ರೈಲು ಕೊರತೆಯಿಂದ ಪ್ರಯಾಣಿಕರಿಗೆ ಸಂಕಷ್ಟ; ಸಾರ್ವಜನಿಕರ ಆಕ್ರೋಶ

ರೈಲು ಕೊರತೆಯಿಂದ ಪ್ರಯಾಣಿಕರಿಗೆ ಸಂಕಷ್ಟ; ಸಾರ್ವಜನಿಕರ ಆಕ್ರೋಶ

ರೈಲು ಕೊರತೆಯಿಂದ ಪ್ರಯಾಣಿಕರಿಗೆ ಸಂಕಷ್ಟ; ಸಾರ್ವಜನಿಕರ ಆಕ್ರೋಶ

ಗುಡಗೇರಿ: ಕೋವಿಡ್ ನಂತರ ಹುಬ್ಬಳ್ಳಿ–ಬೆಂಗಳೂರು ರೈಲು ಮಾರ್ಗದಲ್ಲಿ ಪ್ಯಾಸೆಂಜರ್ ರೈಲುಗಳ ಸಂಚಾರ ಕಡಿತಗೊಂಡ ಪರಿಣಾಮ, ಈ ಭಾಗದ ಪ್ರಯಾಣಿಕರು ಸಂಕಷ್ಟ ಎದುರಿಸುತ್ತಿದ್ದಾರೆ.

ಈ ಮಾರ್ಗವು ಜೋಡಿ ಹಳಿಯಾಗಿ ಪರಿವರ್ತನೆಗೊಂಡು ಸಂಪೂರ್ಣ ವಿದ್ಯುದ್ದೀಕರಣ ಗೊಂಡಿದ್ದರೂ, ರೈಲುಗಳ ಸಂಖ್ಯೆ ಹೆಚ್ಚಿಸುವ ಬದಲು ಕಡಿತಗೊಳಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಕೋವಿಡ್ ಪೂರ್ವದ ಸಂಚಾರ: ಹುಬ್ಬಳ್ಳಿಯಿಂದ ಬೆಂಗಳೂರು ಮಾರ್ಗವಾಗಿ ಬೆಳಿಗ್ಗೆ 7.15ಕ್ಕೆ ಬೆಂಗಳೂರು, 9.15ಕ್ಕೆ ಚಿಕ್ಕಜಾಜೂರ, ಮಧ್ಯಾಹ್ನ 3ಕ್ಕೆ ಅರಸೀಕೆರೆ, ಸಂಜೆ 6ಕ್ಕೆ ಬೆಂಗಳೂರು ಹಾಗೂ ರಾತ್ರಿ 7ಕ್ಕೆ ಚಿಕ್ಕಜಾಜೂರ ಸೇರಿದಂತೆ ನಿತ್ಯ ಪ್ಯಾಸೆಂಜರ್ ರೈಲುಗಳು ಸಂಚರಿಸುತ್ತಿದ್ದವು. ಅದೇ ರೀತಿ ಬೆಂಗಳೂರಿನಿಂದ ಗುಡಗೇರಿ ಮಾರ್ಗವಾಗಿ ಹುಬ್ಬಳ್ಳಿಗೆ ಬೆಳಿಗ್ಗೆ 8ಕ್ಕೆ ಚಿಕ್ಕಜಾಜೂರ, 9.15ಕ್ಕೆ ಬೆಂಗಳೂರು, 11.30ಕ್ಕೆ ಅರಸೀಕೆರೆ, ಸಂಜೆ 5ಕ್ಕೆ ಚಿಕ್ಕಜಾಜೂರ ಹಾಗೂ ರಾತ್ರಿ 7.30ಕ್ಕೆ ಬೆಂಗಳೂರು ಸೇರಿದಂತೆ ಐದು ರೈಲುಗಳು ಕಾರ್ಯಾಚರಣೆ ನಡೆಸುತ್ತಿದ್ದವು.

ಇಂದಿನ ಸ್ಥಿತಿ: ಹುಬ್ಬಳ್ಳಿಯಿಂದ ಬೆಳಿಗ್ಗೆ 7.20ಕ್ಕೆ ಚಿಕ್ಕಜಾಜೂರು, ಮಧ್ಯಾಹ್ನ 3ಕ್ಕೆ ಅರಸೀಕೆರೆ ಹಾಗೂ ಸಂಜೆ 6.45ಕ್ಕೆ ಬೆಂಗಳೂರು ಮಾತ್ರ ರೈಲುಗಳು ಸಂಚರಿಸುತ್ತಿವೆ. ಮರಳಿ ಬರುವಾಗ ಬೆಳಿಗ್ಗೆ 7.35ಕ್ಕೆ ಬೆಂಗಳೂರು, 10.53ಕ್ಕೆ ಅರಸೀಕೆರೆ ಹಾಗೂ ಸಂಜೆ 5ಕ್ಕೆ ಚಿಕ್ಕಜಾಜೂರ ಸೇರಿದಂತೆ ಕೇವಲ ಮೂರು ರೈಲುಗಳು ಸಂಚರಿಸುತ್ತಿದ್ದು, ಇದರಿಂದ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿದೆ.

ಟಿಕೆಟ್ ದರ ದುಬಾರಿ: ಕೋವಿಡ್ ಪೂರ್ವದಲ್ಲಿ ಗುಡಗೇರಿಯಿಂದ ಹುಬ್ಬಳ್ಳಿಗೆ ಕೇವಲ ₹10 ಇದ್ದ ಪ್ರಯಾಣ ದರವನ್ನು ಸಾಮಾನ್ಯ ಪ್ಯಾಸೆಂಜರ್ ರೈಲಿನ ಬದಲಿಗೆ ‘ಎಕ್ಸ್‌ಪ್ರೆಸ್ ಸೂಪರ್‌ಫಾಸ್ಟ್ ಪ್ಯಾಸೆಂಜರ್’ ಎಂದು ಮರುನಾಮಕರಣ ಮಾಡಿ ₹35ಕ್ಕೆ ಹೆಚ್ಚಿಸಲಾಗಿದೆ. ಇದರಿಂದ ಬಡ ಪ್ರಯಾಣಿಕರಿಗೆ ಹೊರೆಯಾಗಿದೆ. ಗದಗ ಮಾರ್ಗದಲ್ಲಿ ಸಂಚರಿಸುವ ಪ್ಯಾಸೆಂಜರ್ ರೈಲು ಪ್ರಯಾಣ ದರ ಇನ್ನೂ ₹10 ಇದ್ದು, ಗುಡಿಗೇರಿ ಮಾರ್ಗದಲ್ಲಿ ಬೆಲೆ ಏರಿಕೆ ಮಾಡಿರುವುದಕ್ಕೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಯಲವಿಗಿ, ಕಳಸ, ಗುಡಗೇರಿ ಹಾಗೂ ಸಂಶಿ ನಿಲ್ದಾಣಗಳಿಂದ ನಿತ್ಯ ನೂರಾರು ಕೂಲಿ ಕಾರ್ಮಿಕರು ಕೆಲಸಕ್ಕೆ ಹಾಗೂ ವಿದ್ಯಾರ್ಥಿಗಳು ಹುಬ್ಬಳ್ಳಿ–ಧಾರವಾಡದ ಕಾಲೇಜುಗಳಿಗೆ ತೆರಳುತ್ತಾರೆ. ರೈಲುಗಳ ಕೊರತೆಯಿಂದಾಗಿ ಜನರು ನಿತ್ಯ ಕಿಕ್ಕಿರಿದ ಬೋಗಿಗಳಲ್ಲಿ ನಿಂತೇ ಪ್ರಯಾಣಿಸಬೇಕಾಗಿದೆ.

‘ರೈಲು ನಿಲ್ದಾಣಗಳು ಆಧುನೀಕರಣಗೊಂಡಿವೆ. ಆದರೆ ರೈಲುಗಳೇ ಇಲ್ಲದಂತಾಗಿದೆ. ಪ್ರಯಾಣಿಕರ ಹಿತದೃಷ್ಟಿಯಿಂದ ಹುಬ್ಬಳ್ಳಿ–ಹರಿಹರ ನಡುವೆ ಎರಡು ಪ್ಯಾಸೆಂಜರ್ ರೈಲುಗಳನ್ನು ಆರಂಭಿಸಿ, ಗುಡಗೇರಿಯಲ್ಲಿ ಕನಿಷ್ಠ ಎರಡು ಎಕ್ಸ್‌ಪ್ರೆಸ್ ರೈಲುಗಳಿಗೆ ನಿಲುಗಡೆ ಮಾಡಿದರೆ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಜನರಿಗೆ ಅನುಕೂಲವಾಗುತ್ತದೆ‘ ಎಂದು ವಿಜಯಕುಮಾರ ಹಾಲಿ ಹೇಳಿದರು.

ಸ್ಥಳೀಯ ಸಂಸದರು, ಶಾಸಕರು ಹಾಗೂ ನೈರುತ್ಯ ರೈಲ್ವೆ ಅಧಿಕಾರಿಗಳು ತಕ್ಷಣ ಸ್ಪಂದಿಸಿ, ಕೋವಿಡ್ ಪೂರ್ವದಲ್ಲಿದ್ದ ರೈಲುಗಳನ್ನು ಮರು ಆರಂಭಿಸಿ, ಎಕ್ಸ್‌ಪ್ರೆಸ್ ರೈಲುಗಳಿಗೆ ಗುಡಗೇರಿ ನಿಲ್ದಾಣದಲ್ಲಿ ನಿಲುಗಡೆ ನೀಡಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ