
ಜಗಳೂರು ಬರಪೀಡಿತ ಪಟ್ಟಿಯಿಂದ ಹೊರಕ್ಕೆ; ರೈತರ ಆಕ್ರೋಶ
ಜಗಳೂರು: ರಾಜ್ಯದಲ್ಲೇ ಅತ್ಯಂತ ಕಡಿಮೆ ಮಳೆ ಬೀಳುವ ತಾಲ್ಲೂಕುಗಳಲ್ಲಿ 5ನೇ ಸ್ಥಾನದಲ್ಲಿರುವ ಜಗಳೂರನ್ನು ರಾಜ್ಯ ಸರ್ಕಾರ ‘ಬರಪೀಡಿತ’ ತಾಲ್ಲೂಕುಗಳ ಮೊದಲ ಪಟ್ಟಿಯಿಂದ ದೂರವಿಟ್ಟಿದ್ದು, 2ನೇ ಪಟ್ಟಿಯಲ್ಲಾದರೂ ಹೆಸರು ಸೇರಬಹುದೆಂಬ ನಿರೀಕ್ಷೆಯಲ್ಲಿ ತಾಲ್ಲೂಕಿನ ರೈತರಿದ್ದಾರೆ.
ದಾವಣಗೆರೆ ಜಿಲ್ಲೆಯ ಅರೆಮಲೆನಾಡು ತಾಲ್ಲೂಕುಗಳೆಂದೇ ಹೆಸರಾಗಿರುವ ಹಾಗೂ ಜಗಳೂರು ತಾಲ್ಲೂಕಿಗಿಂತ ಸರಾಸರಿ ಅಧಿಕ ಮಳೆ ಸುರಿಯುವ ಚನ್ನಗಿರಿ, ಹೊನ್ನಾಳಿ, ನ್ಯಾಮತಿ ಹಾಗೂ ದಾವಣಗೆರೆ ತಾಲ್ಲೂಕುಗಳು ಮೊದಲ ಪಟ್ಟಿಯಲ್ಲಿ ಸೇರಿದ್ದು, ಬರದಿಂದ ನಲುಗಿರುವ ಜಗಳೂರು ಕೈಬಿಟ್ಟು ಹೋಗಿರುವುದು ಶಾಸಕರು ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಅಸಮಾಧಾನ ತೋಡಿಕೊಳ್ಳಲು ಕಾರಣವಾಗಿದೆ.
ಬರ ಘೊಷಣೆ ಸಂದರ್ಭ ತಾಲ್ಲೂಕಿಗೆ ಅನ್ಯಾಯ ಆಗುತ್ತಲೇ ಇದೆ ಎಂದು ಶಾಸಕ ಬಿ. ದೇವೇಂದ್ರಪ್ಪ ಇತ್ತೀಚೆಗೆ ಜಿಲ್ಲಾಡಳಿತದ ವಿರುದ್ಧ ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿದ್ದರು.
ಚನ್ನಗಿರಿ ತಾಲ್ಲೂಕಿನಲ್ಲಿ ಜೂನ್ ಮತ್ತು ಜುಲೈ ತಿಂಗಳಲ್ಲಿ 111 ಮಿ.ಮೀ ಮಳೆ ಸುರಿದಿದ್ದು, ಜಗಳೂರು ತಾಲ್ಲೂಕಿನಲ್ಲಿ ಈ ಅವಧಿಯಲ್ಲಿ ಕೇವಲ 94.8 ಮಿ.ಮೀ ಮಳೆಯಾಗಿದೆ. ಅಂದರೆ, ಜಗಳೂರಿಗಿಂತ ಚನ್ನಗಿರಿಯಲ್ಲಿ 16 ಮಿ.ಮೀ ಹೆಚ್ಚು ಮಳೆ ಬಿದ್ದಿದ್ದರೂ ಚನ್ನಗಿರಿ ತಾಲ್ಲೂಕು ಬರಪಟ್ಟಿಗೆ ಸೇರಿದ್ದು, ಜಗಳೂರನ್ನು ಕೈಬಿಡಲಾಗಿದೆ.
ಆಗಸ್ಟ್ ತಿಂಗಳಲ್ಲಿ ಜಗಳೂರು ತಾಲ್ಲೂಕಿನಲ್ಲಿ 69.7 ಮಿ.ಮೀ. ವಾಡಿಕೆ ಮಳೆಯಾಗಬೇಕಿತ್ತು. ಆದರೆ, 40.9 ಮಿ.ಮೀ ಮಳೆ ಸುರಿದಿದ್ದು, ಶೇ 41ರಷ್ಟು ಮಳೆ ಕೊರತೆಯಾಗಿದೆ.
ಬರ ಮಾನದಂಡ ಏನು?: ‘ಕೇಂದ್ರ ಸರ್ಕಾರ 2020ರಲ್ಲಿ ಹೊರಡಿಸಿರುವ ಆದೇಶದ ಪ್ರಕಾರ ಮೂರು ಅಂಶಗಳ ಆಧಾರದಲ್ಲಿ ‘ಬರ’ವನ್ನು ನಿರ್ಧರಿಸಲಾಗುತ್ತದೆ. ಸತತ 21 ದಿನಗಳ ಕಾಲ ಮಳೆ ಇಲ್ಲದ ಶುಷ್ಕ ವಾತಾವರಣ ಇರಬೇಕು, ಉಪಗ್ರಹ ಚಿತ್ರಗಳಲ್ಲಿ ಹಸಿರು ಕಾಣಬಾರದು ಹಾಗೂ ಮಣ್ಣಿನಲ್ಲಿ ತೇವಾಂಶದ ಕೊರತೆಯಾಗಿರಬೇಕು ಎಂಬ ಮೂರು ಅಂಶಗಳು ಕಂಡುಬಂದಲ್ಲಿ ಆಯಾ ತಾಲ್ಲೂಕಿನ ಒಟ್ಟು ಹಳ್ಳಿಗಳ ಪೈಕಿ ಶೇ 10ರಷ್ಟು ಹಳ್ಳಿಗಳಲ್ಲಿ ಬೆಳೆ ಹಾನಿ ಸಮೀಕ್ಷೆಯನ್ನು ಕೈಗೊಂಡು, ಕೇಂದ್ರ ಸರ್ಕಾರಕ್ಕೆ ವರದಿ ಕಳುಹಿಸಲಾಗುತ್ತದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಿಯಾವುಲ್ಲಾ ಹೇಳುತ್ತಾರೆ.
‘ಸರಾಸರಿ ಅಧಿಕ ಮಳೆ ಸುರಿಯುವ ತಾಲ್ಲೂಕುಗಳಲ್ಲಿ ಮಳೆ ಸ್ವಲ್ಪ ಕಡಿಮೆ ಆದರೂ ದೊಡ್ಡ ವ್ಯತ್ಯಾಸ ಕಂಡುಬರುತ್ತದೆ. ಆದರೆ, ಸದಾ ಕಡಿಮೆ ಮಳೆ ಬೀಳುವ ಜಗಳೂರು ತಾಲ್ಲೂಕಿನಲ್ಲಿ ಹೆಚ್ಚು ಮಳೆ ಕೊರತೆಯಾದರೂ ಸ್ವಲ್ಪ ಅಂತರ ಕಂಡುಬರುತ್ತದೆ. ಈ ತಾಂತ್ರಿಕ ಅಂಶಗಳ ಆಧಾರದಲ್ಲಿ ಬರ ನಿರ್ಧರಿಸಲಾಗುತ್ತದೆ’ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಈಚೆಗೆ ಜಗಳೂರಿನಲ್ಲಿ ನಡೆದ ಸಭೆಯಲ್ಲಿ ಸ್ಪಷ್ಟಪಡಿಸಿದ್ದರು.
‘ತಾಲ್ಲೂಕಿನಲ್ಲಿ ಈ ಬಾರಿ ಮುಂಗಾರು ಕೊರತೆಯಿಂದಾಗಿ ತಾಲ್ಲೂಕಿನಲ್ಲಿ 54,000 ಹೆಕ್ಟೇರ್ ಪ್ರದೇಶದಲ್ಲಿ 31,000 ಹೆಕ್ಟೇರ್‌ನಲ್ಲಿ ಅಂದರೆ ಶೇ 57ರಷ್ಟು ಕ್ಷೇತ್ರದಲ್ಲಿ ಬಿತ್ತನೆಯಾಗಿದೆ. ಮೆಕ್ಕೆಜೋಳ ಬಿತ್ತನೆ ಬಹುತೇಕ ಕುಂಠಿತವಾಗಿದ್ದು, ಬೆಳೆವಿಮೆ ಪಾವತಿಸಿದ ತಾಲ್ಲೂಕಿನ 26,000 ರೈತರಿಗೆ ₹ 36 ಕೋಟಿ ಪರಿಹಾರ ಸಿಗಲಿದೆ’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಶ್ವೇತಾ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ವಾಸ್ತವಿಕ ನೆಲೆಗಟ್ಟಿನಲ್ಲಿ ಘೊಷಣೆ ಮಾಡಿ
ವಾಸ್ತವಿಕ ನೆಲೆಗಟ್ಟಿನಲ್ಲಿ ಬರ ಘೊಷಣೆ ಮಾಡಬೇಕು. ಇಲ್ಲವಾದಲ್ಲಿ ಹಿಂದುಳಿದ ತಾಲ್ಲೂಕಿನ ರೈತರು, ಕೂಲಿಕಾರ್ಮಿಕರಿಗೆ ತೀವ್ರ ಅನ್ಯಾಯ ಆಗಲಿದೆ. ಕರ್ನಾಟಕ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ ಆಯುಕ್ತ ಮನೋಜ್ ಕುಮಾರ್ ಮೀನಾ ಅವರನ್ನು ಭೇಟಿ ಮಾಡಿ ಅಂಕಿ– ಅಂಶಗಳೊಂದಿಗೆ ಮನವಿ ಸಲ್ಲಿಸಿದ್ದೇನೆ. ಮುಂದಿನ ದಿನಗಳಲ್ಲಿ ತಾಲ್ಲೂಕಿಗೆ ನ್ಯಾಯ ಸಿಗುವ ಭರವಸೆ ಇದೆ
– ಬಿ.ದೇವೇಂದ್ರಪ್ಪ, ಶಾಸಕ