ವಿಧಿಸಲಾಗಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.
ಪ್ರತಿ ವರ್ಷಕ್ಕಿಂತ ಈ ಬಾರಿ ಬಿಗುವಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆರಂಭದಲ್ಲಿ ಆದ ಟಿಕೆಟ್ ಗೊಂದಲದ ಬಳಿಕ ಸೋಮವಾರದಿಂದ ಜನರನ್ನು ಆನೆಗಳ ವೀಕ್ಷಣೆಗೆ ಬಿಡುತ್ತಿಲ್ಲ. ಬಿಡಾರದ ಗೇಟ್ ಬಳಿ ಹಲವರು ಬಂದು ನಿರಾಸೆಯಿಂದ ಹಿಂದಿರುಗಿದರು.
ಗಜಪಡೆಗಳ ಮಾವುತ, ಕಾವಾಡಿಗಳ ಮನೆಯವರೂ ಬಂದಿದ್ದು, ಅವರಿಗಾಗಿ ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಲಾಗಿದೆ. ತಾತ್ಕಾಲಿಕ ಶಾಲೆ ಹಾಗೂ ಆಯುರ್ವೇದಿಕ್ ಮಸಾಜ್ ಕೇಂದ್ರದ ಕೊಠಡಿಯ ಕೆಲಸಗಳೂ ನಡೆಯುತ್ತಿವೆ.
ಆನೆಗಳ ಹಿತದೃಷ್ಟಿಯಿಂದ ಇಲಾಖೆಯ ಬಿಗಿ ಕ್ರಮಗಳಿಗೆ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ ಆನೆಗಳ ವೀಕ್ಷಣೆಗೆ ಅವಕಾಶ ಇಲ್ಲದಿರುವುದು ಜನರಲ್ಲಿ ನಿರಾಸೆ ಮೂಡಿಸಿದೆ.
ಎರಡನೇ ದಿನದ ತಾಲೀಮು: ಜನರ ಹರ್ಷ
ಗಜಪಡೆಗಳು ಜಂಬೂಸವಾರಿಗಾಗಿ ಸೋಮವಾರ ಎರಡನೇ ದಿನದ ತಾಲೀಮು ನಡೆಸಿದವು. ಬೆಳಿಗ್ಗೆ ಹಾಗೂ ಸಂಜೆ ಆನೆಗಳನ್ನು ಕಾಣಲು ಜಯರಾಮ ದ್ವಾರದ ಎರಡೂ ಬದಿ ಕಾಯುತ್ತಿದ್ದ ಜನರು ಆನೆಗಳು ಅರಮನೆ ಆವರಣದಿಂದ ಹೊರಬರುತ್ತಿದ್ದಂತೆ ‘ಹೋ..’ ಎಂದು ಕೂಗಿದರು.
ಜಯರಾಮ ದ್ವಾರದ ಮೂಲಕ ಹೊರಬಂದ ಆನೆಗಳು ಕೆ.ಆರ್. ವೃತ್ತ, ಸಯ್ಯಾಜಿರಾವ್ ರಸ್ತೆ ಮೂಲಕ ಆಯುರ್ವೇದಿಕ್ ವೃತ್ತದವರೆಗೆ ಸಾಗಿ ವಾಪಸ್ ಬಂದವು. ದಾರಿಯುದ್ದಕ್ಕೂ ಜನರು ಪ್ರೀತಿಯಿಂದ ಹೂ ಮಾಲೆ ಎಸೆದು ಕೈ ಮುಗಿದರು. ಯುವಕನೊಬ್ಬ ಅಭಿಮನ್ಯುವನ್ನು ದಸರಾಕ್ಕೆ ಕರೆತನ್ನಿ ಎಂಬ ಪೋಸ್ಟರ್ ಪ್ರದರ್ಶಿಸಿದ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260901-39-1040520584