
'ಅಗಿಲೆ ಯೋಗೇಶ್ ಹೋರಾಟ ಕೇವಲ ಪ್ರಚಾರಕ್ಕೋ?' ಎಂದು ಎಎಪಿ ಮುಖಂಡನ ಆರೋಪ
ಹಾಸನ: ಆಮ್ ಆದ್ಮಿ ಪಕ್ಷದ ಮುಖಂಡ ಅಗಿಲೆ ಯೋಗೇಶ್ ಅವರು ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ಮಾಧ್ಯಮಗಳಲ್ಲಿ ಹೇಳಿಕೆ ನೀಡುತ್ತಿರುವುದು ಕೇವಲ ಪ್ರಚಾರಕ್ಕಾಗಿ ಎಂದು ಎಎಪಿ ಮುಖಂಡ ಕೆ.ಪಿ ಶಿವಕುಮಾರ್ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇತ್ತೀಚೆಗೆ ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ತೆರಳಿ ಪ್ರತಿಭಟನೆ ನಡೆಸುವುದಾಗಿ ಯೋಗೇಶ್ ಹೇಳಿಕೆ ನೀಡಿರುವುದು ಸರಿಯಲ್ಲ. ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಬದಲು ಮಾಧ್ಯಮಗಳ ಮುಂದೆ ಉಡಾಫೆಯ ಹೇಳಿಕೆ ನೀಡುವುದು ಸೂಕ್ತವಲ್ಲ’ ಎಂದು ಹೇಳಿದರು.
ಆಮ್ ಆದ್ಮಿ ಪಕ್ಷ ಸೇರಿದ ನಂತರ ಅಗಿಲೆ ಯೋಗೇಶ್ ಎಷ್ಟು ಭ್ರಷ್ಟಾಚಾರ ಪ್ರಕರಣಗಳನ್ನು ಬಯಲಿಗೆಳೆದಿದ್ದಾರೆ? ಎಷ್ಟು ಅಕ್ರಮಗಳ ವಿರುದ್ಧ ದೂರು ನೀಡಿದ್ದಾರೆ ಎಂಬುದನ್ನು ಸಾರ್ವಜನಿಕವಾಗಿ ದಾಖಲೆಗಳೊಂದಿಗೆ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.
ಈ ಹಿಂದೆ ಎಸ್‌ಎಲ್‌ಎಸ್ ಕಂಪನಿ ಹೆಸರಿನಲ್ಲಿ ಹಣ ದ್ವಿಗುಣಗೊಳಿಸುವ ಯೋಜನೆ ನಡೆಸಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿದ್ದಾರೆ. ಎಷ್ಟು ಜನರಿಂದ ಹಣ ಪಡೆದಿದ್ದರು ಹಾಗೂ ಎಷ್ಟು ಮಂದಿಗೆ ಹಣ ವಾಪಸ್ ನೀಡಲಾಗಿದೆ ಎಂಬುದನ್ನೂ ದಾಖಲೆ ಸಹಿತ ವಿವರಿಸಬೇಕು ಎಂದು ಆಗ್ರಹಿಸಿದರು.
ರವಿಕುಮಾರ್, ಪ್ರೇಮ್‌ಕುಮಾರ್, ಶ್ರಿನಿವಾಸ್ ಇದ್ದರು.