ವಿಜಯನಗರ ಜಿಲ್ಲೆಗೆ ಐದು ವರ್ಷ: ಅಭಿವೃದ್ಧಿಯಲ್ಲೂ ಕೊನೆಯ ಸ್ಥಾನ

ವಿಜಯನಗರ ಜಿಲ್ಲೆಗೆ ಐದು ವರ್ಷ: ಅಭಿವೃದ್ಧಿಯಲ್ಲೂ ಕೊನೆಯ ಸ್ಥಾನ

ವಿಜಯನಗರ ಜಿಲ್ಲೆಗೆ ಐದು ವರ್ಷ: ಅಭಿವೃದ್ಧಿಯಲ್ಲೂ ಕೊನೆಯ ಸ್ಥಾನ

ಹೊಸ‍ಪೇಟೆ (ವಿಜಯನಗರ): ರಾಜ್ಯದಲ್ಲಿ ಕೊನೆಯದಾಗಿ ರಚನೆಯಾಗಿರುವ ವಿಜಯನಗರ ಜಿಲ್ಲೆಗೆ ಇದೀಗ ಐದು ವರ್ಷ ತುಂಬಿದ್ದು, ಅಭಿವೃದ್ಧಿ ವಿಚಾರದಲ್ಲೂ ‘ಕೊನೆಯ ಸ್ಥಾನ’ದಲ್ಲೇ ಇದೆ. ಜನರ ಅಹವಾಲುಗಳನ್ನು ಆಲಿಸುವ ಪ್ರಜಾಸೇವೆ ಅಭಿಯಾನ ಆರಂಭಿಸಲಿರುವ ಮುಖ್ಯಮಂತ್ರಿ ಅವರಿಗೆ ಜಿಲ್ಲೆಯ ಅಹವಾಲು ಕಿವಿಗೆ ಬಿದ್ದೀತೇ ಎಂಬ ಪ್ರಶ್ನೆ ಮೂಡಿದೆ.

ರಾಜ್ಯಮಟ್ಟದ ಜನಸೇವಾ ಅಭಿಯಾನ ಆರಂಭಿಸಲು ಕೂಡ್ಲಿಗಿಯನ್ನು ಆಯ್ಕೆ ಮಾಡಿಕೊಂಡಿದ್ದೇ ಇದು ಅತ್ಯಂತ ಹಿಂದುಳಿದ ತಾಲ್ಲೂಕುಗಳಲ್ಲಿ ಒಂದು ಹಾಗೂ ಅತ್ಯಂತ ಹಿಂದುಳಿದ ಕಲ್ಯಾಣ ಕರ್ನಾಟಕಕ್ಕೆ ತೆರಳುವ ಹೆಬ್ಬಾಗಿಲು ಎಂಬ ಕಾರಣಕ್ಕೆ. ಕೂಡ್ಲಿಗಿಯಂತೆ ಜಿಲ್ಲೆಯ ಇತರ ಐದು ತಾಲ್ಲೂಕುಗಳು ಸಹ ಅತ್ಯಂತ ಹಿಂದುಳಿದಿವೆ. ಹಂಪಿ, ತುಂಗಭದ್ರಾ ಡ್ಯಾಂಗಳು ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯುತ್ತಿರುವುದು ಬಿಟ್ಟರೆ ಇಲ್ಲಿ ಏನಿದೆ ಎಂಬ ಪ್ರಶ್ನೆ ಸಹಜವಾಗಿದೆ.

ಕಾರಣ ಏನು?: ಪ್ರತ್ಯೇಕ ಜಿಲ್ಲೆಯಾದ ಬಳಿಕ ಎಲ್ಲ ಇಲಾಖೆಗಳ ಕಚೇರಿಗಳೂ ಹೊಸಪೇಟೆಗೆ ಬರಬೇಕು. ಆದರೆ ಇನ್ನೂ ಶೇ 35ರಷ್ಟು ಇಲಾಖೆಗಳ ಕಚೇರಿಗಳು ಬಳ್ಳಾರಿಯಿಂದ ಸ್ಥಳಾಂತರಗೊಂಡಿಲ್ಲ. ಇಂತಹ ಇಲಾಖೆಗಳ ಸೇವೆ ಪಡೆಯಲು ಈ ಭಾಗದ ಜನ ಬಳ್ಳಾರಿಗೆ ಹೋಗಲೇಬೇಕು. ಹರಪನಹಳ್ಳಿ, ಹೂವಿನಹಡಗಲಿ ಭಾಗದಿಂದ ಬಳ್ಳಾರಿಗೆ ಹೋಗಲು 120 ಕಿ.ಮೀ ಕ್ರಮಿಸಬೇಕು. ಒಂದೇ ದಿನದಲ್ಲಿ ಕೆಲಸ ಮಾಡಿಸಿಕೊಂಡು ಬರಲು ಸಾಧ್ಯವೇ ಇಲ್ಲ ಎಂಬಂತಹ ಸ್ಥಿತಿ ಇದೆ.

ಹೊಸಪೇಟೆಯಲ್ಲಿ ಜಿಲ್ಲಾಡಳಿತ ಭವನ ನಿರ್ಮಾಣವಾಗಿಲ್ಲ. ನೂತನ ಕೋರ್ಟ್ ಕಟ್ಟಡ ಸ್ಥಾಪನೆಗೊಂಡಿಲ್ಲ. ಸೈಬರ್ ಪೊಲೀಸ್ ಠಾಣೆ, ಮಹಿಳಾ ಪೊಲೀಸ್ ಠಾಣೆ ಆರಂಭವಾಗಿಲ್ಲ. ಸರ್ಕಾರಿ ವೈದ್ಯಕೀಯ ಕಾಲೇಜು, ಕಾನೂನು ಕಾಲೇಜುಗಳಿಲ್ಲ. ಶೈಕ್ಷಣಿಕ ಮಟ್ಟದಲ್ಲಿ ಸುಧಾರಣೆ ಕಾಣುತ್ತಿಲ್ಲ. ಯುವಕರಿಗೆ ಉದ್ಯೋಗ ನೀಡುವಂತಹ ಉದ್ಯಮಗಳೂ ಇಲ್ಲಿಲ್ಲ. ಜಿಲ್ಲಾ ಆಸ್ಪತ್ರೆ ಕಟ್ಟಡ ಸಿದ್ಧವಾದರೂ ಉದ್ಘಾಟನೆ ಭಾಗ್ಯ ಇಲ್ಲ. ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳು ಗುರಿ ಸಾಧಿಸುತ್ತಿಲ್ಲ. ಹೀಗಾಗಿ ಹೊಸ ಜಿಲ್ಲೆಯಾಗಿ ಏನು ಸಾಧಿಸಿದಂತಾಯಿತು ಎಂಬ ಪ್ರಶ್ನೆಯನ್ನು ಜಿಲ್ಲಾ ನಾಗರಿಕ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ವೈ. ಯಮುನೇಶ್ ಪ್ರಶ್ನಿಸುತ್ತಾರೆ.

ತುಂಗಭದ್ರಾ ಅಣೆಕಟ್ಟೆಗೆ ಹೊಸ ಕ್ರೆಸ್ಟ್‌ಗೇಟ್‌ ಅಳವಡಿಸಿದ್ದನ್ನೇ ಸರ್ಕಾರದ ಸಾಧನೆ ಎಂದು ಹೇಳಿಕೊಳ್ಳುವ ಸ್ಥಿತಿ ಸದ್ಯ ಜಿಲ್ಲೆಯಲ್ಲಿ ನೆಲೆಸಿದ್ದು, ವಸತಿ ಸಚಿವರೇ ಇಲ್ಲಿ ಮೂರು ವರ್ಷ ಉಸ್ತುವಾರಿ ಸಚಿವರಾಗಿದ್ದರೂ ವಸತಿರಹಿತರಿಗೆ ಸೂರು ಸಿಗಲಿಲ್ಲ. ಹಂಪಿ, ಮೈಲಾರ, ಕೊಟ್ಟೂರು, ಉಚ್ಚಂಗಿದುರ್ಗದಂತಹ ಲಕ್ಷಾಂತರ ಪ್ರವಾಸಿಗರು, ಭಕ್ತರು ಭೇಟಿ ನೀಡುವ ತಾಣಗಳಲ್ಲಿ ಮೂಲಸೌಕರ್ಯ ಸುಧಾರಣೆಗಳು ಮರೀಚಿಕೆಯಾಗಿಯೇ ಉಳಿದಿವೆ.

ಬರದಿಂದಾಗಿ ಕೂಡ್ಲಿಗಿ, ಕೊಟ್ಟೂರುಗಳಲ್ಲಿ ಬೆಳೆ ಹಾನಿ ತೀವ್ರವಾಗಿ ಆಗಿದ್ದು, ಈ ಎರಡೂ ತಾಲ್ಲೂಕುಗಳನ್ನು ತಕ್ಷಣ ತೀವ್ರ ಬರಪೀಡಿತ ತಾಲ್ಲೂಕುಗಳೆಂದು ಘೋಷಿಸಿ, ಜನರಿಗೆ ಒಂದಿಷ್ಟು ಸಾಂತ್ವನ ಹೇಳುವ ಕೆಲಸ ಸಿಎಂ ಮಾಡಬಹುದು. ಆದರೆ ಜಿಲ್ಲೆಯ ಅಭಿವೃದ್ಧಿಗೆ ಅವರು ಎಂತಹ ಕ್ರಮ ಕೈಗೊಳ್ಳಲಿದ್ದಾರೆ ಎಂಬ ಬಹುದೊಡ್ಡ ಪ್ರಶ್ನೆ ಜನರನ್ನು ಕಾಡುತ್ತಿದೆ.

‘ಹುಡಾ’ ಅಧ್ಯಕ್ಷ ಸ್ಥಾನ ಯಾರಿಗೆ?

ಹೊಸಪೇಟೆ ನಗರ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದೆ. ನಗರಾಭಿವೃದ್ಧಿ ಪ್ರಾಧಿಕಾರದವೇ (ಹುಡಾ) ಪರೋಕ್ಷವಾಗಿ ಅಭಿವೃದ್ಧಿಯ ರೂವಾರಿ. ಇದರ ನೂತನ ಅಧ್ಯಕ್ಷರನ್ನಾಗಿ ಯಾರಿಗೆ ಮಣೆ ಹಾಕುತ್ತಾರೆ ಎಂಬ ಪ್ರಶ್ನೆ ಎದ್ದಿದೆ. ಮುಸ್ಲಿಂ, ಕುರುಬ, ಬ್ರಾಹ್ಮಣ, ರಡ್ಡಿ ಸಮುದಾಯದವರು ಇಲ್ಲಿ ಅಧ್ಯಕ್ಷರಾಗಿದ್ದು, ಎಸ್‌ಸಿ, ಲಿಂಗಾಯತ ಸಮುದಾಯದವರಿಗೆ ಇದುವರೆಗೆ ಅವಕಾಶ ಸಿಕ್ಕಿಲ್ಲ. ಸದ್ಯ ಐದಾರು ಮಂದಿ ಆಕಾಂಕ್ಷಿಗಳಿದ್ದಾರೆ. ಕೆ.ಎಸ್.ಬಸವಂತಪ್ಪ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿರುವುದರಿಂದ ಅವರ ಸಮುದಾಯದ ಪಕ್ಷದ ಸಕ್ರಿಯೆ ಕಾರ್ಯಕರ್ತರೊಬ್ಬರಿಗೆ ಅಧ್ಯಕ್ಷ ಸ್ಥಾನಕ್ಕೆ ಶಿಫಾರಸು ಮಾಡುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260905-25-1741409377

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ