
ಚಿಂತಾಮಣಿ: ಕೆಎಸ್ಆರ್ಟಿಸಿ ಘಟಕದ ಎದುರು ಚಾಲಕನ ಏಕಾಂಗಿ ಹೋರಾಟ
ಚಿಂತಾಮಣಿ: ‘ಕೆಎಸ್ಆರ್ಟಿಸಿ ನಗರ ಘಟಕದಲ್ಲಿ ಅಧಿಕಾರಿಗಳು ದಬ್ಬಾಳಿಕೆ, ದೌರ್ಜನ್ಯ, ಕಿರುಕುಳ ನೀಡುತ್ತಿದ್ದಾರೆ’ ಎಂದು ಆರೋಪಿಸಿ ಚಾಲಕ ಎಸ್. ರಾಜಾ ಶುಕ್ರವಾರ ಘಟಕದ ಮುಂದೆ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದರು.
‘ಜಿಲ್ಲಾ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ಧಲಿಂಗೇಶ್ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ. ಅವರ ಸಹೋದರ ವಿ. ಪ್ರಕಾಶ್ ಇದೇ ಘಟಕದ ವ್ಯವಸ್ಥಾಪಕರಾಗಿದ್ದರು. ಅವರು ಇಲ್ಲಿನ ಘಟಕದ ಕಚೇರಿಯಲ್ಲಿ ಅಂಬೇಡ್ಕರ್ ಫೊಟೊ ತೆಗೆದು ಹಾಕಿದ್ದರು. ಅದರ ವಿರುದ್ಧ ಮೇಲಧಿಕಾರಿಗಳಿಗೆ ದೂರು ನೀಡಿದ್ದೆ. ಅದನ್ನು ಮನಸ್ಸಿನಲ್ಲಿಟ್ಟುಕೊಂಡು ಸಲ್ಲದ ಆರೋಪ ಹೊರಿಸುತ್ತಿದ್ದಾರೆ’ ಎಂದು ದೂರಿದರು.
‘ರಜೆ ಹಾಕಿದರೆ ಮಂಜೂರು ಮಾಡದೆ ಗೈರು ಹಾಜರಿ ತೋರಿಸಿ ವೇತನ ಕಡಿತಗೊಳಿಸುತ್ತಾರೆ. ಹಣ ನೀಡಿದರೆ ಮಾತ್ರ ರಜೆ ಮಂಜೂರು ಮಾಡುತ್ತಾರೆ. ಸುಳ್ಳು ಅರೋಪ ಹೊರಿಸಿ ಅಮಾನತು ಗೊಳಿಸಿದ್ದಾರೆ. ರಾಜೀನಾಮೆ ನೀಡಿದ್ದರೂ ಅಂಗೀಕರಿಸುತ್ತಿಲ್ಲ’ ಎಂದರು.
ಘಟಕದ ವ್ಯವಸ್ಥಾಪಕಿ ಸರಿತಾ ಪ್ರತಿಕ್ರಿಯಿಸಿ, ‘ಇಲಾಖೆಯ ಹಿರಿಯ ಅಧಿಕಾರಿಗಳು ಅವರನ್ನು ಅಮಾನತುಗೊಳಿಸಿದ್ದರು. ಶಿಡ್ಲಘಟ್ಟ ಘಟಕಕ್ಕೆ ವರ್ಗಾವಣೆ ಮಾಡಿದ್ದರು. ಅಲ್ಲಿಯೂ ಅವರ ವರದಿ ಮಾಡಿಕೊಂಡಿಲ್ಲ. ಅಮಾನತು ಅವಧಿಯಲ್ಲಿ ಬೇರೆಲ್ಲೂ ಕೆಲಸ ಮಾಡುತ್ತಿಲ್ಲ ಎಂದು ಘೋಷಿಸಿ ಸಹಿಮಾಡಬೇಕು. ಅವರು ಮಾಡುತ್ತಿಲ್ಲ. ಸಹಿ ಮಾಡಿದರೆ ಕೂಡಲೇ ಜೀವನಾಂಶ ವೇತನ ಬಿಡುಗಡೆ ಮಾಡಲಾಗುವುದು’ ಎಂದರು.
ರಾಜೀನಾಮೆಯನ್ನು ಹಿರಿಯ ಅಧಿಕಾರಿಗಳಿಗೆ ರವಾನಿಸಲಾಗಿದೆ. ವಿಭಾಗೀಯ ನಿಯಂತ್ರಣಾಧಿಕಾರಿಗಳು ಕ್ರಮಕೈಗೊಳ್ಳುತ್ತಾರೆ. ರಾಜೀನಾಮೆಗೂ ನೀತಿ ನಿಯಮಗಳಿರುತ್ತವೆ. ಅವರು ಮಾಡುತ್ತಿರುವ ಎಲ್ಲ ಆರೋಪಗಳು ಸತ್ಯಕ್ಕೆ ದೂರವಾಗಿವೆ. ಅವರು ಶಿಡ್ಲಘಟ್ಟಕ್ಕೆ ಹೋಗದೆ ಚಿಂತಾಮಣಿಯಲ್ಲೇ ಇರಬೇಕು ಎನ್ನುವ ಉದ್ದೇಶದಿಂದ ಹೀಗೆ ಮಾಡುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು.