
ದೇವನಹಳ್ಳಿ: 1,200 ಎಕರೆ ಭೂ ಸ್ವಾಧೀನಕ್ಕೆ ರೈತರ ವಿರೋಧ
ದೇವನಹಳ್ಳಿ: ದೇವನಹಳ್ಳಿ ಸಾಮಾನ್ಯ ಕೈಗಾರಿಕಾ ಪ್ರದೇಶ ಹಂತ–3ರ ಸ್ಥಾಪನೆಗೆ ತಾಲ್ಲೂಕಿನ ಕೊಯಿರಾ, ಮಾಯಸಂದ್ರ, ಮೀಸಗಾನಹಳ್ಳಿ ಹಾಗೂ ದೊಡ್ಡಬಳ್ಳಾಪುರ ತಾಲ್ಲೂಕಿನ ಸೊಣ್ಣಮಾರನಹಳ್ಳಿ, ದಂಡದಾಸಕೊಡಿಗೇನಹಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ಸುಮಾರು 1,200 ಎಕರೆ ಭೂ ಸ್ವಾಧೀನ ಪ್ರಸ್ತಾವ ಕೈಬಿಡಬೇಕು ಎಂದು ಆಗ್ರಹಿಸಿ ರೈತರು ಪ್ರತಿಭಟನೆ ನಡೆಸಿದರು.
ಭೂ ಸ್ವಾಧೀನ ವಿರೋಧಿಸಿ ಶುಕ್ರವಾರ ಜಿಲ್ಲಾಡಳಿತ ಭವನ ಎದುರು ಪ್ರತಿಭಟನೆ ನಡೆಸಿದ ರೈತರು, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಪ್ರಸ್ತಾವಿತ ಪ್ರದೇಶ ಕೃಷಿ, ಜಲಸಂಪನ್ಮೂಲ ಮತ್ತು ಪರಿಸರ ದೃಷ್ಟಿಯಿಂದ ಸೂಕ್ಷ್ಮವಾಗಿದ್ದು, ಕೈಗಾರಿಕಾ ಚಟುವಟಿಕೆ ವಿಸ್ತರಿಸಿದರೆ ಪರಿಸರ ಮತ್ತು ಸ್ಥಳೀಯರಿಗೆ ಹಲವು ಸಮಸ್ಯೆಗಳು ಎದುರಾಗಲಿವೆ ಎಂದು ಮನವರಿಕೆ ಮಾಡಿಕೊಟ್ಟರು.
ಕೊಯಿರಾ, ಮಾಯಸಂದ್ರ ಮತ್ತು ಮೀಸಗಾನಹಳ್ಳಿ ವ್ಯಾಪ್ತಿಯಲ್ಲಿ ಭೂಸ್ವಾಧೀನಕ್ಕೆ ಸಂಬಂಧಿಸಿದ ಪ್ರಾಥಮಿಕ ಅಧಿಸೂಚನೆ ಹೊರಡಿಸುವ ಪ್ರಕ್ರಿಯೆ ನಡೆಯುತ್ತಿದೆ. 2025ರ ಅಕ್ಟೋಬರ್ 18ರಂದು ನಡೆದ 396ನೇ ಸಭೆಯ ವಿಷಯ ಸಂಖ್ಯೆ 9ಕ್ಕೆ ಸಂಬಂಧಿಸಿದ ತನಿಖಾ ವರದಿಯ ಆಧಾರದ ಮೇಲೆ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ತಿಳಿಸಿದರು.
ಜಲಾನಯನ ಪ್ರದೇಶಕ್ಕೆ ಧಕ್ಕೆ: ಕೊಯಿರಾ ಭಾಗದ ಬಹುತೇಕ ಜಮೀನುಗಳು ಅರ್ಕಾವತಿ ನದಿ ವ್ಯವಸ್ಥೆಯ ಜಲಾನಯನ ಪ್ರದೇಶಕ್ಕೆ ಸಂಬಂಧಿಸಿವೆ. ನಂದಿ ಬೆಟ್ಟದ ಸುತ್ತಲಿನ ಪ್ರದೇಶ ಅರ್ಕಾವತಿ ಮತ್ತು ಕುಮುದ್ವತಿ ನದಿಗಳ ಜಲಾನಯನ ವ್ಯವಸ್ಥೆಯೊಂದಿಗೆ ಸಂಪರ್ಕ ಹೊಂದಿದ್ದು, ಕೆರೆಗಳು, ಜಲಮಾರ್ಗಗಳು ಹಾಗೂ ಅಂತರ್ಜಲ ವ್ಯವಸ್ಥೆ ಪರಸ್ಪರ ಸಂಬಂಧ ಹೊಂದಿವೆ ಎಂದು ರೈತರು ಹೇಳಿದರು.
‘ದೊಡ್ಡ ಪ್ರಮಾಣದ ನಿರ್ಮಾಣ ಮತ್ತು ಕಾಂಕ್ರೀಟೀಕರಣದಿಂದ ಮಳೆನೀರಿನ ಸಹಜ ಹರಿವು ಬದಲಾಗಬಹುದು. ಇದರಿಂದ ಕೆರೆಗಳಿಗೆ ನೀರು ಸೇರುವುದು ಕಡಿಮೆಯಾಗಿ ಅಂತರ್ಜಲ ಮರುಪೂರಣಕ್ಕೂ ತೊಂದರೆಯಾಗಬಹುದು’ ಎಂದು ಮುಖಂಡರು ಆತಂಕ ವ್ಯಕ್ತಪಡಿಸಿದರು.
ಕೊಯಿರಾ ಕೆರೆ ಗ್ರಾಮದ ಕುಡಿಯುವ ನೀರು, ಕೃಷಿ, ಬೋರ್‌ವೆಲ್‌ಗಳು ಮತ್ತು ತೆರೆದ ಬಾವಿಗಳಿಗೆ ಪ್ರಮುಖ ಆಧಾರವಾಗಿದೆ. ಕೆರೆಯ ಜಲಾನಯನ ಪ್ರದೇಶದಲ್ಲಿ ನಿರ್ಮಾಣ ಚಟುವಟಿಕೆ ಹೆಚ್ಚಿದರೆ ನೀರಿನ ಸಮಸ್ಯೆ ಮತ್ತಷ್ಟು ತೀವ್ರವಾಗಬಹುದು ಎಂದು ಗ್ರಾಮಸ್ಥರು ತಿಳಿಸಿದರು.
ರೈತ ಮುಖಂಡರಿಂದ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಕೆ.ಎನ್.ಅನುರಾಧ ಈ ವಿಚಾರವಾಗಿ ವಾಸ್ತವ ವರದಿಯೊಂದಿಗೆ ಸೂಕ್ತ ಶಿಫಾರಸು ದಾಖಲೆಗಳೊಂದಿಗೆ ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ತಿಳಿಸಿದರು.
ಶಾಶ್ವತ ನೀರಾವರಿ ಹೋರಾಟಗಾರ ಆಂಜನೇಯ ರೆಡ್ಡಿ, ದಸಂಸ ಮುಖಂಡ ಕಾರಹಳ್ಳಿ ಶ್ರೀನಿವಾಸ್, ಪ್ರಭಾಬೆಳವಂಗಲ, ವಕೀಲ ಸಿದ್ಧಾರ್ಥ, ಆಲೂರು ದುದ್ದನಹಳ್ಳಿ ನಿಖಿಲ್, ಹಸಿರು ಸೇನೆ ಸಂಚಾಲಕ ಹರೀಶ್, ಹೊಸೂರು ಕೆ.ಶ್ರೀನಿವಾಸ, ಹೊಸೂರು ರವಿಕುಮಾರ್, ಬೀರಸಂದ್ರ ಮೋಹನ್ ಕುಮಾರ್, ಹಸಿರು ಸೇನೆ ಮತ್ತು ಕನ್ನಡ ಪರ ಸಂಘಟನೆಗಳು, ಕೊಯಿರಾ, ಮಾಯಸಂದ್ರ, ಮೀಸಗಾನಹಳ್ಳಿ, ಕೆ.ಹೊಸೂರು, ಶ್ಯಾನಪನಹಳ್ಳಿ ಹಾಗೂ ಸುತ್ತುಮುತ್ತ ಗ್ರಾಮಸ್ಥರು, ದಂಡಿದಾಸಕೋಡಿಗೆಹಳ್ಳಿ, ಸೊಣ್ಣಮಾರನಹಳ್ಳಿ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಕಾನೂನುಬದ್ಧ ಅಧ್ಯಯನಕ್ಕೆ ಒತ್ತಾಯ
ಪ್ರಸ್ತಾವಿತ ಪ್ರದೇಶದಲ್ಲಿ ಭತ್ತ ರಾಗಿ ತರಕಾರಿ ಹೂವು ತೆಂಗು ಮತ್ತು ದಾಳಿಂಬೆ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಹಲವು ಕುಟುಂಬಗಳ ಜೀವನೋಪಾಯಕ್ಕೆ ಕೃಷಿಯೇ ಆಧಾರವಾಗಿದೆ. ಭೂಸ್ವಾಧೀನ ಪ್ರಕ್ರಿಯೆ ಮುಂದುವರಿಸುವ ಮೊದಲು 2013ರ ಭೂಸ್ವಾಧೀನ ಕಾಯ್ದೆ ಆಶಯಗಳನ್ನು ಪಾಲಿಸಿ ಸಾಮಾಜಿಕ ಪರಿಣಾಮ ಅಧ್ಯಯನ ಹಾಗೂ ಪರಿಸರ ಪರಿಣಾಮ ಅಧ್ಯಯನ ಸೇರಿದಂತೆ ಅಗತ್ಯ ಕಾನೂನುಬದ್ಧ ಮತ್ತು ವೈಜ್ಞಾನಿಕ ಪರಿಶೀಲನೆ ನಡೆಸಬೇಕು ಎಂದು ರೈತರು ಒತ್ತಾಯಿಸಿದರು. ಮೀಸಗಾನಹಳ್ಳಿ ಮತ್ತು ಕೊಯಿರಾ ಭಾಗದ ಕೆಲವು ಜಮೀನುಗಳು ಬಿಎಸ್‌ಎಫ್ ಅಧೀನದಲ್ಲಿರುವುದರಿಂದ ಭದ್ರತಾ ದೃಷ್ಟಿಯಿಂದಲೂ ಸಂಬಂಧಿಸಿದ ಪ್ರಾಧಿಕಾರಗಳೊಂದಿಗೆ ಸಮಾಲೋಚನೆ ನಡೆಸಬೇಕು. ಪ್ರಸ್ತಾವಿತ 1200 ಎಕರೆ ಭೂಸ್ವಾಧೀನವನ್ನು ಕೈಬಿಟ್ಟು ರೈತರ ಜಮೀನು ಅರ್ಕಾವತಿ ಜಲಾನಯನ ಪ್ರದೇಶ ಕೆರೆಗಳು ಅಂತರ್ಜಲ ಮತ್ತು ಸ್ಥಳೀಯರ ಜೀವನೋಪಾಯ ರಕ್ಷಿಸುವಂತೆ ಜಿಲ್ಲಾಧಿಕಾರಿ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಆಗ್ರಹಿಸಿದರು.
ಕೈಗಾರಿಕಾ ಮಾಲಿನ್ಯ ಉಲ್ಬಣ
ಆತಂಕ ಕೈಗಾರಿಕಾ ಪ್ರದೇಶಗಳ ವಿಸ್ತರಣೆಯಿಂದ ಕೊಯಿರಾ ಸುತ್ತಮುತ್ತಲಿನ ಅರುವನಹಳ್ಳಿ ದೊಡ್ಡಗೊಲ್ಲಹಳ್ಳಿ ರಾಮನಾಥಪುರ ಹಾಗೂ ರಬ್ಬನಹಳ್ಳಿ ಗ್ರಾಮಗಳು ಸಂಚಾರ ದಟ್ಟಣೆ ದೂಳು ನೀರಿನ ಕೊರತೆ ನೈರ್ಮಲ್ಯ ಹಾಗೂ ಆರೋಗ್ಯ ಸಮಸ್ಯೆ ಎದುರಿಸುತ್ತಿವೆ ಎಂದು ಪ್ರತಿಭಟನಾನಿರತ ರೈತರು ತಿಳಿಸಿದರು. ಜಿಲ್ಲೆಯಲ್ಲಿ ಈಗಾಗಲೇ 22 ಕೈಗಾರಿಕಾ ಪ್ರದೇಶಗಳಿಗಾಗಿ ಸುಮಾರು 13308 ಎಕರೆ ಭೂಮಿ ಸ್ವಾಧೀನವಾಗಿದೆ. ದೇವನಹಳ್ಳಿ ತಾಲ್ಲೂಕಿನಲ್ಲೇ ವಿಮಾನ ನಿಲ್ದಾಣ ಐಟಿಐಆರ್ ಹಾಗೂ ಚನ್ನರಾಯಪಟ್ಟಣ ಕೈಗಾರಿಕಾ ಪ್ರದೇಶ ಸೇರಿದಂತೆ ವಿವಿಧ ಯೋಜನೆಗಳಿಗೆ ಸುಮಾರು 9000 ಎಕರೆ ಜಮೀನು ಸ್ವಾಧೀನವಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ‘ಕೈಗಾರಿಕಾ ಚಟುವಟಿಕೆ ಹೆಚ್ಚಿದಂತೆ ನೀರು ಸಂಚಾರ ತ್ಯಾಜ್ಯ ನಿರ್ವಹಣೆ ಮತ್ತು ಪರಿಸರದ ಮೇಲಿನ ಒತ್ತಡವೂ ಹೆಚ್ಚುತ್ತಿದೆ. ಮತ್ತಷ್ಟು ಕೃಷಿ ಭೂಮಿ ಕಳೆದುಕೊಂಡರೆ ರೈತರ ಜೀವನೋಪಾಯಕ್ಕೆ ಹೊಡೆತ ಬೀಳಲಿದೆ’ ಎಂದು ಮುಖಂಡರು ಹೇಳಿದರು.