
ಗದಗ: ಹಾಳು ಕೊಂಪೆಯಾದ ಉದ್ಯಾನ
ಗದಗ: ನಗರದ ಪ್ರಮುಖ ಉದ್ಯಾನಗಳಲ್ಲಿ ಒಂದಾದ ಕಿತ್ತೂರ ಚನ್ನಮ್ಮ ರಾಣಿ (ಕೆ.ಸಿ. ರಾಣಿ) ಉದ್ಯಾನದಲ್ಲಿ ವಾಯುವಿಹಾರಕ್ಕೆ ತೆರಳಿದರೆ ಪ್ರತಿಹೆಜ್ಜೆಗೂ ಸಮಸ್ಯೆ ಕಣ್ಣಿಗೆ ರಾಚುತ್ತದೆ. ನಿರ್ವಹಣೆ ಕೊರತೆಯಿಂದ ಬೃಹತ್ ಉದ್ಯಾನವು ಹಾಳು ಕೊಂಪೆಯಂತಾಗಿದೆ.
ಉದ್ಯಾನದ ಪ್ರವೇಶದ್ವಾರದ ಬಳಿಯೇ ವಿಶೇಷ ವಿನ್ಯಾಸವೊಂದು ವಿರೂಪಗೊಂಡಿರುವುದು ಕಂಡುಬರುತ್ತದೆ. ಅಲ್ಲಿಂದ ಆರಂಭಗೊಳ್ಳುವ ನಡಿಗೆ ಪಥದ ಪೇವರ್ಸ್ ಹಾಗೂ ಇಕ್ಕೆಲಗಳ ಕಾಂಕ್ರೀಟ್ ಇಟ್ಟಿಗೆ ಕೆಲವೆಡೆ ಒಡೆದಿದೆ. ಮರದ ಬೇರುಗಳು ಸಾಗಿ ಪೇವರ್ಸ್ ಏರುಪೇರಾಗಿದೆ. ಮಾರ್ಗದುದ್ದಕ್ಕೂ ಮರಗಳ ಎಲೆಗಳು, ಕಸ–ಕಡ್ಡಿಗಳು ಸಂಗ್ರಹವಾಗಿವೆ. ಕೆಲವೆಡೆ ಪಥವು ಮಣ್ಣಿನಿಂದ ಮುಚ್ಚಿಹೋಗಿದೆ.
ಉದ್ಯಾನದೊಳಗಿನ ಶೌಚಾಲಯದ ಬಾಗಿಲಿಗೆ ಯಾವಾಗಲೂ ಬೀಗ ಹಾಕಲಾಗಿರುತ್ತದೆ. ವಾಯುವಿಹಾರಕ್ಕೆ ಬಂದವರು ಬಹಿರ್ದೆಸೆಗೆ ತೆರಳಲು ಪೊದೆಗಳನ್ನು ಆಶ್ರಯಿಸಬೇಕು ಇಲ್ಲವೇ ಮನೆಗೇ ಹೋಗಬೇಕು ಎಂಬಂತಹ ಸ್ಥಿತಿಯಿದೆ. ರಾಜನಾಲೆಗೆ ತಾಗಿಕೊಂಡ ಗೋಡೆ ಅಲ್ಲಲ್ಲಿ ಕುಸಿದಿದೆ. ನಿರುಪಯುಕ್ತ ಗಿಡ–ಬಳ್ಳಿಗಳಿಂದ ಆವೃತ್ತವಾದ, ಕಸದಿಂದ ಕೂಡಿರುವ ರಾಜನಾಲೆ ದುರ್ನಾತವು ಬೆಳಗಿನ ಹಾಗೂ ಸಂಜೆಯ ಶುಭ್ರಗಾಳಿಗೆ ತಡೆಯೊಡ್ಡುತ್ತಿದೆ.
ಮರಗಳ ರೆಂಬೆ–ಕೊಂಬೆಗಳು ಮುರಿದು, ನಡಿಗೆ ಪಥದ ಮೇಲೂ ಬಿದ್ದಿರುತ್ತವೆ. ವ್ಯಾಪಕವಾಗಿ ಹರಡಿದ ಗಿಡಗಳು ಸಹ ಪಥವನ್ನು ಆಕ್ರಮಿಸಿವೆ. ಕೆಳಗೆ ಬಿದ್ದ ರೆಂಬೆ–ಕೊಂಬೆಗಳು, ಬಿಳಲುಗಳನ್ನು ಜನರೇ ಪಕ್ಕಕ್ಕೆ ಹಾಕಿ ಸಾಗಬೇಕಿದೆ. ಒಂದು ಬದಿಯಿಂದ ಇನ್ನೊಂದು ಬದಿ ಕಾಣದಷ್ಟು ಮಟ್ಟಿಗೆ ಗಿಡ–ಮರ, ಬಳ್ಳಿಗಳು ದಟ್ಟವಾಗಿ ಬೆಳೆದಿವೆ. ಆಸನಗಳೂ ಇವುಗಳಲ್ಲಿ ಮುಳುಗಿಹೋಗಿವೆ.
ತೆರೆದ ವ್ಯಾಯಾಮಶಾಲೆ, ಆಟಿಕೆ ಹಾನಿ
ಉದ್ಯಾನಕ್ಕೆ ಬರುವ ಮಕ್ಕಳು ಆಟವಾಡಲೆಂದು ನಿರ್ಮಿಸಿರುವ ಆಟಿಕೆಗಳು ಸುಸ್ಥಿತಿಯಲ್ಲಿ ಇಲ್ಲ. ಕಬ್ಬಿಣದ ಆಟಿಕೆಗಳು ತಕ್ಕು ಹಿಡಿದಿವೆ, ಒಡೆದಿವೆ. ಆಟಕ್ಕಿರಲಿ ಅವುಗಳ ಬಳಿ ಸುಳಿಯಲಾಗದಂತಹ ದುಃಸ್ಥಿತಿಯಲ್ಲಿವೆ. ಕೆಲವು ಆಟಿಕೆಗಳ ಪಳೆಯುಳಿಕೆಯಷ್ಟೇ ಉಳಿದಿದೆ.
ತೆರೆದ ವ್ಯಾಯಾಮ ಶಾಲೆಯ ಪರಿಕರಗಳ ಸುತ್ತ ಮೊಣಕಾಲುದ್ದ ಗಿಡ–ಗಂಟಿಗಳು ಬೆಳೆದಿವೆ. ಇವುಗಳ ನಡುವೆ ಸಾಗಿ ವ್ಯಾಯಾಮ ಮಾಡಲು ಪ್ರಯಾಸಪಡಬೇಕು. ಕೊಳಕು ನೀರು ಸಂಗ್ರಹವಾಗಿರುವುದರಿಂದ ಬಹುತೇಕರು ಇತ್ತ ಸುಳಿಯುವುದೇ ಇಲ್ಲ. ಉದ್ಯಾನಕ್ಕೆ ಸೂಕ್ತ ಭದ್ರತೆ ಒದಗಿಸದ ಕಾರಣ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ಪುಟ್ಟ ಸಭಾಂಗಣದಲ್ಲಿ ಮದ್ಯದ ಬಾಟಲಿಗಳು, ಸಿಗರೇಟ್, ಗುಟ್ಕಾ ಪ್ಯಾಕೇಟುಗಳು ಪ್ರತಿದಿನ ಬಿದ್ದಿರುತ್ತವೆ. ಕಾರಂಜಿ ಕೊಳಕು ನೀರಿನಿಂದ ತುಂಬಿದೆ.