ಮಳೆಗಾಲದಲ್ಲೇ ಸುಡು ಬಿಸಿಲು: ದಾವಣಗೆರೆಯಲ್ಲಿ ಏರುತ್ತಿದೆ ತಾಪಮಾನ

ಮಳೆಗಾಲದಲ್ಲೇ ಸುಡು ಬಿಸಿಲು: ದಾವಣಗೆರೆಯಲ್ಲಿ ಏರುತ್ತಿದೆ ತಾಪಮಾನ

ಮಳೆಗಾಲದಲ್ಲೇ ಸುಡು ಬಿಸಿಲು: ದಾವಣಗೆರೆಯಲ್ಲಿ ಏರುತ್ತಿದೆ ತಾಪಮಾನ

ದಾವಣಗೆರೆ: ಮುಂಗಾರು ಹಂಗಾಮು ಪೂರ್ಣಗೊಳ್ಳುವ ಮುನ್ನವೇ ಬೇಸಿಗೆ ಬಿಸಿಲಿನ ಝಳದ ಅನುಭವವಾಗತೊಡಗಿದೆ. ಮೋಡಗಳು ಕಣ್ಮರೆಯಾಗಿ ನೀಲಿ ಆಗಸ ಕಾಣಲಾರಂಭಿಸಿದ್ದು, ತಾಪಮಾನ 34 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗಿದೆ. ಸೆಪ್ಟೆಂಬರ್‌ ಮೊದಲ ವಾರದಲ್ಲಿ ಸಾಮಾನ್ಯಕ್ಕಿಂತ 3.5 ಡಿಗ್ರಿ ಸೆಲ್ಸಿಯಸ್‌ ಅಧಿಕ ಉಷ್ಣಾಂಶ ದಾಖಲಾಗಿದೆ.

ಬರ ಪರಿಸ್ಥಿತಿ ತಲೆದೋರಿದ ಪರಿಣಾಮ ಜಿಲ್ಲೆಯಲ್ಲಿ ತೀವ್ರ ಮಳೆ ಕೊರತೆ ಉಂಟಾಗಿದೆ. ಇದರ ಬೆನ್ನಲ್ಲೇ ಉಷ್ಣಾಂಶವೂ ಹೆಚ್ಚಾಗುತ್ತಿರುವುದು ಆತಂಕ ಮೂಡಿಸಿದೆ. ವಾತಾವರಣದಲ್ಲಿನ ತೇವಾಂಶ ಕಡಿಮೆಯಾಗುತ್ತಿದ್ದು, ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗುವ ಸಾಧ್ಯತೆ ದಟ್ಟವಾಗಿದೆ.

ಮುಂಗಾರು ಹಂಗಾಮು ಪೂರ್ಣಗೊಳ್ಳುವ ಹಂತ ತಲುಪಿದೆ. ಆಗಸ್ಟ್‌ 31ರಿಂದ ಆರಂಭವಾದ ‘ಹುಬ್ಬಿ’ ಮಳೆ ಸರಿಯಾಗಿ ಸುರಿಯದ್ದರಿಂದ ಒಂದು ವಾರದಿಂದ ವಾತಾವರಣದಲ್ಲಿ ತೇವಾಂಶ ಕಡಿಮೆಯಾಗಿ ಉಷ್ಣಾಂಶ ಹೆಚ್ಚಾಗುತ್ತಿದೆ. ಇದರಿಂದ ಬೇಸಿಗೆ ‘ಸೆಕೆ’ಯ ಅನುಭವವಾಗತೊಡಗಿದೆ.

ಆಗಸ್ಟ್‌ ಕೊನೆಯ ವಾರದಲ್ಲಿ 29 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ಇದ್ದ ಗರಿಷ್ಠ ತಾಪಮಾನ ಸೆಪ್ಟೆಂಬರ್‌ ಮೊದಲ ವಾರದಿಂದ ನಿರಂತರವಾಗಿ ಏರಿಕೆಯಾಗುತ್ತಿದೆ. ವಾತಾವರಣದಲ್ಲಿ ಆಗುತ್ತಿರುವ ಈ ಅಸಹಜ ಬದಲಾವಣೆ ಜನರಲ್ಲಿ ಕಳವಳ ಮೂಡಿಸಿದೆ.

ಸೆ.1ರಂದು 31 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದ್ದ ತಾಪಮಾನ ಸೆ.5ಕ್ಕೆ 34 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗಿತ್ತು. ಬಳಿಕ ನಿತ್ಯವೂ ಇದೇ ತಾಪಮಾನ ಮುಂದುವರಿದಿದೆ. ಒಂದು ವಾರದಲ್ಲಿ ಉಷ್ಣಾಂಶದಲ್ಲಿ 4 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗಿದ್ದು, ಜಿಲ್ಲೆಯ ಸರಾಸರಿ ಉಷ್ಣಾಂಶ 31 ಡಿಗ್ರಿಯಷ್ಟಿದೆ.

‘ಈ ಅವಧಿಯಲ್ಲಿ ಸೂರ್ಯನ ಪ್ರಖರತೆಯ ಅವಧಿಯೂ ಗಮನಾರ್ಹವಾಗಿ ಹೆಚ್ಚಾಗಿದೆ. ದಿನಕ್ಕೆ 8 ಗಂಟೆ 23 ನಿಮಿಷದಿಂದ 9 ಗಂಟೆ 47 ನಿಮಿಷಗಳವರೆಗೆ ಸೂರ್ಯನ ಪ್ರಖರತೆ ದಾಖಲಾಗಿದೆ. ಮಳೆಯ ಅಭಾವ ಮತ್ತು ದೀರ್ಘಾವಧಿಯ ಸೂರ್ಯಪ್ರಕಾಶವು ಭೂಮಿಯ ಮೇಲ್ಮೈಗೆ ಹೆಚ್ಚಿನ ಸೌರಕಿರಣ ತಲುಪಲು ಅನುವು ಮಾಡಿಕೊಟ್ಟಿದೆ. ಇದರಿಂದ ಹಗಲಲ್ಲಿ ಭೂಮಿಯ ಮೇಲ್ಮೈ ತಾಪಮಾನ ಹೆಚ್ಚಾಗಿ ಉಷ್ಣಾಂಶದಲ್ಲಿ ಏರಿಕೆಗೆ ಕಾರಣವಾಗುತ್ತಿದೆ’ ಎಂದು ಹಿರಿಯೂರು ತಾಲ್ಲೂಕಿನ ಬಬ್ಬೂರು ಫಾರಂನ ಗ್ರಾಮೀಣ ಕೃಷಿ ಮೌಸಮ್‌ ಸೇವಾ ಕೇಂದ್ರದ ತಾಂತ್ರಿಕ ಅಧಿಕಾರಿ ಡಾ.ಅಮಿತ್‌ ಜಿ. ವಿವರ ನೀಡಿದ್ದಾರೆ.

1 ವಾರದಲ್ಲಿ ದಾಖಲಾದ ತಾಪಮಾನ

‘ಎಲ್‌–ನಿನೊ’ ಪರಿಣಾಮವಾಗಿ ಬರದ ಸ್ಥಿತಿ ತಲೆದೋರಿದ್ದು, ಜಿಲ್ಲೆಯಲ್ಲಿ ಜೂನ್‌ 1ರಿಂದ ಸೆ.7ರವರೆಗೆ ಶೇ 36ರಷ್ಟು ಮಳೆ ಕೊರತೆ ಉಂಟಾಗಿದೆ. ಇದರಿಂದ ಭೂಮಿಯಲ್ಲಿನ ತೇವಾಂಶ ಕಡಿಮೆಯಾಗಿ ಬಿಸಿ ಹೆಚ್ಚಾಗತೊಡಗಿದೆ. ಜುಲೈನಲ್ಲಿ ಶೇ 38, ಆಗಸ್ಟ್‌ ಶೇ 19ರಷ್ಟು ಮಳೆ ಕೊರತೆ ಇತ್ತು.

ಸೆಪ್ಟೆಂಬರ್‌ನಲ್ಲಿ ವಾಡಿಕೆ ಪ್ರಕಾರ 109 ಮಿ.ಮೀ ಮಳೆಯಾಗಬೇಕಿದೆ. ಸೆ.1ರಿಂದ 7ರ ಅವಧಿಯಲ್ಲಿ ಸುರಿಯಬೇಕಿದ್ದ 17.1 ಮಿ.ಮೀ ಪೈಕಿ 7.1 ಮಿ.ಮೀ ಮಾತ್ರ ಸುರಿದಿದೆ. ಸೆ.2ರಂದು ಅಲ್ಲಲ್ಲಿ ಒಂದಷ್ಟು ಮಳೆಯಾಗಿದ್ದು, ಉಳಿದ ದಿನ ವರುಣನ ಸುಳಿವೇ ಇಲ್ಲ. ಉತ್ತಮ ಮಳೆ ಸುರಿಯದೇ ಎರಡು ವಾರಕ್ಕೂ ಹೆಚ್ಚು ಸಮಯವಾಗಿದೆ. ಒಣಹವೆ ಇನ್ನೂ ಮುಂದುವರಿಯುವ ಸಾಧ್ಯತೆ ಇದೆ ಎಂಬುದು ಹವಾಮಾನ ಇಲಾಖೆಯ ಮುನ್ಸೂಚನೆ.

ಮೆಕ್ಕೆಜೋಳ, ರಾಗಿಗೆ ತೊಂದರೆ

ಮುಂಗಾರು ಕೊರತೆಯ ನಡುವೆಯೇ ಜಿಲ್ಲೆಯಲ್ಲಿ ಮೆಕ್ಕೆಜೋಳ ಹಾಗೂ ರಾಗಿ ಬಿತ್ತನೆ ಆಗಿದೆ. ಮಳೆ ಸುರಿಯದೇ ಬಿಸಿಲು ಹೀಗೆ ಮುಂದುವರಿದರೆ ಈ ಬೆಳೆಗಳಿಗೆ ಹಾನಿಯಾಗುವ ಸಾಧ್ಯತೆ ಇದೆ.

‘ಮೆಕ್ಕೆಜೋಳ ಕಾಳು ಕಟ್ಟುವ, ರಾಗಿ ಬೆಳವಣಿಗೆ ಹಂತದಲ್ಲಿದೆ. ಮಳೆ ಸುರಿಯದಿದ್ದರೆ ಬೆಳೆ ಒಣಗಲಿದೆ. ಇಳುವರಿ ಕುಸಿತವಾಗಿ ರೈತರಿಗೆ ನಷ್ಟ ಉಂಟಾಗುವ ಸಾಧ್ಯತೆ ಇದೆ’ ಎನ್ನುತ್ತಾರೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜಿಯಾವುಲ್ಲಾ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ