
ತುಮಕೂರು: 14,360 ಕಾರ್ಡ್ ರದ್ದು; 715 ಮರು ಚಾಲ್ತಿ
ತುಮಕೂರು: ಜಿಲ್ಲೆಯಲ್ಲಿ ಇದುವರೆಗೆ 14,360 ಬಿಪಿಎಲ್ ಪಡಿತರ ಚೀಟಿ ರದ್ದು ಪಡಿಸಿದ್ದು, ಎಪಿಎಲ್ ಆಗಿ ಪರಿವರ್ತಿಸಲಾಗುತ್ತಿದೆ. ದೂರು ಸಲ್ಲಿಕೆಯಾದ ನಂತರ 715 ಕಾರ್ಡ್ ಮರು ಸ್ಥಾಪಿಸಲಾಗಿದೆ.
ಸದ್ಯ 6,22,869 ಪಡಿತರ ಚೀಟಿಗಳು ಚಾಲ್ತಿಯಲ್ಲಿವೆ. 22.02 ಲಕ್ಷ ಫಲಾನುಭವಿಗಳಿಗೆ ಅನ್ನಭಾಗ್ಯ ಯೋಜನೆಯಡಿ ಅಕ್ಕಿ ವಿತರಿಸಲಾಗುತ್ತಿದೆ. ಕುಟುಂಬದ ವಾರ್ಷಿಕ ಆದಾಯ ₹1.20 ಲಕ್ಷ ಮೀರಿದರೆ, ನಾಲ್ಕು ಚಕ್ರದ ವಾಹನ ಹೊಂದಿದ್ದರೆ, ಆದಾಯ ತೆರಿಗೆ ಪಾವತಿದಾರರಾಗಿದ್ದರೆ ಮತ್ತು 7.5 ಎಕರೆಗಿಂತ ಜಾಸ್ತಿ ಆಸ್ತಿ ಹೊಂದಿದ್ದರೆ ಬಿಪಿಎಲ್ ಕಾರ್ಡ್ ರದ್ದು ಪಡಿಸಲಾಗುತ್ತಿದೆ.
ಜಿಲ್ಲೆಯಾದ್ಯಂತ ವಾರ್ಷಿಕ ಆದಾಯದ ಮಿತಿ ಮೀರಿದವರ 12,970 ಪಡಿತರ ಚೀಟಿ ರದ್ದಾಗಿವೆ. 7.5 ಎಕರೆಗಿಂತ ಹೆಚ್ಚು ಜಮೀನು ಇರುವ 385 ಮತ್ತು 331 ನಕಲು ಕಾರ್ಡ್‌ಗಳು ಪರಿಶೀಲನೆ ಸಮಯದಲ್ಲಿ ಪತ್ತೆಯಾಗಿವೆ. ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಅಧಿಕಾರಿಗಳು ಅನರ್ಹರ ಪಡಿತರ ಚೀಟಿ ರದ್ದು ಪಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ತುಮಕೂರು ತಾಲ್ಲೂಕಿನಲ್ಲಿ ಅತಿ ಹೆಚ್ಚು 3,578 ಕಾರ್ಡ್ ರದ್ದು ಮಾಡಲಾಗಿದೆ. ನಂತರದ ಸ್ಥಾನವನ್ನು ಕುಣಿಗಲ್ ಪಡೆದಿದ್ದು, ಇಲ್ಲಿ 1,903 ಕಾರ್ಡ್ ಎಪಿಎಲ್ ಆಗಿ ಬದಲಾಯಿಸಲಾಗಿದೆ. ಇದರ ಜತೆಗೆ ಕಳೆದ ಒಂದು ವರ್ಷದಲ್ಲಿ ಮೃತಪಟ್ಟ 20,129 ಹೆಸರನ್ನು ಪಡಿತರ ಚೀಟಿಗಳಿಂದ ತೆಗೆದು ಹಾಕಲಾಗಿದೆ. ಇನ್ನೂ 2,299 ಹೆಸರು ಡಿಲೀಟ್ ಮಾಡುವ ಪ್ರಕ್ರಿಯೆ ನಡೆಯುತ್ತಿದೆ.
ಬಿಪಿಎಲ್ ಕಾರ್ಡ್ ರದ್ದಾದ ನಂತರ ‘ಆರ್ಥಿಕವಾಗಿ ದುರ್ಬಲವಾಗಿದ್ದರೂ ಚೀಟಿ ರದ್ದು ಪಡಿಸಲಾಗಿದೆ. ಮತ್ತೊಮ್ಮೆ ಪರಿಶೀಲನೆ ನಡೆಸುವಂತೆ’ 769 ಮಂದಿ ಆಯಾ ತಾಲ್ಲೂಕಿನ ತಹಶೀಲ್ದಾರರಿಗೆ ಮನವಿ ಸಲ್ಲಿಸಿದ್ದರು. ಇದಕ್ಕೆ ಪೂರಕವಾದ ದಾಖಲೆ ಒದಗಿಸಿದ್ದರು. ಈ ಪೈಕಿ 2025–26ರಲ್ಲಿ 412, 2026–27ರಲ್ಲಿ 303 ಸೇರಿ 715 ಕಾರ್ಡ್‌ಗಳನ್ನು ಮರು ಸ್ಥಾಪಿಸಲಾಗಿದೆ.
ಪಡಿತರ ಚೀಟಿದಾರರು ದೂರು ಸಲ್ಲಿಸಿದ ಬಳಿಕ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರ್ಥಿಕವಾಗಿ ಹಿಂದುಳಿದಿರುವುದು ಕಂಡು ಬಂದವರ, ಆದಾಯ ತೆರಿಗೆ ಪಾವತಿಸದ ಬಗ್ಗೆ ಅಗತ್ಯ ದಾಖಲೆ ಸಲ್ಲಿಸಿದವರ ಕಾರ್ಡ್‌ಗಳನ್ನು ಪುನರ್ ಚಾಲ್ತಿಗೆ ತರಲಾಗಿದೆ.
2022–23ರಲ್ಲಿ ಕೊನೆಯದಾಗಿ ಹೊಸ ಪಡಿತರ ಚೀಟಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ನಾಲ್ಕು ವರ್ಷ ಕಳೆದರೂ ಅರ್ಹರಿಗೆ ಕಾರ್ಡ್ ಹಂಚಿಕೆ ಮಾಡಿಲ್ಲ. 2,640 ಬಿಪಿಎಲ್, 3,861 ಎಪಿಎಲ್ ಸೇರಿ 6,501 ಅರ್ಜಿಗಳು ವಿಲೇವಾರಿಗಾಗಿ ಎದುರು ನೋಡುತ್ತಿವೆ.
ಜಿಲ್ಲೆಯಾದ್ಯಂತ ಒಟ್ಟು 39,698 ಅರ್ಜಿಗಳು ಸಲ್ಲಿಕೆಯಾಗಿದ್ದು, 22,247 ಅರ್ಜಿಗಳಿಗೆ ಅನುಮೋದನೆ ದೊರೆತಿದೆ. ಈ ಪೈಕಿ 14,685 ಅರ್ಜಿ ಸ್ವೀಕೃತಗೊಂಡಿವೆ.
ಜಿಲ್ಲೆಯಾದ್ಯಂತ 39,698 ಅರ್ಜಿ ಸಲ್ಲಿಕೆಯಾಗಿದ್ದು, 22,247 ಅರ್ಜಿಗಳಿಗೆ ಅನುಮೋದನೆ ದೊರೆತಿದೆ. ಈ ಪೈಕಿ 14,685 ಅರ್ಜಿ ಸ್ವೀಕೃತಗೊಂಡಿವೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260902-17-1273876471