
ಪಶು ವೈದ್ಯ ಕಾಲೇಜು ತರಗತಿ ಆರಂಭ ಯಾವಾಗ? ಮೂಲ ಸೌಕರ್ಯಗಳ ಕೊರತೆ
ಉಪ್ಪಿನಂಗಡಿ: ಕೊಯಿಲ ಪಶು ವೈದ್ಯಕೀಯ ಮಹಾವಿದ್ಯಾಲಯದ ಕಟ್ಟಡಗಳು ನಿರ್ಮಾಣಗೊಂಡು ವರ್ಷಗಳೇ ಉರುಳಿದ್ದರೂ, ಮೂಲ ಸೌಕರ್ಯ, ಅಗತ್ಯ ಉಪಕರ ಸಹಿತ ಯೋಜಿತ ವ್ಯವಸ್ಥೆಗಳನ್ನು ಕಲ್ಪಿಸುವ ಕಾರ್ಯ ಬಾಕಿ ಇದೆ. ಹಾಗಾಗಿ ತರಗತಿಗಳ ಆರಂಭ ವಿಳಂಬವಾಗುತ್ತಿದೆ.
ಕಡಬ ತಾಲ್ಲೂಕಿನ ಕೊಯಿಲದಲ್ಲಿ ಪಶು ಸಂಗೋಪನಾ ಕ್ಷೇತ್ರದಲ್ಲಿದ್ದ 247 ಎಕರೆ ಜಾಗದಲ್ಲಿ, ಪಶು ವೈದ್ಯಕೀಯ ಆಸ್ಪತ್ರೆ, ಪಶು ವೈದ್ಯಕೀಯ ಕಾಲೇಜು, ಪಶು ಆಸ್ಪತ್ರೆ ಸಂಕೀರ್ಣ, ಬಾಲಕರ ವಸತಿ ನಿಲಯ, ಬಾಲಕಿಯರ ವಸತಿ ನಿಲಯ, ಅತಿಥಿಗೃಹ ಸೇರಿ 5 ಭಾರಿ ಕಟ್ಟಡಗಳು ನಿರ್ಮಾಣವಾಗಿದ್ದರೂ ಅವುಗಳನ್ನು ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡಲು ಇನ್ನೂ ಅನೇಕ ಅಡ್ಡಿಗಳಿವೆ.
2012ರ ಅಂದಿನ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಕೊಯಿಲ ಪಶು ಸಂಗೋಪನಾ ಕ್ಷೇತ್ರದಲ್ಲಿ ‘ಪುತ್ತೂರು ಪಶು ವೈದ್ಯಕೀಯ ಕಾಲೇಜು’ ಮಂಜೂರು ಮಾಡುವ ಬಗ್ಗೆ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದರು. 2016ರ ಅ.9ರಂದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಬೇಡಿಕೆಗೆ ಅನುಗುಣವಾಗಿ ಮೊದಲ ಹಂತದಲ್ಲಿ ₹142 ಕೋಟಿ ಅನುದಾನ ಮಂಜೂರು ಮಾಡ ಲಾಗಿತ್ತು. 5 ಹಂತದ ಕಟ್ಟಡ ಕಾಮಗಾರಿ ಪೂರ್ಣ ಗೊಂಡಿವೆ.
2023ರಲ್ಲಿ ಕಟ್ಟಡ ಉದ್ಘಾಟನೆ: 2023ರ ಮಾರ್ಚ್ 24ರಂದು ಬಿಜೆಪಿ ನೇತೃತ್ವದ ಸರ್ಕಾರದ ಅವಧಿ ಪೂರ್ಣಗೊಳ್ಳುವ ಸಂದರ್ಭ ಕಟ್ಟಡ ನಿರ್ಮಾಣ ಅಪೂರ್ಣ ಸ್ಥಿತಿಯಲ್ಲಿತ್ತು. ಆದರೂ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತರಾತುರಿಯಲ್ಲಿ ಕಡಬದಲ್ಲಿ ನಡೆದ ವಿವಿಧ ಕಾಮಗಾರಿಗಳ ಉದ್ಘಾಟನೆ ಸಂದರ್ಭದಲ್ಲಿ ಈ ಕಾಲೇಜನ್ನೂ ಉದ್ಘಾಟಿಸಿದ್ದರು.
ವಿಸ್ತರಣಾ ಚಟುವಟಿಕೆ ಆರಂಭ: ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಮತ್ತು ಬೀದರ್‌ನ ಕರ್ನಾಟಕ ಪಶುವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಕಾಲೇಜಿಗೆ ಒಂದು ಪ್ರಾಧ್ಯಾಪಕ, ಒಂದು ಸಹ ಪ್ರಾಧ್ಯಾಪಕ , 10 ಸಹಾಯಕ ಪ್ರಾಧ್ಯಾಪಕ ಹುದ್ದೆಗಳು ಮಂಜೂರಾಗಿವೆ. ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಕಾಲೇಜಿನಲ್ಲಿ ವಿಸ್ತರಣಾ ಚಟುವಟಿಕೆ ಆರಂಭ ವಾಗಿದೆ. ಅದರ ಭಾಗವಾಗಿ ರೈತರಿಗೆ ತರಬೇತಿ, ಗ್ರಾಮ ವ್ಯಾಪ್ತಿಯಲ್ಲಿ ಉಚಿತ ಪ್ರಾಣಿ ಆರೋಗ್ಯ ಶಿಬಿರ, ರೇಬಿಸ್ ಜಾಗೃತಿ ಶಿಬಿರಗಳು ನಡೆಯುತ್ತಿವೆ.
ತಕ್ಷಣಕ್ಕೆ ಆಗಬೇಕಾಗಿರುವುದೇನು: ಎರಡನೇ ಹಂತದಲ್ಲಿ ಕಾಲೇಜು ಆರಂಭಕ್ಕೆ ₹ 164 ಕೋಟಿ ಅನುದಾನ ಮಂಜೂರಾತಿಗೆ ಆಡಳಿತಾತ್ಮಕ ಅನುಮೋದನೆ ದೊರೆತಿದೆ. ಇದರಲ್ಲಿ ₹23 ಕೋಟಿ ಮಂಜೂರು ಆಗಿದೆ. ಆದರೆ, ಹಣಕಾಸು ಇಲಾಖೆಯಿಂದ ಅನುದಾನ ಬಿಡುಗಡೆ ಆಗಿಲ್ಲ. ಕಾಲೇಜು ಆರಂಭಿಸಲು ಅಲ್ಟ್ರೋ ಸೊನೋಗ್ರಫಿ, ಎಂಡೊಸ್ಕೋಪಿ ಮೊದಲಾದ ಉಪಕರಣಗಳು, ಗ್ರಂಥಾಲಯ, ಸಭಾಂಗಣ, ಸಿಬ್ಬಂದಿ ವಸತಿ ಗೃಹ, ವಿದ್ಯಾರ್ಥಿಗಳಿಗೆ ಹೊರಾಂಗಣ ಕ್ರೀಡಾಂಗಣ, ಕ್ರೀಡಾ ಪರಿಕರ, ಜಾನುವಾರು ಸಾಕಾಣಿಕೆಗೆ ಫಾರಂ, ಆಸ್ಪತ್ರೆಗೆ ಬೇಕಾದ ಉಪಕರಣಗಳು ಬೇಕಿವೆ. ಇದಕ್ಕಾಗಿ ಕನಿಷ್ಠ ₹23 ಕೋಟಿ ಅನುದಾನ ಬಿಡುಗಡೆ ಆಗಬೇಕಾಗಿದೆ.
3 ವರ್ಷದ ಹಿಂದೆಯೇ ಕಟ್ಟಡ ನಿರ್ಮಾಣ ಪೂರ್ಣಗೊಂಡಿದೆ. ಪ್ರಾಧ್ಯಾಪಕರ ನೇಮಕಾತಿಯೂ ಆಗಿದೆ. ಆದರೆ, ಕಾಲೇಜು ಆರಂಭ ಆಗಿಲ್ಲ. ಶೀಘ್ರವಾಗಿ ಕಾಲೇಜು ಆರಂಭಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಕೊಯಿಲದ ಜನಪರ ಹೋರಾಟ ಸಮಿತಿ ಅಧ್ಯಕ್ಷ ಲಕ್ಷ್ಮೀನಾರಾಯಣ ರಾವ್ ಒತ್ತಾಯಿಸಿದರು.