
ಧರ್ಮಪುರ ಬೆನಕನಹಳ್ಳಿ ಸರ್ಕಾರಿ ಶಾಲೆಗೆ ಅಭಿವೃದ್ಧಿ ಸ್ಪರ್ಶ
ಧರ್ಮಪುರ: ಹೋಬಳಿ ಕೇಂದ್ರದಿಂದ 5 ಕಿ.ಮೀ. ದೂರದಲ್ಲಿರುವ ಮತ್ತು ಇವತ್ತಿಗೂ ಬಸ್ ಸಂಚಾರವಿಲ್ಲದ ಬೆನಕನಹಳ್ಳಿಯ ಕನ್ನಡ ಮಾಧ್ಯಮ ಸರ್ಕಾರಿ ಶಾಲೆಯು ಗ್ರಾಮಸ್ಥರು, ಹಳೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಬದ್ಧತೆಯಿಂದ ಅಭಿವೃದ್ಧಿಯ ಸ್ಪರ್ಶ ಪಡೆದಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.
70 ವರ್ಷಗಳ ಹಿಂದೆ ಬೆನಕನಹಳ್ಳಿಯ ಎಸ್‌ಸಿ ಕಾಲೊನಿಯಲ್ಲಿ ಪ್ರಾರಂಭವಾದ ಈ ಶಾಲೆ ಅನೇಕ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ನೀಡಿದ್ದು, ಅವರು ರಾಜ್ಯ, ಹೊರರಾಜ್ಯಗಳಲ್ಲಿ ಬದುಕು ಕಟ್ಟಿಕೊಳ್ಳಲು ಕಾರಣವಾಗಿದೆ. ಆರಂಭದಲ್ಲಿ ಒಂದೆರಡು ಕೊಠಡಿಗಳಿಗೆ ಸೀಮಿತವಾಗಿದ್ದ ಶಾಲೆಯಲ್ಲಿ ಈಗ ಸುಸಜ್ಜಿತವಾದ 5 ಕೊಠಡಿಗಳಿದ್ದು, 1ರಿಂದ 5ನೇ ತರಗತಿಯವರೆಗೆ 22 ವಿದ್ಯಾರ್ಥಿಗಳು ಓದುತ್ತಿದ್ದಾರೆ.
ಸಮೀಪದ ಎಷ್ಟೋ ಶಾಲೆಗಳು ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚಿಹೋಗಿವೆ. ಆದರೆ ಗ್ರಾಮದ ಎಸ್‌ಸಿ ಕಾಲೊನಿ ಶಾಲೆಗೆ ವಿದ್ಯಾರ್ಥಿಗಳನ್ನು ಸೆಳೆಯಲು ಶಿಕ್ಷಕರು ಅಪಾರ ಶ್ರಮ ವಹಿಸಿದ್ದಾರೆ. ಕಲಿಕೆಗೆ ಪೂರಕ ವಾತಾವರಣ, ಕಾಂಪೌಂಡ್, ಪ್ರವೇಶ ದ್ವಾರ, ಸ್ಮಾರ್ಟ್ ಕ್ಲಾಸ್, ಗ್ರಂಥಾಲಯ, ಆಟದ ಮೈದಾನ, ವಿಜ್ಞಾನ ವಸ್ತು ಪ್ರದರ್ಶನ, ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ, ಮೈದಾನದಲ್ಲಿ ವಿವಿಧ ರೀತಿಯ ಗಿಡ ಮರಗಳು, ಮೈದಾನದಲ್ಲಿ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಕಲ್ಪಿಸಿದ್ದು, ಉತ್ತಮ ಸೌಲಭ್ಯಗಳಿಂದ ಮಾದರಿ ಶಾಲೆಯಾಗಿ ರೂಪುಗೊಂಡಿದೆ.
ಗ್ರಾಮಸ್ಥರು ಹಾಗೂ ಹಳೆಯ ವಿದ್ಯಾರ್ಥಿಗಳ ಆರ್ಥಿಕ ನೆರವಿನ ಜೊತೆಗೆ ವಿವಿಧ ಸಂಘ ಸಂಸ್ಥೆಗಳು ಹಾಗೂ ದಾನಿಗಳ ಸಹಕಾರದಿಂದ ಶಾಲೆಗೆ ಅಗತ್ಯವಿರುವ ಸೌಕರ್ಯಗಳನ್ನು ಇಲ್ಲಿನ ಶಿಕ್ಷಕರು ಕಲ್ಪಿಸುತ್ತಿದ್ದಾರೆ. ಈಚೆಗೆ ನಿರ್ಮಿಸಲಾದ ಪ್ರವೇಶದ್ವಾರಕ್ಕೆ ₹80 ಸಾವಿರ ವೆಚ್ಚವಾಗಿದ್ದು, ದಾನಿಯೊಬ್ಬರು ಇದನ್ನು ಭರಿಸಿದ್ದಾರೆ. ಬೆಂಗಳೂರಿನ ಸಾಯಿಮಾಯಿ ಟ್ರಸ್ಟ್ ಮತ್ತು ಹಿರಿಯೂರಿನ ಇನ್ನರ್ ವ್ಹೀಲ್ ಮೊದಲಾದ ಸಂಸ್ಥೆಗಳ ಕೊಡುಗೆಯೂ ಇದೆ ಎಂಬುದನ್ನು ಶಿಕ್ಷಕರಾದ ರಘುನಾಥ್ ಮತ್ತು ನಾಗೇಶ್ ನೆನಪಿಸಿಕೊಳ್ಳುತ್ತಾರೆ.
ಹಿರಿಯ ಪ್ರಾಥಮಿಕ ತರಗತಿಗೆ ಬೇಡಿಕೆ
ಬೆನಕನಹಳ್ಳಿಯಲ್ಲಿ ಉಪ್ಪಾರಹಟ್ಟಿ, ಗೊಲ್ಲರಹಟ್ಟಿ ಮತ್ತು ಎಸ್‌ಸಿ ಕಾಲೊನಿ ಸೇರಿ ಮೂರು ಕಡೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಿವೆ. ಆದರೆ ಹಿರಿಯ ಪ್ರಾಥಮಿಕ ಶಾಲೆಗಾಗಿ 5 ಕಿ.ಮೀ.ದೂರದ ಧರ್ಮಪುರಕ್ಕೆ ಹೋಗಬೇಕಿದೆ. ಜೊತೆಗೆ ಬಸ್ ಸೌಲಭ್ಯವೂ ಇಲ್ಲದಿರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಹೀಗಾಗಿ ಎಸ್‌ಸಿ ಕಾಲೊನಿಯಲ್ಲಿರುವ ಶಾಲಾ ಕಟ್ಟಡದಲ್ಲಿಯೇ ಹಿರಿಯ ಪ್ರಾಥಮಿಕ ತರಗತಿಗಳನ್ನು ಪ್ರಾರಂಭಿಸಬೇಕು ಎಂದು ಗ್ರಾಮದ ಬಿ.ಟಿ.ತಿಪ್ಪೇಸ್ವಾಮಿ ಇಲಾಖೆಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಮುಖ್ಯಶಿಕ್ಷಕ ಆರ್.ರಂಗನಾಥ್ ಮತ್ತು ಶಿಕ್ಷಕ ಶಶಿಧರ್ ತಮ್ಮ ಬಿಡುವಿನ ವೇಳೆಯಲ್ಲಿ ವಿದ್ಯಾರ್ಥಿಗಳ ಸಹಕಾರದೊಂದಿಗೆ ಗಿಡಗಳನ್ನು ಬೆಳೆಸುತ್ತಿದ್ದಾರೆ.
ಹೀಗೆ ಶಾಲಾ ನರ್ಸರಿಯಲ್ಲಿ ಬೆಳೆಸಿದ ಗಿಡಗಳನ್ನು ಪರಿಸರ ಆಸಕ್ತರಿಗೆ ಹಾಗೂ ಶಾಲೆಗಳಿಗೆ ಉಚಿತವಾಗಿ ವಿತರಿಸುತ್ತಾರೆ. ಈ ಕಾರ್ಯದಿಂದ ಶಾಲೆಗೆ ಮತ್ತು ಗ್ರಾಮಕ್ಕೆ ಒಳ್ಳೆ ಹೆಸರು ಬಂದಿದೆ ಎಂದು ಎಸ್‌ಡಿಎಂಸಿ ಅಧ್ಯಕ್ಷ ಗೋವಿಂದಪ್ಪ ಪ್ರಶಂಸಿಸುತ್ತಾರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260905-44-1725226851